ಕಾಂಗ್ರೆಸ್‌ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳಿಂದ ಜೆಡಿಎಸ್‌-ಬಿಜೆಪಿಯವರಿಗೆ ಹೊಟ್ಟೆತುಂಬಾ ಊಟ ಸೇರುತ್ತಿಲ್ಲ, ಕಣ್ತುಂಬ ನಿದ್ರೆ ಬರುತ್ತಿಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ವ್ಯಂಗ್ಯವಾಡಿದರು.

ಮಂಡ್ಯ (ಆ.06): ಕಾಂಗ್ರೆಸ್‌ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳಿಂದ ಜೆಡಿಎಸ್‌-ಬಿಜೆಪಿಯವರಿಗೆ ಹೊಟ್ಟೆತುಂಬಾ ಊಟ ಸೇರುತ್ತಿಲ್ಲ, ಕಣ್ತುಂಬ ನಿದ್ರೆ ಬರುತ್ತಿಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ವ್ಯಂಗ್ಯವಾಡಿದರು. ನಗರದ ಅಂಬೇಡ್ಕರ್‌ ಭವನದಲ್ಲಿ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ಮಂಡ್ಯ ವೃತ್ತದ ವತಿಯಿಂದ ಆಯೋಜಿಸಿದ್ದ ಗೃಹಜ್ಯೋತಿ ಯೋಜನೆಗೆ ವಿದ್ಯುಕ್ತ ಚಾಲನೆ ನೀಡಿ ಮಾತನಾಡಿದರು.

ಜೆಡಿಎಸ್‌ ಹಾಗೂ ಬಿಜೆಪಿ ಅಧಿಕಾರದಲ್ಲಿದ್ದ ಸಮಯದಲ್ಲಿ ಜನರಿಗೆ ಕೊಟ್ಟಭರವಸೆ ಈಡೇರಿಸಲಿಲ್ಲ. ಕೊಟ್ಟಮಾತನ್ನು ಉಳಿಸಿಕೊಳ್ಳಲಾಗಲಿಲ್ಲ. ಅದೇ ರೀತಿ ಕಾಂಗ್ರೆಸ್‌ನವರು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವುದಿಲ್ಲ. ಅವರ ವಿರುದ್ಧ ದೊಡ್ಡ ಸಮರ ನಡೆಸಬಹುದು. ಜನರು ಮತ್ತೆ ನಮ್ಮತ್ತ ತಿರುಗಿನೋಡುತ್ತಾರೆ. ಮುಂದಿನ ಚುನಾವಣೆಗೆ ನಾವು ಎಲ್ಲಾ ರೀತಿಯಲ್ಲೂ ತಯಾರಾಗಬಹುದು ಎಂದು ಭಾವಿಸಿದ್ದರು. ಆದರೆ, ಅಧಿಕಾರಕ್ಕೆ ಬಂದ 70 ದಿನಗಳಲ್ಲಿ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ನುಡಿದಂತೆ ನಡೆದಿದ್ದೇವೆ ಎಂದು ವಿಶ್ವಾಸದಿಂದ ನುಡಿದರು.

ಕೋಲಾರ ಜಿಲ್ಲೆ ಅಭಿವೃದ್ಧಿಗೆ 74 ಕೋಟಿ ಅನುದಾನ: ಸಚಿವ ಬೈರತಿ ಸುರೇಶ್

ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಐದು ಗ್ಯಾರಂಟಿ ಯೋಜನೆ ಜಾರಿಗೊಳಿಸಿದ ಯಾವುದಾದರೂ ಸರ್ಕಾರ ದೇಶದಲ್ಲಿದ್ದರೆ ಅದು ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ಮಾತ್ರ. ಬಿಜೆಪಿಯವರು ಇದನ್ನು ಸಹಿಸದೆ ಗ್ಯಾರಂಟಿ ಯೋಜನೆಗಳಿಂದ ಕರ್ನಾಟಕ ಸರ್ಕಾರ ದಿವಾಳಿಯಾಗಲಿದೆ ಎಂಬ ಮಾತನ್ನು ಪ್ರಧಾನಿಯವರಿಂದ ಆಡಿಸಿದರು. ಪ್ರಧಾನಿಯಾದವರು ಸರಿಯಾದ ಮಾಹಿತಿಯನ್ನು ಪಡೆಯದೆ ಈ ರೀತಿ ಮಾತುಗಳನ್ನಾಡಬಾರದು ಎಂದರು.

ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಸರ್ಕಾರವನ್ನು ಅಲುಗಾಡಿಸಲು ಜೆಡಿಎಸ್‌-ಬಿಜೆಪಿಯಿಂದ ಸಾಧ್ಯವೇ ಇಲ್ಲ. ಭವಿಷ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಶಾಶ್ವತವಾಗಿ ಅಧಿಕಾರದಲ್ಲಿ ಉಳಿಯಲಿದೆ. ಸಮಾಜದ ಎಲ್ಲ ವರ್ಗದ ಜನರ ಪರವಾಗಿ ಸರ್ಕಾರ ನಿಲ್ಲಲಿದೆ. ಎಲ್ಲರ ಶ್ರೇಯೋಭಿವೃದ್ಧಿಗೆ ಅನುಕೂಲವಾಗುವಂತಯಹ ಕಾರ್ಯಕ್ರಮ ರೂಪಿಸುತ್ತೇವೆ. ಯಾವುದೇ ಚುನಾವಣೆ ಎದುರಾದರೂ ಜನರು ಕಾಂಗ್ರೆಸ್‌ ಎನ್ನುವ ರೀತಿಯಲ್ಲಿ ಕಾರ್ಯಕ್ರಮಗಳಿರುತ್ತವೆ ಎಂದರು.

ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ನೀಡುವುದಾಗಿ ಘೋಷಿಸಿದ್ದೆವು. ಪ್ರತಿ ಕೆಜಿಗೆ 34 ರು.ನಂತೆ ಹಣ ಕೊಡುತ್ತೇವೆ ಎಂದರೂ ಕೇಂದ್ರ ಅಕ್ಕಿಯನ್ನು ಕೊಡಲಿಲ್ಲ. ಯಾವುದೇ ಕಾರಣಕ್ಕೂ ಕರ್ನಾಟಕಕ್ಕೆ ಅಕ್ಕಿ ನೀಡಬಾರದು ಎಂಬ ಉದ್ದೇಶದಿಂದಲೇ ತಪ್ಪಿಸಿದರು ಎಂದು ದೂಷಿಸಿದರು. ಕೇಂದ್ರ ಅಕ್ಕಿ ಕೊಡದಿರುವುದು ನಮಗೆ ಒಳ್ಳೆಯದೇ ಆಯಿತು. 5 ಕೆಜಿ ಅಕ್ಕಿಯನ್ನು ಬಳಸಿಕೊಂಡು ಬ್ಯಾಂಕ್‌ ಖಾತೆ ಸೇರುವ ಹಣದಿಂದ ಜನರು ತರಕಾರಿ-ಕಾಳುಗಳನ್ನು ಕೊಳ್ಳುವುದಕ್ಕೆ ಅನುಕೂಲವಾಗಿರುವ ಬಗ್ಗೆ ಮಾತುಗಳು ಕೇಳಿಬರುತ್ತಿವೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕರಾದ ಪಿ.ರವಿಕುಮಾರ್‌ಗೌಡ, ಪಿ.ಎಂ.ನರೇಂದ್ರಸ್ವಾಮಿ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಶೇಖ್‌ ತನ್ವೀರ್‌ ಆಸಿಫ್‌, ಜಿಲ್ಲಾ ಪೊಲೀಸ್‌ ಅಧೀಕ್ಷಕ ಎನ್‌.ಯತೀಶ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸಿ.ಡಿ.ಗಂಗಾಧರ್‌, ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮದ ಮಂಡ್ಯ ವೃತ್ತದ ಅಧೀಕ್ಷಕ ಎಂಜಿನಿಯರ್‌ ಬಿ.ಕೃಷ್ಣಮೂರ್ತಿ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಕೆ.ಸಿ.ಜೋಗಿಗೌಡ ಇತರರಿದ್ದರು.

ಗ್ಯಾರಂಟಿ ಯೋಜನೆಯಿಂದ ಜನರ ಬದುಕಿನಲ್ಲಿ ಬದಲಾವಣೆ: ಸಚಿವ ಎಂ.ಸಿ.ಸುಧಾಕರ್‌

ಯಾವುದೇ ಸರ್ಕಾರಗಳು ಅಧಿಕಾರಕ್ಕೆ ಬಂದ ಸಮಯದಲ್ಲಿ ಅಧಿಕಾರಿಗಳ ವರ್ಗಾವಣೆ ಸಾಮಾನ್ಯ. ಅದನ್ನೇ ಮುಂದಿಟ್ಟುಕೊಂಡು ಜನರ ಮನಸ್ಸನ್ನು ಬದಲಾಯಿಸುತ್ತೇನೆ ಎಂದರೆ ಅದು ಕೇವಲ ಭ್ರಮೆ. ಕೇವಲ ಟೀವಿ ಹೀರೋಗಳಾಗದೆ ಜನರಿಗೆ ಅನುಕೂಲವಾಗುವಂತಹ ಒಳ್ಳೆಯ ಸಲಹೆ, ಸೂಚನೆಗಳಿದ್ದರೆ ಅವುಗಳನ್ನು ನಮ್ಮ ಮುಂದಿಡಿ. ನಿಮ್ಮ ಸಲಹೆಗಳು ಉತ್ತಮವಾಗಿದ್ದರೆ ಅದನ್ನೂ ನಾವು ಪರಿಗಣಿಸಿ ಜಾರಿಗೊಳಿಸುತ್ತೇವೆ.
- ಎನ್‌.ಚಲುವರಾಯಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವ