ನಾನು ಲಕ್ಷ್ಮೀ, ನಿಮ್ಮ ಮನೆಗೆ ಗೃಹ ಲಕ್ಷ್ಮೀ: ಗೃಹಜ್ಯೋತಿ ಕಲಿಸಿದ ಪಾಠದಿಂದಾಗಿ ಗೃಹಲಕ್ಷ್ಮೀ ವಿಳಂಬ
ಗೃಹಲಕ್ಷ್ಮೀ ಯೋಜನೆ ವಿಳಂಬ ಏಕೆ? ಯೋಜನೆ ಜಾರಿ ಸವಾಲುಗಳೇನು? ಯಾವಾಗ ಜಾರಿ? ಮಹಿಳಾ ರಾಜಕಾರಣಿ ಎದುರಿಸುವ ಸವಾಲುಗಳೇನು? ಮಹಿಳಾ ಮೀಸಲಾತಿ ಬೇಕೆ? ರಾಜ್ಯದ ಪ್ರಥಮ ಮಹಿಳಾ ಮುಖ್ಯಮಂತ್ರಿ ರೇಸ್‌ನಲ್ಲಿ ತಾವು ಇದ್ದೀರಾ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರಿಸಲು ಕನ್ನಡಪ್ರಭದೊಂದಿಗೆ ಮುಖಾಮುಖಿಯಾಗಿದ್ದಾರೆ ಮಹಿಳಾ ಮತ್ತು ಮಕ್ಕಳ ಖಾತೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್.
ಸಂದರ್ಶನ: ಶ್ರೀಕಾಂತ್ ಎನ್.ಗೌಡಸಂದ್ರ
ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದೆ ಎರಡೂವರೆ ದಶಕಗಳ ಸುದೀರ್ಘ ಹೋರಾಟದಿಂದ ವಿಧಾನಸೌಧ ಮೂರನೇ ಮಹಡಿ ಮುಟ್ಟಿದವರು ಲಕ್ಷ್ಮೀ ಹೆಬ್ಬಾಳ್ಕರ್. ಘಟಾನುಘಟಿಗಳು ಸೋಲಿಸುವ ಪಣ ತೊಟ್ಟರೂ ಕೆಚ್ಚೆದೆಯಿಂದ ಹೋರಾಡಿ ಗೆದ್ದು ಬೀಗಿದ ‘ಫೈಟರ್’. ಸಾಮಾನ್ಯ ಕಾರ್ಯಕರ್ತೆಯಾಗಿ, ಜಿಲ್ಲಾ ಕಾಂಗ್ರೆಸ್, ರಾಜ್ಯ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆಯಾಗಿ, ಎರಡು ಬಾರಿ ಶಾಸಕಿಯಾಗಿ ಆಯ್ಕೆಯಾಗಿ, ತಮ್ಮ ಸಹೋದರನನ್ನು ಪರಿಷತ್ ಸದಸ್ಯರನ್ನಾಗಿ ಮಾಡಿ, ಇದೀಗ ಮೊದಲ ಬಾರಿಗೆ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದಾರೆ.
‘ಗೃಹ ಲಕ್ಷ್ಮೀ’ಯಂಥ ಮಹತ್ವಾಕಾಂಕ್ಷಿ ಯೋಜನೆ ಅನುಷ್ಠಾನದ ಜವಾಬ್ದಾರಿ ಹೊತ್ತಿದ್ದಾರೆ. ಸರ್ಕಾರ ಅಸ್ತಿತ್ವಕ್ಕೆ ಬಂದು 24 ಗಂಟೆಯೊಳಗೆ ಜಾರಿಯಾಗುತ್ತದೆ ಎಂಬ ಆಶ್ವಾಸನೆ ಹೊಂದಿದ್ದ ಈ ಗೃಹಲಕ್ಷ್ಮೀ ಯೋಜನೆ ವಿಳಂಬ ಏಕೆ? ಯೋಜನೆ ಜಾರಿ ಸವಾಲುಗಳೇನು? ಯಾವಾಗ ಜಾರಿ? ಮಹಿಳಾ ರಾಜಕಾರಣಿ ಎದುರಿಸುವ ಸವಾಲುಗಳೇನು? ಮಹಿಳಾ ಮೀಸಲಾತಿ ಬೇಕೆ? ರಾಜ್ಯದ ಪ್ರಥಮ ಮಹಿಳಾ ಮುಖ್ಯಮಂತ್ರಿ ರೇಸ್‌ನಲ್ಲಿ ತಾವು ಇದ್ದೀರಾ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರಿಸಲು ಕನ್ನಡಪ್ರಭದೊಂದಿಗೆ ಮುಖಾಮುಖಿಯಾಗಿದ್ದಾರೆ ಮಹಿಳಾ ಮತ್ತು ಮಕ್ಕಳ ಖಾತೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್.
ಮಾಜಿ ಸಚಿವ ಸೋಮಣ್ಣ ದೂರಿನ ಹಿನ್ನೆಲೆ: ವಿಜಯೇಂದ್ರ ಆಪ್ತ ರುದ್ರೇಶ್ ಸೇರಿದಂತೆ 15 ಜನರಿಗೆ ಬಿಜೆಪಿ ನೋಟಿಸ್
* ಗೃಹಲಕ್ಷ್ಮಿಯ 24 ಗಂಟೆ ಗಡುವು ಏನಾಯ್ತು?
‘ಗೃಹ ಜ್ಯೋತಿ’ ಯೋಜನೆಯ ನೋಂದಣಿ ವೇಳೆ ಸ್ವಲ್ಪ ತೊಂದರೆಯಾಯಿತು. ತಂತ್ರಾಂಶದ ಮೇಲೆ ಒತ್ತಡ ಹೆಚ್ಚಾಗಿ ಜನರಿಗೆ ಸಮಸ್ಯೆಯಾಯಿತು. ಇಂತಹ ನ್ಯೂನತೆಗಳು ಗೃಹಲಕ್ಷ್ಮೀ ಯೋಜನೆಯಲ್ಲೂ ಆಗಬಾರದು ಎಂಬ ಮುನ್ನೆಚ್ಚರಿಕೆ ವಹಿಸಿದ್ದೇವೆ. ಯಾವುದೇ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ ಪರಿಪೂರ್ಣ ಸಿದ್ಧತೆ ನಡೆಸಲು ಮುಂದಾದೇವು. ಹೀಗಾಗಿ ತುಸು ವಿಳಂಬವಾಗಿದೆ.
* ಈಗಲೇ ಹಣಹಾಕಲು ಸಮಸ್ಯೆಯೇನು?
ಗೃಹ ಜ್ಯೋತಿ ನೋಂದಣಿ ಅನುಭವ, ಸಾಕಷ್ಟುಕಲಿಸಿದೆ. ಇದೀಗ ಅನ್ನಭಾಗ್ಯದ ಹಣ ಹಾಕಲು ಚಾಲನೆ ನೀಡುತ್ತಿದ್ದಾರೆ. ಅದೇ ಖಾತೆಗೆ ನಾವು ಗೃಹ ಲಕ್ಷ್ಮೀ ಹಣ ಹಾಕುತ್ತೇವೆ. ಒಟ್ಟಿಗೆ ಹಾಕುವುದರಿಂದ ಗೊಂದಲ ಆಗಬಾರದು. ಹೀಗಾಗಿ ಮುಂದೂಡಿದ್ದೇವೆ.
* ಹಣದ ಕೊರತೆ ವಿಳಂಬಕ್ಕೆ ಕಾರಣವಂತೆ?
ಹಣದ ಕೊರತೆ ಖಂಡಿತ ಇಲ್ಲ. ಈ ವರ್ಷ ಈಗಾಗಲೇ 4 ತಿಂಗಳು ಕಳೆದಿದೆ. ಯೋಜನೆಯಡಿ ಹಣ ನೀಡಲು ಈ ವರ್ಷ 28 ಸಾವಿರ ಕೋಟಿ ಬೇಕಾಗುತ್ತದೆ. ಪ್ರತಿ ವರ್ಷ 33-34 ಸಾವಿರ ಕೋಟಿ ರು. ವೆಚ್ಚವಾಗಲಿದೆ. ಅದನ್ನು ಸರ್ಕಾರ ನೀಡಲಿದೆ. 1.28 ಕೋಟಿ ಮಂದಿ ಲಾಭ ಪಡೆಯಲಿದ್ದಾರೆ.
* ಗೃಹ ಲಕ್ಷ್ಮಿ ಮಾನದಂಡದ ಗೊಂದಲವಿದೆಯಲ್ಲ?
ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್‌ಗಳಲ್ಲಿ ಯಜಮಾನಿ ಸ್ಥಾನದಲ್ಲಿ ನಮೂದಿಸಿರುವ ಪ್ರತಿಯೊಬ್ಬರೂ ಯೋಜನೆಗೆ ಅರ್ಹರು. ಕೇವಲ ಪತಿ ಹಾಗೂ ಪತ್ನಿ ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ ಮಾತ್ರ ಸಾಕು. ಪಡಿತರ ಚೀಟಿ ಕೂಡ ಕೇಳಲ್ಲ. ಆಧಾರ್ ಕಾರ್ಡ್‌ನಲ್ಲಿ ಲಿಂಕ್ ಆಗಿರುವ ಖಾತೆಗೆ ಹಣ ವರ್ಗಾವಣೆಯಾಗುತ್ತದೆ. ಅಲ್ಲದೆ, ಆಧಾರ್ ಕಾರ್ಡ್‌ಗೆ ಲಿಂಕ್ ಆಗದ ಬ್ಯಾಂಕ್ ಖಾತೆಗೆ ಹಣ ಹಾಕಬೇಕು ಎಂದರೆ ಅದಕ್ಕೂ ಅವಕಾಶವಿದೆ. ಏಕೆಂದರೆ, ಆಧಾರ್ ಕಾರ್ಡ್ ಲಿಂಕ್ ಇರುವ ಬ್ಯಾಂಕ್ ಖಾತೆಯಿಂದ ಲೋನ್ ಪಡೆದಿದ್ದೀರಿ. ಗೃಹ ಲಕ್ಷ್ಮೀ ಹಣ ಇಎಂಐ ಕಡಿತ ಮಾಡಿಕೊಳ್ಳುತ್ತಾರೆ ಎಂಬ ಶಂಕೆಯಿದ್ದರೆ ಲಿಂಕ್ ಆಗಿಲ್ಲದ ಬ್ಯಾಂಕ್ ಖಾತೆಯ ಪಾಸ್‌ಬುಕ್ ಜೆರಾಕ್ಸ್ ಪ್ರತಿ ನೀಡಲು ಅವಕಾಶ ನೀಡಿದ್ದೇವೆ. ಇಂತಹ ಖಾತೆಗೂ ಹಣ ಹಾಕುತ್ತೇವೆ. ಅಲ್ಲದೆ, ಹಣ ಸಂದಾಯವಾದ ಕೂಡಲೇ ಮೊಬೈಲ್ ಸಂಖ್ಯೆಗೆ ಧ್ವನಿ ಸಂದೇಶ ಕೂಡ ಬರಲಿದೆ.
* ಆ ಸಂದೇಶ ಯಾರ ಧ್ವನಿಯಲ್ಲಿ ಇರುತ್ತದೆ ?
ಆ ಧ್ವನಿ ನನ್ನದಿರಬಹುದು ಅಥವಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದಿರಬಹುದು (ನಗು)... ಒಟ್ಟಾರೆ ಧ್ವನಿ ಸಂದೇಶ ಬರುವುದು ಖಚಿತ.
* ಯಾರು ಯೋಜನೆಗೆ ಅರ್ಹರಲ್ಲ?
ಪತಿ ಅಥವಾ ಪತ್ನಿ ಆದಾಯ ತೆರಿಗೆ ಪಾವತಿದಾರರಾಗಿದ್ದರೆ ಅಥವಾ ಜಿಎಸ್‌ಟಿ ರಿಟನ್ಸ್‌ರ್ ಫೈಲ್ ಮಾಡುತ್ತಿದ್ದರೆ ಅವರು ಅರ್ಹರಲ್ಲ. ಅವರ ಮಕ್ಕಳು ಆದಾಯ ತೆರಿಗೆ ಪಾವತಿಸುತ್ತಿದ್ದರೂ ಸಮಸ್ಯೆಯಿಲ್ಲ.
* ತಪ್ಪು ಮಾಹಿತಿ ನೀಡಿದರೆ ಏನು ಕ್ರಮ?
ತಪ್ಪು ಮಾಹಿತಿ ನೀಡಲು ಶೇ.1 ರಷ್ಟುಕೂಡ ಆ ಸಾಧ್ಯತೆಯಿಲ್ಲ. ತಂತ್ರಾಂಶವನ್ನು ಅಷ್ಟುಪ್ರಬಲವಾಗಿ ಅಪ್ಡೇಟ್ ಮಾಡಲಾಗಿದೆ. ತಪ್ಪು ಮಾಹಿತಿ ನೀಡಿದರೆ ಅರ್ಜಿಯೇ ಸ್ವೀಕೃತಿಯಾಗುವುದಿಲ್ಲ. ಮಾಹಿತಿ ಸರಿಯಿದ್ದರೆ ಸ್ಥಳದಲ್ಲೇ ನಿಮಗೆ ಫಲಾನುಭವಿ ಪ್ರಮಾಣಪತ್ರವೇ ಲಭ್ಯವಾಗಲಿದೆ.
* ನಕಲಿ ಆ್ಯಪ್‌ಗಳಿಂದ ವಂಚನೆಗೆ ಏನು ಕ್ರಮ?
ಹೀಗಾಗಿಯೇ ನಾವು ಇನ್ನೂ ಯೋಜನೆಗೆ ಚಾಲನೆ ಸಿಕ್ಕಿಲ್ಲ ಎಂದು ಹೇಳುತ್ತಲೇ ಇದ್ದೇವೆ. ಇಲಾಖೆ ಅಧಿಕೃತವಾಗಿ ಹೇಳುವವರೆಗೂ ಯಾವ ಆ್ಯಪ್‌ಗಳನ್ನೂ ಡೌನ್‌ಲೋಡ್ ಮಾಡಬೇಡಿ ಎಂದು ನಿಮ್ಮ ಮೂಲಕ ಸಾರ್ವಜನಿಕರಿಗೆ ಮತ್ತೊಮ್ಮೆ ಮನವಿ ಮಾಡುತ್ತೇನೆ.
* ಯೋಜನೆಯ ಫಲಾನುಭವಿ ಸಾವನ್ನಪ್ಪಿದರೆ?
ಮರಣ ಪ್ರಮಾಣಪತ್ರ ನೀಡಿ ಸ್ವಯಂ ಘೋಷಣೆ ಮಾಡಿದರೆ ಅವರ ಪತಿ ಕುಟುಂಬದ ಯಾವ ಸದಸ್ಯರಿಗೆ ಹೇಳುತ್ತಾರೋ ಅವರಿಗೆ ನೀಡಲಾಗುವುದು.
* ಎಲ್ಲಾ ಹಣ ಗೃಹಲಕ್ಷ್ಮಿ ಪಾಲಾದರೆ ಏನು ಕಥೆ?
ನನ್ನ ಖಾತೆಯ ಅನುದಾನಕ್ಕೂ ಗೃಹ ಲಕ್ಷ್ಮೀ ಅನುದಾನಕ್ಕೂ ಸಂಬಂಧವೇ ಇಲ್ಲ. ನನ್ನ ಖಾತೆಯಡಿ ಮಕ್ಕಳು, ಬಾಣಂತಿಯರು, ಗರ್ಭಿಣಿಯರು ಸೇರಿ 43 ಲಕ್ಷ ಫಲಾನುಭವಿಗಳು ಬರುತ್ತಾರೆ. ಅವರಿಗೆ ಪೌಷ್ಠಿಕ ಆಹಾರ ಸೇರಿ ಎಲ್ಲಾ ಸೇವೆ ನೀಡಬೇಕು. ಹೀಗಾಗಿ ಅನುದಾನ ಕಡಿತ ಆಗುವುದಿಲ್ಲ ಎಂಬ ವಿಶ್ವಾಸವಿದೆ.
* ಮಹಿಳಾ ವೋಟ್ ಬ್ಯಾಂಕ್ ಉದ್ದೇಶ ಉಂಟಾ?
ಕಾಂಗ್ರೆಸ್ ಪ್ರತಿ ಹಂತದಲ್ಲೂ ಮಹಿಳೆಯರ ಪರ ನಿಂತಿದೆ. ಮಹಿಳಾ ಸಮೂಹವನ್ನು ಸಶಕ್ತಗೊಳಿಸುವುದು ಕಾಂಗ್ರೆಸ್‌ನ ಮೂಲಭೂತ ನೀತಿಗಳಲ್ಲಿ ಒಂದು. ಅದು ಮೀಸಲಾತಿ, ಅಧಿಕಾರ, ಸಮಾನತೆ ಮುಂತಾದ ವಿಚಾರಗಳಲ್ಲಿ ಕಾಂಗ್ರೆಸ್‌ನ ಸಾಧನೆ ಗಮನಿಸಿ. ಹೀಗಾಗಿ ಈ ಯೋಜನೆಗಳ ಜಾರಿಯ ಮೂಲಕ ಈಗ ಕಾಂಗ್ರೆಸ್ ಮಹಿಳೆಯರ ಪರವಾಗುತ್ತಿದೆ. ವೋಟ್ ಬ್ಯಾಂಕ್ ಸೃಷ್ಟಿಸಲು ಯತ್ನಿಸುತ್ತಿದೆ ಎಂದು ಹೇಳುವುದರಲ್ಲಿ ಅರ್ಥವಿಲ್ಲ. ಒಂದು ವೇಳೆ ಈ ಯೋಜನೆಗಳಿಂದ ಮಹಿಳಾ ಓಟ್ ಬ್ಯಾಂಕ್ ಸೃಷ್ಟಿಯಾದರೇ ಅದು ಒಳ್ಳೆಯದೇ (ನಗು)...
* ಸ್ತ್ರೀ ಸಶಕ್ತೀಕರಣ ಅಂತೀರಿ, ಆದರೆ ಮೀಸಲಾತಿ?
ನಿಜ, ಮಹಿಳೆಯರಿಗೆ ಮೀಸಲಾತಿ ಬೇಕು. ಜತೆಗೆ, ಮಹಿಳೆಯರು ಕೂಡ ಸ್ವಂತ ಬಲದಿಂದ ರಾಜಕಾರಣದಲ್ಲಿ ತೊಡಗಿಕೊಳ್ಳುವ ಮನಸ್ಸು ಮಾಡಬೇಕು. ಮೂಲಭೂತವಾಗಿ ರಾಜಕಾರಣ ಎಂಬುದು ಪಾರ್ಚ್ ಟೈಂ ಕೆಲಸ ಅಲ್ಲ ಫುಟ್ ಟೈಂ ಕೆಲಸ ಎಂಬುದು ಅರಿಯಬೇಕು. ಮಕ್ಕಳು, ಮನೆ, ಮಠ ಎಲ್ಲವನ್ನೂ ಬಿಟ್ಟು ಕೆಲಸ ಮಾಡಬೇಕು. ನಾನು ಕಾಂಗ್ರೆಸ್ ಜಿಲ್ಲಾಧ್ಯಕ್ಷೆಯಾಗಿ, ರಾಜ್ಯಾಧ್ಯಕ್ಷೆ, ಶಾಸಕಿ, ಸಚಿವಳಾಗಿ ಸುಮ್ಮನೆ ಬಂದು ಕುಳಿತಿಲ್ಲ. ಇದಕ್ಕೆ ಎರಡೂವರೆ ದಶಕದ ಶ್ರಮ ಇದೆ. ಈ ಮನಸ್ಥಿತಿ ಮಹಿಳಾ ರಾಜಕಾರಣಿಗಳು ಅಳವಡಿಸಿಕೊಳ್ಳಬೇಕು.
* ಅಂದರೆ ಮೀಸಲಾತಿಗಿಂತ ಸ್ವಸಾಮರ್ಥ್ಯ ಮುಖ್ಯವೇ?
ಮಹಿಳೆಯರಿಗೆ ಮೀಸಲಾತಿಗೆ ಬೇಕು ಎಂಬುದರಲ್ಲಿ ಯಾವ ಸಂಶಯವಿಲ್ಲ. ಜತೆಗೆ ಈ ಮೀಸಲಾತಿ ಎಂಬುದು ಪರೋಕ್ಷವಾಗಿ ಜನಪ್ರತಿನಿಧಿಯ ಗಂಡನಿಗೆ ಅಧಿಕಾರ ನೀಡುವುದಲ್ಲ. 24 ಗಂಟೆಯೂ ದುಡಿಯಲು ಸಿದ್ಧವಿರುವ ಮಹಿಳೆಯರಿಗೆ ಅವಕಾಶ ನೀಡಬೇಕು. ಯಾವುದೇ ಹಿನ್ನೆಲೆ ಇಲ್ಲದಿದ್ದರೂ, ಹಿನ್ನೆಲೆ ಇದ್ದರೂ ಸ್ವಂತ ಸಾಮರ್ಥ್ಯದ ಮೇಲೆ ಕೆಲಸ ಮಾಡಿ ಬರುವಂತಿರಬೇಕು. ಪೂರ್ಣ ಪ್ರಮಾಣದಲ್ಲಿ ಸಿದ್ಧತೆ ಮಾಡಿಕೊಂಡು, ಯೋಗ್ಯತೆ ಬೆಳೆಸಿಕೊಂಡೇ ಬರಬೇಕು. ಟಿಕೆಟ್ ನೀಡದಿದ್ದರೆ ಪಕ್ಷ ಸೋಲುತ್ತದೆ ಎಂಬ ಭಯವನ್ನು ಪಕ್ಷದಲ್ಲಿ ಹುಟ್ಟಿಸುವ ಮಟ್ಟಕ್ಕೆ ಮಹಿಳಾ ರಾಜಕಾರಣಿಗಳು ಬೆಳೆಯಬೇಕು.
* ಅಂತಹ ವ್ಯವಸ್ಥೆ ರೂಪಿತವಾಗಿದೆಯೇ?
ನಮ್ಮದು 70 ವರ್ಷದ ಇತಿಹಾಸವಲ್ಲ. 5 ಸಾವಿರ ವರ್ಷದ ಇತಿಹಾಸ. ತರಬೇತಿ, ಕಾರ್ಯಗಾರ, ಕೌಶಲ್ಯ ತರಬೇತಿಯಿಂದ ನಾಯಕತ್ವ ಗುಣ ಹುಟ್ಟಲ್ಲ. ‘ಜಾಸ್ತಿ ಕಲಿತವರು ರಾಜಕೀಯಕ್ಕೆ ಜರೂರತ್ತಿಲ್ಲ. ಕಾಮನ್ ಸೆನ್ಸ್ ಹಾಗೂ ಪ್ರೆಸೆನ್ಸ್ ಆಫ್ ಮೈಂಡ್ ಇರಬೇಕು’ ಹೋರಾಟದ ಗುಣ ಮಹಿಳೆಯರಲ್ಲಿ ಮೂಡಬೇಕು.
* ಬೆಳಗಾವಿ ಉಸ್ತುವಾರಿಗಾಗಿ ಹೋರಾಡಿರಲಿಲ್ಲವೇ?
ನನಗೆ ಸ್ವಲ್ಪ ಕಾಮನ್‌ಸೆನ್ಸ್ ಇದೆ. ಸತೀಶ್ ಜಾರಕಿಹೊಳಿ ಅವರಂತಹ ಹಿರಿಯರಿದ್ದಾಗ ನಾನು ಅಂತಹ ಯೋಚನೆಯಾದರೂ ಮಾಡಲು ಸಾಧ್ಯವೇ? ಇನ್ನೂ ಜಿಲ್ಲೆ ವಿಭಜನೆ ಆಗಿದ್ದರೆ ಅದರ ಮಾತು ಬೇರೆ.
* ಅಂದರೆ?
ಬೆಳಗಾವಿ ಜಿಲ್ಲೆ ವಿಭಜನೆಯಾಗಬೇಕು ಎಂಬುದರ ಪರ ನಾನಿದ್ದೇನೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲೂ ಚಿಂತನೆಯಿದೆ.18 ವಿಧಾನಸಭಾ ಕ್ಷೇತ್ರ ಹಾಗೂ 15 ತಾಲೂಕು ಇರುವ ದೊಡ್ಡ ಜಿಲ್ಲೆಯದು. ದಕ್ಷಿಣ ಕರ್ನಾಟಕ ಭಾಗದ ನಾಲ್ಕೈದು ಜಿಲ್ಲೆಗಳಿಗೆ ನಮ್ಮ ಒಂದು ಜಿಲ್ಲೆ ಸಮ. ಹೀಗಾಗಿ ಆಡಳಿತಾತ್ಮಕ ಹಿತದೃಷ್ಟಿಯಿಂದ ವಿಭಜನೆಯಾಗಲೇಬೇಕು. ಹೀಗೆ ವಿಭಜನೆಯಾದರೆ ಆಗ ಜಿಲ್ಲಾ ಉಸ್ತುವಾರಿ ಬಗ್ಗೆ ನಾನು ಹೋರಾಟ ಮಾಡಬಹುದು.
* ರಾಜ್ಯದ ಮೊದಲ ಮಹಿಳಾ ಸಿಎಂ ಲಕ್ಷ್ಮೀ ಹೆಬ್ಬಾಳ್ಕರ್?
ನನಗಿಂತ ಮೊದಲು ತುಂಬಾ ಜನ ಸರತಿ ಸಾಲಿನಲ್ಲಿ ಇದ್ದಾರೆ. ಅವರದ್ದೆಲ್ಲಾ ಮುಗಿಯಲಿ. ನಾನಷ್ಟುದೊಡ್ಡವಳಲ್ಲ.
ವಿಪಕ್ಷ ನಾಯಕನ ಆಯ್ಕೆ ಮಾಡದೆ ಬುರುಡೆ ಬಿಡ್ತೀರಾ?: ಸಿಎಂ ಸಿದ್ದರಾಮಯ್ಯ ತರಾಟೆ
* ನಿಮ್ಮಿಂದ ಮರಾಠಿಗರ ಓಲೈಕೆ ಹೆಚ್ಚಂತೆ?
ನನ್ನ ಕ್ಷೇತ್ರದಲ್ಲಿ ಎರಡು ಭಾಗ ಬರುತ್ತದೆ. ಒಂದು ಕನ್ನಡದ ಭಾಷಿಕರ ಪ್ರದೇಶ, ಮತ್ತೊಂದು ಮರಾಠ ಭಾಷಿಕರ ಪ್ರದೇಶ. ಎಲ್ಲರ ಆಶೋತ್ತರಗಳಿಗೂ ಸ್ಪಂದಿಸಿ ಜಾತಿ, ಭಾಷೆ, ಧರ್ಮಗಳ ಬೇಧವಿಲ್ಲದೆ ಕೆಲಸ ಮಾಡುತ್ತೇನೆ. ಅದು ಓಲೈಕೆ ಅಲ್ಲ ಎಂಬುದು ನನ್ನ ಬಲವಾದ ನಂಬಿಕೆ.
* ಪಂಚಮಸಾಲಿ ‘2-ಎ’ ಮೀಸಲಿಗೆ ಬೆಂಬಲ ಇದೆಯೇ?
ಪ್ರಸ್ತುತ ಮೀಸಲಾತಿ ವಿಚಾರ ನ್ಯಾಯಾಲಯದಲ್ಲಿದೆ. ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕವೂ ಜಯಮೃತ್ಯುಂಜಯ ಸ್ವಾಮೀಜಿ ಅವರೊಂದಿಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮೀಸಲಾತಿಗೆ ಮನವಿ ಮಾಡಿದ್ದೇವೆ. ಮುಖ್ಯವಾಗಿ ರಾಜ್ಯದಲ್ಲಿ ಒಬಿಸಿ ಪಟ್ಟಿಯಲ್ಲಿದ್ದು ಕೇಂದ್ರದಲ್ಲಿ ಸಾಮಾನ್ಯ ವರ್ಗದ ಪಟ್ಟಿಯಲ್ಲಿರುವ ಲಿಂಗಾಯತ ಉಪ ಜಾತಿಗಳನ್ನು ಒಬಿಸಿ ಪಟ್ಟಿಗೆ ಸೇರಿಸುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಅವರು ಪರಿಶೀಲಿಸುವುದಾಗಿ ತಿಳಿಸಿದ್ದಾರೆ. ಹೀಗಾಗಿ ನಮ್ಮ ಪ್ರಯತ್ನಗಳು ನಿಲ್ಲುವುದಿಲ್ಲ.