ಧಾರವಾಡ (ಜ.24):  ‘ಮುಂದಿನ ಮುಖ್ಯಮಂತ್ರಿ ನಾನೇ’ ಎಂದು ಸಿದ್ದರಾಮಯ್ಯ ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರಿಗೆ ತಾಕತ್ತು ಇದ್ದರೆ ಸಿದ್ದರಾಮಯ್ಯ ಅವರ ಮೇಲೆ ಕ್ರಮ ಕೈಗೊಳ್ಳಲಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಸವಾಲು ಹಾಕಿದ್ದಾರೆ. 

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರು ಆಡಳಿತ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ನಾನೇ ಮುಂದಿನ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಹೇಳಿಕೊಳ್ಳುತ್ತಿದ್ದಾರೆ. ಈ ಸರ್ವಾಧಿಕಾರಿ ಧೋರಣೆಯನ್ನು ಕಾಂಗ್ರೆಸ್‌ನ ಒಬ್ಬರೂ ಖಂಡಿಸುತ್ತಿಲ್ಲ. ಇನ್ನು ಯಾವಾಗಲೂ ‘ಧಮ್‌’ ಬಗ್ಗೆ ಮಾತನಾಡುವ ಡಿ.ಕೆ. ಶಿವಕುಮಾರ್‌ ಅವರಿಗೆ ಧಮ್‌ ಇದ್ದರೆ ಸಿದ್ದರಾಮಯ್ಯ ಮೇಲೆ ಕ್ರಮ ಕೈಗೊಳ್ಳಲಿ ಎಂದರು.

ಶಿವಮೊಗ್ಗ ಸ್ಪೋಟ: ಯಡಿಯೂರಪ್ಪ, ಈಶ್ವರಪ್ಪ ವಿರುದ್ಧ ಗಂಭೀರ ಆರೋಪ..! ..

ಮುಳುಗುವ ಹಡಗು:

ಕಾಂಗ್ರೆಸ್‌ ಪಕ್ಷ ಮುಳುಗುವ ಹಡಗು. ಶಿವಕುಮಾರ್‌ ಅಧ್ಯಕ್ಷರಾದ ಬಳಿಕ ಪಕ್ಷ ಅಧೋಗತಿಗೆ ಹೋಗಿದೆ. ಪಕ್ಷದ ನಾಯಕರು ಯಾವ ಪಕ್ಷಗಳಿಗೆ ಹೋಗುತ್ತಿದ್ದಾರೆ ಎಂಬುದೇ ಅವರಿಗೆ ಅರ್ಥವಾಗುತ್ತಿಲ್ಲ. ಕಾಂಗ್ರೆಸ್‌ ಪಕ್ಷ ದೇಶ, ರಾಜ್ಯದಲ್ಲಿ ನಿರ್ನಾಮವಾಗುತ್ತಿರುವಾಗ ಅಲ್ಲಿನ ನಾಯಕರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ತಮಗಿಷ್ಟದ ಪಕ್ಷಗಳಿಗೆ ಹೋಗುತ್ತಿದ್ದಾರೆ. ಈ ಮಧ್ಯೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ನಡುವೆ ಮುಖ್ಯಮಂತ್ರಿ ಆಗುವ ಸ್ಪರ್ಧೆ ನಡೆದಿದೆ. ಹಗಲು ಕನಸು ಕಾಣುವುದೇ ಇವರ ಕೆಲಸವಾಗಲಿದೆ. ಜನರು ಯಾವುದೇ ಕಾರಣಕ್ಕೂ ಕಾಂಗ್ರೆಸ್‌ಗೆ ಅಧಿಕಾರ ನೀಡುವುದಿಲ್ಲ ಎಂದು ಕಾಂಗ್ರೆಸ್‌ ನಾಯಕರ ಕಾಲೆಳೆದರು.

ತಜ್ಞರ ಮಾಹಿತಿ ಬಳಿಕ ಸ್ಪಷ್ಟಚಿತ್ರಣ:

ಶಿವಮೊಗ್ಗ ಗಣಿಗಾರಿಕೆ ಸ್ಫೋಟ ಪ್ರಕರಣ ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ. ಈವರೆಗೆ ರಾಜ್ಯದಲ್ಲಿ ಇಂತಹ ಘಟನೆ ನಡೆದಿಲ್ಲ. ಕಲ್ಲು ಕ್ವಾರಿಯಲ್ಲಿ ಏನೆಲ್ಲ ವಸ್ತುಗಳು ಇದ್ದವು ಎಂಬುದನ್ನು ಪರಿಶೀಲಿಸಲು ಬೆಂಗಳೂರಿನಿಂದ ತಜ್ಞರು ಆಗಮಿಸಿದ್ದಾರೆ. ಅವರು ವರದಿ ನೀಡಿದ ಬಳಿಕವಷ್ಟೇ ಸ್ಪಷ್ಟಮಾಹಿತಿ ಸಿಗಲಿದೆ. ಆ ಬಳಿಕವೇ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕೆ.ಎಸ್‌. ಈಶ್ವರಪ್ಪ ಹೇಳಿದರು.