Asianet Suvarna News Asianet Suvarna News

ಸಂಸದ ಅನಂತಕುಮಾರ್ ಹೆಗಡೆ ಕೆಟ್ಟ ಹಾವು: ಸಚಿವ ಮಧು ಬಂಗಾರಪ್ಪ ವಾಗ್ದಾಳಿ

ಕೆನರಾ ಸಂಸದ ಅನಂತಕುಮಾರ್ ಹೆಗಡೆ ಕೆಟ್ಟ ಹಾವು ಇದ್ದಂತೆ. ಜನರಿಂದ ಆಯ್ಕೆಯಾದ ನಂತರ ಸದನದಲ್ಲಿ ಕಾಣ ಸಿಗದವರು ಲೋಕಸಭಾ ಚುನಾವಣೆ ಹತ್ತಿರಾಗುತ್ತಿದ್ದಂತೆ, ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸದಲ್ಲಿ ನಿರತರಾಗಿ ವಿಷ ಬೀಜ ಬಿತ್ತುತ್ತಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದರು. 

Minister Madhu Bangarappa Slams On MP Ananth Kumar Hegde At Soraba gvd
Author
First Published Jan 17, 2024, 6:23 AM IST

ಸೊರಬ (ಜ.17): ಕೆನರಾ ಸಂಸದ ಅನಂತಕುಮಾರ್ ಹೆಗಡೆ ಕೆಟ್ಟ ಹಾವು ಇದ್ದಂತೆ. ಜನರಿಂದ ಆಯ್ಕೆಯಾದ ನಂತರ ಸದನದಲ್ಲಿ ಕಾಣ ಸಿಗದವರು ಲೋಕಸಭಾ ಚುನಾವಣೆ ಹತ್ತಿರಾಗುತ್ತಿದ್ದಂತೆ, ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸದಲ್ಲಿ ನಿರತರಾಗಿ ವಿಷ ಬೀಜ ಬಿತ್ತುತ್ತಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದರು. ತಾಲೂಕಿನ ಬಂಕಸಾಣ ಗ್ರಾಮದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಯಾರೇ ಆಗಿರಲಿ, ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸದಲ್ಲಿ ನಿರತರಾಗಿ ರಾಜಕೀಯ ಲಾಭ ಪಡೆಯುವ ಹುನ್ನಾರ ನಡೆಸಬಾರದು. ಕಳೆದ ಲೋಕಸಭಾ ಚುನಾವಣೆಯಲ್ಲಿ ಅನಂತಕುಮಾರ ಹೆಗಡೆ ಅವರನ್ನು ಜನತೆ ವಿಶ್ವಾಸವಿಟ್ಟು ಆಯ್ಕೆ ಮಾಡಿದ್ದಾರೆ. 

ಆದರೆ, ಸದನದಲ್ಲಿ ಎಲ್ಲಿಯೂ ಕಾಣದ ಅವರು ಆರಿಸಿದ ಜನತೆಯ ವಿಶ್ವಾಸಕ್ಕೆ ದ್ರೋಹ ಬಗೆದಿದ್ದಾರೆ. ಪ್ರಜಾಪ್ರಭುತ್ವದ ಅಡಿಯಲ್ಲಿ ಜನಪ್ರತಿನಿಧಿಯಾಗಿ ಆಯ್ಕೆಯಾದವರು ಡಾ.ಅಂಬೇಡ್ಕರ್ ರಚಿಸಿದ ಸಂವಿಧಾನ ಬದಲಾವಣೆ ಮಾಡುತ್ತೇವೆ ಎನ್ನುತ್ತಾರೆ. ಮುಖ್ಯಮಂತ್ರಿ ಕುರಿತು ಏಕವಚನದಲ್ಲಿ ಮಾತನಾಡುತ್ತಾರೆ. ಇದು ನೀಚತನದ ಪರಮಾವಧಿ. ಇಂಥವರಿಗೆ ಮುಂದಿನ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸುವ ಅಗತ್ಯವಿದೆ ಎಂದರು. ನಾವ್ಯಾರೂ ರಾಮ ಭಕ್ತರಲ್ಲವೇ ಎಂದು ಪ್ರಶ್ನಿಸಿದ ಅವರು, ನಾವೂ ರಾಮ, ಕೃಷ್ಣರ ಭಕ್ತರು. ಪೂಜೆ ಮಾಡುತ್ತೇವೆ, ಕೈ ಮುಗಿದು ಆರಾಧಿಸುತ್ತೇವೆ. ಎಲ್ಲ ದೇವರು, ಧರ್ಮಗಳನ್ನು ಗೌರವಿಸುವುದು ಮನುಷ್ಯತ್ವದ ಸಂಕೇತ ಎಂದರು.

ಶಾಲಾ ಶೌಚಾಲಯ ಸ್ವಚ್ಛತೆಗೆ ಶೀಘ್ರ ಪರ್‍ಯಾಯ ವ್ಯವಸ್ಥೆ: ಸಿಎಂ ಜತೆ ಚರ್ಚಿಸಿ ಕ್ರಮವೆಂದ ಮಧು ಬಂಗಾರಪ್ಪ

351 ಹಳ್ಳಿಗಳಿಗೆ ಕುಡಿಯುವ ನೀರು: ಕ್ಷೇತ್ರದಲ್ಲಿ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲಾಗಿದ್ದು, ಶರಾವತಿ ಹಿನ್ನೀರಿನಿಂದ ನೆರೆಯ ಶಿರಾಳಕೊಪ್ಪ ಸೇರಿದಂತೆ ತಾಲೂಕಿನಲ್ಲಿ ಸಮಗ್ರ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಶಿರಾಳಕೊಪ್ಪಕ್ಕೆ ನೀರಾವರಿ ಯೋಜನೆ ಕಲ್ಪಿಸುವ ಕುರಿತು ಯೋಚಿಸಿರಲಿಲ್ಲ. ತಾವು ಸಚಿವರಾದ ಬಳಿಕ ಶಿರಾಳಕೊಪ್ಪ ಒಳಗೊಂಡಂತೆ ಆನವಟ್ಟಿ ಹಾಗೂ ಸೊರಬ ಸೇರಿದಂತೆ ತಾಲೂಕಿನ 351 ಹಳ್ಳಿಗಳಿಗೂ ಸಮಗ್ರ ಕುಡಿಯುವ ನೀರಿನ ವ್ಯವಸ್ಥೆಯನ್ನು ಕೈಗೊಳ್ಳಲಾಗುತ್ತಿದೆ. ಪಾದಯಾತ್ರೆ ನಡೆಸಿದ ಪರಿಣಾಮ ಮೂಡಿ ಮೂಗೂರು ಏತ ನೀರಾವರಿ ಯೋಜನೆಗಳಿಗೆ ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಡಿ.ಕೆ. ಶಿವಕುಮಾರ್ ಅನುದಾನ ನೀಡಿದ್ದರು. ಈ ಕಾರಣದಿಂದ ಯೋಜನೆಗಳು ಅನುಷ್ಠಾನಗೊಂಡಿವೆ ಎಂದರು.

ತಾಲೂಕಿನ ದಂಡಾವತಿ ನೀರಾವರಿ ಯೋಜನೆಗೆ ಪರ್ಯಾಯವಾಗಿ ಸುಮಾರು ₹700 ಕೋಟಿ ವೆಚ್ಚದಲ್ಲಿ ಎಡ ಮತ್ತು ಬಲ ಭಾಗಗಳಲ್ಲಿ ಸುಮಾರು 28 ಬ್ಯಾರೇಜ್ ಮತ್ತು ಸೇತುವೆ ನಿರ್ಮಿಸಿ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು. ನದಿಯಲ್ಲಿ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಹಿಡಿದಿಟ್ಟು ಸದ್ಬಳಕೆ ಮಾಡಿಕೊಳ್ಳುವ ಈ ಯೋಜನೆಯನ್ನು ಶೀಘ್ರದಲ್ಲೇ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.

ಕಾಂಗ್ರೆಸ್ ನುಡಿದಂತೆ ನಡೆದಿದೆ: ರಾಜ್ಯ ಸರ್ಕಾರ ಚುನಾವಣೆ ಪೂರ್ವದಲ್ಲಿ ನುಡಿದಂತೆ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಪ್ರತಿಯೊಬ್ಬ ಫಲಾನುಭವಿಗಳಿಗೂ ಯೋಜನೆಗಳು ತಲುಪಬೇಕು ಎನ್ನುವ ಉದ್ದೇಶದಿಂದ ಜಿಲ್ಲೆಗೆ ಐಎಎಸ್ ಮತ್ತು ತಾಲೂಕಿಗೆ ಕೆಎಎಸ್ ಅಧಿಕಾರಿಗಳನ್ನು ನೇಮಿಸಲಾಗುತ್ತಿದೆ. ಈ ಮೂಲಕ ಅರ್ಹರನ್ನು ಗುರುತಿಸಿ ಯೋಜನೆಗಳನ್ನು ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಈ ಬಗ್ಗೆ ಸಭೆ ನಡೆಸಿ ನೋಡಲ್ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವುದಾಗಿ ತಿಳಿಸಿದರು.

ನಿಜವಾದ ರಾಮ ಭಕ್ತರು ಕಾಂಗ್ರೆಸಿಗರು, ಅವಕಾಶ ಸಿಕ್ಕಾಗ ಅಯೋಧ್ಯೆಗೆ ಹೋಗುತ್ತೇನೆ: ಮಧು ಬಂಗಾರಪ್ಪ

ಸಂಸದ ಬಿವೈಆರ್‌ ವಿರೋಧ: ಜಿಲ್ಲಾ ಕೇಂದ್ರದಲ್ಲಿ ನಡೆದ ಯುವನಿಧಿ ಯೋಜನೆ ಚಾಲನೆ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಭಾಷಣ ಮಾಡಿದ ಸಂಸದ ಬಿ.ವೈ. ರಾಘವೇಂದ್ರ ಅವರು ಕೆಲವೇ ಗಂಟೆಗಳಲ್ಲಿ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಯಶಸ್ವಿಯನ್ನು ಸಹಿಸಲಾರದೆ ವಿಚಲಿತರಾಗಿ ಮಾತಿನ ಹಿಡಿತ ಕಳೆದುಕೊಂಡು ಸಲ್ಲದ ಆರೋಪ ಮಾಡುತ್ತಿದ್ದಾರೆ. ತಾವು ಸಚಿವರಾಗುವ ಮೊದಲು ಸಾಧನೆ ಏನೆಂಬುದನ್ನು ತಿಳಿಸುತ್ತೇನೆ. ಆದರೆ, ಬಿ.ವೈ. ರಾಘವೇಂದ್ರ ಅವರು ಸಂಸದರಾಗುವ ಮೊದಲು ಸಾಧನೆ ಏನಿದೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು. ಕಾಂಗ್ರೆಸ್ ಮುಖಂಡರಾದ ಕೆ.ಪಿ.ರುದ್ರಗೌಡ, ಸದಾನಂದಗೌಡ, ಎಚ್‌.ಗಣಪತಿ ಇತರರು ಇದ್ದರು.

Follow Us:
Download App:
  • android
  • ios