ಬೆಳಗಾವಿ(ಏ.13): ಕಾಂಗ್ರೆಸ್‌ ನಾಯಕರು ಒಂದು ರೀತಿ ರಿಜೆಕ್ಟೆಡ್‌ ಗೂಡ್ಸ್‌. ನಿರೀಕ್ಷೆ ಮೀರಿ ಉಪಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ಇದೆ. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ, ದೇಶದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದ್ದಾರೆ. 

ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿ, ಐದು ವರ್ಷ ಮುಖ್ಯಮಂತ್ರಿಯಾದರೂ ಸಿದ್ದರಾಮಯ್ಯಗೆ ಏನೂ ಕೆಲಸ ಮಾಡಲಾಗಲಿಲ್ಲ. ಸಿದ್ದರಾಮಯ್ಯ ತಮ್ಮ ಚಾಮುಂಡೇಶ್ವರಿ ಕ್ಷೇತ್ರದಲ್ಲೇ ರಿಜೆಕ್ಟ್ ಆದರು. ಜೈಲಿನಿಂದ ಹೊರಬಂದು ಬೇಲ್‌ನಲ್ಲಿರೋ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ತಮ್ಮ ಕ್ಷೇತ್ರದಿಂದ ತಿರಸ್ಕಾರಗೊಂಡ ಸಿದ್ದರಾಮಯ್ಯ ಅಭಿವೃದ್ಧಿ ಬಗ್ಗೆ ಮಾತಾಡುತ್ತಾರೆ. ದೇಶದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಬೇಡ ಎಂದು ತೀರ್ಮಾನ ಆಗಿದೆ ಎಂದರು.

ಖಾಲಿ ಕೊಡ ತುಂಬಾ ಶಬ್ದ ಮಾಡುತ್ತದೆ. ತುಂಬಿದ ಕೊಡ ಶಬ್ದ ಮಾಡಲ್ಲ. ಡಿಕೆಶಿ, ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ ನಾಯಕರು ಖಾಲಿ ಕೊಡ ಆಗಿದ್ದಾರೆ. ಖಾಲಿ ಕೊಡವನ್ನು ಮೊದಲು ಜನ ನಂಬಿದ್ದರು. ಆದರೆ ಜನರಿಗೆ ದ್ರೋಹ ಮಾಡಿದರು ಎಂದು ಹರಿಹಾಯ್ದರು.

ಬೆಳಗಾವಿ ಉಪಕದನ: ನಮ್ಮ ಕುಟುಂಬ ನೋಡಿ ಜನ ಮತ ಹಾಕ್ತಾರೆ, ಜಾರಕಿಹೊಳಿ

ಉಪಚುನಾವಣೆ ಫಲಿತಾಂಶ ಬಳಿಕ ಬಿಜೆಪಿ ಸರ್ಕಾರ ಕುಸಿಯುತ್ತದೆ ಎಂಬ ರಣದೀಪ್‌ ಸಿಂಗ್‌ ಸುರ್ಜೇವಾಲಾ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಣದೀಪ್‌ಸಿಂಗ್‌ ಸುರ್ಜೇವಾಲಾಗೆ ಕರ್ನಾಟಕವೇ ಮರೆತು ಹೋಗಿದೆ. ಸುರ್ಜೇವಾಲಾನಂತ ಭಟ್ಟಂಗಿಗಳು ರಾಹುಲ್‌ ಗಾಂಧಿನ ಹೊಗಳಿ ಹಾಳು ಮಾಡಿದರು. ರಾಹುಲ್‌ ಗಾಂಧಿ ಕಾಲಿಟ್ಟ ಎಲ್ಲಾ ಕಡೆ ಕಾಂಗ್ರೆಸ್‌ ಸೋತಿದೆ. ಪಾಪ ಅವರನ್ನು ಬೆಳಗಾವಿ ಉಪಚುನಾವಣೆಗೆ ಪ್ರಚಾರಕ್ಕೆ ಕಾಂಗ್ರೆಸ್‌ ಕರೆಸಲಿ. ರಾಹುಲ್‌ ಗಾಂಧಿ ಸಿಂಹವೋ, ನರಿಯೋ, ಕುರಿಯೋ ಆಮೇಲೆ ಗೊತ್ತಾಗುತ್ತೆ ಎಂದು ವ್ಯಂಗ್ಯವಾಡಿದ್ದಾರೆ.

ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ಸಂಸತ್‌ಗೆ ಹೋಗಿ ಏನು ಮಾಡುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇಂದಿರಾ ಗಾಂಧಿ, ಸುಷ್ಮಾ ಸ್ವರಾಜ್‌ ಮಹಿಳೆ ಅಲ್ಲವೇನು ಎಂದು ಪ್ರಶ್ನಿಸಿದ ಅವರು, ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಬಾರದು ಎಂದರು.

ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ವೀರಶೈವ ಲಿಂಗಾಯತ ಸಮಾಜ ಒಡೆದಿದ್ದು ಸಿದ್ದರಾಮಯ್ಯನ ಪ್ರಸಾದ. ತನ್ನ ಸ್ವಾರ್ಥಕ್ಕಾಗಿ ಸಿದ್ದರಾಮಯ್ಯ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ವೀರಶೈವ -ಲಿಂಗಾಯತ ಸಮಾಜವನ್ನು ಒಡೆದು ಹಾಕಿದರು. ಗೋರಕ್ಷಣೆ ಮಾಡುತ್ತಾರೆ ಎಂದು ಅಮಾಯಕ ಯುವಕರ ಕಗ್ಗೊಲೆ ಆಯಿತು. ಗೋಹತ್ಯೆ ಮಾಡುತ್ತಿರುವವರಿಗೆ ಬೆಂಬಲ ಕೊಟ್ಟವರು, ವೀರಶೈವ ಲಿಂಗಾಯತ ಸಮಾಜ ಒಡೆದರು. ಹಿಂದೂ, ಮುಸ್ಲಿಂರನ್ನು ದೂರ ದೂರ ಮಾಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.