ಕುಮಾರಸ್ವಾಮಿಗೆ ನಮ್ಮನ್ನು ನೋಡಿ ಸಹಿಸೋಕಾಗುತ್ತಿಲ್ಲ: ಸಚಿವ ಚಲುವರಾಯಸ್ವಾಮಿ
ಕುಮಾರಸ್ವಾಮಿಗೆ ಅಧಿಕಾರ ಸಿಕ್ಕಾಗ ಅದನ್ನು ಮುನ್ನಡೆಸೋಕೆ ಆಗೋಲ್ಲ. ಅಧಿಕಾರ ಬಿಟ್ಟು ಇರಲಾಗುವುದಿಲ್ಲ. ಅವರು ಒಂದು ರೀತಿಯಲ್ಲಿ ಹತಾಶರಾಗಿದ್ದಾರೆ. ಅಧಿಕಾರ ಸಿಕ್ಕಿದಷ್ಟು ದಿನ ಪೂರ್ಣ ಪ್ರಮಾಣದಲ್ಲಿ ಅಧಿಕಾರ ನಡೆಸಲು ಆಗಿಲ್ಲ. ನಮ್ಮ ಮಾಜಿ ಸ್ನೇಹಿತರನ್ನು ನೋಡಿದರೆ ನನಗೆ ಪಾಪ ಅನ್ನಿಸುತ್ತದೆ ಎಂದು ವ್ಯಂಗ್ಯವಾಡಿದ ಸಚಿವ ಎನ್.ಚಲುವರಾಯಸ್ವಾಮಿ
ಮದ್ದೂರು(ನ.19): ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತು ನಾನು ಅಧಿಕಾರದಲ್ಲಿರುವುದನ್ನು ನೋಡಿ ಕುಮಾರಸ್ವಾಮಿ ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಅವರು ಖುಷಿಯಾಗಿರಬೇಕು ಎಂದರೆ ನಾವು ರಾಜಕೀಯದಿಂದ ನಿವೃತ್ತಿಯಾಗಬೇಕು. ಆಗಲಾದರೂ ನೆಮ್ಮದಿಯಾಗಿರುತ್ತಾರೋ ನೋಡಬೇಕು ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಲೇವಡಿ ಮಾಡಿದರು.
ತಾಲೂಕಿನ ಕೊಪ್ಪದಲ್ಲಿ ಜನಸ್ಪಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ಕುಮಾರಸ್ವಾಮಿಗೆ ಅಧಿಕಾರ ಸಿಕ್ಕಾಗ ಅದನ್ನು ಮುನ್ನಡೆಸೋಕೆ ಆಗೋಲ್ಲ. ಅಧಿಕಾರ ಬಿಟ್ಟು ಇರಲಾಗುವುದಿಲ್ಲ. ಅವರು ಒಂದು ರೀತಿಯಲ್ಲಿ ಹತಾಶರಾಗಿದ್ದಾರೆ. ಅಧಿಕಾರ ಸಿಕ್ಕಿದಷ್ಟು ದಿನ ಪೂರ್ಣ ಪ್ರಮಾಣದಲ್ಲಿ ಅಧಿಕಾರ ನಡೆಸಲು ಆಗಿಲ್ಲ. ನಮ್ಮ ಮಾಜಿ ಸ್ನೇಹಿತರನ್ನು ನೋಡಿದರೆ ನನಗೆ ಪಾಪ ಅನ್ನಿಸುತ್ತದೆ ಎಂದು ವ್ಯಂಗ್ಯವಾಡಿದರು.
ಹೆಚ್ಡಿಕೆಗೆ ಪ್ರಧಾನಿ, ಮಾಜಿ ಪ್ರಧಾನಿ ರಕ್ಷಣೆಯಿದೆ ಅಂತಾ ಬಾಯಿಗೆ ಬಂದಂಗೆ ಮಾತಾಡ್ತಿದಾರೆ: ಚಲುವರಾಯಸ್ವಾಮಿ ವ್ಯಂಗ್ಯ
ಕುಮಾರಸ್ವಾಮಿಯವರು ಆರೋಗ್ಯವಾಗಿ, ನೆಮ್ಮದಿಯಿಂದ, ಖುಷಿಯಾಗಿರಬೇಕು ಅಂತ ಅಂದುಕೊಳ್ಳುತ್ತೇವೆ. ಅಧಿಕಾರದಲ್ಲಿರುವ ನಮ್ಮನ್ನು ನೋಡಿ ಅವರಿಗೆ ತಡೆದುಕೊಳ್ಳಲಾಗದೆ ಅವರಿವರನ್ನು ಬೈಯ್ಯುತ್ತಾ ಲಘುವಾಗಿ ಮಾತನಾಡುತ್ತಾರೆ. ಮಾಜಿ ಪ್ರಧಾನಿ ರಕ್ಷಣೆ ಇದೆ ಎಂದು ಬಾಯಿಗೆ ಬಂದಂತೆ ಮಾತನಾಡಬಾರದು. ಮಾತನಾಡುವುದಕ್ಕೂ ಒಂದು ಇತಿ-ಮಿತಿ ಇರುತ್ತದೆ ಎಂದರು.
ಲುಲು ಮಾಲ್ ವಿಚಾರವಾಗಿ ಡಿ.ಕೆ.ಶಿವಕುಮಾರ್ ಕುರಿತು ಎಚ್‌ಡಿಕೆ ಮಾತನಾಡಿದ್ದಾರೆ. ತುಂಬಾ ದಿನಗಳ ಹಿಂದೆ ಆ ಆಸ್ತಿಯನ್ನು ಖರೀದಿ ಮಾಡಿ ಜಾಯಿಂಟ್ ವೆಂಚರ್‌ನಲ್ಲಿ ಮಾಲ್ ಮಾಡಿದ್ದಾರೆ. ತಪ್ಪು ಮಾಡಿದ್ರೆ ಯಾವುದೇ ತನಿಖೆ ಮಾಡಲಿ. ಮಾಕಳಿಯಲ್ಲಿರುವ ನನ್ನ ಜಮೀನಿನ ಬಗ್ಗೆ ಮಾತನಾಡಿದ್ದಾರೆ. ಅದು ಸರ್ಕಾರದಿಂದ ಮಂಜೂರಾದ ಜಮೀನಲ್ಲ. ಅದು ಜೋಡಿದಾರರ ಜಮೀನು. ಹಿಂದೆ ಕೆರೆ ಚಿಹ್ನೆ ಆರ್‌ಟಿಸಿಯಲ್ಲಿರಲಿಲ್ಲ. ಆದ್ರೆ ಈಗ ಕೆರೆ ಚಿಹ್ನೆ ಬಂದಿದೆಯಂತೆ. ಅದನ್ನ ಇಲಾಖೆ ಬಗೆಹರಿಸಲಿದೆ. ಆ ಭಾಗದ ೨೦೦ ಎಕರೆ ಜಮೀನು ಸಮಸ್ಯೆ ಇದೆ. ಅದು ಬಹಳಷ್ಟು ತಲೆಮಾರು ಬದಲಾಗಿ ನನಗೆ ಬಂದಿದೆ. ಚುನಾವಣೆ ಆಸ್ತಿ ವಿವರದಲ್ಲೂ ಅದನ್ನು ತೋರಿಸಿಕೊಂಡಿದ್ದೇನೆ. ಯಾವುದನ್ನೂ ಮುಚ್ಚು ಮರೆ ಮಾಡ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಕುಮಾರಸ್ವಾಮಿಗೆ ಅಧಿಕಾರ ಇಲ್ದೆನೂ ಇರೋಕಾಗಲ್ಲ, ಅಧಿಕಾರ ಕೊಟ್ರೂ ನಿಭಾಯಿಸೋಕಾಗಲ್ಲ!
ಆರ್.ಅಶೋಕ್ ಅವರನ್ನು ವಿಪಕ್ಷ ನಾಯಕನನ್ನಾಗಿ ಬಿಜೆಪಿ ಆಯ್ಕೆ ಮಾಡಿರುವ ಬಗ್ಗೆ ಕೇಳಿದಾಗ, ಅವರಿನ್ನೂ ಅಧಿಕಾರ ವಹಿಸಿಕೊಂಡಿಲ್ಲ. ಈಗಲೇ ಅವರ ಬಗ್ಗೆ ಮಾತನಾಡುವುದು ಸರಿಯಲ್ಲ. ಅವರು ನನಗೆ ಒಳ್ಳೆಯ ಸ್ನೇಹಿತ. ಜವಾಬ್ದಾರಿಯುತ ಸ್ಥಾನದಲ್ಲಿದ್ದು ಸರ್ಕಾರಕ್ಕೆ ಸೂಕ್ತ ಸಲಹೆ-ಸಹಕಾರ ನೀಡಲಿ. ಅದನ್ನು ಬಿಟ್ಟು ರಾಜಕಾರಣ ಮಾಡಿದರೆ ಅದು ಅವರಿಗೆ ಬಿಟ್ಟ ವಿಚಾರ ಎಂದು ನುಡಿದರು.
ಹಗರಣ ನಡೆಸಿದವರಿಗೆ ನೈತಿಕತೆ ಇಲ್ಲ
ಯತೀಂದ್ರ ಸಿದ್ದರಾಮಯ್ಯ ಫೋನ್ ಸಂಭಾಷಣೆ ವಿಚಾರವನ್ನು ಮತ್ತೆ ಸಮರ್ಥಿಸಿಕೊಂಡ ಚಲುವರಾಯಸ್ವಾಮಿ ಅವರು, ಅಧಿಕಾರಿಗಳ ವರ್ಗಾವಣೆ ಮಾಡಲು ಸರ್ಕಾರಕ್ಕೆ ಅವಕಾಶ ಇದೆ. ಯಾರು ಬೇಕಾದರೂ ನಮ್ಮನ್ನ್ನು ವರ್ಗಾವಣೆ ಬಗ್ಗೆ ಕೇಳಬಹುದು, ನಾವು ವರ್ಗಾವಣೆ ಮಾಡಬಹುದು. ಆ ರೀತಿ ವರ್ಗಾವಣೆ ಮಾಡೋದು ಅಪರಾಧವಲ್ಲ. ಇವರನ್ನೆಲ್ಲ ಕೇಳಿ ವರ್ಗಾವಣೆ ಮಾಡಬೇಕಿಲ್ಲ. ಈ ಹಿಂದೆ ವಿಜಯೇಂದ್ರ ವಿಚಾರವಾಗಿ ಮಾತನಾಡಿದ್ದು ನಾವಲ್ಲ, ಯತ್ನಾಳ್. ಅವರನ್ನು ಪಾರ್ಟಿಯಿಂದ ತೆಗೆದಿದ್ದಾರಾ.? ರಮೇಶ್ ಜಾರಕಿಹೊಳಿ ಅವರ ಮೇಲೆ ಆರೋಪ ಮಾಡಿ ಮಂತ್ರಿ ಆಗದಂತೆ ನೋಡಿಕೊಂಡರು. ಇವತ್ತು ಬಿಜೆಪಿ ಹೈಕಮಾಂಡ್ ವಿಧಿ ಇಲ್ಲದೆ ವಿಜಯೇಂದ್ರ ಅವರನ್ನು ಅಧ್ಯಕ್ಷನನ್ನಾಗಿ ಮಾಡಿದೆ. ದೇವರಾಜು ಟರ್ಮಿನಲ್ ಯೋಜನೆಯಲ್ಲಿ ೪೭ ಕೋಟಿ ಹಗರಣ ನಡೆದಿದೆ. ಹಗರಣದಲ್ಲಿ ಅವರ ಪಕ್ಷದ ಅಧ್ಯಕ್ಷರೇ ಸಿಕ್ಕಿಕೊಂಡಿದ್ದಾರೆ. ಮತ್ತೊಬ್ಬರು ಮೈಸೂರು ಸ್ಯಾಂಡಲ್ ಹಗರಣದಲ್ಲಿ ಸಿಲುಕಿದಾಗ ರಾಜೀನಾಮೆ ಪಡೆದುಕೊಂಡರು. ಈ ರೀತಿ ಹಗರಣ ಮಾಡಿದವರಿಗೆ ವರ್ಗಾವಣೆ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದು ಟೀಕಿಸಿದರು.