ಸರ್ಕಾರದ ವಿರುದ್ಧ ಸಿಂಗಾಪುರದಲ್ಲಿ ಪಿತೂರಿ ನಡೆಯುತ್ತಿದೆ ಎಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ ಬೆನ್ನಲ್ಲೇ, ಬಿಜೆಪಿಯವರು ದೇಶಾದ್ಯಂತ ಸರ್ಕಾರಗಳನ್ನು ಉರುಳಿಸುವಲ್ಲಿ ಪರಿಣತರಿದ್ದಾರೆ. ಹೀಗಾಗಿ ನಮ್ಮ ಹುಷಾರಲ್ಲಿ ನಾವಿದ್ದೇವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಬೆಂಗಳೂರು (ಜು.25): ಸರ್ಕಾರದ ವಿರುದ್ಧ ಸಿಂಗಾಪುರದಲ್ಲಿ ಪಿತೂರಿ ನಡೆಯುತ್ತಿದೆ ಎಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ ಬೆನ್ನಲ್ಲೇ, ಬಿಜೆಪಿಯವರು ದೇಶಾದ್ಯಂತ ಸರ್ಕಾರಗಳನ್ನು ಉರುಳಿಸುವಲ್ಲಿ ಪರಿಣತರಿದ್ದಾರೆ. ಹೀಗಾಗಿ ನಮ್ಮ ಹುಷಾರಲ್ಲಿ ನಾವಿದ್ದೇವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ಸೋಮವಾರ ವಿಕಾಸಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ದೇಶದ ಹಲವಾರು ರಾಜ್ಯ ಸರ್ಕಾರಗಳನ್ನು ಬಿಜೆಪಿ ಪತನಗೊಳಿಸಿದೆ. ಕೇಂದ್ರದ ಅಧಿಕಾರ ದುರ್ಬಳಕೆ ಮಾಡಿಕೊಂಡು ಉರುಳಿಸುವ ಕೆಲಸ ಮಾಡಿದ್ದಾರೆ. ಇದು ಎಲ್ಲರಿಗೂ ಗೊತ್ತಿರುವ ವಿಷಯವೇ.
ಯಾವುದಕ್ಕೂ ಬಿಜೆಪಿಯವರು ಹೇಸುವುದಿಲ್ಲ. ನಮ್ಮ ಶಾಸಕರ ಬಗ್ಗೆ ವಿಶ್ವಾಸ ಇದೆ. ಆದರೂ ನಮ್ಮ ಎಚ್ಚರಿಕೆಯಲ್ಲಿ ನಾವಿದ್ದೇವೆ ಎಂದರು. ಬಿಜೆಪಿಯ ನಾಯಕರಿಬ್ಬರು ಕೆಲ ದಿನಗಳ ಹಿಂದೆ ಲೋಕಸಭೆಯ ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉರುಳುತ್ತದೆ ಎಂದಿದ್ದರು. ಅದಕ್ಕಾಗಿ ಅವರು ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳುತ್ತಿದ್ದರೆ ಆಶ್ಚರ್ಯವಿಲ್ಲ ಎಂದ ಅವರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಿಂಗಾಪುರಕ್ಕೆ ಹೋಗಿರುವುದು ಗೊತ್ತಿಲ್ಲ. ನಮ್ಮ ಶಾಸಕರ ಬಗ್ಗೆ ನಮಗೆ ನಂಬಿಕೆ ಇದೆ. ಹುಷರಾಗಿರಬೇಕು ಅಷ್ಟೇ ಎಂದು ತಿಳಿಸಿದರು.
ಸಂಪತ್ತನ್ನು ಹಂಚಿ ತಿನ್ನುವ ಸ್ವಭಾವ ಹೊಂದಿ: ಶಾಸಕ ಲಕ್ಷ್ಮಣ ಸವದಿ
ಬಂಡೆಯಷ್ಟು ಭದ್ರ-ರಾಮಲಿಂಗಾರೆಡ್ಡಿ: ಡಿ.ಕೆ. ಶಿವಕುಮಾರ್ ಏನು ಹೇಳಿಕೆ ಕೊಟ್ಟಿದ್ದಾರೆಂದು ಗೊತ್ತಿಲ್ಲ. ಆದರೆ, ನಮ್ಮ ಸರ್ಕಾರ ಐದು ವರ್ಷ ಪೂರ್ಣ ಅಧಿಕಾರ ನಡೆಸಲಿದೆ. 135 ಶಾಸಕರು ನಮ್ಮೊಂದಿಗಿದ್ದಾರೆ. ಯಾವ ಆಪರೇಷನ್ನೂ ನಡೆಯುವುದಿಲ್ಲ. ಸರ್ಕಾರ ಬಂಡೆಯಷ್ಟೇ ಭದ್ರವಾಗಿ ಇರಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದಾರೆ.
ಜುಲೈನಲ್ಲಿ ವಾಡಿಕೆಗಿಂತ ಅಧಿಕ ಮಳೆ: ಮಲೆನಾಡು, ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು, ಜನಜೀವನ ಮತ್ತು ಆಸ್ತಿಪಾಸ್ತಿಗೆ ಹಾನಿಯಾಗದಂತೆ ಮುನ್ನೆಚ್ಚರಿಕಾ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಸೋಮವಾರ ವಿಕಾಸಸೌಧದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಜೂನ್ ತಿಂಗಳಲ್ಲಿ ರಾಜ್ಯಕ್ಕೆ ಶೇ.56ರಷ್ಟುಮಳೆ ಕೊರತೆಯಾಗಿದ್ದು, ಜುಲೈನಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ಮಳೆಯ ಕೊರತೆ ಪ್ರಮಾಣ ಶೇ.56ರಿಂದ ಶೇ.14ಕ್ಕೆ ಇಳಿದಿದೆ.
ಕಲಬುರಗಿ ಜಿಲ್ಲೆಯಲ್ಲಿ ಶೇ.300, ಯಾದಗಿರಿ ಜಿಲ್ಲೆಯಲ್ಲಿ ಶೇ.160, ಬೀದರ್ ಶೇ.155, ಬೆಳಗಾವಿ ಶೇ.186, ಬಾಗಲಕೋಟೆ ಶೇ.174, ವಿಜಯಪುರ ಶೇ.185 ಮತ್ತು ಗದಗ ಜಿಲ್ಲೆಯಲ್ಲಿ ಶೇ.166ರಷ್ಟುಮಳೆಯಾಗಿದೆ. ಮುಂದಿನ ದಿನದಲ್ಲಿಯೂ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ವಿವರಿಸಿದರು. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಾಮರಾಜನಗರ, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಮಳೆ ಕೊರತೆ ಇದೆ. ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದರೂ, ವಾಡಿಕೆ ಮಳೆಗಿಂತ ಒಟ್ಟಾರೆ ಮಳೆಯ ಪ್ರಮಾಣ ಕಡಿಮೆ ಇದೆ.
ಮೊಬೈಲ್ ನೋಡಿಕೊಂಡೇ ಬಸ್ ಚಲಾಯಿಸಿದ ಚಾಲಕ: ವೀಡಿಯೋ ವೈರಲ್
ಜು.28ರ ವೇಳೆಗೆ ರಾಜ್ಯಾದ್ಯಂತ ಉತ್ತಮ ಮಳೆಯಾಗಲಿದೆ ಎಂಬ ಮಾಹಿತಿಯನ್ನು ಹವಾಮಾನ ಇಲಾಖೆ ನೀಡಿದ್ದು, ಮಳೆ ಕೊರತೆ ನೀಗುವ ವಿಶ್ವಾಸ ಇದೆ ಎಂದರು. ರಾಜ್ಯದ 85 ತಾಲೂಕುಗಳಲ್ಲಿ ಶೇ.20ರಷ್ಟುಮಳೆ ಕೊರತೆಯಾಗಿದೆ. ಈ ತಾಲೂಕುಗಳಲ್ಲಿ ಬರ ಘೋಷಣೆ ಸಂಬಂಧ ಚಿಂತನೆ ನಡೆಸಲಾಗುತ್ತಿದೆ. ಆದರೆ, ಕೇಂದ್ರದ ಬರ ಮಾನದಂಡ ಕಠಿಣವಾಗಿದ್ದು, ಇದನ್ನು ಬದಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದ್ದಾರೆ ಎಂದು ಮಾಹಿತಿ ನೀಡಿದರು.
