ಮತದಾರರ ಹೆಸರು ಎಲ್ಲಿ ಡಿಲೀಟ್ ಆಗಿದೆ, ಎಲ್ಲಿ ಸೇರ್ಪಡೆ ಆಗಿದೆ ತೋರಿಸಿ: ಮುನಿರತ್ನ
‘ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಮತದಾರರ ಪಟ್ಟಿಯಿಂದ ಮತದಾರರ ಹೆಸರನ್ನು ಅಕ್ರಮವಾಗಿ ಡಿಲೀಟ್ ಮಾಡುವಂಥ ಕೀಳುಮಟ್ಟಕ್ಕೆ ನಾನು ಇಳಿದಿಲ್ಲ. ಅದೇನಿದ್ದರೂ ಅವರ ರೂಢಿ. ಅವರ ಆರೋಪ ಸತ್ಯವಾಗಿದ್ದರೆ ಮತದಾರರ ಪಟ್ಟಿತರಲಿ’ ಎಂದು ಸ್ಥಳೀಯ ಶಾಸಕರೂ ಆಗಿರುವ ತೋಟಗಾರಿಕಾ ಸಚಿವ ಮುನಿರತ್ನ ಸವಾಲು ಹಾಕಿದ್ದಾರೆ.
ಬೆಂಗಳೂರು (ಡಿ.08): ‘ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಮತದಾರರ ಪಟ್ಟಿಯಿಂದ ಮತದಾರರ ಹೆಸರನ್ನು ಅಕ್ರಮವಾಗಿ ಡಿಲೀಟ್ ಮಾಡುವಂಥ ಕೀಳುಮಟ್ಟಕ್ಕೆ ನಾನು ಇಳಿದಿಲ್ಲ. ಅದೇನಿದ್ದರೂ ಅವರ ರೂಢಿ. ಅವರ ಆರೋಪ ಸತ್ಯವಾಗಿದ್ದರೆ ಮತದಾರರ ಪಟ್ಟಿತರಲಿ’ ಎಂದು ಸ್ಥಳೀಯ ಶಾಸಕರೂ ಆಗಿರುವ ತೋಟಗಾರಿಕಾ ಸಚಿವ ಮುನಿರತ್ನ ಸವಾಲು ಹಾಕಿದ್ದಾರೆ. ಆರ್.ಆರ್.ನಗರ ಮತದಾರ ಪಟ್ಟಿಪರಿಷ್ಕರಣೆಯಲ್ಲಿ ಅಕ್ರಮವಾಗಿದೆ ಎಂದು ಸಂಸದ ಡಿ.ಕೆ.ಸುರೇಶ್ ಅವರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ ಬೆನ್ನಲ್ಲೇ ಬುಧವಾರ ಮಧ್ಯಾಹ್ನ ವಿಕಾಸಸೌಧದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮುನಿರತ್ನ ಮಾತನಾಡಿದರು.
ಮತದಾರರ ಪಟ್ಟಿ ಎಲ್ಲಿ ಡಿಲೀಟ್ ಆಗಿದೆ, ಎಲ್ಲಿ ಸೇರ್ಪಡೆಯಾಗಿದೆ ಎಂಬುದನ್ನು ಸಂಸದ ಸುರೇಶ್ ಅವರು ತೋರಿಸಲಿ. ಮುನಿರತ್ನ ಅಂತಹ ಕೀಳು ರಾಜಕಾರಣ ಮಾಡುವುದಿಲ್ಲ. ಅಂತಹ ರಾಜಕಾಣವೂ ನನಗೆ ಬೇಕಿಲ್ಲ. ಅದೇನಿದ್ದರೂ ನಿಮ್ಮ ರೂಢಿ. ನಿಮಗೆ ಅಂತಹ ಅಭ್ಯಾಸಗಳಿವೆ ಎಂದು ಕಿಡಿಕಾರಿದರು. ಸಂಸದ ಎಂದು ಬಾಯಿಗೆ ಬಂದಂತೆ ಮಾತನಾಡುವುದಲ್ಲ. ತೇಜೋವಧೆ ಮಾಡುವ ಸಣ್ಣ ರಾಜಕೀಯವನ್ನು ಬಿಟ್ಟು ಜೀವನ ಮಾಡಿ. ನಿಮ್ಮ ಜತೆ ಇದ್ದಾಗ ಪವಿತ್ರನಾಗಿದ್ದೆ. ಈಗ ಅಪವಿತ್ರನಾಗಿದ್ದೇನೆಯೇ? ತೇಜೋವಧೆ ಮಾಡಿ ಚುನಾವಣೆ ಗೆಲ್ಲುತ್ತೇನೆ ಎನ್ನುವುದನ್ನು ಬಿಟ್ಟುಬಿಡಿ. ನೀವು ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಏನೆಂಬುದನ್ನು ಜನರ ಮುಂದಿಡಿ. ಬನ್ನಿ ಜನರ ಮುಂದೆ ಹೋಗೋಣ ನಮ್ಮ ಕೆಲಸಗಳನ್ನು ಜನರೇ ತೀರ್ಮಾನಿಸಲಿ ಎಂದು ಸವಾಲು ಹಾಕಿದರು.
ಕಾಂಗ್ರೆಸ್‌ನಲ್ಲಿದ್ದರೆ ಡಿಕೆಶಿ ಸಿಎಂ ಆಗುವುದು ಅನುಮಾನ: ಸಚಿವ ಮುನಿರತ್ನ
ಆಂಧ್ರದಿಂದ ಮತದಾರರನ್ನು ಸೇರಿಸಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಆಂಧ್ರಪ್ರದೇಶದ ಜತೆ ಯಾರಿಗೆ ನಂಟಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಮಲ್ಲೇಶ್ವರದಲ್ಲಿ ನನ್ನದು ಇದು ಐದನೇ ತಲೆಮಾರು ಎಂಬುದು ಗೊತ್ತಿರಲಿ. ನಿಮಗೆ ಗೊತ್ತಿರದಿದ್ದರೆ ನಿಮ್ಮ ಅಣ್ಣನ ಕೇಳಿ, ನಿಮಗಿಂತ ಮೊದಲೇ ಅವರು ಬೆಂಗಳೂರಿಗೆ ಬಂದಿದ್ದು. ನಾನು ಮಲ್ಲೇಶ್ವರದಲ್ಲೇ ಹುಟ್ಟಿದ್ದು ಎಂದು ತಮ್ಮ ಮೂಲದ ಬಗ್ಗೆ ಸ್ಪಷ್ಟನೆ ನೀಡುತ್ತಾ ಟೀಕಾಪ್ರಹಾರ ನಡೆಸಿದರು. ನಾನು ನಾಮಪತ್ರ ಸಲ್ಲಿಕೆ ಮಾಡಿ ಕ್ಷೇತ್ರದಲ್ಲಿ ಪ್ರಚಾರ ಮಾಡುವುದಿಲ್ಲ. ನಿಮ್ಮ ಅಭ್ಯರ್ಥಿಯಿಂದಲೂ ಪ್ರಚಾರ ಮಾಡಿಸಬೇಡಿ. ಯಾರು ಗೆಲ್ಲುತ್ತಾರೋ ನೋಡೋಣ ಎಂದು ಇದೇ ವೇಳೆ ಮುನಿರತ್ನ ಅವರು ಸುರೇಶ್ ಅವರಿಗೆ ಸವಾಲು ಹಾಕಿದರು.
Kolar: ಜಿಲ್ಲೆಯ ಆರೂ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಿಸಬೇಕು: ಸಚಿವ ಮುನಿರತ್ನ
ಬೇಕಿದ್ರೆ ಕೂಲಿ ಮಾಡ್ತೀನಿ, ಕಾಂಗ್ರೆಸ್‌ಗೆ ಹೋಗಲ್ಲ: ಬೇಕಾದರೆ ರಾಜಕೀಯ ಬಿಟ್ಟು ಕೂಲಿ ಮಾಡಿಕೊಂಡು ಇರುತ್ತೇನೆ ಹೊರತು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ವಾಪಸು ಹೋಗುವುದಿಲ್ಲ ಎಂದು ಸಚಿವ ಮುನಿರತ್ನ ಸ್ಪಷ್ಟವಾಗಿ ಹೇಳಿದ್ದಾರೆ. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಬಂದರೆ ಸಾಕು ಎಂದು ಕಾಂಗ್ರೆಸ್‌ನವರು ಕಾಯುತ್ತಿದ್ದಾರೆ. ಇವರ ಸಹವಾಸದಿಂದ ಆಚೆ ಬಂದು ಬಹಳ ನೆಮ್ಮದಿಯಾಗಿದ್ದೇವೆ. ಬಿಜೆಪಿಯಲ್ಲಿ ನಮ್ಮನ್ನು ಬಹಳ ಪ್ರೀತಿಸುತ್ತಾರೆ. ಹೀಗಾಗಿ ಕಾಂಗ್ರೆಸ್‌ಗೆ ಹೋಗಲ್ಲ ಎಂದು ಹೇಳಿದರು.