ವಿಪಕ್ಷ ನಾಯಕನ ಆಯ್ಕೆ ಮಾಡದೆ ಬುರುಡೆ ಬಿಡ್ತೀರಾ?: ಸಿಎಂ ಸಿದ್ದರಾಮಯ್ಯ ತರಾಟೆ
ವಿಧಾನಸಭೆ ಅಧಿವೇಶನ ಪ್ರಾರಂಭವಾಗಿ ಮೂರು ದಿನವಾದರೂ ಬಿಜೆಪಿಯವರಿಗೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಸುಮ್ಮನೆ ಜನರ ಪರ ಯೋಜನೆಗಳ ಬಗ್ಗೆ ಮಾತನಾಡುತ್ತಾ ಬುರುಡೆ ಹೊಡೆಯುತ್ತಿದ್ದೀರಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಪಕ್ಷದ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು.
ವಿಧಾನಸಭೆ (ಜು.06): ವಿಧಾನಸಭೆ ಅಧಿವೇಶನ ಪ್ರಾರಂಭವಾಗಿ ಮೂರು ದಿನವಾದರೂ ಬಿಜೆಪಿಯವರಿಗೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಸುಮ್ಮನೆ ಜನರ ಪರ ಯೋಜನೆಗಳ ಬಗ್ಗೆ ಮಾತನಾಡುತ್ತಾ ಬುರುಡೆ ಹೊಡೆಯುತ್ತಿದ್ದೀರಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಪಕ್ಷದ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ, ವಿಧಾನಸಭೆ ಚುನಾವಣೆ ಪೂರ್ವದಲ್ಲಿ ನಮ್ಮ ಪಕ್ಷ ನೀಡಿದ್ದ ಐದು ಭರವಸೆಗಳನ್ನು ಇದೇ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಈಡೇರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ರಾಜ್ಯ ಸರ್ಕಾರ ಈಗಾಗಲೇ ಮೂರು ಗ್ಯಾರಂಟಿ ಈಡೇರಿಸಿದ್ದು, ನಾಲ್ಕನೇ ಗ್ಯಾರಂಟಿ ಈಡೇರಿಸುವ ಸಿದ್ಧತೆ ನಡೆಸಿದ್ದೇವೆ. 6 ತಿಂಗಳ ಬಳಿಕ ಯುವನಿಧಿ ಯೋಜನೆಗೆ ಚಾಲನೆ ನೀಡುವ ಮೂಲಕ ಐದೂ ಗ್ಯಾರಂಟಿಯನ್ನು 100ಕ್ಕೆ 100ರಷ್ಟು ಅನುಷ್ಠಾನ ಮಾಡುತ್ತೇವೆ ಎಂದು ಹೇಳಿದರು. ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ಸದಸ್ಯ ಆರ್. ಅಶೋಕ್ ನಿಲುವಳಿ ಸೂಚನೆ ಮಂಡಿಸುವಾಗ ಬಸನಗೌಡ ಪಾಟೀಲ್ ಯತ್ನಾಳ್ ಮಧ್ಯಪ್ರವೇಶಿಸಿ ಮಾತನಾಡಲು ಮುಂದಾದರು.
ಮಾಜಿ ಸಚಿವ ಸೋಮಣ್ಣ ದೂರಿನ ಹಿನ್ನೆಲೆ: ವಿಜಯೇಂದ್ರ ಆಪ್ತ ರುದ್ರೇಶ್ ಸೇರಿದಂತೆ 15 ಜನರಿಗೆ ಬಿಜೆಪಿ ನೋಟಿಸ್
ಇದಕ್ಕೆ ಗರಂ ಆದ ಸಿದ್ದರಾಮಯ್ಯ, ಮೂರು ದಿನವಾದರೂ ನಿಮಗೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಳ್ಳಲು ಆಗುತ್ತಿಲ್ಲ. ಬುರುಡೆ ಹೊಡೆಯುತ್ತಿದ್ದೀರಾ? ಪದೇ ಪದೇ ಎದ್ದು ನಿಂತು ಮಾತನಾಡಿದರೆ, ರಭಸವಾಗಿ ಮಾತನಾಡಿದರೆ ವಿರೋಧ ಪಕ್ಷದ ನಾಯಕನನ್ನಾಗಿ ಮಾಡುತ್ತಾರೆಯೇ ಎಂದು ಯತ್ನಾಳ್ ಅವರನ್ನು ಪ್ರಶ್ನಿಸಿದರು.
ಸಭಾಧ್ಯಕ್ಷರು ಅವಕಾಶ ನೀಡಿಲ್ಲ. ಪ್ರಸ್ತುತ ನಿಲುವಳಿ ಸೂಚನೆ ಪ್ರಸ್ತಾಪಕ್ಕೆ ಮಾತ್ರ ಅವಕಾಶ ನೀಡಿದ್ದಾರೆ. ತಾಳ್ಮೆ ಇರಲಿ. ನೋಡುತ್ತಿದ್ದರೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಹೆಣ್ಣು ಮಕ್ಕಳಿಗೆ ಅವಕಾಶ ಮಾಡಿಕೊಟ್ಟಿರುವುದನ್ನು ಬಿಜೆಪಿಯವರು ವಿರೋಧ ಮಾಡಿದಂತಿದೆ. ಮೊದಲು ನೀವು ಹೆಣ್ಣು ಮಕ್ಕಳ ಉಚಿತ ಪ್ರಯಾಣದ ಪರವೋ, ವಿರುದ್ಧವೋ ಎಂಬುದನ್ನು ಸ್ಪಷ್ಟಪಡಿಸಿ ಎಂದು ಸವಾಲು ಹಾಕಿದರು.
ಗೋಹತ್ಯೆ ನಿಷೇಧ ವಾಪಸಿಲ್ಲ, ದೂರು ಬಂದರೆ ಕಾನೂನು ಕ್ರಮ: ಸಚಿವ ವೆಂಕಟೇಶ್ ಸ್ಪಷ್ಟನೆ
ಎಲ್ಲರೂ ಎದ್ದು ನಿಂತರೂ ಹೆದರಲ್ಲ: ಉತ್ತರ ಕೊಡದೆ ಓಡಿಹೋಗಿದ್ದಿರಿ. ಜನರು ಚುನಾವಣೆಯಲ್ಲಿ ನಿಮಗೆ ತಕ್ಕ ಪಾಠ ಕಲಿಸಿ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಿಸಿದ್ದಾರೆ. ಎಲ್ಲರೂ ಎದ್ದುನಿಂತು ಮಾತನಾಡಿದರೂ ನಾವು ಹೆದರುವುದಿಲ್ಲ. ಜನ ಈ ರೀತಿಯ ತೀರ್ಪು ಕೊಟ್ಟರೂ ನಿಮಗೆ ಬುದ್ಧಿ ಬಂದಿಲ್ಲವೆಂದರೆ ಹೇಗೆ? ನಾವು ಚರ್ಚೆಗೆ ಉತ್ತರ ಕೊಡಲು ತಯಾರಿದ್ದೇವೆ. 2018ರಲ್ಲಿ ಆಶ್ವಾಸನೆ ಕೊಟ್ಟು ಓಡಿಹೋದವರು ನಿಮ್ಮ ಪ್ರಣಾಳಿಕೆಯಲ್ಲಿ ನಿಮ್ಮ ಮುಖವನ್ನು ನೋಡಿಕೊಳ್ಳಿ ಎಂದರು.