' ಸಿಎಂ ಬದಲಾವಣೆ: ಯತ್ನಾಳ್ಗೆ ಹೇಳುವ ಶಕ್ತಿ ಇರಬಹುದು, ಆದ್ರೆ ಯಾವ ಮೂಲದಿಂದ?'
ಚುನಾವಣೆಗಳ ಬಳಿಕ ಮುಖ್ಯಮಂತ್ರಿ ಬದಲಾವಣೆಯಾಗುತ್ತಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿಚಾರವಾಗಿ ಈಶ್ವರಪ್ಪ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಶಿವಮೊಗ್ಗ, (ಮಾ.21): ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರನ್ನು ಬದಲಾವಣೆ ಮಾಡುತ್ತಾರೋ, ಬಿಡುತ್ತಾರೋ ನನಗೆ ಗೊತ್ತಿಲ್ಲ. ಯತ್ನಾಳ್ ಯಾವ ಮೂಲದಿಂದ ಹೇಳಿಕೆ ನೀಡುತ್ತಿದ್ದಾರೋ ಕೂಡ ಗೊತ್ತಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಮುಗಿಯುತ್ತಲೇ ಮೇ 2ರ ನಂತರ ಯಾವುದೇ ಕ್ಷಣದಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗಲಿದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದರು.
'ಮೇ 2ರ ನಂತ್ರ ಸಿಎಂ ಬದಲಾವಣೆ, ಉ.ಕರ್ನಾಟಕದ ಹಿಂದೂಪರ ವ್ಯಕ್ತಿ ಮುಂದಿನ ಸಿಎಂ'
ಶಿವಮೊಗ್ಗದಲ್ಲಿ ಇಂದು (ಭಾನುವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮುಖ್ಯಮಂತ್ರಿ ಬದಲಾವಣೆಯಾಗುತ್ತಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ಕೊಟ್ಟರು.
ಯತ್ನಾಳ್ಗೆ ಹೇಳುವ ಶಕ್ತಿ ಇರಬಹುದು. ಆದರೆ ಯಾವ ಮೂಲದಿಂದ ಅವರು ಈ ಹೇಳಿಕೆ ನೀಡುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಬೆಳಗಾವಿ, ಮಸ್ಕಿ, ಬಸವಕಲ್ಯಾಣ ಈ ಮೂರು ಉಪಚುನಾವಣೆಗಳನ್ನು ಬಿಜೆಪಿ ಗೆಲ್ಲಲಿದೆ. ನಿರೀಕ್ಷೆಗೆ ಮೀರಿ ಮಸ್ಕಿಯಲ್ಲಿ ನಮಗೆ ಬೆಂಬಲ ವ್ಯಕ್ತವಾಗಿದೆ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಇಬ್ಬರೂ ಮುಖ್ಯಮಂತ್ರಿಯಾಗಬೇಕೆಂದು ಬಡಿದಾಡಿಕೊಳ್ಳುತ್ತಿದ್ದಾರೆ. ಯತ್ನಾಳ್ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಯಾವ ಮೂಲದಿಂದ ಮಾತನಾಡುತ್ತಿದ್ದಾರೋ ಗೊತ್ತಿಲ್ಲ. ಯಡಿಯೂರಪ್ಪ ಬದಲಾವಣೆ ಆಗುತ್ತಾರೋ ಬಿಡುತ್ತಾರೋ ಅದು ಕೂಡ ನನಗೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.