ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಿಧಾನಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಅವರ ಬಹಿರಂಗ ಹೇಳಿಕೆಗಳ ತಿಕ್ಕಾಟದ ಬೆನ್ನಲ್ಲೇ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅವರು, ‘ಡಿ.ಕೆ. ಶಿವಕುಮಾರ್‌ ಜತೆಗೆ ಇನ್ನೂ ಮೂರು ಮಂದಿ ಉಪಮುಖ್ಯಮಂತ್ರಿಗಳನ್ನು ನೇಮಿಸುವಂತೆ ಹೈಕಮಾಂಡ್‌ಗೆ ಮನವಿ ಮಾಡುತ್ತೇನೆ’ ಎಂದು ಹೇಳಿಕೆ ನೀಡಿ ಕಾಂಗ್ರೆಸ್‌ ವಲಯದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.

ಬೆಂಗಳೂರು (ಸೆ.16): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಿಧಾನಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಅವರ ಬಹಿರಂಗ ಹೇಳಿಕೆಗಳ ತಿಕ್ಕಾಟದ ಬೆನ್ನಲ್ಲೇ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅವರು, ‘ಡಿ.ಕೆ. ಶಿವಕುಮಾರ್‌ ಜತೆಗೆ ಇನ್ನೂ ಮೂರು ಮಂದಿ ಉಪಮುಖ್ಯಮಂತ್ರಿಗಳನ್ನು ನೇಮಿಸುವಂತೆ ಹೈಕಮಾಂಡ್‌ಗೆ ಮನವಿ ಮಾಡುತ್ತೇನೆ’ ಎಂದು ಹೇಳಿಕೆ ನೀಡಿ ಕಾಂಗ್ರೆಸ್‌ ವಲಯದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಹಿತದೃಷ್ಟಿಯಿಂದ ಇನ್ನೂ ಮೂರು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸಲು ಸಲಹೆ ನೀಡಲು ನಿರ್ಧರಿಸಿದ್ದೇನೆ. ವಿಧಾನಸಭೆ ಚುನಾವಣೆಯಲ್ಲಿ 135 ಸ್ಥಾನ ಬರಲು ಎಸ್ಸಿ-ಎಸ್ಟಿ ಹಾಗೂ ಅಲ್ಪಸಂಖ್ಯಾತರು, ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ ಬೆಂಬಲಿಸಿರುವುದು ಸಹ ಕಾರಣ. ಹೀಗಾಗಿ ಆ ಸಮುದಾಯಗಳಿಗೂ ಆದ್ಯತೆ ನೀಡಿದರೆ ಪಕ್ಷಕ್ಕೆ ಅನುಕೂಲವಾಗಲಿದೆ ಎಂಬುದು ನನ್ನ ಅಭಿಪ್ರಾಯ ಎಂದು ಹೇಳಿದ್ದಾರೆ.

ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ: ಸಂಸದ ಮುನಿಸ್ವಾಮಿ ಭವಿಷ್ಯ

ಪ್ರಸ್ತುತ ಹಿಂದುಳಿದ ವರ್ಗದ ಮುಖ್ಯಮಂತ್ರಿ (ಸಿದ್ದರಾಮಯ್ಯ), ಮುಂದುವರೆದ ವರ್ಗದ ಉಪಮುಖ್ಯಮಂತ್ರಿ (ಡಿ.ಕೆ. ಶಿವಕುಮಾರ್‌) ಇದ್ದಾರೆ. ಜತೆಗೆ ಎಸ್ಸಿ-ಎಸ್ಟಿ, ಅಲ್ಪಸಂಖ್ಯಾತರು, ವೀರಶೈವರಿಗೂ ಉಪಮುಖ್ಯಮಂತ್ರಿ ಹುದ್ದೆ ನೀಡಬೇಕು. ಈ ಬಗ್ಗೆ ಹೈಕಮಾಂಡ್‌ ಗಮನಕ್ಕೆ ತರಲು ನಿರ್ಧರಿಸಿದ್ದೇನೆ. ಈ ಬಗ್ಗೆ ಯಾರೊಂದಿಗೂ ಚರ್ಚಿಸಿಲ್ಲ. ಇನ್ನು ಮುಂದೆ ಪಕ್ಷದ ಹಿರಿಯ ನಾಯಕರೊಂದಿಗೂ ಚರ್ಚಿಸುತ್ತೇನೆ ಎಂದು ಹೇಳಿದರು.

ಜಾತಿವಾರು ಉಪಮುಖ್ಯಮಂತ್ರಿ ಹುದ್ದೆ ಕೋರುತ್ತಿದ್ದೀರಾ ಎಂಬ ಪ್ರಶ್ನೆಗೆ, ಜಾತಿವಾರು ಹುದ್ದೆಯಲ್ಲ. ಎಸ್ಸಿ-ಎಸ್ಟಿ ಎಂದರೆ ಆ ಪ್ರವರ್ಗಗಳಲ್ಲಿ ನೂರಾರು ಜಾತಿಗಳಿವೆ. ಆ ಎಸ್ಸಿ-ಎಸ್ಟಿಯಲ್ಲಿ ಒಬ್ಬರಿಗೆ ಅವಕಾಶ ನೀಡಿ. ಅದೇ ರೀತಿ ಮೂರು ಉಪಮುಖ್ಯಮಂತ್ರಿ ಹುದ್ದೆ ಮಾಡಲಿ ಎಂಬುದು ನನ್ನ ಸಲಹೆ. ಹಿಂದೆ ಬಿಜೆಪಿ ಸರ್ಕಾರ ಇದ್ದಾಗಲೂ ಇಬ್ಬರು-ಮೂವರು ಉಪಮುಖ್ಯಮಂತ್ರಿ ಇರಲಿಲ್ಲವೇ? ನಮ್ಮಲ್ಲಿಯೂ ಇದ್ದರೆ ತಪ್ಪೇನು? ಇದು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ನೆರವಾಗಲಿದೆ ಎಂದು ಹೇಳಿದ್ದಾರೆ.

ಪ್ರತಿಕ್ರಿಯೆಗೆ ಡಿಕೆಶಿ ನಕಾರ: ಕೆ.ಎನ್‌. ರಾಜಣ್ಣ ಅವರು ಡಿ.ಕೆ ಶಿವಕುಮಾರ್‌ ಜತೆಗೆ ಇನ್ನೂ ಮೂರು ಮಂದಿ ಉಪಮುಖ್ಯಮಂತ್ರಿ ಮಾಡಬೇಕು ಎಂದು ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಡಿ.ಕೆ. ಶಿವಕುಮಾರ್‌ ನಿರಾಕರಿಸಿದ್ದಾರೆ.

ಬಹಳ ಮಂದಿಗೆ ಸಿಎಂ ಆಗುವ ಅರ್ಹತೆಯೇ ಇದೆ: ಉಪಮುಖ್ಯಮಂತ್ರಿ ಮಾತ್ರವಲ್ಲ ಕಾಂಗ್ರೆಸ್‌ನಲ್ಲಿ ಬಹಳಷ್ಟು ಮಂದಿಗೆ ಮುಖ್ಯಮಂತ್ರಿ ಆಗುವ ಅರ್ಹತೆಯೇ ಇದೆ. ನನ್ನ ಪ್ರಕಾರ ಹೆಚ್ಚುವರಿ ಉಪಮುಖ್ಯಮಂತ್ರಿ ಪ್ರಸ್ತಾವನೆ ಹೈಕಮಾಂಡ್‌ ಮುಂದೆ ಇಲ್ಲ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ. ಈ ಬಗ್ಗೆ ಕೆ.ಎನ್‌. ರಾಜಣ್ಣ ಪತ್ರ ಬರೆಯುತ್ತಿದ್ದಾರಂತಲ್ಲಾ ಎಂಬ ಪ್ರಶ್ನೆಗೆ, ಪತ್ರ ಎಲ್ಲರೂ ಬರೆಯಬಹುದು. ನಮ್ಮ ವಿಚಾರ ಹೈಕಮಾಂಡ್‌ ಮುಂದೆ ಇಡುವುದು ತಪ್ಪಲ್ಲ. ಅದಕ್ಕೆ ಯಾವುದೇ ಅಡ್ಡಿಯಿಲ್ಲ. ನಮ್ಮ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ ಎಂದು ಹೇಳಿದರು. ಬಹಳಷ್ಟು ಮಂದಿ ಉಪಮುಖ್ಯಮಂತ್ರಿ ಮಾತ್ರವಲ್ಲ ಮುಖ್ಯಮಂತ್ರಿ ಆಗುವ ಅರ್ಹತೆ ಹೊಂದಿದ್ದಾರೆ. ಆದರೆ ನಾವು ಒಂದು ವ್ಯವಸ್ಥೆ ಒಳಗಡೆ ಇದ್ದೇವೆ. ಅದರಂತೆ ನಡೆದುಕೊಳ್ಳುತ್ತೇವೆ ಎಂದರು.

ರಾಜಣ್ಣ ಹೇಳಿದ್ದೇನು?: ಹಿಂದುಳಿದ ವರ್ಗದ ಸಿಎಂ (ಸಿದ್ದು), ಮುಂದುವರೆದ ವರ್ಗದ ಡಿಸಿಎಂ (ಡಿಕೆಶಿ) ಇದ್ದಾರೆ. ಇದರ ಜತೆಗೆ ಎಸ್ಸಿ-ಎಸ್ಟಿ, ಅಲ್ಪಸಂಖ್ಯಾತರು, ವೀರಶೈವರಿಗೂ ಉಪಮುಖ್ಯಮಂತ್ರಿ ಹುದ್ದೆ ನೀಡಬೇಕು. ಈ ಬಗ್ಗೆ ಹೈಕಮಾಂಡ್‌ ಗಮನಕ್ಕೆ ತರಲು ನಿರ್ಧರಿಸಿದ್ದೇನೆ. ಈ ಬಗ್ಗೆ ಯಾರೊಂದಿಗೂ ಚರ್ಚಿಸಿಲ್ಲ.

ಹೆಚ್ಚುವರಿ ಉಪಮುಖ್ಯಮಂತ್ರಿಗಳ ನೇಮಕ ವಿಚಾರ ಮುಖ್ಯಮಂತ್ರಿ ಹಾಗೂ ಹೈಕಮಾಂಡ್‌ಗೆ ವಿವೇಚನೆಗೆ ಬಿಟ್ಟದ್ದು. ಅದರ ಬಗ್ಗೆ ನಾನೇನೂ ಮಾತನಾಡಲು ಹೋಗುವುದಿಲ್ಲ.
- ಕೆ.ಎಚ್‌. ಮುನಿಯಪ್ಪ, ಆಹಾರ ಸಚಿವ

ಬಿಜೆಪಿಯವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ: ಸಚಿವ ಭೈರತಿ ಸುರೇಶ್ ಹೀಗೆ ಹೇಳಿದ್ಯಾಕೆ?

ಇನ್ನೂ ಮೂರು ಮಂದಿ ಉಪಮುಖ್ಯಮಂತ್ರಿಗಳ ನೇಮಿಸುವ ಬಗ್ಗೆ ನನಗೆ ಗೊತ್ತಿಲ್ಲ. ಅದರ ಬಗ್ಗೆ ರಾಜಣ್ಣ ಅವರನ್ನೇ ಕೇಳಬೇಕು. ಸರ್ಕಾರ ನಡೆಸುತ್ತಿರುವುದು ಕೆ.ಎನ್‌.ರಾಜಣ್ಣ. ಹೀಗಾಗಿ ಅವರನ್ನೇ ಕೇಳಬೇಕು. ನಾನು ಒಬ್ಬ ಲೋಕಸಭೆ ಸದಸ್ಯ ಮಾತ್ರ.
- ಡಿ.ಕೆ. ಸುರೇಶ್‌, ಸಂಸದ