ಪ್ರಮೋದ್ ಮುತಾಲಿಕ್ ಪರ ಬ್ಯಾಟಿಂಗ್ ಮಾಡಿದ ಕೋಟ ಶ್ರೀನಿವಾಸ್ ಪೂಜಾರಿ
* ಪ್ರಮೋದ್ ಮುತಾಲಿಕ್ ಪರ ಬ್ಯಾಟಿಂಗ್ ಮಾಡಿದ ಕೋಟ ಶ್ರೀನಿವಾಸ್ ಪೂಜಾರಿ
* ಗುಂಡು ಹೊಡೆಯುವುದಾಗಿ ಹೇಳಿದ್ದ ಪ್ರಮೋದ್ ಮುತಾಲಿಕ್
* ಮಸೀದಿಗಳ ಮೇಲಿನ ಲೌಡ್‌ಸ್ಪೀಕರ್ ವಿಚಾರವಾಗಿ ಹೇಳಿದ್ದ ಮುತಾಲಿಕ್
ಕಾರವಾರ (ಜೂನ್,03): ಮಸೀದಿಗಳ ಮೇಲಿನ ಲೌಡ್‌ಸ್ಪೀಕರ್ ತೆರವಿಗೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಪಾಲಿಸದಿದ್ದರೆ ಗುಂಡಿಕ್ಕಿ ಸಾಯಿಸೋದಾಗಿ ಪ್ರಮೋದ್ ಮುತಾಲಿಕ್ ನೀಡಿರುವ ಹೇಳಿಕೆಯ ಪರವಾಗಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಪರೋಕ್ಷವಾಗಿ ಬ್ಯಾಟ್ ಬೀಸಿದ್ದಾರೆ.
ಕಾರವಾರದಲ್ಲಿ ಇಂದು(ಶುಕ್ರವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಮೋದ್ ಮುತಾಲಿಕ್ ಅವರು ಯಾವುದೇ ಸರ್ಕಾರ ಇದ್ದರೂ ಜಾಗೃತಿ ಮಾಡುವಂತ ಕೆಲಸ ಮಾಡುತ್ತಾರೆ. ಲೌಡ್‌ಸ್ಪೀಕರ್ ವಿಚಾರದಲ್ಲಿ ಸರ್ಕಾರ ಸುಪ್ರೀಂಕೋರ್ಟ್ ಆದೇಶ ಜಾರಿಮಾಡಲು ನಿರ್ದೇಶಿಸಿದೆ ಎಂದರು.
ಕೆಲವೆಡೆ ಲೌಡ್‌ಸ್ಪೀಕರ್ ತೆಗೆಯಿಸಲಾಗಿದೆ, ಕೆಲವು ಕಡೆ ತೆಗೆಯಿಸುತ್ತಿದ್ದಾರೆ. ಇದು ಯಾವುದೇ ಜಾತಿ, ಧರ್ಮ, ಭಾಷೆಗೆ ಸೀಮಿತವಾಗಿಲ್ಲ. ಎಲ್ಲರೂ ಕೂಡಾ ನ್ಯಾಯಾಂಗ ವ್ಯವಸ್ಥೆಯ ವ್ಯಾಪ್ತಿಯಲ್ಲೇ ಬರುತ್ತವೆ. ಸುಪ್ರೀಂಕೋರ್ಟ್ ವ್ಯಾಪ್ತಿಯಲ್ಲಿ ಶಬ್ಧಮಾಲಿನ್ಯ ನಿಯಂತ್ರಿಸಲು ಎಲ್ಲ ಕ್ರಮ ಕೈಗೊಳ್ಳುತ್ತೇವೆ. ಒಂದು ವೇಳೆ ಎಲ್ಲಿಯಾದರೂ ಜಾರಿಯಾಗಿಲ್ಲ ಎಂದಾದರೆ ಮುಂದೆ ಅದನ್ನು ಸರಿಪಡಿಸುತ್ತೇವೆ ಎಂದು ಹೇಳಿದರು.
'ಕೋರ್ಟ್ ಆದೇಶ ಪಾಲಿಸದವರ ಮೇಲೆ ನಾನೇ ಗುಂಡಿಟ್ಟು ಹೊಡೆಯುತೇನೆ'
ಇನ್ನು ಕರಾವಳಿಯ ಕಾಲೇಜಿನಲ್ಲಿ ಮತ್ತೆ ಹಿಜಾಬ್ ಬೇಡಿಕೆ ವಿಚಾರ ಸಂಬಂಧಿಸಿ ಪ್ರತಿಕ್ರಯಿಸಿದ ಅವರು, ಹಿಜಾಬ್ ವಿಚಾರ ನಮ್ಮ ಸರ್ಕಾರದ ಮಟ್ಟಿಗೆ ಮುಗಿದು ಹೋಗಿರುವ ಅಧ್ಯಾಯ. ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ನೀಡಿರುವ ತೀರ್ಪಿನ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.ಹಿಜಾಬ್ ಹಾಕಿಕೊಂಡು ಬಂದಿರೋದೇ ಒಂದಷ್ಟು ಅಶಾಂತಿಯನ್ನು ಸೃಷ್ಟಿಸಲು. ಸಂವಿಧಾನವನ್ನು ಸ್ವೀಕರಿಸುವವರು ಕೋರ್ಟಿನ ಆದೇಶವನ್ನು ವಿರೋಧ ಮಾಡತಕ್ಕದ್ದಲ್ಲ.ಯಾರೆಲ್ಲ ಹಿಜಾಬ್ ಹಾಕಿಕೊಂಡು ಬಂದು ವಿವಾದ ಸೃಷ್ಟಿಸಿದ್ದಾರೆ, ಅವರೆಲ್ಲರ ಮೇಲೆ ಕ್ರಮವಾಗುತ್ತೆ ಎಂದು ಕಾರವಾರದಲ್ಲಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.
ಮುತಾಲಿಕ್ ಹೇಳಿದ್ದೇನು?
ಧ್ವನಿವರ್ಧಕ ಬಳಕೆ ವಿಚಾರದಲ್ಲಿ ಸುಪ್ರೀಂಕೋರ್ಟ್ ಆದೇಶ ಪಾಲಿಸದವರ ಮೇಲೆ ನಾನೇ ಗುಂಡಿಟ್ಟು ಹೊಡೆಯುತೇನೆ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಹುಬ್ಬಳ್ಳಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ಸುಪ್ರೀಂಕೋರ್ಟ್ ಅದೇಶ ಪಾಲನೆ ಮಾಡುದವರ ಬಗ್ಗೆ ಕ್ರಮ ಯಾಕೆ ಕೈಗೊಳ್ಳುತ್ತಿಲ್ಲ. ನಿಮಗೆ ಸರ್ಕಾರ ನಡೆಸಲು ಆಗದಿದ್ದರೆ ನನಗೆ ಕೊಡಿ. ಹೇಗೆ ಸರ್ಕಾರ ನಡೆಸಬೇಕು ಅನ್ನೊದನ್ನ ತೋರಿಸುತ್ತೇನೆ. ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡದವರ ಮೇಲೆ ಗುಂಡು ಹಾಕುತ್ತೇನೆ. ನನ್ ಕೈಯಲ್ಲಿ ಸರ್ಕಾರ ಕೊಡಿ, ಗುಂಡು ಹೊಡೀತೀನಿ. ನೀವ್ ಯಾಕೆ ಬಾಯಿ ಮುಚ್ಚಿಕೊಂಡು ಕುಳಿತುಕೊಂಡಿದ್ದೀರಿ. ನಿಮ್ಮ ಕರ್ತವ್ಯವನ್ನು ನೀವು ಮಾಡಬೇಕು. ಇಲ್ಲದಿದ್ದರೆ ನಿಮ್ಮನ್ನ ಬಟಾ ಬಯಲು ಮಾಡ್ತೇವೆ. ಮುಂದಿನ ದಿನಗಳಲ್ಲಿ ಅವರನ್ನ ಆರಿಸಿ ತರಬೇಡಿ ಎಂದು ಹೇಳ್ತೇವೆ. ಸರ್ಕಾರದ ಸೊಕ್ಕು ಅಡಗಿಸುವ ತನಕ ನಮ್ಮ ಹೋರಾಟ ಮುಂದುವರೆಯುತ್ತೆ. ಬಿಜೆಪಿ ನಿಮ್ಮಪ್ಪನದು ಅಲ್ಲ, ನಾವು ರಕ್ತ ಸುರಿಸಿ ಬಿಜೆಪಿ ಕಟ್ಟಿದ್ದೇವೆ. ರಾಜಕೀಯ ಈಗ ಮಾತನಾಡುವುದಿಲ್ಲ ಎಂದಿದ್ದರು.