ಬಿಜೆಪಿಯವರು ರಾಮನ ಹೆಸರಲ್ಲಿ ಚುನಾವಣೆಗೆ ಹೊರಟಿದ್ದಾರೆ: ಸಚಿವ ಆರ್.ಬಿ.ತಿಮ್ಮಾಪುರ
ಹಿಂದೂಗಳಿಗೆ ರಾಮ ಒಬ್ಬನೇ ದೇವರಲ್ಲ, ಸಾವಿರಾರು ದೇವರಿದ್ದಾರೆ. ಕಾಂಗ್ರೆಸ್ಸಿನವರು ಎಂದಿಗೂ ಅಲ್ಪಸಂಖ್ಯಾತರ ಪರ ಎಂದು ಬಿಜೆಪಿಯವರು ಹಣೆಪಟ್ಟಿ ಕಟ್ಟಿದ್ದಾರೆ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.
ಹುಬ್ಬಳ್ಳಿ (ಜ.14): ಬಿಜೆಪಿಯವರಿಗೆ ರಾಮನೊಬ್ಬನೇ ದೇವರಾಗಿ ಕಾಣುತ್ತಿದ್ದಾನಾ? ನಮ್ಮೂರಲ್ಲಿ ಅನೇಕ ದೇವರಿವೆ. ಕಾಳವ್ವ, ಹನಮಂತ, ದುರ್ಗವ್ವ ಇವರು ದೇವರಲ್ವಾ? ರಾಮ ಮಂದಿರಕ್ಕೆ ಹೋದರೆ ಅಷ್ಟೆ ಹಿಂದೂಗಳಾ? ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಪ್ರಶ್ನಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ ಅವರು, ನಮ್ಮೂರಲ್ಲಿರುವ ದೇವರು ದೇವರಲ್ಲವೆ? ಹಳ್ಳಿಯಲ್ಲಿರುವ ದೇವರು ಬಿಜೆಪಿಯವರಿಗೆ ದೇವರಾಗಿ ಕಾಣುತ್ತಿಲ್ಲವಾ? ಇವರಿಗೆ ರಾಮ ಒಬ್ಬನೇ ದೇವರಾ? ಇಂತಹ ಸಾವಿರ ಗುಡಿಗಳನ್ನು ನಾವು ಕಟ್ಟಿದ್ದೇವೆ. ನಾವು ಎಂದಿಗೂ ಈ ರೀತಿಯ ಪ್ರಚಾರ ಪಡೆದುಕೊಂಡಿಲ್ಲ. ಆದರೆ, ಬಿಜೆಪಿಯವರು ರಾಮನ ಹೆಸರಲ್ಲಿ ಚುನಾವಣೆಗೆ ಹೊರಟಿದ್ದಾರೆ. ಇದನ್ನೆಲ್ಲ ನೋಡುತ್ತಿರುವ ನಮ್ಮ ಜನತೆ ಬುದ್ಧಿಗೇಡಿಗಳಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಲಿ ಎಂದು ಎಚ್ಚರಿಸಿದರು.
ಬಿಜೆಪಿಗರಿಗೆ ಮೋದಿಯೇ ದೇವರು: ಬಿಜೆಪಿಗರಿಗೆ ಮೋದಿಯೇ ದೇವರು. ಆಕಸ್ಮಿಕವಾಗಿ ಮೋದಿ ದೇವರು ಎಂದು ಹೇಳದೇ ಹೋದರೆ ಅಂಥವರನ್ನು ಬಿಜೆಪಿಯಿಂದ ಮನೆಗೆ ಕಳೆಸುತ್ತಾರೆ. ಪ್ರಧಾನಿಗಳ ಕೆಲಸ ಏನು ಕಸ ಹೊಡೆಯುವುದಾ? ಹೋಗಿ ರಾಮ ಮಂದಿರದಲ್ಲಿ ಕುಳಿತ್ತಿದ್ದಾರೆ. ಜನ ಇವರಿಗೆ ಏತಕ್ಕೆ ಮತ ಹಾಕಿದ್ದಾರೆ? ರಾಮ ಮಂದಿರದಲ್ಲಿ ಕುಳಿತುಕೊಳ್ಳುವುದಕ್ಕಾ? ಜನತೆ ಉದ್ಯೋಗವಿಲ್ಲದೇ ಸಂಕಷ್ಟ ಅನುಭವಿಸುತ್ತಿದ್ದಾರೆ. ರಾಮ ಮಂದಿರಕ್ಕೆ ಹೋದರೆ ಹಣ ಬರತ್ತದೆಯೇ? ಎಂದು ವಾಗ್ದಾಳಿ ನಡೆಸಿದರು.
ಒತ್ತಾಯದ ಹೇರಿಕೆ ಸರಿಯಲ್ಲ: ನಾನು ಸದಾಶಿವ, ದುರ್ಗಾದೇವಿಯ ಭಕ್ತ. ಯಾವುದೇ ದೇವರಾಗಲಿ ಇನ್ನೊಬ್ಬರಿಗೆ ಒತ್ತಾಯಪೂರ್ವಕವಾಗಿ ಹೇರಿಕೆ ಮಾಡುವ ಕೆಲಸವಾಗಬಾರದು. ಹಿಂದೂಗಳಿಗೆ ರಾಮ ಒಬ್ಬನೇ ದೇವರಲ್ಲ, ಸಾವಿರಾರು ದೇವರಿದ್ದಾರೆ. ಕಾಂಗ್ರೆಸ್ಸಿನವರು ಎಂದಿಗೂ ಅಲ್ಪಸಂಖ್ಯಾತರ ಪರ ಎಂದು ಬಿಜೆಪಿಯವರು ಹಣೆಪಟ್ಟಿ ಕಟ್ಟಿದ್ದಾರೆ. ನಾವೇನು ಇವರಿಗೆ ಮಾರಿಕೊಂಡಿದ್ದೀವಾ ಎಂದರು. ಬಿಜೆಪಿಯವರು ಮನೆಮನೆಗೆ ತೆರಳಿ ಏಕೆ ಶ್ರೀರಾಮನ ಅಕ್ಷತೆ ನೀಡುತ್ತಿದ್ದಾರೆ? ಇವರದು ಏನ್ ಕೆಲಸ ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ.
ಪೂರ್ಣಗೊಳ್ಳದ ಶ್ರೀರಾಮಮಂದಿರ ಉದ್ಘಾಟನೆ ಸರಿಯಲ್ಲ: ವಿ.ಎಸ್.ಉಗ್ರಪ್ಪ
ಅವರು ಕೇವಲ ರಾಜಕೀಯಕ್ಕಾಗಿ ರಾಮ ಮಂದಿರ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಅಷ್ಟೆ ಎಂದು ಕಿಡಿಕಾರಿದರು. ನಮ್ಮ ಕ್ಷೇತ್ರದಲ್ಲಿ ಹಲವು ದೇವಸ್ಥಾನಗಳನ್ನು ಕಟ್ಟಿಸಿದ್ದೇವೆ. ನಮಗೆ ಎಲ್ಲ ದೇವರೂ ಒಂದೇ. ಲೋಕಸಭೆ ಚುನಾವಣೆ ಬಂದಿರುವ ಹಿನ್ನೆಲೆಯಲ್ಲಿ ಬಿಜೆಪಿಯವರು ಈ ರಾಮಮಂದಿರದ ವಿಷಯ ಎತ್ತಿದ್ದಾರೆ ಅಷ್ಟೆ. ಇದರಲ್ಲಿ ಯಾವುದೇ ಭಕ್ತಿಯಿಲ್ಲ. ನಮ್ಮ ಹಳ್ಳಿಯಲ್ಲಿನ ಜನತೆ ದೂರದ ಅಯೋಧ್ಯೆಗೆ ಹೋಗಿ ದರ್ಶನ ಪಡೆಯಲು ಆಗುತ್ತದೆಯೇ ಎಂದರು.