ಬೆಳಗಾವಿ(ಡಿ.18): ಡಿಸೆಂಬರ್‌ ಅಂತ್ಯ ಅಥವಾ ಜನವರಿ ಮೊದಲ ವಾರಕ್ಕೆ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ತಿಳಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆಗೆ ತಾತ್ಕಾಲಿಕ ತಡೆ ನೀಡಲಾಗಿದೆ. ಡಿಸೆಂಬರ್‌ ಅಂತ್ಯದೊಳಗಾಗಿ ಸಂಪುಟ ವಿಸ್ತರಣೆ ಆಗಬಹುದು. ಅತಿ ಶೀಘ್ರದಲ್ಲಿ ಸಂಪುಟ ವಿಸ್ತರಣೆ ಆಗುವ ಆಶಾಭಾವನೆಯಿದೆ ಎಂದು ತಿಳಿಸಿದರು.

ವಿಧಾನ ಪರಿಷತ್ತಿನಲ್ಲಿ ಗಲಾಟೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ ಪಕ್ಷಕ್ಕೆ ಬಹುಮತ ಇಲ್ಲವೆಂದು ಇಡೀ ರಾಜ್ಯದ ಮೂಲೆ ಮೂಲೆಗೂ ಗೊತ್ತಿದೆ. ಉಪಸಭಾಪತಿ ಪ್ರತಾಪಚಂದ್ರ ಶೆಟ್ಟಿ ಬಹಳ ಒಳ್ಳೆಯ ಮನುಷ್ಯ. ಪಕ್ಷಕ್ಕೋಸ್ಕರ ತಮ್ಮ ವ್ಯಕ್ತಿತ್ವ ಹಾಳು ಮಾಡಿಕೊಳ್ಳುತ್ತಿದ್ದಾರೆ. ಪ್ರತಾಪಚಂದ್ರ ಶೆಟ್ಟಿರಾಜೀನಾಮೆ ನೀಡಿ ತಮ್ಮ ವ್ಯಕ್ತಿತ್ವ ಉಳಿಸಿಕೊಳ್ಳುವುದು ಒಳ್ಳೆಯದು ಎಂದು ಸಲಹೆ ನೀಡಿದರು.

ಸಿಎಂ -ಮಾಜಿ ಸಿಎಂ ದಿನೇ ದಿನೇ ಹತ್ತಿರ; ಬೇರೆಯದೇ ಸುಳಿವು ನೀಡ್ತಿದೆ ರಾಜಕೀಯ ಸಮೀಕರಣ

ಸಹೋದರರ ಚಿತ್ರ ಹರಿದಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಲಖನ್‌ ಜಾರಕಿಹೊಳಿ ಮತ್ತು ನಾನು ಒಂದಾಗಿರುವ ಭಾವಚಿತ್ರ ಹರದಾಡುತ್ತಿದೆ ನಿಜ. ಕುಟುಂಬ ವಿಚಾರ ಬಂದರೆ ನಾವೆಲ್ಲ ಸಹೋದರರು ಒಂದೇ. ಪಕ್ಷದ ವಿಚಾರ ಬಂದಾಗ ಮಾತ್ರ ಬೇರೆ ಬೇರೆ. ಸದ್ಯಕ್ಕೆ ನಮ್ಮ ಪುತ್ರರು ರಾಜಕಾರಣಕ್ಕೆ ಬರುವುದಿಲ್ಲ ಎಂದರು.

ಪ್ರತ್ಯೇಕ ಜಿಲ್ಲೆ ರಚನೆಗೆ ಸಹಮತ ಇದೆ:

ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡಿ ಚಿಕ್ಕೋಡಿ, ಗೋಕಾಕ್‌ ಎರಡನ್ನೂ ಪ್ರತ್ಯೇಕ ಜಿಲ್ಲೆಯನ್ನಾಗಿಸಬೇಕು ಎಂಬುದಕ್ಕೆ ನನ್ನ ಸಹಮತ ಇದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ತಿಳಿಸಿದ್ದಾರೆ. ಜಿಲ್ಲಾ ವಿಭಜನೆಗೂ ಮೊದಲೇ ತಾಲೂಕುಗಳ ವಿಂಗಡಣೆಯಾಗಬೇಕು. ಈ ಸಂಬಂಧ ಕಳೆದ ಬಾರಿ ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ಚರ್ಚೆ ಆಗಿದೆ ಎಂದು ಹೇಳಿದರು.