ಕಾಂಗ್ರೆಸ್‌ನ ಯಾತ್ರೆ ಫ್ಯಾಮಿಲಿ ಪ್ಯಾಕ್‌ ಯಾತ್ರೆ: ಕಂದಾಯ ಸಚಿವ ಅಶೋಕ್‌ ಲೇವಡಿ

ರಾಯಚೂರು(ಅ.16): ಕಾಂಗ್ರೆಸ್‌ನದು ಭಾರತ್‌ ಜೋಡೋ ಯಾತ್ರೆ ಫ್ಯಾಮಿಲಿ ಪ್ಯಾಕ್‌ ಯಾತ್ರೆ. ಆದರೆ ನಮ್ಮದು ಫ್ಯಾಮಿಲಿ ಪ್ಯಾಕ್‌ ಸರ್ಕಾರ ಅಲ್ಲ, ಮೋದಿ ಸರ್ಕಾರ. ಜನರ ಸರ್ಕಾರ, ಜನರಿಗಾಗಿಯೇ ಇರುವಂತಹ ಸರ್ಕಾರ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದರು. ಅರಕೇರಾದಲ್ಲಿ ಶನಿವಾರ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಹಾಗೂ ಅದಕ್ಕೂ ಮೊದಲು ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ಕೈಗೊಂಡಿರುವ ಭಾರತ ಜೋಡೋ ಯಾತ್ರೆ ಫ್ಯಾಮಿಲಿ ಪ್ಯಾಕ್‌ ಪಾದಯಾತ್ರೆ. ಎಲ್ಲ ಡೀಲ್‌ ಮಾಸ್ಟರ್‌ಗಳು ಸೇರಿಕೊಂಡು ಯಾತ್ರೆ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಸೋನಿಯಾ ಗಾಂಧಿ ಕುಟುಂಬ ಮುಳುಗುತ್ತಿದ್ದು, ಅದನ್ನು ಉಳಿಸಿಕೊಳ್ಳಲು ಹಾಗೂ ತಮ್ಮನ್ನು ತಾವು ಗುರುತಿಸಿಕೊಳ್ಳಲು ಯಾತ್ರೆ ಕೈಗೊಂಡಿದ್ದಾರೆ. ಕಾಂಗ್ರೆಸ್ಸಿಗರು ದೇಶ ಒಡೆದವರು, ಅವರು ನಡೆಸುತ್ತಿರುವ ಜೋಡೋ ಯಾತ್ರೆ ಫ್ಯಾಮಿಲಿ ಪ್ಯಾಕ್‌ ಯಾತ್ರೆ. ಹಿಂದೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಅವರು ಬೆಂಗಳೂರಿಂದ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದರು. ಆ ಯಾತ್ರೆಗೆ ಸೋನಿಯಾ ಗಾಂಧಿ ಬಂದಿದ್ದರೇ ಎಂದು ಪ್ರಶ್ನಿಸಿದರು.

ಬಳ್ಳಾರೀಲಿ ಕಾಂಗ್ರೆಸ್‌ ಅಬ್ಬರ: 'ಕೈ' ಪಾಳೆಯಕ್ಕೆ ಹುಮ್ಮಸ್ಸು

ಆರು ದಶಕಗಳ ಕಾಲ ಆಳಿದ ಕಾಂಗ್ರೆಸ್‌ ಎಂದೂ ಮನೆಬಿಟ್ಟು ಹೊರಬಂದಿಲ್ಲ, ನೂರಾರು ಹಗರಣ ಮಾಡಿದ್ದರಿಂದಲೇ ಅವರ ಸಚಿವರು ವಿವಿಧ ಪ್ರಕರಣಗಳಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಎಲ್ಲ ಡೀಲ್‌ ಮಾಸ್ಟರ್‌ಗಳು ಸೇರಿಕೊಂಡು ಯಾತ್ರೆ ಮಾಡುತ್ತಿದ್ದಾರೆ. ತಾನು ಕಳ್ಳ ಪರರ ನಂಬ ಎಂಬಂಥ ಮನಸ್ಥಿತಿ ಕಾಂಗ್ರೆಸ್ಸಿಗರದು ಎಂದು ಆರೋಪಿಸಿದರು.