ಬಿಬಿಎಂಪಿ ಎಲೆಕ್ಷನ್‌ ವಿಳಂಬಕ್ಕೆ ಮತ್ತೆ ಮನವಿ?

*   8 ವಾರದಲ್ಲಿ ಬಿಬಿಎಂಪಿ ಚುನಾವಣೆ ಸವಾಲು
*  ಇನ್ನೂ ಕ್ಷೇತ್ರ ಮರು ವಿಂಗಡಣೆಯೇ ಆಗಿಲ್ಲ
*  ಮೀಸಲಾತಿ ಘೋಷಿಸಿ, ಸಾರ್ವಜನಿಕರ ಆಕ್ಷೇಪ ಪಡೆಯಲು ದೀರ್ಘ ಸಮಯ ಅಗತ್ಯ
 

Again Appeal to Supreme Court for Delay in BBMP Election grg

ಬೆಂಗಳೂರು(ಮೇ.21): ಬಿಬಿಎಂಪಿ ಚುನಾವಣೆ ಪ್ರಕ್ರಿಯೆಯನ್ನು ಮುಂದಿನ ಎಂಟು ವಾರದಲ್ಲಿ ಆರಂಭಿಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ. ಆದರೆ, ವಾರ್ಡ್‌ ಪುನರ್‌ವಿಂಗಡಣೆ ಹಾಗೂ ಮೀಸಲಾತಿ ನಿಗದಿಯಂತಹ ಕಾರ್ಯಗಳು ಈ ಅವಧಿಯಲ್ಲಿ ಪೂರ್ಣಗೊಳ್ಳುವುದು ಅನುಮಾನವಾದ್ದರಿಂದ ಮತ್ತಷ್ಟು ಕಾಲಾವಕಾಶ ಕೋರಿ ರಾಜ್ಯ ಸರ್ಕಾರವು ಸುಪ್ರೀಂಕೋರ್ಚ್‌ಗೆ ಮನವಿ ಸಲ್ಲಿಸುವ ಸಾಧ್ಯತೆಯಿದೆ.

ಆದರೆ, ರಾಜ್ಯ ಸರ್ಕಾರವು ತಕ್ಷಣ ಹೆಚ್ಚುವರಿ ಕಾಲಾವಕಾಶ ಕೋರಿ ಅರ್ಜಿ ಸಲ್ಲಿಸುವುದಿಲ್ಲ. ಬದಲಿಗೆ ಸುಪ್ರೀಂ ಕೋರ್ಟ್‌  ಸೂಚನೆಯಂತೆ ವಾರ್ಡ್‌ ಪುನರ್‌ವಿಂಗಡಣೆ ಹಾಗೂ ಮೀಸಲಾತಿ ನಿಗದಿ ಪ್ರಕ್ರಿಯೆಯಂತಹ ಕಾರ್ಯಗಳಿಗೆ ಚಾಲನೆ ನೀಡಲಿದೆ. ಆದರೆ ನಿಗದಿತ ಅವಧಿಯಲ್ಲಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಸಾಧ್ಯವಾಗದ ಕಾರಣ ಎಂಟು ವಾರಗಳ ಅವಧಿ ಮುಕ್ತಾಯಗೊಳ್ಳುವ ಅಂತಿಮ ಹಂತದಲ್ಲಿ ಮತ್ತೊಮ್ಮೆ ವಸ್ತುಸ್ಥಿತಿಯನ್ನು ವಿವರಿಸಿ ನ್ಯಾಯಾಲಯದಿಂದ ಕಾಲಾವಕಾಶ ಕೋರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

BBMP Election 2022: ಬಿಬಿಎಂಪಿಗೆ 9 ವಾರದಲ್ಲಿ ಚುನಾವಣೆ ಪ್ರಕ್ರಿಯೆ ಆರಂಭಿಸಿ: ಸುಪ್ರೀಂಕೋರ್ಟ್‌

ವಾರ್ಡ್‌ ಸಂಖ್ಯೆ ಹೆಚ್ಚಳ, ಮರು ವಿಂಗಡಣೆ ಮತ್ತಿತರ ಕಾರಣಗಳನ್ನು ನೀಡಿ ರಾಜ್ಯ ಸರ್ಕಾರವು ಕಳೆದ 20 ತಿಂಗಳಿಂದ ಬಿಬಿಎಂಪಿ ಚುನಾವಣೆ ಮುಂದೂಡುತ್ತಾ ಬಂದಿದೆ. ಇದೇ ವೇಳೆ ಆಡಳಿತಾಧಿಕಾರಿಗಳ ನೇತೃತ್ವದಲ್ಲಿ ಬಿಬಿಎಂಪಿ ಆಡಳಿತ ನಿರ್ವಹಣೆ ನಡೆಸುತ್ತಿದೆ. ಬಿಬಿಎಂಪಿ ಚುನಾವಣೆ ವಿಳಂಬ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಚ್‌ 8 ವಾರದಲ್ಲಿ ವಾರ್ಡ್‌ ಮರು ವಿಂಗಡಣೆ, ಮೀಸಲಾತಿ ನಿಗದಿ ಸೇರಿ ಇನ್ನಿತರ ಕಾರ್ಯಗಳನ್ನು ಮುಗಿಸಿ ಚುನಾವಣೆ ಪ್ರಕ್ರಿಯೆ ಆರಂಭಿಸುವಂತೆ ಶುಕ್ರವಾರ ಸೂಚನೆ ನೀಡಿದೆ.

ಪ್ರಕ್ರಿಯೆ ಅನುಮಾನ

ಎಂಟು ವಾರದಲ್ಲಿ ವಾರ್ಡ್‌ ಪುನರ್‌ವಿಂಗಡಣೆ ಹಾಗೂ ಮೀಸಲಾತಿ ನಿಗದಿ ಮಾಡುವುದು ಕಷ್ಟಸಾಧ್ಯ. ವಾರ್ಡ್‌ ಪುನರ್‌ ವಿಂಗಡಣೆ ಕರಡು ಪ್ರಕಟಿಸಿ ಸಾರ್ವಜನಿಕರ ಆಕ್ಷೇಪಣೆಗೆ 30 ದಿನ ಕಾಲಾವಕಾಶ ನೀಡಬೇಕಿದೆ. ನಂತರ ಅಂತಿಮ ವರದಿ ಪ್ರಕಟಿಸಿ ವಾರ್ಡ್‌ಗಳಿಗೆ ಮೀಸಲಾತಿ ನಿಗದಿ ಪಡಿಸುವುದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಆಕ್ಷೇಪಣೆ ಪಡೆಯಲು 15 ದಿನ ಅವಕಾಶ ನೀಡಬೇಕು.

ಬಳಿಕ ಚುನಾವಣೆ ಪ್ರಕ್ರಿಯೆ ಆರಂಭಿಸಬೇಕು. ಆದರೆ, ವಾರ್ಡ್‌ ಮರು ವಿಂಗಡಣೆಗೆ ಬಿಬಿಎಂಪಿ ಮುಖ್ಯ ಆಯುಕ್ತರ ನೇತೃತ್ವದಲ್ಲಿ ರಚನೆ ಮಾಡಿದ ಸಮಿತಿ ಪ್ರಕ್ರಿಯೆ ಪೂರ್ಣಗೊಳಿಸಿಲ್ಲ. ಹೀಗಾಗಿ, ಕೋರ್ಟ್‌ ನೀಡಿರುವ ಅವಧಿಯಲ್ಲಿ ಈ ಎಲ್ಲ ಪ್ರಕ್ರಿಯೆ ಮುಗಿಸಿ ಚುನಾವಣೆ ಸಿದ್ಧತೆ ಮಾಡಿಕೊಳ್ಳುವುದು ಕಷ್ಟಎನ್ನಲಾಗುತ್ತಿದೆ. ಹಾಗಾಗಿ, ಕೋರ್ಚ್‌ ಬಳಿ ಮತ್ತಷ್ಟು ಸಮಯಕ್ಕೆ ಮನವಿ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಬಿಬಿಎಂಪಿ ಚುನಾವಣೆಗೆ ಮುಹೂರ್ತ ಫಿಕ್ಸ್; ರಾಜ್ಯ ಸರ್ಕಾರಕ್ಕೆ ಸುಪ್ರೀಂ ನಿರ್ದೇಶನ

ಮೀಸಲಾತಿ, ಮರು ವಿಂಗಡಣೆ ಗೊಂದಲ

ವಾರ್ಡ್‌ ಮರುವಿಂಗಡಣೆಗೆ ನಿಗದಿ ಮಾಡಲಾಗಿರುವ ಸಮಿತಿಯು ಈವರೆಗೆ ಬಿಬಿಎಂಪಿ ವ್ಯಾಪ್ತಿಯ 14ರಿಂದ 16 ವಿಧಾನಸಭಾ ಕ್ಷೇತ್ರಗಳ ವಾರ್ಡ್‌ಗಳ ವಿಂಗಡಣೆ ಪೂರ್ಣಗೊಂಡಿದೆ. ಇನ್ನೂ 10ಕ್ಕೂ ಹೆಚ್ಚಿನ ಕ್ಷೇತ್ರಗಳ ವಾರ್ಡ್‌ ಮರುವಿಂಗಡಣೆ ಬಾಕಿಯಿದೆ. ಇನ್ನು ಬಿಬಿಎಂಪಿಯ 198 ವಾರ್ಡ್‌ಗಳಿಗೆ 2020ರಲ್ಲಿ ಸೆಪ್ಟೆಂಬರ್‌ 14ರಂದು ಮೀಸಲಾತಿ ಪ್ರಕಟಿಸಿತ್ತು. ಆದರೆ, ಈಗ 243 ವಾರ್ಡ್‌ಗಳನ್ನಾಗಿ ಪರಿವರ್ತಿಸುತ್ತಿರುವ ಹಿನ್ನೆಲೆಯಲ್ಲಿ ಹೊಸದಾಗಿ ಮೀಸಲಾತಿ ಪ್ರಕಟಿಸಬೇಕಿದೆ. ಅದಕ್ಕೂ ಕನಿಷ್ಠ 15ರಿಂದ 20 ದಿನ ಕೆಲಸ ಮಾಡಬೇಕಿದೆ.

ಸರ್ಕಾರಕ್ಕೆ ಶೀಘ್ರದಲ್ಲಿ ವರದಿ: ತುಷಾರ್‌

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌, ರಾಜ್ಯ ಸರ್ಕಾರವು ಪಾಲಿಕೆ ಮುಖ್ಯ ಆಯುಕ್ತರು, ಬೆಂಗಳೂರು ಜಿಲ್ಲಾಧಿಕಾರಿ, ಬಿಡಿಎ ಆಯುಕ್ತರು ಹಾಗೂ ಪಾಲಿಕೆ ಕಂದಾಯ ವಿಭಾಗದ ವಿಶೇಷ ಆಯುಕ್ತರ ನೇತೃತ್ವದಲ್ಲಿ ವಾರ್ಡ್‌ ಪುನರ್‌ ವಿಂಗಡಣೆ ಸಮಿತಿ ರಚನೆ ಮಾಡಿದೆ. ವಾರ್ಡ್‌ ಮರುವಿಂಗಡಣೆಗೆ ಕಾರ್ಯ ಅಂತಿಮ ಹಂತದಲ್ಲಿವೆ. ಜನಸಂಖ್ಯೆ ಸೇರಿ ಇನ್ನಿತರ ಮಾನದಂಡದ ಅಡಿಯಲ್ಲಿ ವಾರ್ಡ್‌ ಮರುವಿಂಗಡಣೆ ಮಾಡಲಾಗುತ್ತಿದೆ. ಶೀಘ್ರದಲ್ಲಿ ಕರಡು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಸರ್ಕಾರದಿಂದ ಕರಡು ವರದಿಗೆ ಒಪ್ಪಿಗೆ ಸಿಕ್ಕ ನಂತರ ಸಾರ್ವಜನಿಕ ಆಕ್ಷೇಪಣೆಗೆ ಪ್ರಕಟಿಸಲಾಗುವುದು. ಅದಾದ ನಂತರದ ಪ್ರಕ್ರಿಯೆಯನ್ನು ಸರ್ಕಾರ ಮಾಡಲಿದೆ. ಸುಪ್ರೀಂ ಕೋರ್ಟ್‌ ನೀಡಿರುವ 8 ವಾರದಲ್ಲಿ ಸರ್ಕಾರ ಮತ್ತು ಬಿಬಿಎಂಪಿ ತನ್ನ ಕಾರ್ಯಗಳನ್ನು ಮುಗಿಸಬೇಕಿದೆ ಎಂದು ಹೇಳಿದರು.
 

Latest Videos
Follow Us:
Download App:
  • android
  • ios