ಏನೂ ವಿಷಯ ಸಿಗದೆ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ| ಕಾಂಗ್ರೆಸ್‌ ವಿರುದ್ಧ ಸಚಿವ ಅಶೋಕ್‌ ಆರೋಪ| ಕೇಂದ್ರದಲ್ಲಿ ನಾಯಕತ್ವ ಇಲ್ಲದ ಪಕ್ಷವೆಂದರೆ ಕಾಂಗ್ರೆಸ್‌| ಯಾವುದೇ ನಾಯಕತ್ವ ಇಲ್ಲದೇ ದಿಕ್ಕಾಪಾಲಾಗಿ ಹೋಗಿ ಈಗ ನಗೆಪಾಟಲಿಗೀಡಾಗಿದೆ ಕಾಂಗ್ರೆಸ್‌ ಪಕ್ಷ| 

ಬೆಂಗಳೂರು(ಜ.21): ಕಾಂಗ್ರೆಸ್‌ನವರಿಗೆ ಕಳೆದ ಆರು ವರ್ಷದಲ್ಲಿ ನರೇಂದ್ರ ಮೋದಿ ವಿರುದ್ಧ ಆರೋಪ ಮಾಡಲು ಯಾವ ವಿಚಾರವೂ ಸಿಕ್ಕಿರಲಿಲ್ಲ. ಈಗ ಈಗ ಕೃಷಿ ಕಾಯ್ದೆ ವಿಚಾರವನ್ನಿಟ್ಟುಕೊಂಡು ಹೋರಾಟ ಮಾಡುತ್ತಿದ್ದಾರೆ. ಇದು ಪ್ರತಿಭಟನೆ ಮಾಡಲೇಬೇಕು ಎಂಬ ಕಾರಣಕ್ಕೆ ನಡೆಸಲಾಗುತ್ತಿರುವ ಪ್ರತಿಭಟನೆ. ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದ್ದಾರೆ.

ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಾಂಗ್ರೆಸ್‌ನ ನಡೆಸಿದ ಪ್ರತಿಭಟನೆ ಕುರಿತು ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಈಗ ಉದ್ಯೋಗವಿಲ್ಲ. ಅದಕ್ಕಾಗಿ ಹೋರಾಟದ ನೆಪದಲ್ಲಿ ಉದ್ಯೋಗ ಹುಡುಕಿಕೊಂಡು ಅಲೆಯುತ್ತಿದ್ದಾರೆ ಅಷ್ಟೇ ಎಂದು ಲೇವಡಿ ಮಾಡಿದರು.

ಮಹಿಳಾ ಪೊಲೀಸ್ ಅಧಿಕಾರಿ ಮೇಲೆ ಶಾಸಕಿ ಸೌಮ್ಯಾ ದರ್ಪ.. ಹೀಗೆಲ್ಲಾ ಮಾಡೋದಾ?

ಕೃಷಿ ಕಾಯ್ದೆ ತಿದ್ದುಪಡಿ ಪ್ರಕ್ರಿಯೆ ಆರಂಭವಾಗಿದ್ದು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಆಡಳಿತ ಅವಧಿಯಲ್ಲಿ. ಆದರೆ, ಆಗ ಎಲ್ಲಿಯೂ ದೊಡ್ಡ ಹೋರಾಟ ನಡೆಯಲಿಲ್ಲ. ಹಾಲಿ ಕಾಂಗ್ರೆಸ್‌ ನಡೆಸುತ್ತಿರುವ ಹೋರಾಟಕ್ಕೆ ಜನರು ಬೆಂಬಲ ಕೊಟ್ಟಿಲ್ಲ. ಕೇಂದ್ರದಲ್ಲಿ ನಾಯಕತ್ವ ಇಲ್ಲದ ಪಕ್ಷವೆಂದರೆ ಕಾಂಗ್ರೆಸ್‌. ಯಾವುದೇ ನಾಯಕತ್ವ ಇಲ್ಲದೇ ದಿಕ್ಕಾಪಾಲಾಗಿ ಹೋಗಿ ಈಗ ನಗೆಪಾಟಲಿಗೆ ಈ ಪಕ್ಷ ಒಳಗಾಗಿದೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಪ್ರತಿಭಟನೆ ನಾಟಕ- ಬೊಮ್ಮಾಯಿ:

ಕಾಂಗ್ರೆಸ್‌ನವರ ಪ್ರತಿಭಟನೆ ಒಂದು ನಾಟಕ. ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾನೂನುಗಳು ಅವರ ಕಾಲದಲ್ಲಿಯೇ ಬಂದಿದ್ದು, ರೈತರು, ರೈತ ಸಂಘಟನೆಗಳಿಗೆ ಉತ್ತರ ಕೊಡಬೇಕಾಗಿರುವುದು ಕಾಂಗ್ರೆಸ್‌ನವರು. ಅವರು ಅಧಿಕಾರದಲ್ಲಿದ್ದಾಗ ತಂದ ಕಾಯ್ದೆಗಳಿವು. ಈಗ ಅದೇ ಕಾನೂನುಗಳ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ ಮಾಡುತ್ತಿದೆ ಎಂದರು.