ಈಶ್ವರಪ್ಪ, ಅನಂತಕುಮಾರ್ ಹೆಗಡೆಗೆ ಗುಂಡಿಕ್ಕಲಿ: ಸಚಿವ ಚಲುವರಾಯಸ್ವಾಮಿ ತಿರುಗೇಟು
ಕೇಸರಿ ಧ್ವಜವನ್ನು ರಾಷ್ಟ್ರಧ್ವಜ ಮಾಡುತ್ತೇನೆ ಎಂದಿದ್ದ ಈಶ್ವರಪ್ಪ ಹಾಗೂ ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳಿದ್ದ ಅನಂತಕುಮಾರ್ ಹೆಗಡೆ ಅವರಿಗೆ ಬಿಜೆಪಿಯವರು ಮೊದಲು ಗುಂಡಿಕ್ಕಲಿ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿರುಗೇಟು ನೀಡಿದರು.
ಕೆ.ಆರ್.ಪೇಟೆ (ಫೆ.11): ಕೇಸರಿ ಧ್ವಜವನ್ನು ರಾಷ್ಟ್ರಧ್ವಜ ಮಾಡುತ್ತೇನೆ ಎಂದಿದ್ದ ಈಶ್ವರಪ್ಪ ಹಾಗೂ ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳಿದ್ದ ಅನಂತಕುಮಾರ್ ಹೆಗಡೆ ಅವರಿಗೆ ಬಿಜೆಪಿಯವರು ಮೊದಲು ಗುಂಡಿಕ್ಕಲಿ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿರುಗೇಟು ನೀಡಿದರು. ದೇಶ ವಿಭಜನೆಯ ಬಗ್ಗೆ ಮಾತನಾಡಿರುವ ಸಂಸದ ಡಿ.ಕೆ.ಸುರೇಶ್‌ಗೆ ಗುಂಡಿಕ್ಕಿ ಕೊಲ್ಲಬೇಕು ಎಂಬ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಚಲುವರಾಯಸ್ವಾಮಿ, ಈಶ್ವರಪ್ಪ ಮೆದುಳಿಗೂ ನಾಲಿಗೆಗೂ ಸಂಪರ್ಕ ಕಡಿತವಾಗಿದೆ. ಹಾಗಾಗಿ ಅವರಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ.
ರಾಷ್ಟ್ರ, ರಾಜ್ಯ ಹಿತ ಕಾಯುವ ಪ್ರಶ್ನೆಗೆ ಉತ್ತರ ಕೊಡುತ್ತೇನೆ. ರಾಜಕಾರಣಕ್ಕಾಗಿ ನಾಲಿಗೆ ಹರಿಬಿಡುವವರಿಗೆ ಉತ್ತರ ನೀಡುವುದಿಲ್ಲ ಎಂದು ನೇರವಾಗಿ ಹೇಳಿದರು. ಬಿಜೆಪಿಯವರಂತೆ ಕಾಂಗ್ರೆಸ್ ಶಾಸಕರು, ಸಂಸದರು ರಾಷ್ಟ್ರ ಮತ್ತು ಸಂವಿಧಾನಕ್ಕೆ ಅವಮಾನ ಮಾಡಿಲ್ಲ. ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಕೇಳುವುದೇ ತಪ್ಪಾ. ಅವರು ಕೊಟ್ಟಿದ್ದನ್ನಷ್ಟೇ ಪಡೆಯಬೇಕಾ. ಅದನ್ನು ಯಾರೂ ಪ್ರಶ್ನಿಸಬಾರದಾ? ಹಾಗೇನಾದರೂ ಪ್ರಶ್ನಿಸಿದರೆ ಅವರು ರಾಷ್ಟ್ರದ್ರೋಹಿಗಳಾ ಎಂದು ಖಾರವಾಗಿ ಪ್ರಶ್ನಿಸಿದರು.
ರಾಜ್ಯಕ್ಕೆ ಆದ ಆರ್ಥಿಕ ಅನ್ಯಾಯದ ಬಗ್ಗೆ ಸಂಸದ ಡಿ.ಕೆ.ಸುರೇಶ್ ಮಾತನಾಡಿದ್ದಾರೆ. ಬಿಜೆಪಿಯ 26 ಸಂಸದರಿಗೆ ಮಾತನಾಡುವ ತಾಕತ್ತಿಲ್ಲ. ಅದನ್ನು ನಮ್ಮ ಕಾಂಗ್ರೆಸ್ ಸಂಸದರು ಪ್ರದರ್ಶಿಸಿದ್ದಾರೆ. ಅದು ದೊಡ್ಡ ತಪ್ಪೇ. ಬಿಜೆಪಿಯವರು ಆರ್ಥಿಕ ಅನ್ಯಾಯ ಮಾಡಿರುವುದಕ್ಕೆ ಉತ್ತರ ಕೊಟ್ಟು ಸರಿಪಡಿಸಬೇಕೇ ವಿನಃ ಪ್ರಶ್ನಿಸುವುದೇ ಸರಿಯಲ್ಲ ಎಂದು ಹೇಳುವುದು ತಪ್ಪು ಎಂದರು. ಸುಮಲತಾ-ಬಿಜೆಪಿ ವರಿಷ್ಠರ ಭೇಟಿ ಬಗ್ಗೆ ಕೇಳಿದಾಗ, ಸುಮಲತಾ ಅವರು ಬಿಜೆಪಿ ಟಿಕೆಟ್ ಕೇಳುತ್ತಿರುವುದು ಸತ್ಯ ಎಂದು ಸ್ಪಷ್ಟವಾಯಿತಲ್ವಾ. ಹಾಗೆಂದ ಮೇಲೆ ಅವರು ಬಿಜೆಪಿಯಲ್ಲಿರೋದು ಖಚಿತವಾಗಿದೆ.
ಮಂಗನಕಾಯಿಲೆಗೆ ವರ್ಷದೊಳಗೆ ವ್ಯಾಕ್ಸಿನ್: ಸಚಿವ ದಿನೇಶ್ ಗುಂಡೂರಾವ್
ಕಾಂಗ್ರೆಸ್‌ನಿಂದ ಆಫರ್ ಬಂದಿತ್ತು ಎಂದಾದರೆ ಅವರಿಗೆ ಆಫರ್ ನೀಡಿದವರು ಯಾರು ಎನ್ನುವುದನ್ನೂ ಸುಮಲತಾ ಹೇಳಬೇಕು ಎಂದು ತಿಳಿಸಿದರು. ಸುಮಲತಾ ಕಾಂಗ್ರೆಸ್‌ಗೆ ಹೋಗುವ ಬಗ್ಗೆ ಜಿ.ಟಿ.ದೇವೇಗೌಡರು ಹೇಳಿದ್ದಾರಲ್ಲ ಎಂದಾಗ, ಜಿ.ಟಿ.ದೇವೇಗೌಡರಿಗೂ ಇದಕ್ಕೂ ಸಂಬಂಧ ಇಲ್ಲ. ಬಿಜೆಪಿ ಬೆಂಬಲಿತ ಸಂಸದೆ ಸುಮಲತಾ. ಈಗ ಬಿಜೆಪಿ ಟಿಕೆಟ್ ಕೇಳಿದ್ದಾರೆ. ಅವರ ಬಗ್ಗೆ ನಾವು ಮಾತನಾಡುವುದು ಸೂಕ್ತ ಅಲ್ಲ. ಅವರಿಗೆ ಕಾಂಗ್ರೆಸ್ ಬಾಗಿಲೂ ಮುಚ್ಚಿದೆಯಾ? ಇಲ್ವಾ? ಅವರನ್ನೇ ಕೇಳಿ. ಸ್ಟಾರ್ ಚಂದ್ರು ಓರ್ವ ಟಿಕೆಟ್ ಆಕಾಂಕ್ಷಿ. ಅಂತಿಮವಾಗಿ ಪಕ್ಷ ತೀರ್ಮಾನಿಸಲಿದೆ. ಇನ್ನೊಂದು ವಾರದಲ್ಲಿ ಬಹುತೇಕ ಅಭ್ಯರ್ಥಿಗಳು ಫೈನಲ್ ಆಗುವರು ಎಂದು ನುಡಿದರು.