ಬಿಜೆಪಿಯಿಂದ ಸಿಡಿದೆದ್ದ ಯೋಗಿ ಕಾಂಗ್ರೆಸ್‌ ಸಂಪರ್ಕದಲ್ಲಿ: ಸಚಿವ ಚಲುವರಾಯಸ್ವಾಮಿ ಹೇಳಿದ್ದಿಷ್ಟು

ಜೆಡಿಎಸ್ ಚಿಹ್ನೆಯಿಂದ ಸಿ.ಪಿ.ಯೋಗೇಶ್ವರ್ ನಿಲ್ಲುತ್ತಾರೆ ಅಂತ ಒಂದು ಕಡೆ ಕೇಳಿಬಂದರೆ, ಮತ್ತೊಂದು ಕಡೆ ಅನಿತಾ ಕುಮಾರಸ್ವಾಮಿ ಅಥವಾ ನಿಖಿಲ್‌ ಸ್ಪರ್ಧಿಸುವರೆಂಬ ಮಾತುಗಳು ಮತ್ತೊಂದೆಡೆ ಕೇಳಿಬರುತ್ತಿವೆ. ಅವರ ಪಕ್ಷದಲ್ಲಿ ಏನು ಮಾಡುತ್ತಾರೋ ಗೊತ್ತಿಲ್ಲ ಎಂದ ಸಚಿವ ಎನ್.ಚಲುವರಾಯಸ್ವಾಮಿ

Minister N Cheluvaraswamy React to BJP Leader CP Yogeshwar Contact with Congress grg

ಮಂಡ್ಯ(ಅ.22): ಸಿ.ಪಿ.ಯೋಗೇಶ್ವರ್‌ ನಮ್ಮ ಸಂಪರ್ಕದಲ್ಲಿ ಇಲ್ಲ. ಅವರು ನಮ್ಮ ಬಳಿ ಬಂದಿಲ್ಲ. ನಾವು ಅವರ ಬಳಿ ಹೋಗಿಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಸ್ಪಷ್ಟಪಡಿಸಿದರು.  ನಗರದಲ್ಲಿ ಸೋಮವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಜೆಡಿಎಸ್ ಚಿಹ್ನೆಯಿಂದ ಸಿ.ಪಿ.ಯೋಗೇಶ್ವರ್ ನಿಲ್ಲುತ್ತಾರೆ ಅಂತ ಒಂದು ಕಡೆ ಕೇಳಿಬಂದರೆ, ಮತ್ತೊಂದು ಕಡೆ ಅನಿತಾ ಕುಮಾರಸ್ವಾಮಿ ಅಥವಾ ನಿಖಿಲ್‌ ಸ್ಪರ್ಧಿಸುವರೆಂಬ ಮಾತುಗಳು ಮತ್ತೊಂದೆಡೆ ಕೇಳಿಬರುತ್ತಿವೆ. ಅವರ ಪಕ್ಷದಲ್ಲಿ ಏನು ಮಾಡುತ್ತಾರೋ ಗೊತ್ತಿಲ್ಲ ಎಂದು ನುಡಿದರು.

ಚನ್ನಪಟ್ಟಣದಲ್ಲಿ ಕಾಂಗ್ರೆಸ್‌ನಿಂದ ಡಿ.ಕೆ.ಸುರೇಶ್ ಅವರನ್ನು ಕಣಕ್ಕಿಳಿಸುವಂತೆ ಕಾರ್ಯಕರ್ತರು, ಮುಖಂಡರಿಂದ ತೀವ್ರ ಒತ್ತಡವಿದೆ. ಆಕಾಂಕ್ಷಿತರ ಪಟ್ಟಿಯಲ್ಲಿ ಪುಟ್ಟಣ್ಣ, ಅಶ್ವಥ್, ರಘುನಂದನ್ ಹೆಸರುಗಳೂ ಇವೆ. ನೂರಕ್ಕೆ ನೂರು ಡಿ.ಕೆ.ಸುರೇಶ್ ಅವರನ್ನೇ ಕಣಕ್ಕಿಳಿಸಬೇಕೆಂದು ತೀವ್ರ ಒತ್ತಾಯವಿದೆ. ಡಿ.ಕೆ.ಸುರೇಶ್ ಹೆಸರನ್ನು ಹೊರತುಪಡಿಸಿ ಅವರ ಕುಟುಂಬದಿಂದ ಬೇರೆ ಯಾರೂ ಚನ್ನಪಟ್ಟಣ ಟಿಕೆಟ್ ಆಕಾಂಕ್ಷಿಯಲ್ಲ ಎಂದರು. 

ಮುಂದಿನ ಸಿಎಂ ಡಿಕೆಶಿ, ಘೋಷಣೆ: ತಡೆಯುವ ಗೋಜಿಗೆ ಹೋಗದ ಡಿಸಿಎಂ!

ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ನಿನ್ನೆಯಷ್ಟೇ ಸಭೆ ಕರೆದು ಮೂರು ಉಪ ಚುನಾವಣೆಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಸಂಡೂರು ಕ್ಷೇತ್ರದ ಟಿಕೆಟ್ ವಿಷಯವನ್ನು ಅಲ್ಲಿನ ನಮ್ಮ ಎಂಪಿ ನಿರ್ಧಾರಕ್ಕೆ ಬಿಟ್ಟಿದ್ದೇವೆ. ಶಿಗ್ಗಾವಿ ಮತ್ತು ಚನ್ನಪಟ್ಟಣ ಅಭ್ಯರ್ಥಿ ಆಯ್ಕೆ ಬಗ್ಗೆ ಮಾಹಿತಿ ತೆಗೆದುಕೊಂಡಿದ್ದಾರೆ. ನನಗೆ ಚನ್ನಪಟ್ಟಣ ಉಸ್ತುವಾರಿ ಕೊಟ್ಟಿದ್ದಾರೆ. ಅಲ್ಲಿನ ಸ್ಥಳೀಯ ಶಾಸಕರು, ಮುಖಂಡರಿಂದ ಮಾಹಿತಿ ಸಂಗ್ರಹಿಸಿಸಿಎಂ, ಡಿಸಿಎಂಗೆ ಕೊಡುತ್ತೇವೆ. ಚನ್ನಪಟ್ಟಣದಲ್ಲಿ ಸ್ಥಳೀಯರಿಗೆ ಟಿಕೆಟ್ ನೀಡುವುದಾಗಿ ಸ್ಪಷ್ಟಪಡಿಸಿದರಲ್ಲದೇ, ಅಂತಿಮ ಪಟ್ಟಿಯನ್ನು ಸಿಎಂ- ಡಿಸಿಎಂ ಎಐಸಿಸಿಗೆ ಕಳುಹಿಸುವರು ಎಂದರು. 

ಬಿಜೆಪಿ ಮತ್ತು ಜೆಡಿಎಸ್ ನಡುವೆ ಕಾಂಗ್ರೆಸ್ ಹುಳಿ ಹಿಂಡುವ ಕೆಲಸ ಮಾಡ್ತಿದೆ ಎಂಬ ಎಚ್‌ ಡಿಕೆ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಚಲುವರಾಯಸ್ವಾಮಿ, ಅವರೇನು ಕಿವಿಗೆ ಹೂ ಇಟ್ಟುಕೊಂಡಿದ್ದಾರಾ?. ನಮ್ಮನ್ನ ಕೇಳಿ ಮೈತ್ರಿ ಮಾಡಿಕೊಂಡಿದ್ದಾರಾ?, ಟೀಕೆ ಮಾಡೋದು ರಾಜಕಾರಣ. ಅದರಲ್ಲಿ ಹುಳಿ ಹಿಂಡೋದೇನು? ಯಡಿಯೂರಪ್ಪ, ವಿಜಯೇಂದ್ರ, ಅಶೋಕ್ ಜೊತೆ ಕುಮಾರಸ್ವಾಮಿ ಚೆನ್ನಾಗಿದ್ದಾರೆ ಎಂದುಕೊಂಡಿದ್ದೆವು. ಈಗ ಅವರ ಹೇಳಿಕೆ ನೋಡಿದರೆ ಅವರಲ್ಲೂ ವ್ಯತ್ಯಾಸಗಳಿವೆ ಎಂದು ತಿಳಿದುಕೊಳ್ಳಬೇಕು ಎಂದು ತಿವಿದರು. 

ರೈತರ ಜಾನುವಾರುಗಳಿಗೆ ವಿಮೆ ಜಾರಿಗೆ ಸಿಎಂಗೆ ಮನವಿ: ಸಚಿವ ಚಲುವರಾಯಸ್ವಾಮಿ

ಪ್ರತಿ ದಿನ ಕುಮಾರಸ್ವಾಮಿಗೆ ಸರ್ಕಾರ ಉರುಳಿಸಬೇಕು ಅನ್ನೋದೇ ಕೆಲಸ. ಅದೊಂಥರಾ ಅವರಿಗೆ ಚಪಲ, ಸರ್ಕಾರ ತೆಗೆಯುತ್ತೇನೆ ಅಂತ ಮಾತನಾಡುವುದೇ ಅಪರಾಧ. ಕುಮಾರಸ್ವಾಮಿ ಯಾವತ್ತು ನಾನು ಮುಖ್ಯಮಂತ್ರಿ ಆಗುವುದಿಲ್ಲ ಅಂತಾರೆ, 123 ಸೀಟ್ ಬರದಿದ್ದರೆ ರಾಜಕೀಯ ನಿವೃತ್ತಿ ಆಗುವೆ ಎಂದಿದ್ದರು. ಅವರು ಆಡಿದ ಮಾತಿನಂತೆ ನಡೆದುಕೊಂಡರಾ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಪ್ರಶ್ನಿಸಿದರು.

ಸರ್ಕಾರ ಬೀಳುತ್ತೆ ಅಂತ ಕುಮಾರಸ್ವಾಮಿಗೆ ಜಪ ಮಾಡೋಕೆ ಹೇಳಿ. ಏನಾದರೂ ಅಲುಗಾಡಿದರೆ ಕೇಂದ್ರ ಸರ್ಕಾರ ಅಲುಗಾಡಬೇಕಷ್ಟೇ. ಇಲ್ಲಿ ನಾವು ಮೆಜಾರಿಟಿ ಇದ್ದೇವೆ. ಕೇಂದ್ರ ಬಿಜೆಪಿಯಲ್ಲಿ ಮೆಜಾರಿಟಿ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios