* ಸುಪ್ರೀಂ ಚುನಾವಣೆ ನಡೆಸಲು 8 ವಾರ, ಚುನಾವಣೆಗೆ 40 ದಿನ ಕಾಲಾವಕಾಶ* ಸುಪ್ರೀಂಗೆ ಮೇಲ್ಮನವಿ ಇಲ್ಲ: ಆರ್.ಅಶೋಕ್* ಟಿಕೆಟ್ ಅಂತಿಮಗೊಳಿಸಲು ಸಮಿತಿ ಇದೆ
ಬೆಂಗಳೂರು(ಮೇ.22): ಸುಪ್ರೀಂಕೋರ್ಟ್ ಆದೇಶದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಮಾಡಲಾಗುವುದು, ಈ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಿಲ್ಲ ಎಂದು ಕಂದಾಯ ಇಲಾಖೆ ಆರ್.ಅಶೋಕ್ ಹೇಳಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಬಿಎಂಪಿ ಚುನಾವಣೆಗೆ ಸರ್ಕಾರ ಎಲ್ಲ ಸಿದ್ಧತೆ ಮಾಡಿದೆ. ಪಕ್ಷವು ಸಹ ಚುನಾವಣಾ ತಯಾರಿ ನಡೆಸಿ ಪೇಜ್ ಪ್ರಮುಖ್ ಕಾರ್ಯ ಮುಗಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಬಿಬಿಎಂಪಿ ಚುನಾವಣೆ ಎದುರಿಸುತ್ತೇವೆ. ಟಿಕೆಟ್ ಅಂತಿಮಗೊಳಿಸಲು ಸಮಿತಿ ಇದೆ ಎಂದು ಹೇಳಿದರು.
ಬಿಬಿಎಂಪಿ ಎಲೆಕ್ಷನ್ ವಿಳಂಬಕ್ಕೆ ಮತ್ತೆ ಮನವಿ?
ಪಕ್ಷವು ವಾರ್ಡ್ ಕಮಿಟಿ, ಬೂತ್ ಕಮಿಟಿ ಮಾಡಿದೆ. ಅಭ್ಯರ್ಥಿಗಳ ಆಯ್ಕೆ ಮಾತ್ರ ಆಗಬೇಕಿದೆ. ಬಿಜೆಪಿ ಚುನಾವಣೆಯಲ್ಲಿ ಪಕ್ಷದ ಗೆಲುವು ಶತಃಸಿದ್ಧ. ಬಿಜೆಪಿ ಅತಿ ಹೆಚ್ಚಿನ ವಾರ್ಡ್‌ಗಳಲ್ಲಿ ಗೆಲುವು ಸಾಧಿಸಲಿದೆ. ನ್ಯಾಯಾಲಯವು ಎಂಟು ವಾರಗಳ ಕಾಲ ಸಮಯ ನೀಡಿದೆ. ಚುನಾವಣೆಗೂ 40 ದಿನ ಕಾಲಾವಕಾಶ ದೊರೆಯಲಿದೆ ಎಂದರು.
ಕಾರ್ಯಕರ್ತರ ಶ್ರಮದಿಂದ ಬಿಜೆಪಿ ಇಷ್ಟುದೊಡ್ಡದಾಗಿ ಬೆಳೆದಿದೆ. ಇದು ಕಾರ್ಯಕರ್ತರ ಪಕ್ಷ. ಮುಂಬರುವ ಎಲ್ಲಾ ಚುನಾವಣೆಗಳಿಗೆ ಪಕ್ಷ ಸಕಲ ಸಿದ್ಧತಾ ಕಾರ್ಯ ಆರಂಭಿಸಿದೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಂತಹ ಪ್ರಬಲ ನಾಯಕತ್ವನ್ನು ಹೊಂದಿದ್ದು, ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಾಯಕತ್ವವನ್ನು ಹೊಂದಿದ್ದೇವೆ. ಮುಂದಿನ ಚುನಾವಣೆಯನ್ನು ಅವರ ನೇತೃತ್ವದಲ್ಲಿ ನಡೆಸಲಿದ್ದೇವೆ. ಕಾಂಗ್ರೆಸ್‌ನಲ್ಲಿ ಸ್ಥಿತಿ ವಿಭಿನ್ನ. ಇನ್ನು ಪಕ್ಷದ ಅಧಿಕೃತ ನೇತಾರ ಯಾರು ಎನ್ನುವುದು ನಿರ್ಣಯವಾಗಿಲ್ಲ. ರಾಜ್ಯದಲ್ಲಿಯೂ ನಾಯಕತ್ವಕ್ಕಾಗಿ ನಿರಂತರ ಜಗಳ ಇದೆ. ಕಾಂಗ್ರೆಸ್‌ನವರಿಗೆ ಮುಂದಿನ ನಾಯಕ ಯಾರು ಎಂದರೆ ಉತ್ತರ ಇಲ್ಲ ಎಂದು ಲೇವಡಿ ಮಾಡಿದರು.
