ಜಾರಕಿಹೊಳಿ ಶಾಸ್ತ್ರ ಹೇಳೋ ವಿದ್ಯೆ ಕಲಿತಿದ್ದಾರೆ: ಸಚಿವ ರಾಜಣ್ಣ
ರಮೇಶ್ ಜಾರಕಿಹೊಳಿ ಶಾಸ್ತ್ರ ಹೇಳುವ ವಿದ್ಯೆ ಕಲಿತಿದ್ದಾರೆ ಅವರು. ನನಗೆ ಏನು ಬರೋಲ್ಲ. ಯಾವಾಗ ಏನಾಗುತ್ತೆ ಎಂಬುದನ್ನು ಶಾಸ್ತ್ರ ಕಲ್ತಿರೋರು ಹೇಳಬಹುದು. ಅವರ ವೈಯಕ್ತಿಕ ಅಭಿಪ್ರಾಯ. ಚುನಾವಣೆ ಕಳೆದು ಕೇವಲ ೫ ತಿಂಗಳು ಆಗಿರುವುದು ಅಷ್ಟೇ. ಮತ್ತೆ ಚುನಾವಣೆ ಎದುರಿಸುವುದಕ್ಕೆ ಯಾರೂ ಕೂಡ ಸಿದ್ಧ ಇಲ್ಲ. ಐದು ವರ್ಷ ನಮ್ಮ ಸರ್ಕಾರ ಇದ್ದೇ ಇರುತ್ತದೆ: ಸಚಿವ ರಾಜಣ್ಣ

ಹಾಸನ(ನ.02): ರಾಜಕಾರಣದಲ್ಲಿ ಸಂಯಮ ಇರಬೇಕು. ರಾಜಕಾರಣದಲ್ಲಿ ಯಾರೂ ಸತ್ಯ ಹರಿಶ್ಚಂದ್ರರು ಇಲ್ಲ. ಹಾಗಾಗಿ ಸುಮ್ಮನೇ ಏನೇನೋ ಮಾತನಾಡಬಾರದು. ಸಿದ್ದರಾಮಯ್ಯ ಅವರೇ 5 ವರ್ಷ ಮುಖ್ಯಮಂತ್ರಿಯಾಗಿ ಇರಲಿದ್ದಾರೆ ಎನ್ನುವ ಮೂಲಕ ರಮೇಶ್ ಜಾರಕಿಹೊಳಿ ಹೇಳಿಕೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ ತಿರುಗೇಟು ನೀಡಿದರು.
ನಗರದ ಜಿಲ್ಲಾ ಕ್ರೀಡಾಂಗಣದ ಬಳಿ ಬುಧವಾರ ಮಾಧ್ಯಮದೊಂದಿಗೆ ಮಾತನಾಡಿ, ಅದೆಲ್ಲಾ ಸುಳ್ಳು, ಸುಮ್ಮನೇ ಏನೋ ಹೇಳ್ತಾರೆ ಎಂದು ಲೇವಡಿ ಮಾಡಿ, ನಾನು ಹೇಳ್ತಿನಪ್ಪ ಬಿಜೆಪಿಯ ೨೫ ಶಾಸಕರು ಬರ್ತಾರೆ ಅಂತಾ ಅವರು ಬರ್ತಾರಾ. ಜೆಡಿಎಸ್‌ನ ಸ್ವರೂಪ್ ಕಾಂಗ್ರೆಸ್ ಗೆ ಬರ್ತಾರೆ ಅಂತಿನಿ ಬರ್ತಾರಾ..? ಇದೆಲ್ಲಾ ಆಗದೇ ಇರೋ ವಿಚಾರ. ಈಗ ಇದರ ಚರ್ಚೆ ಯಾಕೆ? ಕೆಲ ಶಾಸಕರ ಜೊತೆ ಸಚಿವ ಸತೀಶ್ ಜಾರಕಿಹೊಳಿ ಪ್ರವಾಸ ವಿಚಾರವಾಗಿ ಅವರು ಹೋಗಬಾರದು ಅಂತಾ ಏನಿದೆ ಕೆಲವು ವಿಷಯಗಳ ಬಗ್ಗೆ ಬೆಳಗಾವಿ ವಿಚಾರದಲ್ಲಿ ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ನಡುವೆ ಮನಸ್ತಾಪ ಇದೆಯೊ ಇಲ್ಲವೊ ನನಗೆ ಗೊತ್ತಿಲ್ಲ. ಸಮಸ್ಯೆ ಇದೆ ಎಂದು ಮಾಧ್ಯಮಗಳು ಸೃಷ್ಟಿ ಮಾಡಿವೆ. ಕರ್ನಾಟಕದಲ್ಲಿ ಸರಿಯಾದ ವಿರೋದ ಪಕ್ಷ ಎಂದರೆ ಅದು ಮಾಧ್ಯಮದವರೇ! ಬೆಳಗಾವಿಯಲ್ಲಿ ಏನೂ ಗೊಂದಲ ಇಲ್ಲ. ಇನ್ನೂ ಹನಿಮೂನ್ ಪಿರಿಯಡ್ಡೇ ಮುಗಿದಿಲ್ಲ. ಸುಮ್ಮನೆ ಗೊಂದಲ ಮಾಡ್ತೀರಲ್ಲ ಎಂದು ಕುಟುಕಿದರು.
ಚುನಾವಣಾ ಅಕ್ರಮ ಆರೋಪ: ಎಚ್‌ಡಿ ರೇವಣ್ಣಗೆ ಹೈಕೋರ್ಟ್ ಸಮನ್ಸ್
ರಮೇಶ್ ಜಾರಕಿಹೊಳಿ ಶಾಸ್ತ್ರ ಹೇಳುವ ವಿದ್ಯೆ ಕಲಿತಿದ್ದಾರೆ ಅವರು. ನನಗೆ ಏನು ಬರೋಲ್ಲ. ಯಾವಾಗ ಏನಾಗುತ್ತೆ ಎಂಬುದನ್ನು ಶಾಸ್ತ್ರ ಕಲ್ತಿರೋರು ಹೇಳಬಹುದು. ಅವರ ವೈಯಕ್ತಿಕ ಅಭಿಪ್ರಾಯ. ಚುನಾವಣೆ ಕಳೆದು ಕೇವಲ ೫ ತಿಂಗಳು ಆಗಿರುವುದು ಅಷ್ಟೇ. ಮತ್ತೆ ಚುನಾವಣೆ ಎದುರಿಸುವುದಕ್ಕೆ ಯಾರೂ ಕೂಡ ಸಿದ್ಧ ಇಲ್ಲ. ಐದು ವರ್ಷ ನಮ್ಮ ಸರ್ಕಾರ ಇದ್ದೇ ಇರುತ್ತದೆ.
ಸಿದ್ದು 5 ವರ್ಷ ಸಿಎಂ
ಸಿದ್ದರಾಮಯ್ಯನವರೇ ಐದು ವರ್ಷ ಮುಖ್ಯಮಂತ್ರಿ ಆಗಿರಬೇಕು ಎಂಬ ಜನರ ಬಯಕೆ ಇದೆ. ಇದನ್ನೆಲ್ಲ ನಾವು ಕೂಡ ಹೈಕಮಾಂಡ್ ಗಮನಕ್ಕೆ ತರುತ್ತೇವೆ. ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ಅದನ್ನು ಪಾಲಿಸುತ್ತೇವೆ ಎಂದು ಹೇಳಿಕೆ ನೀಡುವುದರ ಮೂಲಕ ಪರೋಕ್ಷವಾಗಿ ಸಿದ್ದರಾಮಯ್ಯ ಪರ ಕೆ.ಎನ್ ರಾಜಣ್ಣ ಬ್ಯಾಟ್ ಬೀಸಿದಂತಿತ್ತು.
ಕೆಲ ಸಚಿವರು, ಶಾಸಕರಿಗೆ ಡಿ ಕೆ ಶಿವಕುಮಾರ್ ಜೊತೆ ಹೊಂದಾಣಿಕೆ ಆಗ್ತಾ ಇಲ್ಲ ಎಂಬ ವಿಚಾರವಾಗಿ ಮಾತನಾಡಿದ ಆವರು, ಇಂತಹದ್ದೇನು ಇಲ್ಲ ಎಂದು ತಳ್ಳಿಹಾಕಿದ ಸಚಿವರು, ನೋಡಿ ಚುನಾವಣೆ ಆಗಿ ಐದು ತಿಂಗಳು ಆದರೂ ವಿಪಕ್ಷ ನಾಯಕನ ಆಯ್ಕೆ ಮಾಡೊ ಹೊಂದಾಣಿಕೆ ಬಿಜೆಪಿಯಲ್ಲಿ ಇಲ್ಲ. ಅದನ್ನು ಬಿಟ್ಟು ನೀವು ಇಲ್ಲಿ ಅಸಮಾಧಾನ ಇದೆ ಅಂತೀರಾ! ರಾಜ್ಯ ವಿಧಾನಸಭೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಓರ್ವ ವಿಪಕ್ಷ ನಾಯಕ ಇಲ್ಲದೆ ಸದನ ನಡೆದು ಹೋಯ್ತು. ಅದೂ ಬಜೆಟ್ ಅಧಿವೇಶನದಲ್ಲಿ ವಿಪಕ್ಷ ನಾಯಕರೇ ಇರಲಿಲ್ಲ. ಈ ರೀತಿ ಪರಿಸ್ಥಿತಿ ರಾಜ್ಯದಲ್ಲಿ ಮೊದಲು ಆಗಿರುವುದಕ್ಕೆ ಬಿಜೆಪಿ ಕಾರಣ. ನೀವು ಇದನ್ನ ಪ್ರಶ್ನೆ ಮಾಡಲ್ಲ ಎಂದು ಮಾಧ್ಯಮದವರಿಗೆ ಕೇಳಿದ ಸಚಿವರು, ಕುಮಾರಸ್ವಾಮಿ ಆಣೆ ಪ್ರಮಾಣ ಸವಾಲು ವಿಚಾರದ ಪ್ರಶ್ನೆಗೆ ಉತ್ತರಿಸಿ, ಆಣೆ ಪ್ರಮಾಣ ಮಾಡೋರು ಮಾಡಲಿ ನಮ್ಮದು ಅಡ್ಡಿ ಇಲ್ಲ. ನಮ್ಮ ಎಲೆಯಲ್ಲಿ ನೊಣ ಸತ್ತು ಬಿದ್ದಿದೆ. ಅವರ ಎಲೆಯಲ್ಲಿ ಹೆಗ್ಗಣ ಬಿದ್ದಿದೆ. ಆದರೆ ನಮ್ಮ ಕಡೆ ತೋರಿಸ್ತಾರೆ ಎಂದರು.
ಡಿ.ಕೆ. ಶಿವಕುಮಾರ್ ಕೂಡ ಸಿಎಂ ಆಗಬೇಕು ಎಂಬ ಕೆಲವರ ಅಭಿಪ್ರಾಯ ವಿಚಾರ ಮಾತನಾಡಿ, ಕೆಲವರು ಹೇಳಿದರೆ ಅದರಲ್ಲಿ ತಪ್ಪೇನಿದೆ, ಮನುಷ್ಯರ ಅನಿಸಿಕೆ ಲೋಕೋ ವಿಭಿನ್ನ ರುಚಿ ಎಂಬಂತದ್ದು. ಒಬ್ಬೊಬ್ಬರಿಗೆ ಒಂದೊಂದರಲ್ಲಿ ಆಸಕ್ತಿ ಒಂದೊಂದರಲ್ಲಿ ಪ್ರೀತಿ ಇರುತ್ತೆ. ಕೆಲವಲ್ಲಿ ಕಮ್ಮಿ ಇರುತ್ತೆ. ಕೆಲವರು ಹೇಳಿರೋದ್ರಲ್ಲಿ ತಪ್ಪೇನಿಲ್ಲ. ಡಿ.ಕೆ. ಶಿವಕುಮಾರ್‌ಗೆ ಮುಖ್ಯಮಂತ್ರಿ ಆಗೋದಕ್ಕೆ ಎಲ್ಲಾ ಅರ್ಹತೆ ಇದೆ. ಒಳ್ಳೆ ಸಂಘಟನೆ ಮಾಡಿ ಮೊದಲಿಂದಲೂ ನಿಷ್ಠಾವಂತರಾಗಿದ್ದಾರೆ. ಮುಖ್ಯಮಂತ್ರಿ ಆಗುವ ಅರ್ಹತೆ ಕಾಂಗ್ರೆಸ್ ನಲ್ಲಿ ಇನ್ನೂ ಎರಡು ಡಜನ್ ನಾಯಕರುಗಳಿಗಿದೆ. ಅವರು ಮುಖ್ಯಮಂತ್ರಿ ಆಗ್ತಾರೆ ಅನ್ನೋದಾದ್ರೆ ಸಂತೋಷ ಪಡುವುದರಲ್ಲಿ ನಾನು ಕೂಡ ಒಬ್ಬ. ಆದರೆ ನಮ್ಮ ರಾಜ್ಯದಲ್ಲಿ ಇನ್ನೂ ಐದು ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರಬೇಕು ಎನ್ನೋದು ಬಹು ಜನರ ಬಯಕೆ ಅದನ್ನ ಹೈಕಮಾಂಡ್‌ಗೆ ಗಮನಕ್ಕೆ ತಂದಿದ್ದೇವೆ. ಬಹುತೇಕ ಶಾಸಕರ ಬಯಕೆ ಕೂಡ ಅದೇ ಇದ್ದು, ಆದರೆ ಎಲ್ಲಾ ಶಾಸಕರು ಕೂಡ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿ ಇರುವಂತವರು. ಎರಡೂವರೆ ವರ್ಷದ ನಂತರ ಸಿಎಂ ಬದಲಾಗುತ್ತಾರೆ ಎಂಬ ಪ್ರಶ್ನೆಗೆ, ಅಯ್ಯೋ ಎರಡು ವರ್ಷ ಆದ್ಮೇಲೆ ನೋಡೋಣ. ಅಲ್ಲಿವರೆಗೂ ಬದುಕಿರುವವರು ಯಾರೋ? ಸಾಯೋರ್ ಯಾರೋ ಎಂದು ವ್ಯಂಗ್ಯವಾಡಿದರು.
ದಾಖಲೆ ನೋಡಿದರೆ ರಾಮನಗರಕ್ಕೆ ಎಚ್‌ಡಿಕೆ ಕೊಡುಗೆ ಗೊತ್ತಾಗುತ್ತೆ: ಎಚ್.ಡಿ.ರೇವಣ್ಣ
ಎಲ್ಲಾ ಸರಿಯಿದೆ ಎಂದು ಹೇಳಲ್ಲ
ಗೃಹ ಸಚಿವರ ಮನೆಯಲ್ಲಿ ಸಿಎಂ ಡಿನ್ನರ್ ಪಾರ್ಟಿ ವಿಚಾರವಾಗಿ, ಹೌದು ಅದರಲ್ಲಿ ತಪ್ಪೇನಿದೆ. ಅದಕ್ಕೆ ರಾಜಕೀಯ ಬಣ್ಣ ಯಾಕೆ ಕಟ್ತೀರಿ. ಹೌದು ನೂರಕ್ಕೆ ನೂರು ಎಲ್ಲವೂ ಸರಿ ಇದೆ ಎಂದು ನಾನು ಹೇಳಿಕೊಳ್ಳಲ್ಲ. ಅಲ್ಪ ಸ್ವಲ್ಪ ಸಮಸ್ಯೆ ಇರಬಹುದು. ಒಂದು ಮನೆಯಲ್ಲೇ ವಿಚಾರ ಭೇದ ಇರುತ್ತದೆ ಒಂದು ಪಕ್ಷದಲ್ಲಿ ಇರೋದಿಲ್ವಾ. ಅಸಮಾಧಾನ ಇಲ್ಲವೆ ಇಲ್ಲ ಎಂದು ನಾನು ಹೇಳಲ್ಲ. ಅಲ್ಪ ಸ್ವಲ್ಪ ಇದ್ದರೆ ಹೈಕಮಾಂಡ್ ಅದನ್ನ ನೋಡಿಕೊಳ್ತಾರೆ ಸರಿ ಮಾಡ್ತಾರೆ. ಕಾಂಗ್ರೆಸ್ ಪಕ್ಷ ೧೫೦ ವರ್ಷ ಇತಿಹಾಸ ಇರೋ ಪಕ್ಷವಾಗಿದೆ. ನಮ್ಮದು ಕೇಡರ್ ಬೇಸಡ್ ಅಲ್ಲ ಜನರ ಪಕ್ಷವಾಗಿದ್ದು, ಹಾಗಾಗಿ ಅಲ್ಲೊಂದು ಇಲ್ಲೊಂದು ಕಡೆ ಇರುತ್ತದೆ. ವಿಚಾರ ಪ್ರಸ್ತಾಪ ಮಾಡಿದ ಕೂಡಲೆ ಅದು ಅಸಮಾಧಾನ ಎನ್ನೋದು ಸರಿಯಲ್ಲ ಎಂದರು.
ಇದೆ ವೇಳೆ ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣ್, ಮುಖಂಡರಾದ ಬನವಾಸೆ ರಂಗಸ್ವಾಮಿ, ಗೌಡಗೆರೆ ಪ್ರಕಾಶ್, ಇತರರು ಉಪಸ್ಥಿತರಿದ್ದರು.