ಕಾವೇರಿ ವಿಚಾರದಲ್ಲಿ ವಿಪಕ್ಷಗಳು ರೈತರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿವೆ: ಚಲುವರಾಯಸ್ವಾಮಿ
ಕಾವೇರಿ ನೀರಿನ ವಿಚಾರದಲ್ಲಿ ವಿಪಕ್ಷಗಳು ಕ್ಷುಲ್ಲಕ ರಾಜಕಾರಣ ಮಾಡುವುದನ್ನು ಬಿಟ್ಟು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಲಹೆ ಸೂಚನೆ ನೀಡಬೇಕು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ನಾಗಮಂಗಲ (ಸೆ.24): ಕಾವೇರಿ ನೀರಿನ ವಿಚಾರದಲ್ಲಿ ವಿಪಕ್ಷಗಳು ಕ್ಷುಲ್ಲಕ ರಾಜಕಾರಣ ಮಾಡುವುದನ್ನು ಬಿಟ್ಟು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಲಹೆ ಸೂಚನೆ ನೀಡಬೇಕು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು. ತಾಲೂಕಿನ ಬೆಳ್ಳೂರು ಹೋಬಳಿಯ ವಿವಿಧ ಗ್ರಾಮ ಪಂಚಾಯ್ತಿ ಕೇಂದ್ರಗಳಲ್ಲಿ ಶನಿವಾರ ನಡೆಸಿದ ಜನಸಂಪರ್ಕ ಸಭೆಯಲ್ಲಿ ಮಾತನಾಡಿ, ಮಂಡ್ಯ ಜಿಲ್ಲೆಯ ಮತ್ತು ಕಾವೇರಿ ಅಚುಕಟ್ಟು ವ್ಯಾಪ್ತಿಯ ರೈತರ ಹಿತದೃಷ್ಟಿಯನ್ನು ಕಾಪಾಡಲು ಸರ್ಕಾರ ಬದ್ಧವಾಗಿದೆ. ಆ ನಿಟ್ಟಿನಲ್ಲಿ ಸರ್ಕಾರ ಹಲವಾರು ಕ್ರಮ ಕೈಗೊಂಡಿದೆ. ಆದರೆ, ವಿಪಕ್ಷಗಳು ರೈತರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿವೆ ಎಂದು ದೂರಿದರು.
ರೈತರ ಹಿತದೃಷ್ಟಿಯಿಂದ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಬಹಿರಂಗಪಡಿಸಲಾಗದು. ಸೆ.26ರಂದು ರೈತರ ಪರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಮೇಲ್ಮನವಿ ಸಲ್ಲಿಸಲಾಗುತ್ತಿದೆ. ಈ ವಿಚಾರದಲ್ಲಿ ವಿಪಕ್ಷದವರು ವಿನಾಕಾರಣ ಅಪಪ್ರಚಾರ ಮಾಡಬಾರದು. ರೈತರು ಮತ್ತು ರೈತಪರ ಹೋರಾಟಗಾರರನ್ನು ಎತ್ತಿಕಟ್ಟಬಾರದು. ಇಂತಹ ಸೂಕ್ಷ್ಮ ವಿಚಾರದಲ್ಲಿ ಸರ್ಕಾರದೊಂದಿಗೆ ಕೈಜೋಡಿಸಿ ರೈತರ ಪರ ಒಟ್ಟಾಗಿ ನಿಲ್ಲಬೇಕು ಎಂದರು. ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಸಮರ್ಥವಾಗಿ ವಾದ ಮಂಡಿಸಿಲ್ಲ ಎಂದು ವಿರೋಧ ಪಕ್ಷದವರು ಆರೋಪಿಸುತ್ತಿದ್ದಾರೆ.
ರಾಜ್ಯ ಸರ್ಕಾರಕ್ಕೆ ಹಿಂದೂ ಚಟುವಟಿಕೆ, ಕಾರ್ಯಕರ್ತರೇ ಟಾರ್ಗೆಟ್: ಜೋಶಿ ಕಿಡಿ
ರಾಜ್ಯದ ವಕೀಲರು ಮತ್ತು ಅಧಿಕಾರಿಗಳು ಸರಿಯಾದ ರೀತಿಯಲ್ಲಿ ವಾದ ಮಂಡನೆ ಮಾಡಿ ಕಾವೇರಿ ನೀರಿನ ಬಗ್ಗೆ ವಿವರಣೆ ನೀಡಿದ ನಂತರ ಪ್ರತಿನಿತ್ಯ 5 ಸಾವಿರ ಕ್ಯುಸೆಕ್ ನೀರು ಬಿಡುವಂತೆ ಸೂಚಿಸಿದ್ದಾರೆ. ನಾವು ಸರಿಯಾದ ರೀತಿಯಲ್ಲಿ ವಾದ ಮಂಡಿಸದಿದ್ದರೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ನೀರು ಹರಿಸಬೇಕಿತ್ತು ಎಂದರು. ಬಿಜೆಪಿ ಸರ್ಕಾರದ 5 ವರ್ಷಗಳ ದುರಾಡಳಿತದಿಂದ ಬೇಸತ್ತು ಕಾಂಗ್ರೆಸ್ ಅನ್ನು ಅಭೂತಪೂರ್ವ ಬಹುಮತದಿಂದ ಗೆಲ್ಲಿಸಿದ್ದೀರಿ. ಈ ರಾಜ್ಯದ ರೈತರ ಹಿತದೃಷ್ಟಿಯೇ ನಮ್ಮ ಸರ್ಕಾರದ ಆದ್ಯ ಕರ್ತವ್ಯ. ಮತ್ತು ಚುನಾವಣೆ ವೇಳೆ ಕೊಟ್ಟಿದ್ದ ಎಲ್ಲಾ ಭರವಸೆ ಅನುಷ್ಠಾನಕ್ಕೆ ತಂದಿದ್ದೇವೆ. ಆ ಗ್ಯಾರಂಟಿಗಳಿಂದ ಇಂತಹ ಬರ ಪರಿಸ್ಥಿತಿಯಲ್ಲಿಯೂ ಸಹ ಎಲ್ಲರಿಗೂ ಅನುಕೂಲವಾಗುತ್ತಿದೆ ಎಂದರು.
ನಾನು ಮಂತ್ರಿಯಾದ ಬಳಿಕ ಜಿಲ್ಲೆ ಮತ್ತು ರಾಜ್ಯದಲ್ಲಿ ಹೆಚ್ಚಿನ ಜವಾಬ್ದಾರಿ ನಿಭಾಯಿಸಬೇಕಿದೆ. ತಾಲೂಕಿನ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ. ಹಾಗಾಗಿಯೇ ಗ್ರಾಪಂ ವ್ಯಾಪ್ತಿಯಲ್ಲಿ ಜನಸಂಪರ್ಕ ಸಭೆ ಆಯೋಜಿಸಲಾಗುತ್ತಿದೆ. ಆದ್ದರಿಂದ ಕ್ಷೇತ್ರದ ಜನರ ಅಹವಾಲುಗಳನ್ನು ಈ ಸಭೆಯಲ್ಲಿ ಸ್ವೀಕರಿಸಲಾಗುತ್ತಿದೆ. ಒಂದು ತಿಂಗಳಲ್ಲಿ ಎಲ್ಲ ಸಮಸ್ಯೆ ಬಗೆಹರಿಸಿ ಅಧಿಕಾರಿಗಳು ಪತ್ರ ಬರೆಯುತ್ತಾರೆ. ಪರಿಹರಿಸಲು ಸಾಧ್ಯವಾಗದ ಸಮಸ್ಯೆಗಳಿದ್ದಲ್ಲಿ ಅದಕ್ಕೂ ಹಿಂಬರಹ ನೀಡುತ್ತಾರೆ. ಯಾವುದೇ ಕೆಲಸ ಕಾರ್ಯಗಳಿಗೆ ಜನರು ಮಧ್ಯವರ್ತಿಗಳಿಗೆ ಹಣ ಕೊಡುವ ಅಗತ್ಯವಿಲ್ಲ ಎಂದರು.
ಮಂಡ್ಯ ನಗರ, ಮದ್ದೂರು ಬಂದ್ ಭರ್ಜರಿ ಯಶಸ್ವಿ: ಸ್ಟಾಲಿನ್ ಪ್ರತಿಕೃತಿ ದಹಿಸಿ ಆಕ್ರೋಶ
ರೈತರನ್ನು ವಿನಾಕಾರಣ ಕಚೇರಿಗಳಿಗೆ ಅಲೆದಾಡಿಸಬೇಡಿ. ರೈತರಿಂದ ಯಾವುದೇ ಅಧಿಕಾರಿಗಳ ವಿರುದ್ಧ ದೂರುಗಳು ಕೇಳಿಬಂದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು. ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ಜಯಮ್ಮ ಪಾಪಣ್ಣ, ಪಾಂಡವಪುರ ಉಪ ವಿಭಾಗಾಧಿಕಾರಿ ನಂದೀಶ್, ತಹಸೀಲ್ದಾರ್ ನಯೀಂಉನ್ನೀಸಾ, ತಾಪಂ ಇಓ ಚಂದ್ರಮೌಳಿ, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೋಗಿಗೌಡ, ನಿರ್ದೇಶಕ ದಿನೇಶ್ ಸೇರಿದಂತೆ ಹಲವರಿದ್ದರು.