ಕೋಲಾರದಲ್ಲೂ ಸಿದ್ದು ಗೆಲ್ಲಲ್ಲ, ಸೋಲಿಸಲು ಆ ಪಕ್ಷದವರೇ ರೆಡಿಯಾಗಿದ್ದಾರೆ: ಸಚಿವ ಅಶೋಕ್
ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿರುವ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಸೋಲಿಸಲು ಆ ಪಕ್ಷದವರೆ ರೆಡಿಯಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಹೇಳಿದರು.
ಶ್ರೀರಂಗಪಟ್ಟಣ (ಜ.26): ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿರುವ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಸೋಲಿಸಲು ಆ ಪಕ್ಷದವರೆ ರೆಡಿಯಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಹೇಳಿದರು. ಪಟ್ಟಣದಲ್ಲಿ ಬುಧವಾರ ನೂತನ ಬಿಜೆಪಿ ಕಚೇರಿ ಉದ್ಘಾಟಿಸಿ ಮಾತನಾಡಿ, ಮಾಜಿ ಸಿಎಂ ಸಿದ್ದರಾಮಯ್ಯರ ಯಡವಟ್ಟಿನಿಂದಲೇ ಹುಟ್ಟಬಟ್ಟೆಯಲ್ಲೇ ಮೈಸೂರಿನವರು ಓಡಿಸಿದ್ದರು. ನಂತರ ಬಾದಾಮಿಗೆ ಹೋಗಿದ್ದರೂ ಅಲ್ಲೂ ಸಹ ಈಗ ಓಡಿಸಿದ್ದಾರೆ. ಈಗ ಕೋಲಾರಕ್ಕೆ ಸಿದ್ದರಾಮಯ್ಯ ಹೋಗುತ್ತಿದ್ದಾರೆ. ಈ ಬಾರಿ ಸಿದ್ದರಾಮಯ್ಯ ಕೋಲಾರದಲ್ಲೂ ಗೆಲ್ಲಲ್ಲ ಎಂದರು. ಈ ಹಿಂದಿನ ಚುನಾವಣೆಗಳಲ್ಲಿ ಪರಮೇಶ್ವರ್ ಹಾಗೂ ಮಲ್ಲಿಕಾರ್ಜುನ ಖರ್ಗೆಯನ್ನು ಸಿದ್ದರಾಮಯ್ಯ ಅವರೇ ಸೋಲಿಸಿದ್ದರು.
ಈಗ ಸಿದ್ದರಾಮಯ್ಯ ಮೇಲೆ ಬೂತಯ್ಯನ ಮಗ ಅಯ್ಯು ತರ ಖರ್ಗೆ, ಪರಮೇಶ್ವರ್ ಕತ್ತಿ ಮಸೆಯುತ್ತಿದ್ದಾರೆ. ಕತ್ತಿಗೆ ಡಿಕೆಶಿ ನುಜ್ರು ಕಲ್ಲಿನ ಪೌಡರ್ ಹಾಕುತ್ತಿದ್ದಾರೆ. ಮೂರು ಜನರು ಸೇರಿ ಸಿದ್ದರಾಮಯ್ಯರನ್ನು ಮುಗಿಸುತ್ತಾರೆ ಎಂದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉಳಿಗಾಲ ಇಲ್ಲ. 13-14 ಬಜೆಚ್ ಮಂಡಿಸಿರುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಅದರಿಂದ ಏನು ಉಪಯೋಗ, ಜನಕ್ಕೆ ಏನು ಸಿಕ್ಕಿದೆ ಎಂಬುದು ಮುಖ್ಯ ಎಂದರು. ಜೆಡಿಎಸ್ ಜೋಕರ್ ಪಕ್ಷ ಅವಕಾಶಕ್ಕಾಗಿ ಕಾಯುತ್ತಿರುತ್ತದೆ. ಜೆಡಿಎಸ್‌ನವರಿಗೆ ಬೇರೆಲ್ಲೂ ಜಾಗ ಇಲ್ಲ. ಮಂಡ್ಯದಲ್ಲೇ ಸುತ್ತುತ್ತಿದ್ದಾರೆ.
ಗ್ರಾಮವಾಸ್ತವ್ಯ ನಂತರ ದಲಿತರ ಮನೇಲಿ ಅಶೋಕ್ ಉಪಾಹಾರ
ಮಂಡ್ಯದಲ್ಲೂ ಅವರನ್ನು ಜನ ಖಾಲಿ ಮಾಡಿಸುತ್ತಾರೆ. ಮಂಡ್ಯದಲ್ಲಿ ಸ್ವಂತ ಮಗನನ್ನ ಗೆಲ್ಲಿಸಿಕೊಳ್ಳಲು ಆಗಲಿಲ್ಲ. ಇನ್ನು ರಾಜ್ಯದಲ್ಲಿ ಹೇಗೆ ಗೆಲ್ಲುತ್ತಾರೆ ಎಂದು ಎಚ್.ಡಿ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು. ಜೆಡಿಎಸ್‌ನವರು ಪಂಚರತ್ನ ಮಾಡ್ತೀವಿ ಅಂತಾರೆ. ಕಾಂಗ್ರೆಸ್‌ನವರು ಪ್ರಜಾಧ್ವನಿ ಮಾಡುತ್ತಿದ್ದಾರೆ. ಪಂಚರತ್ನ, ಪ್ರಜಾಧ್ವನಿ ನಿಮ್ಮಿಬ್ಬರಿಗೂ 14 ತಿಂಗಳು ಅವಕಾಶ ಕೊಟ್ಟಿದ್ದರು ಸಹ 14 ತಿಂಗಳು ಹೊಡೆದಾಟ ಬಡಿದಾಟವಷ್ಟೆಆಗಿದ್ದು. ಕುಮಾರಸ್ವಾಮಿ ನನ್ನ ಪೀವನ್ ತರ ನೋಡ್ತಾ ಇದ್ರು, ಕಾಂಗ್ರೆಸ್‌ನವರು ಕಿರುಕುಳ ಕೊಡುತ್ತಿದ್ದಾರೆ ಅಂದಿದ್ದರು. ಇವರಿಂದ ರಾಜ್ಯದ ಅಭಿವೃದ್ಧಿ ಸಾಧ್ಯವೇ ಎಂದು ಪ್ರಶ್ನಿಸಿದರು.
ಈ ಬಾರಿ ಜೆಡಿಎಸ್ 15-20 ಅಷ್ಟೇ ಜೆಡಿಎಸ್ ಗೆಲ್ಲೋದು. ಅಧಿಕಾರ ಕೊಟ್ಟಾಗ ಕಾಂಗ್ರೆಸ್, ಜೆಡಿಎಸ್ ಏನು ಮಾಡಿಲ್ಲ. ಕಾಂಗ್ರೆಸ್ 60-70 ಗೆಲ್ಲಲ್ಲ. ಜೆಡಿಎಸ್ ಕಾಂಗ್ರೆಸ್ ಅಕ್ಕ ಬುಕ್ಕರ ಹಾಗೇ. ಇವರ ಮಧ್ಯೆ 5 ಸೀಟುಗಳು ವ್ಯತ್ಯಾಸ ಆಗಬಹುದು ಅಷ್ಟೇ. ಇವರು ಏನು ಮಾಡಿದರು ಸರ್ಕಾರ ಮಾಡಲು ಆಗಲ್ಲ. ಇವರ ಕೈಲಿ ಅಧಿಕಾರ ಇದ್ದಾಗಲೇ ಉಳಿಸಿಕೊಳ್ಳು ಆಗಲಿಲ್ಲ. ಈಗ ಬರೀ ಬುಡಬುಡಕೆ ಆಡಿಸುತ್ತಿದ್ದಾರೆ ಎಂದು ಟೀಕಿಸಿದರು.
ರೈತರ ಸಮಸ್ಯೆ ಬಗೆಹರಿಸಲು ಬದ್ಧ: ರೈತರ ಸಮಸ್ಯೆಗಳಿಗೆ ಪರಿಹಾರ ಸೂಚಿಸಲು ಸರ್ಕಾರ ಬದ್ಧವಾಗಿದೆ. ಸ್ಥಗಿತಗೊಂಡಿದ್ದ ಜಿಲ್ಲೆಯ ಎರಡು ಸಕ್ಕರೆ ಕಾರ್ಖಾನೆಗಳಿಗೆ ಮರುಚಾಲನೆ ನೀಡಿರುವುದು, ಕಬ್ಬಿಗೆ ರಾಜ್ಯ ಸರ್ಕಾರ 100 ರು. ಘೋಷಿಸಿರುವುದೇ ಇದಕ್ಕೆ ಸಾಕ್ಷಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಹೇಳಿದರು. ನಗರದ ಫ್ಯಾಕ್ಟರಿ ವೃತ್ತದ ಬಳಿ ಬುಧವಾರ ಬಿಜೆಪಿ ಮುಖಂಡರಿಂದ ಅಭಿನಂದನೆ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಚುನಾವಣೆ ಬರುವ ಮುನ್ನವೇ ನನಗೆ ಉಸ್ತುವಾರಿ ಸಚಿವ ಸ್ಥಾನವೂ ಸಿಕ್ಕಿದೆ. ನನಗೆ ಇದು ಮೊದಲನೇನಲ್ಲ. ಎರಡು ಬಾರಿ ಜಿಲ್ಲಾ ಉಸ್ತುವಾರಿ ಸಚಿವನಾಗಿ ಅಭಿವೃದ್ಧಿಗೆ ಶ್ರಮಿಸಿದ್ದೇನೆ.
ಸಕ್ಕರೆ ಕಾರ್ಖಾನೆಗಳನ್ನು ಪುನರಾರಂಭಿಸಲು ನಮ್ಮ ಸರ್ಕಾರವೇ ಬರಬೇಕಾಯಿತು. ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಇದನ್ನು ಮನಗಾಣಬೇಕಿದೆ. ಬಿಜೆಪಿ ಸರ್ಕಾರವು ಜಿಲ್ಲೆ ಹಾಗೂ ರಾಜ್ಯದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದೆ ಎಂದರು. ಈಗಾಗಲೇ ಜಿಲ್ಲೆಯಲ್ಲಿ ಬಿಜೆಪಿ ಒಂದು ಖಾತೆಯನ್ನು ವಿಧಾನಸಭಾ ಚುನಾವಣೆಯಲ್ಲಿ ತೆರೆಯುವ ಮೂಲಕ ಶುಭಾರಂಭ ಮಾಡಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಶಯದಂತೆ ದೇಶದ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಮತ ಯಾಚನೆ ಮಾಡುತ್ತೇವೆ.
Grama Vastavya: ಜನರಿಗೆ ಮತ್ತೆ 10 ಕೆ.ಜಿ ಪಡಿತರ ಅಕ್ಕಿ: ಸಚಿವ ಅಶೋಕ್
ಜನರಿಗೂ ಬಿಜೆಪಿ ಪಕ್ಷದ ಮೇಲೆ ವಿಶ್ವಾಸವಿದೆ. ಹಳೇ ಮೈಸೂರು ಭಾಗದಲ್ಲಿಯೂ ಬಿಜೆಪಿ ಹೆಚ್ಚು ಸ್ಥಾನಗಳಿಸುವ ಉದ್ದೇಶ ಇಟ್ಟುಕೊಂಡಿದ್ದು, ಇದಕ್ಕೆ ತಯಾರಿ ಹಾಗೂ ಯೋಜನೆಗಳನ್ನು ರೂಪಿಸಲಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ಪಕ್ಷ ಸೇರ್ಪಡೆ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯುತ್ತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳನ್ನು ನೋಡಿ ಜಿಲ್ಲೆಯ ಜನ ಸಾಕಾಗಿದ್ದಾರೆ, ಹಾಗಾಗಿ ಬಿಜೆಪಿ ಮೇಲೆ ಜನರಿಗೆ ವಿಶ್ವಾಸವಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ರೀತಿಯಲ್ಲಿ ಶ್ರಮ ಹಾಕಲಾಗುವುದು ಎಂದರು.