ಯಾರು ಎಷ್ಟೇ ಅಡ್ಡಗಾಲು ಹಾಕಿದರೂ ಗ್ಯಾರಂಟಿಗಳು ಜಾರಿ: ಸಚಿವ ರಾಮಲಿಂಗಾರೆಡ್ಡಿ
ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಜನರ ಹಣವನ್ನು ಜನರಿಗೆ ನೀಡುವ ಕೆಲಸ ಮಾಡುತ್ತಿದೆ. ವಿಪಕ್ಷಗಳು ಟೀಕಿಸುವ ಹಾಗೂ ಜನರಲ್ಲಿ ಗೊಂದಲ ಮೂಡಿಸುವ ಬದಲು ರಚನಾತ್ಮಕ ಸಲಹೆ ಸೂಚನೆ ನೀಡುವ ಕೆಲಸ ಮಾಡಲಿ ಎಂದು ಸಾರಿಗೆ ಸಚಿವರು ಆದ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಸಲಹೆ ನೀಡಿದರು.
ರಾಮನಗರ (ಆ.06): ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಜನರ ಹಣವನ್ನು ಜನರಿಗೆ ನೀಡುವ ಕೆಲಸ ಮಾಡುತ್ತಿದೆ. ವಿಪಕ್ಷಗಳು ಟೀಕಿಸುವ ಹಾಗೂ ಜನರಲ್ಲಿ ಗೊಂದಲ ಮೂಡಿಸುವ ಬದಲು ರಚನಾತ್ಮಕ ಸಲಹೆ ಸೂಚನೆ ನೀಡುವ ಕೆಲಸ ಮಾಡಲಿ ಎಂದು ಸಾರಿಗೆ ಸಚಿವರು ಆದ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಸಲಹೆ ನೀಡಿದರು. ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ರಾಜ್ಯ ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ವಿರೋಧ ಪಕ್ಷಗಳು ಎಷ್ಟೇ ಅಡ್ಡಗಾಲು ಹಾಕಿದರು.
ಚುನಾವಣಾ ಪೂರ್ವ ನೀಡಿದ್ದ ಗ್ಯಾರಂಟಿಗಳನ್ನು ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಲಿದೆ. ರಾಜ್ಯದ ಜನರಿಗೆ ಮಾಡಿದ್ದ ವಾಗ್ದಾನಗಳನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಜಾರಿ ಮಾಡುವ ಜವಾಬ್ದಾರಿ ನಮ್ಮದು ಎಂಬ ಭರವಸೆಯನ್ನೂ ನೀಡಲಾಗಿತ್ತು. 2013-18 ರಲ್ಲಿ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಸರ್ಕಾರ ಕೊಟ್ಟಂತಹ 165 ಭರವಸೆಗಳನ್ನು 158 ಈಡೇರಿಸಿ, 30 ಮಹತ್ವಾಕಾಂಕ್ಷಿ ಕಾರ್ಯಕ್ರಮವನ್ನು ಜಾರಿಗೊಳಿಸಿತ್ತು. ಆದರೆ, ಬಿಜೆಪಿ ಸರ್ಕಾರ 610 ಭರವಸೆಗಳಲ್ಲಿ ಕೇವಲ 60 ಭರವಸೆಗಳನ್ನು ಈಡೇರಿಸಿತು ಎಂದು ವ್ಯಂಗ್ಯವಾಡಿದರು.
ವರ್ಗಾವಣೆಗೂ ನನಗೂ ಯಾವುದೇ ಸಂಬಂಧ ಇಲ್ಲ: ಸಂಸದ ಡಿ.ಕೆ.ಸುರೇಶ್
ಕಾಂಗ್ರೆಸ್‌ನ ಬದ್ಧತೆ ಹಾಗೂ ಕಾರ್ಯಕ್ರಮಗಳನ್ನು ನೋಡಿ ಜನರು ಪಕ್ಷಕ್ಕೆ ಅಭೂತಪೂರ್ವ ಗೆಲುವು ನೀಡಿದರು. ಸರ್ಕಾರ ಐದು ಗ್ಯಾರಂಟಿಗಳ ಜೊತೆಗೆ ಪ್ರಣಾಳಿಕೆಯಲ್ಲಿ ತಿಳಿಸಿರುವಂತೆ 76 ಭರವಸೆಗಳನ್ನೂ ಜಾರಿಗೆ ತರಲಿದೆ. ಮುಂದಿನ ಐದು ವರ್ಷಗಳಲ್ಲಿ ಪ್ರಣಾಳಿಕೆಯಲ್ಲಿ ತಿಳಿಸಿರುವ ಎಲ್ಲ ಭರವಸೆಗಳನ್ನು ಈಡೇರಿಸಲಾಗುವುದು ಎಂದರು. ಶಕ್ತಿ ಯೋಜನೆ ಅಡಿಯಲ್ಲಿ ರಾಜ್ಯಾದ್ಯಂತ 32 ಕೋಟಿಯಷ್ಟುಮಂದಿ ಬಸ್ಸಿನಲ್ಲಿ ಪ್ರಯಾಣ ಮಾಡಿದ್ದಾರೆ. ಈ ಹಿಂದೆ ಮಾಸಿಕ 80 ಲಕ್ಷದಷ್ಟುಮಹಿಳೆಯರು ಮಾತ್ರ ಬಸ್ ಬಳಕೆ ಮಾಡುತ್ತಿದ್ದರು. ಆದರೆ, ಶಕ್ತಿ ಯೋಜನೆ ಜಾರಿ ಬಳಿಕ ಮಾಸಿಕ ಹೆಚ್ಚುವರಿ 20 ಲಕ್ಷ ಮಂದಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದು, ಈಗ ಅದು ಒಂದು ಕೋಟಿಗೆ ದಾಟಿದೆ.
ಸಿದ್ದರಾಮಯ್ಯರವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ವೇಳೆ ಪ್ರತಿಯೊಬ್ಬರಿಗೆ 7 ಕೆಜಿ ಅಕ್ಕಿ ನೀಡುತ್ತಿದ್ದರು. ಬಿಜೆಪಿ ಸರ್ಕಾರ ಅದನ್ನು 5 ಕೆಜಿಗೆ ಇಳಿಸಿತು. ಈಗ ಪ್ರತಿಯೊಬ್ಬರಿಗೂ 10 ಕೆಜಿ ಅಕ್ಕಿ ನೀಡಲು ಅನ್ನ ಭಾಗ್ಯ ಯೋಜನೆ ಜಾರಿ ತರಲಾಗಿದೆ. ಆದರೆ, ಕೇಂದ್ರ ಸರ್ಕಾರದ ಬಳಿ ಗೋದಾಮಿನಲ್ಲಿ 130 ಲಕ್ಷ ಮೆಟ್ರಿಕ್ ಟನ್ ಅಕ್ಕಿ ದಾಸ್ತಾನಿದ್ದರೂ ನೀಡುತ್ತಿಲ್ಲ. ಈ ಕಾರಣದಿಂದಾಗಿ ತಾತ್ಕಾಲಿಕವಾಗಿ ಫಲಾನುಭವಿಗಳಿಗೆ 5 ಕೆಜಿ ಅಕ್ಕಿ ಹಾಗೂ ಪ್ರತಿ 1 ಕೆಜಿಗೆ 34 ರು.ನಂತೆ 5 ಕೆ.ಜಿಗೆ ತಗಲುವ ಮೊತ್ತವನ್ನು ಡಿಬಿಟಿ ಮೂಲಕ ವರ್ಗಾಯಿಸಲಾಗುತ್ತಿದೆ.
ಅಕ್ಕಿ ನೀಡಲು ಸಾಧ್ಯವಿಲ್ಲದಿದ್ದರೆ ಹಣ ನೀಡಬೇಕೆಂದು ಹೇಳಿದ್ದ ಬಿಜೆಪಿ ಇದೀಗ ಹಣದ ಬದಲು ಅಕ್ಕಿ ನೀಡಬೇಕೆಂದು ಚಿಕ್ಕ ಮಕ್ಕಳಂತೆ ಚಂಡಿ ಹಿಡಿಯುತ್ತಿದ್ದಾರೆಂದು ರಾಮಲಿಂಗಾರೆಡ್ಡಿ ಟೀಕಿಸಿದರು. ಶಾಸಕ ಇಕ್ಬಾಲ್ ಹುಸೇನ್ ಮಾತನಾಡಿ, ಈ ಹಿಂದಿನ ಬಿಜೆಪಿ ಸರ್ಕಾರ ಕೊರೋನಾ ಸಮಯದಲ್ಲಿ ಹೆಣದ ಮೇಲೆ ಹಣ ಮಾಡುವ ಕೆಲಸ ಮಾಡಿತು. ಜನರ ಸಾವಿಗೆ ಬೆಲೆ ಇರಲಿಲ್ಲ. ಕೋವಿಡ್‌ಗೆ ಬಲಿಯಾದವರಿಗೆ ಸಂಪ್ರದಾಯ ಬದ್ಧವಾಗಿ ಶವ ಸಂಸ್ಕಾರ ಮಾಡಲು ಸಾಧ್ಯವಾಗಲಿಲ್ಲ. ಆದರೆ ಕಾಂಗ್ರೆಸ್ ನಾಯಕರು ನೆರವಿಗೆ ಧಾವಿಸಿ ಧೈರ್ಯ ತುಂಬುವ ಕೆಲಸ ಮಾಡಿದರು.
ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಗುರಿ: ಶಾಸಕ ಶರತ್ ಬಚ್ಚೇಗೌಡ
ನೋವು ಮತ್ತು ಸಂಕಷ್ಟದಲ್ಲಿದ್ದ ಜನರು ಭರವಸೆ ಇಟ್ಟು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ರಾಮನಗದಿಂದ ಆಯ್ಕೆಯಾದವರು ದೇಶದ ಪ್ರಧಾನಿ, ರಾಜ್ಯದ ಮುಖ್ಯಮಂತ್ರಿಯಾದರು. ನಗರದ ಮೂಲ ಸೌಕರ್ಯಕ್ಕೆ ಒತ್ತು ನೀಡಲಿಲ್ಲ. ಇಂದಿಗೂ ಜನರು ಕುಡಿಯುವ ನೀರಿಗೆ ಕಷ್ಟಪಡುತ್ತಿದ್ದಾರೆ. ಅದೇ ಸಿ.ಪಿ.ಯೋಗೇಶ್ವರ್ ಕೇವಲ ಶಾಸಕರಾಗಿ ಶಿಂಷಾನದಿಯಿಂದ ನೀರು ತಂದು ಜನರಿಗೆ ನೀಡಿದರು ಎಂದು ಹೇಳಿದರು. ಈ ವೇಳೆ ನಗರಸಭೆ ಪ್ರಭಾರ ಅಧ್ಯಕ್ಷ ಸೋಮಶೇಖರ್(ಮಣಿ), ಜಿಲ್ಲಾಧಿಕಾರಿ ಡಾ.ಅವಿನಾಶ್, ಜಿಪಂ ಸಿಇಒ ದಿಗ್ವಿಜಯ ಬೋಡ್ಕೆ, ಎಸ್ಪಿ ಕಾರ್ತಿಕ್ ರೆಡ್ಡಿ, ಅಪರ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ, ಬೆಸ್ಕಾಂ ಅಧೀಕ್ಷಕ ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.