ಬಸವರಾಜ ಬೊಮ್ಮಾಯಿ ಅವರು ಗಂಡೆದೆಯವರಾಗಿದ್ದು ಚಾಣಕ್ಯ ಮುಖ್ಯಮಂತ್ರಿಯಾಗಿದ್ದಾರೆ. ಜೇನುಗೂಡಿಗೆ ಕಲ್ಲು ಹೊಡೆಯದೇ ಪರಿಶಿಷ್ಟಜಾತಿ ಮತ್ತು ಪಂಗಡದವರಿಗೆ ಮೀಸಲಾತಿ ಹೆಚ್ಚಿಸಿ ಜೇನು ನೀಡಿದ್ದಾರೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಬಣ್ಣಿಸಿದರು. 

ಬೆಂಗಳೂರು (ಅ.25): ಬಸವರಾಜ ಬೊಮ್ಮಾಯಿ ಅವರು ಗಂಡೆದೆಯವರಾಗಿದ್ದು ಚಾಣಕ್ಯ ಮುಖ್ಯಮಂತ್ರಿಯಾಗಿದ್ದಾರೆ. ಜೇನುಗೂಡಿಗೆ ಕಲ್ಲು ಹೊಡೆಯದೇ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲಾತಿ ಹೆಚ್ಚಿಸಿ ಜೇನು ನೀಡಿದ್ದಾರೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಬಣ್ಣಿಸಿದರು. ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಬೇಕು ಎಂದು ಒತ್ತಾಯಿಸಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಧರಣಿ ನಡೆಸುತ್ತಿದ್ದ ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಅವರನ್ನು ಭೇಟಿ ಮಾಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಮುಖ್ಯಮಂತ್ರಿಗಳು ಚಾಣಕ್ಯ ವಿದ್ಯೆ ಕಲಿತವರು. ಚಾಣಕ್ಯತನದಿಂದ ಜೇನುಗೂಡಿಗೆ ಕಲ್ಲು ಹೊಡೆಯದೇ ಎಸ್ಸಿ, ಎಸ್ಟಿ ಸಮುದಾಯಗಳಿಗೆ ಮೀಸಲಾತಿ ಹೆಚ್ಚಿಸುವ ದಿಟ್ಟನಿರ್ಧಾರ ಕೈಗೊಂಡಿದ್ದಾರೆ. ಗಂಡೆದೆ ಇರುವವರು ಮಾತ್ರ ಮೀಸಲಾತಿ ನೀಡಲು ಸಾಧ್ಯ. ಆ ಗಂಡೆದೆಯನ್ನು ತೋರಿಸಿ ಬಸವರಾಜ ಬೊಮ್ಮಾಯಿ ಅವರು ಇತಿಹಾಸ ನಿರ್ಮಿಸಿದ್ದಾರೆ. ಇದಕ್ಕಾಗಿ ಮಾನಸಿಕವಾಗಿ ತಯಾರಾಗಿದ್ದರು ಎಂದು ಪ್ರಶಂಸಿಸಿದರು.

ಎಚ್‌ಡಿಕೆ, ಸಿದ್ದುಗೆ ಟಾಂಗ್‌: ‘ಹಿಂದಿನ ಯಾವ ಸರ್ಕಾರಗಳೂ ಮೀಸಲಾತಿ ಹೆಚ್ಚಿಸಲು ತಲೆ ಕೆಡಿಸಿಕೊಂಡಿರಲಿಲ್ಲ. ಒಬ್ಬರು ‘ಏನು ಬ್ರದರ್‌’ ಅನ್ನುತ್ತಾರೆ, ಇನ್ನೊಬ್ಬರು, ‘ಜೇನುಗೂಡಿಗೆ ಕಲ್ಲು ಹೊಡೆದಿದ್ದೀರಿ. ನಿಮಗೆ ಮುಂದೆ ಸರಿ ಆಗುತ್ತದೆ’ ಎಂದಿದ್ದರು. ಆದರೆ ಏನೂ ಆಗಿಯೇ ಇಲ್ಲ ಎಂದು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿಗಳಾದ ಎಚ್‌.ಡಿ.ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆ: ಕಾರ‍್ಯಕ್ರಮ ಸಿದ್ಧತೆ ಪರಿಶೀಲಿಸಿದ ಸಚಿವರು

ಎಲ್ಲ ಸಮುದಾಯಕ್ಕೂ ಮೀಸಲು: ‘ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ದೂರವಾಣಿ ಕರೆ ಮಾಡಿದ್ದರು. ದೀಪಾವಳಿ ಬಳಿಕ ಸ್ವಾಮೀಜಿಯವರ ಜೊತೆ ಚರ್ಚೆ ಮಾಡಲಾಗುವುದು. ಜನಸಂಖ್ಯೆ ಆಧರಿಸಿ ಎಲ್ಲ ಸಮುದಾಯಕ್ಕೂ ಮೀಸಲಾತಿ ಕಲ್ಪಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು. ಶಾಸಕ ರಾಜುಗೌಡ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್‌ ಪ್ರಸಾದ್‌ ಮತ್ತಿತರರು ಹಾಜರಿದ್ದರು.

ಶ್ರೀಗಳ 257 ದಿನದ ಧರಣಿ ಅಂತ್ಯ: ಪರಿಶಿಷ್ಟಜಾತಿ ಮತ್ತು ಪಂಗಡಗಳಿಗೆ ಮೀಸಲಾತಿ ಹೆಚ್ಚಳ ಸುಗ್ರೀವಾಜ್ಞೆ ಹಿನ್ನೆಲೆಯಲ್ಲಿ ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ಸ್ವಾತಂತ್ರ್ಯ ಉದ್ಯಾನವನದಲ್ಲಿ ಬರೋಬ್ಬರಿ 257 ದಿನಗಳಿಂದ ನಡೆಸುತ್ತಿದ್ದ ಅಹೋರಾತ್ರಿ ಧರಣಿಯನ್ನು ಸೋಮವಾರ ಹಿಂಪಡೆದಿದ್ದಾರೆ. ಭಾನುವಾರವಷ್ಟೇ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರು ಮೀಸಲಾತಿ ಹೆಚ್ಚಳದ ಸುಗ್ರೀವಾಜ್ಞೆಗೆ ಅಂಕಿತ ಹಾಕಿದ್ದರು. 

ಬಳಿಕ ಸರ್ಕಾರ ಆದೇಶವನ್ನೂ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ಕಂದಾಯ ಸಚಿವ ಆರ್‌.ಅಶೋಕ್‌, ಶಾಸಕ ರಾಜುಗೌಡ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್‌ ಪ್ರಸಾದ್‌ ಅವರು ಧರಣಿನಿರತರಾಗಿದ್ದ ಸ್ವಾಮೀಜಿಗಳ ಬಳಿ ತೆರಳಿ ಸುಗ್ರೀವಾಜ್ಞೆ ಹೊರಡಿಸಿದ್ದ ಆದೇಶ ಪ್ರತಿ ನೀಡಿ, ಸಿಹಿ ತಿನ್ನಿಸಿದ ಬಳಿಕ ಧರಣಿ ಕೈಬಿಟ್ಟರು. ಮೀಸಲಾತಿ ಹೆಚ್ಚಳ ಆದೇಶ ಮತ್ತು ಸ್ವಾಮೀಜಿ ಧರಣಿ ವಾಪಸ್‌ ಪಡೆದಿದ್ದರಿಂದ ಸಂತಸಗೊಂಡ ಸಮುದಾಯದ ಮುಖಂಡರು ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಿದರು.

ದಲಿತರ ಮನೆಯಲ್ಲಿ ಜೋಳದ ರೊಟ್ಟಿ ಸವಿದ ಸಚಿವ ಅಶೋಕ್‌

ಮೀಸಲಾತಿ ಹೆಚ್ಚಳ ಮಾಡಲೇಬೇಕೆಂದು ಆಗ್ರಹಿಸಿ ಫೆ.10 ರಿಂದ ಸ್ವಾಮೀಜಿ ಅಹೋರಾತ್ರಿ ಧರಣಿ ಆರಂಭಿಸಿದ್ದರು. ಇತ್ತೀಚೆಗೆ ಪರಿಶಿಷ್ಟಜಾತಿ ಮತ್ತು ಪಂಗಡದವರಿಗೆ ಮೀಸಲಾತಿ ಹೆಚ್ಚಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿ, ಸುಗ್ರೀವಾಜ್ಞೆ ಹೊರಡಿಸಿದ ಬಳಿಕ ಧರಣಿ ಕೈಬಿಡುವಂತೆ ಜನಪ್ರತಿನಿಧಿಗಳು, ಸಮುದಾಯದ ಮುಖಂಡರು ಮನವಿ ಮಾಡಿದ್ದರೂ ಇದಕ್ಕೆ ಒಪ್ಪದ ಸ್ವಾಮೀಜಿ, ಸರ್ಕಾರ ಆದೇಶ ಹೊರಡಿಸುವವರೆಗೂ ಧರಣಿ ವಾಪಸ್‌ ಪಡೆಯುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.