ಬಿಜೆಪಿಗೆ ನಾನು, ನನ್ನ ತಂದೆಯೇ ಟಾರ್ಗೆಟ್: ಮುಖಾಮುಖಿ ಸಂದರ್ಶನದಲ್ಲಿ ಪ್ರಿಯಾಂಕ್ ಖರ್ಗೆ ಹೇಳಿದ್ದೇನು?
ಪದೇ ಪದೆ ಪ್ರಿಯಾಂಕ್ ಖರ್ಗೆ ಅವರೇ ಯಾಕೆ ಬಿಜೆಪಿ ಟಾರ್ಗೆಟ್ ಆಗುತ್ತಿದ್ದಾರೆ ಎಂಬ ಹಲವು ಪ್ರಶ್ನೆಗಳಿಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರೇ ಕನ್ನಡಪ್ರಭದೊಂದಿಗೆ ‘ಮುಖಾಮುಖಿ’ಯಾಗಿದ್ದಾರೆ.
ಚಂದ್ರಮೌಳಿ ಎಂ.ಆರ್.
ಪ್ರತಿಪಕ್ಷ ಬಿಜೆಪಿಯನ್ನು ರಾಜಕೀಯವಾಗಿ ಹಾಗೂ ಸೈದ್ದಾಂತಿಕವಾಗಿ ವಿರೋಧಿಸುವ ಕಾಂಗ್ರೆಸ್ ಸಚಿವರ ಪೈಕಿ ಅಗ್ರಗಣ್ಯರಲ್ಲಿ ಪ್ರಿಯಾಂಕ್ ಖರ್ಗೆ ಪ್ರಮುಖರು. ತಮ್ಮ ಕಟು ಟೀಕಾಕಾರ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ನಾಯಕರೂ ಸಹ ಅವಕಾಶ ಸಿಕ್ಕಾಗೆಲ್ಲ ಮುಗಿಬೀಳುತ್ತಾರೆ. ಅದು ಖರ್ಗೆ ಕುಟುಂಬದ ಟ್ರಸ್ಟ್‌ಗೆ ಸಿಎ ಸೈಟ್ ಮಂಜೂರಾತಿ ವಿಷಯವಿರಬಹುದು ಅಥವಾ ಬಿಜೆಪಿಯ ಮಣಿಕಂಠ ರಾಠೋಡ್ ಆರೋಪವೇ ಇರಬಹುದು. ಈಗ ಗುತ್ತಿಗೆದಾರ ಸಚಿನ್ ಪಂಚಾಳ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹಿಸಿ ದೊಡ್ಡ ಹೋರಾಟವನ್ನೇ ಕೈಗೆತ್ತಿಕೊಂಡಿದೆ. ಬಿಜೆಪಿ-ಕಾಂಗ್ರೆಸ್ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿರುವ ಈ ಆತ್ಮಹತ್ಯೆ ಪ್ರಕರಣದಲ್ಲಿ ವಾಸ್ತವ ಸಂಗತಿ ಏನು? ಆರೋಪದಲ್ಲಿ ಹುರಳಿದೆಯೇ? ಆರೋಪ ಕೇವಲ ರಾಜಕೀಯ ಕಸರತ್ತಿನ ಭಾಗವಾ? ಪದೇ ಪದೆ ಪ್ರಿಯಾಂಕ್ ಖರ್ಗೆ ಅವರೇ ಯಾಕೆ ಬಿಜೆಪಿ ಟಾರ್ಗೆಟ್ ಆಗುತ್ತಿದ್ದಾರೆ ಎಂಬ ಹಲವು ಪ್ರಶ್ನೆಗಳಿಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರೇ ಕನ್ನಡಪ್ರಭದೊಂದಿಗೆ ‘ಮುಖಾಮುಖಿ’ಯಾಗಿದ್ದಾರೆ.
* ನಿಮ್ಮ ಮೇಲೆ ಬಿಜೆಪಿಗೆ ಯಾಕೆ ಇಷ್ಟೊಂದು ಪ್ರೀತಿ?
ಈ ಬಗ್ಗೆ ಪ್ರೀತಿ ಮಾಡುವವರನ್ನೇ ಕೇಳಬೇಕು. ನೋಡಿ... ಸೈದ್ದಾಂತಿಕವಾಗಿ ನಾವು ಅವರ ವಿರೋಧಿಗಳು. ಆರ್‌ಎಸ್‌ಎಸ್, ಮನುಸ್ಮೃತಿ ಹಾಗೂ ಅವರ ಮನೋಭಾವದ ವಿರುದ್ಧ ನಾವಿದ್ದೇವೆ. ನಾವು ನೇರವಾಗಿ ಅವರ ವಿರುದ್ಧ ಮಾತನಾಡುತ್ತೇವೆ. ಅವರ ಆಡಳಿತ ದೃಷ್ಟಿಯಲ್ಲಿ ಬಸವಣ್ಣನವರ ಸಮಪಾಲು, ಸಮಬಾಳು ದೃಷ್ಟಿಕೋನ ಇಲ್ಲ. ಸಂವಿಧಾನದ ಪ್ರಕಾರ ಎಲ್ಲರಿಗೂ ಸ್ವಾಭಿಮಾನದ ಬದುಕು ಕೊಡಬೇಕು. ಆದರೆ ಅಂಥ ಭಾವನೆ ಅವರಲ್ಲಿಲ್ಲ. ಅದಕ್ಕೆ ನಾವು ಅವರ ತತ್ವ ವಿರೋಧ ಮಾಡುತ್ತೇವೆ. ಅದನ್ನು ಘಂಟಾಘೋಷವಾಗಿ ಯಾವುದೇ ವೇದಿಕೆಯಲ್ಲಿ ಎಲ್ಲರ ಮುಂದೆ ಬೇಕಾದರೂ ಹೇಳುತ್ತೇವೆ. ಇದು ಅವರಿಗೆ ಹಿಡಿಸುವುದಿಲ್ಲ. ಬಿಜೆಪಿಯವರು ನಮ್ಮ ವಿರುದ್ಧ ಮಾತನಾಡುತ್ತಿರುವುದು ಹೊಸದೇನೂ ಅಲ್ಲ. ಮಣಿಕಂಠ ರಾಠೋಡ್ ಪ್ರಕರಣದಲ್ಲಿ ನಮ್ಮ ಮೇಲೆ ಆರೋಪ ಮಾಡಿದರು. ನಾವು ಅವರ ವಿರುದ್ಧ ಒಂದೂ ಕೇಸ್ ಹಾಕಿಸಿಲ್ಲ. ಅವರ ಅವಧಿಯಲ್ಲೇ 25-30 ಕೇಸ್ ಹಾಕಲಾಗಿದೆ. ರೌಡಿ ಶೀಟರ್‌ಗೆ, ಮಕ್ಕಳ ಹಾಲಿನ ಪೌಡರ್ ಕದ್ದವನಿಗೆ, ಪಡಿತರ ಅಕ್ಕಿ ಕದ್ದವನಿಗೆ ಅವರು ಚುನಾವಣೆ ಟಿಕೆಟ್ ಕೊಡುತ್ತಾರೆ. ಒಟ್ಟಾರೆ ನಮ್ಮನ್ನು ಸೋಲಿಸಬೇಕು ಎಂಬುದೇ ಅವರ ಉದ್ದೇಶ. ನಾವು ಈ ವ್ಯವಸ್ಥೆಯಿಂದ ದೂರ ಇದ್ದರೆ ತನ್ನಿಂತಾನೆ ಅವರು ಬದುಕುತ್ತಾರೆ ಎಂದು ತಿಳಿದುಕೊಂಡಿದ್ದಾರೆ. ದೇವರ ಹೆಸರಿನಲ್ಲಿ ಕಳ್ಳತನ ಮಾಡಿದರೂ ನಡೆಯುತ್ತದೆ ಎನ್ನುವವರಿಗೆ ಬಿಜೆಪಿಯವರು ಟಿಕೆಟ್ ಕೊಡುತ್ತಾರೆ.
ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡುವ ಅಗತ್ಯವಿಲ್ಲ: ಡಿ.ಕೆ.ಶಿವಕುಮಾರ್
* ಇಡೀ ಬಿಜೆಪಿ ನಾಯಕ ಸಮೂಹವೇ ನಿಮ್ಮ ವಿರುದ್ಧ ಸತತ ವಾಗ್ದಾಳಿ ನಡೆಸುತ್ತಿದೆಯಲ್ವಾ?
ಕಳೆದ ಒಂದು ವರ್ಷದಿಂದ ನಾಲ್ಕೋ, ಐದನೇ ಬಾರಿ ನನ್ನ ರಾಜೀನಾಮೆ ಕೇಳುತ್ತಿದ್ದಾರೆ. ನನ್ನ ಮೇಲೆ ಮಾಡಿರುವ ಆರೋಪದಲ್ಲಿ ಯಾವುದನ್ನೂ ಸಾಬೀತು ಮಾಡಲು ಆಗಿಲ್ಲ. ಅವರಿಗೆ ಪದೇ ಪದೆ ನನ್ನ ಹೆಸರು ಜಪಿಸಿದರೆ ಮೇಲಿರುವವರು ಮೆಚ್ಚುತ್ತಾರೆಂಬ ಭಾವನೆ. ಖರ್ಗೆ ಅವರ ಪುತ್ರನ ವಿರುದ್ಧ, ಎಐಸಿಸಿ ಅಧ್ಯಕ್ಷರ ವಿರುದ್ಧ ಹೋರಾಟ ಮಾಡುತ್ತಿದ್ದೇವೆ ಎಂದು ಬಿಂಬಿಸಿಕೊಳ್ಳಲು ಈ ರೀತಿ ಮಾಡುತ್ತಿರಬಹುದು. ಬಹುಶಃ ಅವರ ರಿಪೋರ್ಟ್ ಕಾರ್ಡ್‌ನಲ್ಲಿ ‘ಎ’ಗ್ರೇಡ್ ಪಡೆಯಲು ಈ ರೀತಿ ಮಾಡುತ್ತಿರಬೇಕು.
* ನಿಮ್ಮನ್ನು ಹೆಗಲ ಮೇಲೆ ಬಂದೂಕು ಇಟ್ಟು ಮಲ್ಲಿಕಾರ್ಜುನ ಖರ್ಗೆ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆಯೇ?
ಸಹಜವಾಗಿ ಅಲ್ಲಿ ಖರ್ಗೆ ಸಾಹೇಬ್ರಿಗೆ, ಇಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಆಗಬೇಕು ಎಂಬ ಉದ್ದೇಶ ಇದ್ದೇ ಇದೆ. ನೋಡಿ, ನಾವು ಎಲ್ಲರ ಜೊತೆ ಚೆನ್ನಾಗಿದ್ದೇವೆ. ನಾಲ್ಕು ಬಾರಿ ಎಲೆಕ್ಷನ್‌ಗೆ ನಿಂತಿದ್ದೇನೆ. ನಾವೇನು ಅಭಿವೃದ್ಧಿ ಮಾಡಿದ್ದೇವೆ, ನಮ್ಮ ನಡೆ, ನುಡಿ, ವಿಚಾರಧಾರೆ ಏನೆಂಬುದು ಎಲ್ಲರಿಗೂ ಗೊತ್ತಿದೆ. ಗ್ರಾಮೀಣಾಭಿವೃದ್ಧಿಯಿಂದ ಹಿಡಿದು ಐಟಿ, ಬಿಟಿ ವರೆಗೆ ಏನು ಮಾಡಿದ್ದೇವೆ ಎಂಬುದೂ ತಿಳಿದಿದೆ. ಹೀಗಾಗಿ ನಮಗೆ, ನಮ್ಮ ನಾಯಕರಿಗೆ, ನಮ್ಮ ಪಕ್ಷಕ್ಕೆ ಕೆಟ್ಟ ಹೆಸರು ತರಬೇಕೆಂದು ಈ ರೀತಿ ರಾಜಕೀಯ ಮಾಡೇ ಮಾಡುತ್ತಾರೆ.
* ಹಾಗಿದ್ದರೆ ನಿಮ್ಮ ಮೇಲಿನ ಆರೋಪಗಳಲ್ಲಿ ತಥ್ಯವಿಲ್ಲವೇ?
ಇಲ್ಲ ಅಂತಲೇ ನಾನು ಹೇಳುತ್ತಿರುವುದು. ರಾಜಕೀಯ ಮಾಡಿ, ಆದರೆ ಆಧಾರ, ದಾಖಲೆ ಇಟ್ಟುಕೊಂಡು ಮಾಡಿ. ನಾವು ವಿರೋಧ ಪಕ್ಷದಲ್ಲಿದ್ದಾಗ ಮಾಡಿದ ಒಂದಾದರೂ ಆರೋಪಗಳು ಸುಳ್ಳಾಗಿದೆಯಾ? ಪಿಎಸ್‌ಐ ಹಗರಣ, ಬಿಟ್ ಕಾಯಿನ್ ಹಗರಣ, ಕೆಕೆಆರ್‌ಡಿಬಿ ಹಗರಣ, 40 ಪರ್ಸೆಂಟ್ ಹಗರಣ, ಕೋವಿಡ್ ಹಗರಣ ಎಲ್ಲವನ್ನು ನಾನು ತಾನೇ ಬಯಲು ಮಾಡಿದ್ದು. ಮಾಡಿರುವ ಆ ಎಲ್ಲ ಆರೋಪಗಳು ಸತ್ಯವೆಂದು ಸ್ವತಂತ್ರ ಸಂಸ್ಥೆಗಳಿಂದ ಸಾಬೀತಾಗಿವೆ. ಆ ರೀತಿ ಬಿಜೆಪಿಯವರೂ ಮಾಡಲಿ, ಪ್ರಿಯಾಂಕ್ ಖರ್ಗೆಗೆ ಸೈಟ್ ಇದೆ, ಅವರು ವಂಚನೆ ಮಾಡಿದ್ದಾರೆ, ಇಂಥವರಿಗೆ ಟೆಂಡರ್ ಕೊಡಿಸುತ್ತೇನೆಂದು ಹೇಳಿದ್ದರೆ ಬಿಜೆಪಿಯವರು ಬಹಿರಂಗಪಡಿಸಲಿ.
* ನೀವು ಬಿಜೆಪಿಗರ ಹಗರಣಗಳನ್ನು ಬಯಲು ಮಾಡಿದ್ದಕ್ಕೆ ಇದು ಪ್ರತಿಕಾರವೇ?
ನಾವು ಯಾವತ್ತೂ ಯಾವ ನಾಯಕನನ್ನೂ ವೈಯಕ್ತಿಕವಾಗಿ ಟಾರ್ಗೆಟ್ ಮಾಡಿಲ್ಲ. ನಾವು ಮಾಡಿರುವ ಆರೋಪಗಳೆಲ್ಲ ಸರ್ಕಾರದ ಲೋಪದೋಷಗಳಾಗಿದ್ದವು. ಪಿಎಸ್‌ಐ ನೇಮಕಾತಿಯಲ್ಲಿ ಸರ್ಕಾರ ಮಾಡಿರುವ ಲೋಪಕ್ಕೆ ನಾಲ್ಕು ವರ್ಷವಾದರೂ ಈವರೆಗೆ ಅಭ್ಯರ್ಥಿಗಳಿಗೆ ನ್ಯಾಯ ಕೊಡಿಸಲು ಆಗಲಿಲ್ಲ. ಹಿಟ್ ಆ್ಯಂಡ್ ರನ್ ಮಾಡುವ ಇವರು ಗೋಬೆಲ್ಸ್ ಮೊಮ್ಮಕ್ಕಳು. ಒಂದು ಸುಳ್ಳನ್ನು ನೂರು ಸಾರಿ ಹೇಳಿದರೆ ಅದು ಸತ್ಯ ಆಗುತ್ತದೆ ಎಂಬುದು ಅವರ ತಲೆಯಲ್ಲಿದೆ. ಆದರೆ ಜನ ಜಾಗೃತರಾಗಿದ್ದಾರೆ. ಅದಕ್ಕೆ ಹೋದ ಬಾರಿ ತಕ್ಕಪಾಠ ಕಲಿಸಿದ್ದಾರೆ.
* ಗುತ್ತಿಗೆದಾರ ಸಚಿನ್ ಪಾಂಚಳ ಡೆತ್ ನೋಟ್‌ನಲ್ಲಿ ರಾಜು ಕಪನೂರು ಹೆಸರಿದೆ. ಕಪನೂರು ನಿಮ್ಮ ಹೆಸರು ದುರುಪಯೋಗ ಮಾಡಿಕೊಂಡರೇ?
ಬೆಂಗಳೂರಿನಲ್ಲಿರುವ ಬಿಜೆಪಿ ನಾಯಕರು ಅಥವಾ ಬಿಜೆಪಿ ಹೈಕಮಾಂಡ್ ಕಲಬುರಗಿಯಲ್ಲಿರುವ ಬಿಜೆಪಿ ನಾಯಕರ ಬಗ್ಗೆ ಮೊದಲು ತಿಳಿದುಕೊಳ್ಳಬೇಕು. ಕಪನೂರು ಮೊದಲು ಬಿಜೆಪಿಯಲ್ಲಿದ್ದ. ಆತ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ. ಅಲ್ಲಿಯ ಬಿಜೆಪಿ ಶಾಸಕ ಬಸವರಾಜ ಮತ್ತಿಮಡು, ಚಂದು ಪಾಟೀಲ್ ಜೊತೆ ಚೆನ್ನಾಗಿದ್ದಾನೆ. ಒಂದು ಜಿಲ್ಲೆಯಲ್ಲಿ ಯಾವುದೇ ಪಕ್ಷದಲ್ಲಿದ್ದರೂ ಪರಸ್ಪರ ಚೆನ್ನಾಗಿಯೇ ಇರುತ್ತಾರೆ. ಈಗ ರಾಜಕೀಯ ಲಾಭಕ್ಕಾಗಿ ಈ ವಿಷಯಕ್ಕೆ ಬಣ್ಣ ಬಳಿದಿದ್ದಾರೆ. ಟೆಂಡರ್ ಸಂಬಂಧ ಬ್ಯಾಂಕ್ ವಹಿವಾಟು ಮಾಡಲಾಗಿದೆ. ಇಎಂಡಿಗೆ ಕ್ಯಾಶ್ ವ್ಯವಹಾರ ಮಾಡಲು ಆಗುವುದಿಲ್ಲ. ಹೀಗಿರುವಾಗ ಕಾನೂನು ಪ್ರಕಾರ ಬ್ಯಾಂಕ್‌ನಲ್ಲಿ ವಹಿವಾಟು ಮಾಡಿರುವುದು ಅಕ್ರಮ ಹೇಗಾಗುತ್ತದೆ? ಒಂದು ವೇಳೆ ಬಿಜೆಪಿ ಹೇಳಿದ ಪ್ರಕಾರ ನಡೆದಿದ್ದರೆ ಇವರಿಗೆಲ್ಲ ಟೆಂಡರ್ ಸಿಗಬೇಕಿತ್ತಲ್ವ?
* ನಿಮ್ಮ ಪಾತ್ರದ ಬಗ್ಗೆ ಬಿಜೆಪಿ ನಾಯಕರಿಗೆ ಗುಮಾನಿಯಿದೆ?
ಸಚಿನ್ ಅಥವಾ ಕಪನೂರು ಹೇಳಿಕೆಯಲ್ಲಿ ಯಾವುದು ಸರಿ ಎಂಬ ಬಗ್ಗೆ ತನಿಖೆಯಾಗಲಿ. ರಾಜು ಆಗಲಿ, ಸಚಿನ್ ಆಗಲಿ ಪ್ರಿಯಾಂಕ್ ಖರ್ಗೆ ಗುತ್ತಿಗೆ ಕೊಡಿಸ್ತೇನೆ, ಮಾಡಿಸ್ತೇನೆ ಅದಕ್ಕೆ ದುಡ್ಡು, ಕಮಿಷನ್ ತೆಗೆದುಕೊಂಡಿದ್ದೇನೆ ಎಂದು ಎಲ್ಲಾದರೂ ಹೇಳಿದ್ದಾರೆಯೇ? ಬ್ಯಾಂಕ್ ವಹಿವಾಟು ನಡೆದಿದ್ದರೆ, ಆ ದುಡ್ಡು ಎಲ್ಲಿಗೆ ಹೋಯಿತು? ಟೆಂಡರ್‌ಗೆ ಹೋಗಿದ್ದರೆ ಅದು ಫೇಕ್ ಟೆಂಡರ್ ಎಂದು ಹೇಳಿದ್ದಾರೆ. ಡಿಪಾರ್ಟ್‌ಮೆಂಟ್‌ನಲ್ಲಿ ವಿಚಾರಿಸಿದರೆ ಗೊತ್ತಾಗುತ್ತದೆ. ಇಂತಹ ಅಸ್ಪಷ್ಟತೆ ಇರುವುದರಿಂದಲೇ ತನಿಖೆ ಮಾಡಿಸಿ ಎಂದು ನಾವು ಹೇಳಿದ್ದೇವೆ. ಸಿಐಡಿ ತನಿಖೆಗೂ ಕೊಟ್ಟಿದ್ದೇವೆ. ಇದಕ್ಕಿಂತ ಹೆಚ್ಚಿಗೆ ಏನು ಮಾಡಬೇಕಿತ್ತು?
* ರಾಜು ಕಪನೂರು ಮೂಲಕ ವ್ಯವಹಾರ ನಡೆದಿದೆ ಎಂಬುದಲ್ಲವೇ ಆರೋಪ?
ಕಪನೂರು ಮೂಲಕ ವ್ಯವಹಾರ ನಡೆದಿರಬಹುದು ಎಂದು ಭಾವಿಸಿ ಬಿಜೆಪಿಯವರು ನನ್ನ ರಾಜೀನಾಮೆ ಕೇಳುತ್ತಿದ್ದಾರೆ. ಕೋವಿಡ್ ಸಂಬಂಧ ನ್ಯಾಯಮೂರ್ತಿ ಕುನ್ಹಾ ವರದಿಯಲ್ಲಿ ಶ್ರೀರಾಮುಲು ಹೆಸರು ಇದೆಯಾ, ಯಡಿಯೂರಪ್ಪ ಹೆಸರು ಇದೆಯಾ ಅಥವಾ ಪ್ರಿಯಾಂಕ್ ಖರ್ಗೆ ಹೆಸರು ಇದೆಯಾ? ಕೋವಿಡ್ ಹಗರಣದಲ್ಲಿ ದಾಖಲೆ ಸಹಿತ, ಜಿಎಸ್‌ಟಿ ಸಂಖ್ಯೆಯೊಂದಿಗೆ ವರದಿ ನೀಡಲಾಗಿದೆ. ಕೆಕೆಆರ್‌ಡಿಬಿ ಹಗರಣದಲ್ಲಿ ಅವರ ಆಪ್ತರ ಹೆಸರು ಇದೆಯಾ, ನನ್ನ ಹೆಸರು ಇದೆಯಾ? ಕೋರ್ಟ್‌ನಲ್ಲಿ ಕೇಸ್ ಇದೆ. ಹೀಗಿರುವಾಗಿ ಬಿಜೆಪಿಯವರಿಗೆ ನನ್ನ ರಾಜೀನಾಮೆ ಕೇಳುವ ಯಾವ ನೈತಿಕತೆ ಇದೆ.
* ‘ಕಲಬುರಗಿ ರಿಪಬ್ಲಿಕ್’ ಆಗಿದೆ ಅಂತಾರಲ್ವ?
ಕಲಬುರಗಿಯಲ್ಲಿ ನಾವು ಧಾರಾಳವಾಗಿದ್ದೇವೆ. ತಪ್ಪಿದ್ದರೆ ತಪ್ಪು ಎಂದು ಹೇಳಿ ಬರುತ್ತೇವೆ ಅಥವಾ ಎದುರಿಸಿ ಬರುತ್ತೇವೆ. ನೀವ್ಯಾರು ಕೇಳಲು ಎಂದು ಹೇಳುವುದಿಲ್ಲ. ಇನ್ನು ಛಲವಾದಿ ನಾರಾಯಣಸ್ವಾಮಿ ಅವರನ್ನು ಎಂಎಲ್ಸಿ ಮಾಡಿದ್ದು ಹಾಗೂ ಪ್ರತಿಪಕ್ಷ ನಾಯಕ ಮಾಡಿದ್ದೇ ಖರ್ಗೆ ಕುಟುಂಬ ಮತ್ತು ಸಿದ್ದರಾಮಯ್ಯ ಅವರನ್ನು ಬೈಯ್ಯಲು. ಅವರದ್ದು ಬೇರಿನ್ಯಾವುದಾದರೂ ಸಾಧನೆ ಇದೆಯಾ? ವಕ್ಫ್ ವಿಷಯದಲ್ಲಿ ಕಾಲಂ 9, ಕಾಲಂ 11 ಬಗ್ಗೆಯೇ ಅವರಿಗೆ ಗೊತ್ತಿಲ್ಲ. ಹಿಂದೆ, ನಮ್ಮ ಟ್ರಸ್ಟ್‌ಗೆ ಸಿಎ ಸೈಟ್ ನೀಡಿದ ಬಗ್ಗೆ ಹೇಳಿದ್ರು, ಅದು ಸಂಪೂರ್ಣವಾಗಿ ಕಾನೂನು ಬದ್ಧವಾಗಿತ್ತು. ನಾನಾಗಿದ್ದರೆ ಕೊಡುತ್ತಿರಲಿಲ್ಲ. ಅದು ನನ್ನ ಅಣ್ಣನದ್ದು. ನಮ್ಮ ಅಣ್ಣ ರಾಜಕೀಯೇತರ ವ್ಯಕ್ತಿ, ಇಂತಹ ಕೆಸರೆಚಾಟ ನನಗೆ ರೂಢಿ ಇಲ್ಲ, ಸೈಟ್ ಬೇಡ ಎಂದು ಪತ್ರ ಬರೆದು ವಾಪಸ್ ನೀಡಿದ. ಆದರೆ ಯಾವಾಗ ಛಲವಾದಿ ಅವರ ಬಿರ್ಯಾನಿ ಅಂಗಡಿ ಎಕ್ಸ್‌ಪೋಸ್ ಆಯಿತೋ ಸುಮ್ಮನೆ ಕುಳಿತುಬಿಟ್ಟರಲ್ಲ. ಛಲವಾದಿ ನಾರಾಯಣಸ್ವಾಮಿ ಅವರು ಆಕಾಶಕ್ಕೆ (ಖರ್ಗೆ ಸಾಹೇಬ್ರು, ಸಿದ್ದರಾಮಯ್ಯ) ಉಗುಳುತ್ತಿದ್ದಾರೆ. ಅದು ಯಾರ ಮೇಲೆ ಬೀಳುತ್ತದೆ ಹೇಳಿ?
ಪ್ರಿಯಾಂಕ್ ಖರ್ಗೆ ದುರಂಹಕಾರ ಮಾತಿನಲ್ಲೇ ಗೊತ್ತಾಗುತ್ತದೆ: ಜಗದೀಶ್ ಶೆಟ್ಟರ್
* ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಿಮ್ಮ ರಾಜೀನಾಮೆಗೆ ಆಗ್ರಹಿಸಿ ಕಲಬುರಗಿ ಮುತ್ತಿಗೆ ಹಾಕುತ್ತಾರಂತೆ?
ಸಂಕ್ರಾಂತಿ ಒಳಗೆ ಅವರ ಸ್ಥಾನ ಬದಲಾಗುತ್ತೆ ಅಂತ ಅನಿಸುತ್ತೆ. ಹೊಸ ವರ್ಷಕ್ಕೆ ಬದಲಾವಣೆ ಅಂತ ಅವರ ಪಕ್ಷದವರೇ ಆದ ಕುಮಾರ್ ಬಂಗಾರಪ್ಪ ಹೇಳಿದ್ದಾರೆ. ಬಿಜೆಪಿಯಲ್ಲಿ ಈಗ ವಿಜೆಪಿ, ವೈಜೆಪಿ, ಕೆಜೆಪಿ, ಎನ್‌ಜೆಪಿ ಎಂದು ಹತ್ತು ಹಲವು ಗುಂಪುಗಳಾಗಿ ಬಿಟ್ಟಿದೆ. ಹೀಗಾಗಿ ನಾವು ಲೀಡರ್ಸ್ ಅಂತ ತೋರಿಸಿಕೊಳ್ಳಬೇಕು ಎಂದು ಹೋರಾಟ ಅಂತಾರೆ. ಈ ವಿಜಯೇಂದ್ರ ವಕ್ಫ್ ಬಗ್ಗೆ ಬೀದರ್ ಟು ಚಾಮರಾಜನಗರವರೆಗೆ ಹೋರಾಟ ಮಾಡಬೇಕು ಎಂದು ತೀರ್ಮಾನ ಮಾಡಿದ್ದರು. ಆದರೆ, ಬಿಜೆಪಿ ಈಗ ಈಗ ಎರಡು ಬಣಗಳಾಗಿ ರಾಜ್ಯ ಪ್ರವಾಸ ಮಾಡಲು ಅಣಿಯಾಗಿದೆ. ವಿಜಯೇಂದ್ರ ಅವರಿಗೆ ಮುನಿರತ್ನ ಅವರಿಗಾಗಲಿ, ಯತ್ನಾಳ್ ಅವರಿಗಾಗಲಿ ನೋಟಿಸ್ ನೀಡಲು ಆಗಲಿಲ್ಲ, ಸಿ.ಟಿ.ರವಿ. ಅವರಿಗೆ ವಿವರಣೆ ಕೇಳಲು ಆಗಲಿಲ್ಲ. ಅವರ ಪಕ್ಷದವರೇ ಅವರನ್ನು ಸೀರಿಯಸ್ ಆಗಿ ತೆಗೆದುಕೊಳ್ಳದೇ ಇರುವಾಗ ನಾನೇಕೇ ಅವರನ್ನು ಸೀರಿಯಸ್ ಆಗಿ ತೆಗೆದುಕೊಳ್ಳಬೇಕು.