ಕಾಂಗ್ರೆಸ್ ಸರ್ಕಾರ ಟೇಕಾಫ್ ಆಗಿ ಸಾವಿರಾರು ಕಿ.ಮೀ ಮುಂದೆ ಹೋಗಿದೆ: ಸಚಿವ ರಾಮಲಿಂಗಾರೆಡ್ಡಿ
ಕಾಂಗ್ರೆಸ್ ಸರ್ಕಾರ ಟೇಕಾಫ್ ಆಗಿ ಈಗಾಗಲೇ ಸಾವಿರಾರು ಕಿ.ಮೀ ಮುಂದೆ ಹೋಗಿದೆ. ಟೀಕೆ ಮಾಡುವವರು ಮಾಡಲಿ ಬಿಡಿ. ವಿರೋಧ ಪಕ್ಷದವರ ಕೆಲಸವೇ ಅದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದರು.
ರಾಮನಗರ (ಆ.16): ಕಾಂಗ್ರೆಸ್ ಸರ್ಕಾರ ಟೇಕಾಫ್ ಆಗಿ ಈಗಾಗಲೇ ಸಾವಿರಾರು ಕಿ.ಮೀ ಮುಂದೆ ಹೋಗಿದೆ. ಟೀಕೆ ಮಾಡುವವರು ಮಾಡಲಿ ಬಿಡಿ. ವಿರೋಧ ಪಕ್ಷದವರ ಕೆಲಸವೇ ಅದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣರವರ ಮಾತಿಗೆ ಅವರ ಪಕ್ಷದಲ್ಲೇ ಕಿಮ್ಮತ್ತಿಲ್ಲ. ಇನ್ನು ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುವ ಯಾವ ನೈತಿಕತೆ ಉಳಿಸಿಕೊಂಡಿದ್ದಾರೆ. ಚುನಾವಣಾ ಪೂರ್ವದಲ್ಲಿ ಬಿಜೆಪಿ ನೀಡಿದ್ದ 610 ಭರವಸೆಯಲ್ಲಿ ಕೇವಲ 60 ಭರವಸೆಗಳನ್ನಷ್ಟೆ ಈಡೇರಿಸಿದೆ.
ಬಿಜೆಪಿ ಕೊಟ್ಟಮಾತಿನಂತೆ ನಡೆದುಕೊಂಡಿಲ್ಲ. ಆದರೆ, ಕಾಂಗ್ರೆಸ್ ಸರ್ಕಾರ 2013ರಲ್ಲಿ ನೀಡಿದ್ದ 165ರಲ್ಲಿ 158 ಭರವಸೆ ಈಡೇರಿಸಿತು. ಬಿಜೆಪಿಯವರ ಮಾತಿಗೆ ಮಹತ್ವ ಕೊಡಬೇಕಿಲ್ಲ. ನಮ್ಮ ಸರ್ಕಾರದ ಬಗ್ಗೆ ಅಪಪ್ರಚಾರ ಮಾಡಿದ್ದರು. ಜನರಿಗೆ ಯಾಮಾರಿಸುವ ಕೆಲಸ ಮಾಡಿದ್ದರು. ಆದರೆ, ಜನ ನಮ್ಮ ಮೇಲೆ ವಿಶ್ವಾಸ ಇಟ್ಟು ಅಧಿಕಾರ ನೀಡಿದ್ದಾರೆ. ಪ್ರತಿನಿತ್ಯ 60 ಲಕ್ಷ ಮಹಿಳೆಯರು ಶಕ್ತಿ ಯೋಜನೆಯಡಿ ಸಾರಿಗೆ ಬಸ್ಸುಗಳಲ್ಲಿ ಓಡಾಡುತ್ತಿದ್ದಾರೆ. ಗ್ಯಾರಂಟಿಗಳ ಮೂಲಕ ನಾವು ಜನರನ್ನು ತಲುಪುತ್ತಿದ್ದೇವೆ. ಮಾಜಿ ಸಿಎಂ ಕುಮಾರಸ್ವಾಮಿ ವಿರೋಧ ಪಕ್ಷದಲ್ಲಿರುವ ಕಾರಣ ನಮ್ಮನ್ನು ಹೊಗಳಲು ಸಾಧ್ಯವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಎದೆಯ ಮೇಲೆ ಪೋಷಕರು, ಸುದೀಪ್ ಹಚ್ಚೆ: ವಿಭಿನ್ನ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಯುವಕ!
ಡಿ.ಕೆ.ಶಿವಕುಮಾರ್ ಅವರು ಅಜ್ಜಯ್ಯನ ಮೇಲೆ ಆಣೆ ಮಾಡಲಿ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಮೊದಲು ಅವರ ಮನೆ ದೇವರ ಮೇಲೆ ಆಣೆ ಮಾಡಲಿ. ನಾವು 40 ಪರ್ಸೆಂಟ್ ಕಮಿಷನ್ ತೆಗೆದುಕೊಂಡಿಲ್ಲ, ವರ್ಗಾವಣೆ ದಂಧೆ ಮಾಡಿಲ್ಲ, ಭ್ರಷ್ಟಾಚಾರ ಮಾಡಿಲ್ಲ ಅಂತ ಆಣೆ ಮಾಡಲಿ. ಆರೋಪ ಮಾಡುವುದಕ್ಕೂ ನೈತಿಕತೆ ಇರಬೇಕು ಎಂದು ತಿರುಗೇಟು ನೀಡಿದರು.
ಎರಡು ವರ್ಷದ ಬಳಿಕ ಕಿರಿಯರಿಗೆ ಅವಕಾಶ ನೀಡಬೇಕೆಂಬುದು ಸಚಿವ ಮುನಿಯಪ್ಪನವರ ವೈಯಕ್ತಿಕ ಹೇಳಿಕೆ. ಎಲ್ಲರಿಗೂ ಅವಕಾಶ ಸಿಗಬೇಕಲ್ವಾ. ಇನ್ನು ಎರಡೂವರೆ ವರ್ಷ ಆದಮೇಲೆ ನೀಡೋಣ. ಆ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದು ಉತ್ತರಿಸಿದರು. ಮೇಕೆದಾಟು ಯೋಜನೆಯಿಂದ ಯಾರಿಗೂ ಸಮಸ್ಯೆ ಇಲ್ಲ. ಯಾವುದೇ ಸರ್ಕಾರ ಇದ್ದರೂ ತಮಿಳುನಾಡು ಕ್ಯಾತೆ ತೆಗೆಯುತ್ತಲೇ ಇದೆ. ಈಗ ತಮಿಳುನಾಡು ಕೋರ್ಚ್‌ಗೆ ಹೋಗಿದೆ. ನಾವು ಕೋರ್ಚ್ ಮೂಲಕ ಹೋರಾಟ ಮಾಡುತ್ತಿದ್ದೇವೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ರಾಮನಗರದ ಅಭಿವೃದ್ಧಿಗೆ ಆದ್ಯತೆ: ರಾಮನಗರ ಅತ್ಯಂತ ಸುಶಿಕ್ಷಿತವಾದ, ಸಂಪನ್ನವಾದ, ಸುಭಿಕ್ಷವಾದ ಮತ್ತು ಶ್ರೀಮಂತವಾದ ಜಿಲ್ಲೆಯಾಗಿ ರೂಪುಗೊಳ್ಳುವ ಸನಿಹದಲ್ಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ 77ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ರಾಮನಗರ ಜಿಲ್ಲೆಯಾಗಿ ದಶಕ ಕಳೆದಿದೆ. ಈ ಅವಧಿಯಲ್ಲಿ ನಾವು ಸಾಧಿಸಿರುವುದು ಬಹಳ, ಸಾಧಿಸಬೇಕಾಗಿರುವುದು ಇನ್ನೂ ಹೆಚ್ಚಿದೆ. ರಾಮನಗರ ಜಿಲ್ಲೆಗೆ ಐತಿಹಾಸಿಕ ಹಿನ್ನೆಲೆ ಇದೆ. ದೇಗುಲಗಳು, ಕೋಟೆ ಕೊತ್ತಲಗಳ ದೊಡ್ಡದೊಂದು ಭಂಡಾರವೇ ಇದೆ.
ಹೊಸ ಉದ್ದಿಮೆಗಳ ಮಹಾಪೂರ, ರಾಮನಗರದತ್ತ ಹರಿದುಬರುತ್ತಿದೆ. ಎಲ್ಲಕ್ಕಿಂತ ಮಿಗಿಲಾಗಿ ಬಹುದೊಡ್ಡ ಸಂಸ್ಕೃತಿಯ ಇಲ್ಲಿದೆ ಎಂದರು. ಸಾಮರಸ್ಯ, ಸಹಬಾಳ್ವೆಗೆ ರಾಮನಗರ ಉತ್ತಮ ಉದಾಹರಣೆ. ಅದ್ಭುತ ಎನಿಸುವ ಮಾನವ ಸಂಪನ್ಮೂಲವಿದೆ. ಸಾಹಸ ಕ್ರೀಡೆಗೆ, ಉದ್ಯಮಗಳ ಸ್ವಾಪನೆಗೆ ಶಿಕ್ಷಣ ಸಂಸ್ಥೆಗಳ ಬೆಳವಣಿಗೆಗೆ, ಕೃಷಿಯ ಅಭ್ಯುದಯಕ್ಕೆ ಪರಿಸರದ ಸಿರಿ ಹೆಚ್ಚಿಸಲು ಬೇಕಾದ ಎಲ್ಲ ಅವಕಾಶಗಳೂ ರಾಮನಗರದ ಮಡಿಲಿನಲ್ಲಿ ತುಂಬಿಕೊಂಡಿದೆ. ಹೀಗಾಗಿ ರಾಮನಗರ ಅತ್ಯಂತ ಸುಶಿಕ್ಷಿತವಾದ, ಸಂಪನ್ನವಾದ, ಸುಭಿಕ್ಷವಾದ ಮತ್ತು ಶ್ರೀಮಂತವಾದ ಜಿಲ್ಲೆಯಾಗಿ ರೂಪುಗೊಳ್ಳುವ ಸನಿಹದಲ್ಲಿದೆ ಎಂದು ತಿಳಿಸಿದರು.
ಪ್ರಸ್ತುತ ಈ ಜಿಲ್ಲೆಯ ಅಭಿವೃದ್ಧಿಗೆ ನಾನು ಮತ್ತು ಇದೇ ಜಿಲ್ಲೆಯ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೇವೆ. ನಾವು ಭರವಸೆ ನೀಡಿದ್ದ ಐದು ಗ್ಯಾರಂಟಿಗಳಲ್ಲಿ ನಾಲ್ಕು ಗ್ಯಾರಂಟಿಗಳಿಗೆ ಚಾಲನೆ ದೊರಕಿದೆ. ಉಳಿದಿರುವ ಯುವನಿಧಿ ಯೋಜನೆಯ ಕುರಿತು ಸರ್ಕಾರಿ ಆದೇಶ ಹೊರಡಿಸಿದೆ. 2022-23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪದವಿ ಡಿಪ್ಲೊಮಾ ಪಡೆದ ಯುವ ಜನರಿಗೆ ಆರು ತಿಂಗಳು ಕಳೆದರೂ ಉದ್ಯೋಗ ದೊರೆಯದ ಸಂದರ್ಭದಲ್ಲಿ ಈ ಯೋಜನೆ ಸೌಲಭ್ಯ ಪಡೆಯಬಹುದು ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
ಬೆಳಗಾವಿ ವಿಭಜಿಸಿ ಮೂರು ಜಿಲ್ಲೆ ಮಾಡಲು ಕೋರಿದ್ದೇವೆ: ಸಚಿವ ಸತೀಶ್ ಜಾರಕಿಹೊಳಿ
ಪೊಲೀಸರು ಹಾಗೂ ವಿದ್ಯಾರ್ಥಿಗಳು ಪಥಸಂಚಲನ ನಡೆಸಿದರು. ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಗಣನೀಯ ಸೇವೆ ಸಲ್ಲಿಸಿರುವ 27 ಮತ್ತು ಇಲಾಖಾ ವಾಹನ ಚಾಲಕರು 2 ಸೇರಿ 29 ಮಂದಿ ಚಾಲಕರಿಗೆ ಬೆಳ್ಳಿ ಪದಕ ಹಾಗೂ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಆಕರ್ಷಕವಾಗಿತ್ತು. ಶಾಸಕ ಇಕ್ಬಾಲ್ ಹುಸೇನ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಪ್ರಭಾರ ಅಧ್ಯಕ್ಷ ಸೋಮಶೇಖರ್, ಜಿಲ್ಲಾಧಿಕಾರಿ ಅವಿನಾಶ್, ಜಿಪಂ ಸಿಇಒ ದಿಗ್ವಿಜಯ್ ಬೋಡ್ಕೆ, ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.