ಬೆಂಗಳೂರು,(ನ.18): ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ಈಗಾಗಲೇ ಹೈಕೋರ್ಟ್ ಸಿಗ್ನಲ್ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಚುನಾವಣೆ ಆಯೋಗ ಎಲ್ಲಾ ರೀತಿ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಿದೆ.

ಆದ್ರೆ, ಇತ್ತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಈಶ್ವರಪ್ಪ ಅವರು ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಮುಂದೂಡಬೇಕು ಎಂಬ ಇಂಗಿತ ವ್ಯಕ್ತಪಡಿಸಿದ್ದಾರೆ.

ಹೌದು...ಇಂದು (ಬುಧವಾರ) ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲು ಸಿದ್ದವಿದೆ. ಆದರೆ ಎಲ್ಲ ರಾಜಕೀಯ ಪಕ್ಷಗಳು ಚುನಾವಣೆ ಮುಂದೂಡಬೇಕೆಂದು ಮನವಿ ಮಾಡುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿ ಚುನಾವಣೆ ನಡೆಸುವುದು ಸರಿಯೇ ಎಂಬ ಪ್ರಶ್ನೆ ಮಾಡುತ್ತಿದ್ದಾರೆ.

ಗ್ರಾಮ ಪಂಚಾಯತಿ ಎಲೆಕ್ಷನ್‌ಗೆ ಗ್ರೀನ್ ಸಿಗ್ನಲ್: ಆಯೋಗಕ್ಕೆ ಕೋರ್ಟ್ ಮಹತ್ವದ ಸೂಚನೆ....!

ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಚುನಾವಣೆ ಮುಂದೂಡುವುದು ಸರಿಯಾದ ಕ್ರಮ. ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಕೊರೋನಾ ನಿಯಂತ್ರಣಕ್ಕೆ ಬಂದಿದೆ. ಕೆಲವು ಜಿಲ್ಲೆಗಳಲ್ಲಿ ಹೆಚ್ಚಿದೆ. ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗೆ ಹೋಲಿಕೆ ಮಾಡಿದರೆ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಜನಸಂದಣೆ ಹೆಚ್ಚಾಗಿರುತ್ತದೆ. ನಿಯಂತ್ರಣಕ್ಕೆ ಬಂದಿರುವ ಕೋವಿಡ್ ಮತ್ತೆ ಎಲ್ಲಿ ಹೆಚ್ಚಾಗಬಹುದೋ ಎಂಬ ಆತಂಕವನ್ನು ವ್ಯಕ್ತಪಡಿಸಿದರು.

ದೆಹಲಿ ಸೇರಿದಂತೆ ಬೇರೆ ಬೇರೆ ಭಾಗಗಳಲ್ಲೂ ಕೊರೊನಾ ಮೂರನೆ ಅಲೆ ಸೃಷ್ಟಿ ಆಗಬಹುದೆಂದು ತಜ್ಞರು ಹೇಳುತ್ತಿದ್ದಾರೆ. ಒಂದೊಂದು ಗ್ರಾಮದಲ್ಲಿ ನಾಲ್ಕೈದು ಜನ ಸ್ಪರ್ಧೆ ಮಾಡುವುದರಿಂದ ಜನಸಂದಣಿ ಹೆಚ್ಚಾಗುತ್ತದೆ. ಗ್ರಾಪಂ ಚುನಾವಣೆಯಲ್ಲಿ ಯಾವ ನಿಯಮಗಳನ್ನು ಪಾಲನೆ ಮಾಡುವುದಿಲ್ಲ. ಇದು ಎಲ್ಲರಿಗೂ ಗೊತ್ತಿರುವ ವಿಷಯ ಎಂದರು.

ಹೈಕೋರ್ಟ್ ಮೂರು ವಾರಗಳಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆಗೆ ದಿನಾಂಕವನ್ನು ನಿಗದಿ ಪಡಿಸಬೇಕೆಂದು ಸ್ಪಷ್ಟವಾಗಿ ಆದೇಶ ನೀಡಿದೆ. ಆಯೋಗಕ್ಕೆ ಬೇಕಾಗಿರುವ ಸವಲತ್ತುಗಳನ್ನು ನೀಡಬೇಕೆಂದು ಸರ್ಕಾರಕ್ಕೆ ನಿರ್ದೇಶನ ಕೊಟ್ಟಿದೆ. ಹೀಗಾಗಿ ನಾವೂ ಕೂಡ ಏನೂ ಮಾಡದಂತಹ ಸ್ಥಿತಿಯಲ್ಲಿದ್ದೇವೆ ಎಂದು ತಿಳಿಸಿದರು.