ಮೈಸೂರು, (ಜ.11): ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗುತ್ತೇನೆ ಎನ್ನುತ್ತಿದ್ದಾರೆ. ಕುಮಾರಸ್ವಾಮಿ ಕೂಡ ಅದೇ ರೀತಿ ಮಾತನಾಡುತ್ತಿದ್ದಾರೆ. ಇದೇ ಮಾತನ್ನು ಅವರ ಪಕ್ಷದವರು ಯಾರಾದರೂ ಹೇಳಿದ್ದಾರಾ? ಅವರಿಬ್ಬರೂ ಹಗಲು ಕನಸು ಕಾಣುತ್ತಿದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಮೈಸೂರಿನಲ್ಲಿ ಇಂದು (ಸೋಮವಾರ) ಮಾತನಾಡಿದ ಅವರು, ಈ ಜನ್ಮದಲ್ಲಿ ಸಿದ್ದರಾಮಯ್ಯ ಮತ್ತೆ ಸಿಎಂ ಆಗುವುದಿಲ್ಲ. ಜೆಡಿಎಸ್ ಅಧಿಕಾರಕ್ಕೆ ಬರುವುದಿಲ್ಲ‌ ಎಂದು ವ್ಯಂಗ್ಯವಾಡಿದರು.

'ಸಿಎಂ ಸ್ಥಾನದಿಂದ ಬಿಎಸ್‌ವೈ ಕೆಳಗಿಳಿವುದು ಪಕ್ಕಾ'

ಮುಖ್ಯಮಂತ್ರಿ ಬದಲಾವಣೆ ಎಂದು ಸುಮ್ಮನೆ ಮಾತನಾಡುತ್ತಾರೆ. ಇದು ಕೇವಲ ಸೃಷ್ಟಿ ಮಾಡಿರುವುದು ಅಷ್ಟೆ. ಕೇಂದ್ರ ನಾಯಕರು, ಶಾಸಕರು ಯಾರು ಹೇಳಿಲ್ಲ‌. ಇದನ್ನು ಹೇಳುತ್ತಿರುವುದು ಸಿದ್ದರಾಮಯ್ಯನವರು ಒಬ್ಬರೇ. ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ನಂತರ ಅವರಿಗೆ ಅದರ ಮೇಲೆ ಕಣ್ಣು‌. ಹಾಗಾಗಿ ಸ್ಥಾನ ಕಳೆದುಕೊಳ್ಳುತ್ತಾರೆ ಅಂತ ಹೇಳಿ ಅಭ್ಯಾಸ ಆಗಿದೆ ಎಂದು ಟೀಕಿಸಿದರು.

ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಆಗುವುದಿಲ್ಲ‌. ಹತ್ತತ್ತು ಬಾರಿ ಹೇಳಿದರೆ ಜನ ನಂಬುತ್ತಾರೆ ಅಂತ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ ಇದು ಸುಳ್ಳು, ಕೇವಲ ಮಾಧ್ಯಮಗಳಲ್ಲಿ ಮಾತ್ರ ಬರುತ್ತಿರುವ ಸುದ್ದಿ ಅಷ್ಟೇ ಎಂದು ಈಶ್ವರಪ್ಪ ಹೇಳಿದರು.