ತಾವು ಯಾರ ಚೇಲಾ ಅಲ್ಲ, ಸಿದ್ದರಾಮಯ್ಯ ಅವರಿಗಿಂತ ಮುಂಚೆಯೇ ಕಾಂಗ್ರೆಸ್‌ಗೆ ಬಂದವರು, ಆರು ಬಾರಿ ಶಾಸಕ, ಒಂದು ಬಾರಿ ಸಂಸದನಾಗಿದ್ದೇನೆ, ತಮ್ಮ ಹೆಗಲ ಮೇಲೆ ಬಂದೂಕು ಇಟ್ಟು ಗುಂಡು ಹೊಡೆಯಬೇಕಿಲ್ಲ. ಯಾರಿಗಾದರೂ ಗುಂಡು ಹೊಡೆಯಬೇಕಾದರೆ ನಾನೇ ಹೊಡೆಯುತ್ತೇನೆ. ತಮ್ಮದು ವಿಜಯಪುರ, ತಮಗೆ ಆ ಶಕ್ತಿ ಇದೆ ಎಂದ ಎಂ.ಬಿ. ಪಾಟೀಲ್‌ 

ಬೆಂಗಳೂರು(ಜೂ.21): ತಾವು ಯಾರಿಗೂ ಚೇಲಾ ಅಲ್ಲ, ಕಾಂಗ್ರೆಸ್‌ ಪಕ್ಷದ ಚೇಲಾ. ಬಿಜೆಪಿ ಸಂಸದ ಪ್ರತಾಪ್‌ ಸಿಂಹ ಅವರಿಗೆ ಚೇಲಾಗಿರಿ ಮಾಡಿದ ಅನುಭವವಿರಬೇಕು, ತಮ್ಮ ಬಗ್ಗೆ ನಿತ್ಯ ಮಾತನಾಡುತ್ತಿರುವುದನ್ನು ನೋಡಿದರೆ ಅವರ ಮನಸ್ಥಿತಿ ಚಿಂತಾಜನಕವಾಗಿದೆ ಎಂದು ಸಚಿವ ಎಂ.ಬಿ. ಪಾಟೀಲ್‌ ತೀಕ್ಷ್ಣವಾಗಿ ಟೀಕಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಮುಖಂಡ ಬಿ.ಎಲ್‌.ಸಂತೋಷ್‌ ಅವರನ್ನು ಉದ್ದೇಶಿಸಿ, ‘ರಾಜ್ಯದ ಬಿಜೆಪಿ ಅನೇಕ ಲಿಂಗಾಯತ ನಾಯಕರನ್ನು ಮುಗಿಸಿದ್ದೀರಿ, ಈಗ ಬೊಮ್ಮಾಯಿ ಅವರನ್ನು ಮುಗಿಸಲು ಬಸನಗೌಡ ಪಾಟೀಲ್‌ ಯತ್ನಾಳ ಅವರನ್ನು ಎತ್ತಿಕಟ್ಟಿ ಜೊತೆಗೆ ನಿಮ್ಮ ಪಟ್ಟಾಶಿಷ್ಯ ಪ್ರತಾಪ್‌ ಸಿಂಹ ಅವರ ಹೆಗಲ ಮೇಲೆ ಬಂದೂಕು ಇಟ್ಟಿರುವುದನ್ನು ರಾಜ್ಯದ ಜನತೆ ನೋಡುತ್ತಿದ್ದಾರೆ ಎಂದು ಎಂ.ಬಿ. ಪಾಟೀಲ್‌ ಇತ್ತೀಚೆಗೆ ಟ್ವೀಟರ್‌ನಲ್ಲಿ ಟೀಕಿಸಿದ್ದರು. ಇದಕ್ಕೆ ಪ್ರತಿಯಾಗಿ ಪ್ರತಾಪ್‌ ಸಿಂಹ ಅವರು ಬ್ರಾಹ್ಮಣರ ಮೇಲೆ ಯಾಕಿಷ್ಟು ದ್ವೇಷ, ಎಂ.ಬಿ.ಪಾಟೀಲ್‌ ಸಿದ್ದರಾಮಯ್ಯ ಚೇಲಾ ಎಂದೆಲ್ಲಾ ಟೀಕಿಸಿದ್ದರು.

ಸಚಿವ ಎಂ.ಬಿ.ಪಾಟೀಲ್‌ಗೆ ಸಿಕ್ಕಿರೋ ಖಾತೆಯಲ್ಲಿ ಬರೀ ಚಿಲ್ಲರೆ ಸಿಗುತ್ತದೆ: ಪ್ರತಾಪ್‌ ಸಿಂಹ

ಪ್ರತಾಪ ಸಿಂಹ ತಮ್ಮ ಬಗ್ಗೆ ಮಾಡಿರುವ ಟೀಕೆಗಳಿಗೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ತಾವು ಯಾರ ಚೇಲಾ ಅಲ್ಲ, ಸಿದ್ದರಾಮಯ್ಯ ಅವರಿಗಿಂತ ಮುಂಚೆಯೇ ಕಾಂಗ್ರೆಸ್‌ಗೆ ಬಂದವರು, ಆರು ಬಾರಿ ಶಾಸಕ, ಒಂದು ಬಾರಿ ಸಂಸದನಾಗಿದ್ದೇನೆ, ತಮ್ಮ ಹೆಗಲ ಮೇಲೆ ಬಂದೂಕು ಇಟ್ಟು ಗುಂಡು ಹೊಡೆಯಬೇಕಿಲ್ಲ. ಯಾರಿಗಾದರೂ ಗುಂಡು ಹೊಡೆಯಬೇಕಾದರೆ ನಾನೇ ಹೊಡೆಯುತ್ತೇನೆ. ತಮ್ಮದು ವಿಜಯಪುರ, ತಮಗೆ ಆ ಶಕ್ತಿ ಇದೆ ಎಂದರು.

ಬ್ರಾಹ್ಮಣರನ್ನು ಟೀಕಿಸಿಲ್ಲ:

ಬಿಜೆಪಿ ಮುಖಂಡ ಬಿ.ಎಲ್‌. ಸಂತೋಷ್‌ ಅವರ ಟ್ವೀಟ್‌ಗೆ ಟೀಕೆ ಮಾಡಿದ್ದಕ್ಕೆ ಬ್ರಾಹ್ಮಣ ಸಮಾಜದ ಮೇಲೆ ದ್ವೇಷ, ಅಪಮಾನ ಮಾಡಿದ್ದೇನೆ, ಒಕ್ಕಲಿಗರ ಮೇಲೆ ಅಟ್ಯಾಕ್‌ ಮಾಡುತ್ತಿದ್ದೇನೆ ಎಂದೆಲ್ಲಾ ಪ್ರತಾಪ ಸಿಂಹ ಟೀಕಿಸಿದ್ದಾರೆ. ಆದರೆ ಸಂತೋಷ್‌ ಬಗ್ಗೆ ಮಾಡಿದ ಟೀಕೆ ರಾಜಕೀಯ ಸ್ವರೂಪದ್ದಾಗಿದೆ, ತಾವು ಎಂದೂ ಸಹ ಬ್ರಾಹ್ಮಣ ಸಮಾಜಕ್ಕೆ ಅಪಮಾನ ಮಾಡುವ ಕೆಲಸ ಮಾಡಿಲ್ಲ. ವಿಜಯಪುರ ಜಿಲ್ಲೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಬ್ರಾಹ್ಮಣ ಸಮಾಜವಿದೆ. ಶೇ.90 ರಷ್ಟುಜನ ತಮಗೆ ಮತ ಹಾಕಿ ಗೆಲ್ಲಿಸಿದ್ದಾರೆ. ಬೇಕಾದರೆ ವಿಜಯಪುರಕ್ಕೆ ಹೋಗಿ ನೋಡಲಿ, ಬ್ರಾಹ್ಮಣ ಸಮುದಾಯದ ಜೊತೆ ಉತ್ತಮ ಸಂಬಂಧ ಇಟ್ಟುಕೊಂಡಿದೆ ಎಂದು ಹೇಳಿದರು.

ಸಂತೋಷ್‌ ಸಾಕಿದ ಚೇಳು:

ತಮ್ಮನ್ನು ಸಿದ್ದರಾಮಯ್ಯ ಚೇಲಾ ಎಂದಿದ್ದಕ್ಕೆ ತೀಕ್ಷ$್ಣವಾಗಿ ಪ್ರತಿಕ್ರಿಯಿಸಿದ ಎಂ.ಬಿ.ಪಾಟೀಲ್‌, ಪ್ರತಾಪ್‌ ಸಿಂಹ ಸಂತೋಷ್‌ ಸಾಕಿಕೊಂಡಿರುವ ಚೇಳು, ಅವರು ಇಂತಹ ಹಲವು ಚೇಳುಗಳನ್ನು ಸಾಕಿಕೊಂಡಿದ್ದಾರೆ. ಹೀಗಾಗಿ ದಿನವೂ ಇಂತಹ ಚೇಳುಗಳನ್ನು ಬಿಟ್ಟು ಮಜಾ ತೆಗೆದುಕೊಳ್ಳುತ್ತಿದ್ದಾರೆ ಎಂದು ಕುಟುಕಿದರು.

ಸಂಚಲನ ಸೃಷ್ಟಿಸಿದೆ ಡಿ.ಕೆ. ಸುರೇಶ್ ವೈರಾಗ್ಯದ ಹೇಳಿಕೆ: ಲೋಕಸಭೆ ಸನಿಹದಲ್ಲೇ ಕಾಂಗ್ರೆಸ್‌ಗೆ ಶಾಕ್ !

ಅನಂತ್‌ರಿಂದ ಕಲಿಯಲಿ:

ಹಿಂದೆ ಅನಂತಕುಮಾರ್‌ ಅವರು ಕೇಂದ್ರ ಸಚಿವರಾಗಿದ್ದಾಗ ರಾಜ್ಯದ ಕೆಲಸವಿದ್ದಾಗ ಪಕ್ಷದ ಮಿತಿ ಮೀರಿ ರಾಜ್ಯದ ಹಿತ ಕಾಯುತ್ತಿದ್ದರು, ಸಚಿವರು, ಅಧಿಕಾರಿಗಳ ಬಳಿ ಕರೆದುಕೊಂಡು ಹೋಗುತ್ತಿದ್ದರು. ಪ್ರತಾಪ್‌ ಸಿಂಹ ತರದ ವ್ಯಕ್ತಿಗಳು ಅನಂತಕುಮಾರ್‌ ಅವರಿಂದ ಕಲಿಯಬೇಕು ಎಂದು ಸಲಹೆ ನೀಡಿದರು.

ಮೋದಿ ಹತ್ತಿರ ಕೇಳಲಿ:

ತಮ್ಮದು ಚಿಲ್ಲರೆ ಖಾತೆ ಎಂದು ಪ್ರತಾಪ್‌ ಸಿಂಹ ಹೇಳಿದ್ದಾರೆ, ಆದರೆ ಕೈಗಾರಿಕೆ ಖಾತೆ ಬಗ್ಗೆ ಅವರು ಪ್ರಧಾನಿ ಮೋದಿ ಅವರ ಹತ್ತಿರ ಕೇಳಿ ತಿಳಿದುಕೊಂಡರೆ ಒಳ್ಳೆಯದು, ಖಾತೆ ಯಾವುದಾದರೇನು ನಾವು ಮಾಡುವ ಕೆಲಸ ಮುಖ್ಯವಾಗಿರುತ್ತದೆ. ಪ್ರತಾಪ್‌ ಸಿಂಹ ಅವರು ಇದೆನ್ನೆಲ್ಲಾ ಬಿಟ್ಟು ಮುಂದೆ ನಿಂತು ಅಕ್ಕಿ ಕೊಡಿಸುವ ಪ್ರಯತ್ನ ಮಾಡಲಿ ಎಂದರು.