ಸುಳ್ಳು ಹೇಳುವುದು, ಅಪಪ್ರಚಾರ ಮಾಡುವುದೇ ಬಿಜೆಪಿ ಜಾಯಮಾನ: ಸಚಿವ ಜಾರ್ಜ್
ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಬಗ್ಗೆ ಚುನಾವಣೆಗೆ ಮೊದಲು ಅಪಪ್ರಚಾರ ಮಾಡಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೂ ಅಪಪ್ರಚಾರ ಮಾಡುತ್ತಿದ್ದಾರೆ. ಸುಳ್ಳು ಹೇಳುವುದು, ಅಪಪ್ರಚಾರ ಮಾಡುವುದು ಬಿಜೆಪಿಯವರ ಜಾಯಮಾನವಾಗಿದೆ ಎಂದು ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಶೃಂಗೇರಿ (ಜೂ.19): ಬಿಜೆಪಿಯವರು ಸುಳ್ಳು ಹೇಳಿಕೊಂಡು ಅಧಿಕಾರ ನಡೆಸುತ್ತಾ ಬಂದರು. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಬಗ್ಗೆ ಚುನಾವಣೆಗೆ ಮೊದಲು ಅಪಪ್ರಚಾರ ಮಾಡಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೂ ಅಪಪ್ರಚಾರ ಮಾಡುತ್ತಿದ್ದಾರೆ. ಸುಳ್ಳು ಹೇಳುವುದು, ಅಪಪ್ರಚಾರ ಮಾಡುವುದು ಬಿಜೆಪಿಯವರ ಜಾಯಮಾನವಾಗಿದೆ ಎಂದು ರಾಜ್ಯಇಂಧನ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಶೃಂಗೇರಿ ಶ್ರೀ ಶಾರದಾ ಪೀಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುವ ಪಕ್ಷ. ಬಿಜೆಪಿಯ ಹಾಗೆ ಹೇಳುವುದೊಂದು ಮಾಡುವುದೊಂದು ಅಲ್ಲ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕಿಸುವ ನೈತಿಕತೆ ಇವರಿಗಿಲ್ಲ. ಇವರು ಅಧಿಕಾರ ನಡೆಸಿದಾಗ ಏನು ಮಾಡಿದರು. ಕೇಂದ್ರದಲ್ಲಿ ಬಿಜೆಪಿ ಇತ್ತು. ಅತಿ ವೃಷ್ಟಿ, ನೆರೆ ಪರಿಹಾರ ಸೇರಿದಂತೆ ಅಭಿವೃದ್ಧಿಗೆ ಎಷ್ಟುಅನುದಾನ ತಂದರು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿಗಳು ಇದ್ದರು. ಚಿಕ್ಕಮಗಳೂರು ಉಡುಪಿ ಸಂಸದರು ಕೇಂದ್ರ ಸಚಿವರು ಇದ್ದರೂ ಏನು ಅಭಿವೃದ್ಧಿ ಮಾಡಿದರು.
ಬೆಳಗಾವಿ ಕ್ಷೇತ್ರದ ಜನರ ಉಪಕಾರ ಮರೆಯಲು ಸಾಧ್ಯವಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ
ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್ ಎಂದರು. ಯಾರ ವಿಕಾಸವೂ ಆಗಿಲ್ಲ. ಕೇವಲ ಇವರು ವಿಕಾಸ ಹೊಂದಿದರು. ಜನ ಸಾಮಾನ್ಯರ, ಬಡವರ ಉದ್ದಾರ ಮಾಡಲಿಲ್ಲ. ಬದಲಾಗಿ ಅಂಬಾನಿ, ಅದಾನಿಗಳ ಉದ್ಧಾರ ಮಾಡಿದರು. ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂದು ಹೊರಟರು. ಅದು ಎಂದಿಗೂ ಸಾದ್ಯವಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ಇತಿಹಾಸವಿದೆ. ಕಾಂಗ್ರೆಸ್ ಪಕ್ಷ ಜನ ಸಾಮಾನ್ಯರೊಂದಿಗೆ ಇದೆ. ಜನರ ಆಶೀರ್ವಾದವೇ ಪಕ್ಷಕ್ಕೆ ಶ್ರೀರಕ್ಷೆ. ಸರ್ವಧರ್ಮ, ಸಮನ್ವಯತೆಯೇ ಪಕ್ಷದ ಧ್ಯೇಯ.
ನಾನು ಹಿಂದಿನಿಂದಲೂ ಶೃಂಗೇರಿ ಮಠಕ್ಕೆ ಬಂದು ಶಾರದಾಂಬೆ, ಜಗದ್ಗುರುಗಳ ಆಶೀರ್ವಾದ ಪಡೆಯುತ್ತಿದ್ದೇನೆ. ಮಳೆ, ಬೆಳೆ ನಾಡು ಸಮೃದ್ಧಿಯಾಗಲೀ, ಶಾಂತಿ ಸುವ್ಯವಸ್ಥೆ ನೆಲೆಸಲಿ, ಜನರು ನೆಮ್ಮದಿಯಿಂದ ಇರಲಿ. ಚುನಾವಣೆಯಲ್ಲಿ ಘೋಷಿಸಿರುವ 5 ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರುತ್ತೇವೆ. ಅನ್ನಭಾಗ್ಯ ಯೋಜನೆ ಜಾರಿ ಗೊಳಿಸುತ್ತೇವೆ. ಕೇಂದ್ರ ಸರ್ಕಾರ ಮೊದಲು ಅಕ್ಕಿ ನೀಡುತ್ತೇವೆ ಎಂದು ಒಪ್ಪಿ ಈಗ ನೀಡುವುದಿಲ್ಲ ಎಂದು ಉಲ್ಟಾ ಹೊಡೆದಿದ್ದಾರೆ. ನಾವು ಹಣಕ್ಕಾಗಿ ಕೇಳಿದ್ದು, ಉಚಿತವಲ್ಲ. ಬೇರೆ ರಾಜ್ಯದಿಂದ ಅಕ್ಕಿ ತರಿಸಿ ಅನ್ನಭಾಗ್ಯ ಯೋಜನೆ ಅನುಷ್ಠಾನ ಮಾಡುತ್ತೇವೆ ಎಂದರು.
ಮೇಕೆದಾಟು ಯೋಜನೆಯಿಂದ ಹಲವು ಜಿಲ್ಲೆಗೆ ನೀರು: ಡಿ.ಕೆ.ಶಿವಕುಮಾರ್
ಶ್ರೀಶಾರದಾಂಬೆ, ಜಗದ್ಗುರುಗಳ ಆಶೀರ್ವಾದ ಪಡೆದ ಸಚಿವ: ಬೆಳಿಗ್ಗೆ ಹೆಲಿಕಾಪ್ಟರ್ ಮೂಲಕ ಮೆಣಸೆ ಕೊರಡ್ಕಲ್ ಹೆಲಿಪ್ಯಾಡ್‌ಗೆ ಆಗಮಿಸಿದ ಸಚಿವರು, ಕಾರ್ ಮೂಲಕ ಮಠಕ್ಕೆ ಭೇಟಿ ನೀಡಿದರು. ನಂತರ ಶ್ರೀಶಾರದಾ ದೇವಿ ದೇವಾಲಯಕ್ಕೆ ತೆರಳಿ ಶ್ರೀಶಾರದಾಂಬೆಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಶ್ರೀಶಂಕರಾಚಾರ್ಯ ದೇವಾಲಯ ಹಾಗೂ ಶ್ರೀ ತೋರಣ ಗಣಪತಿ ದೇವಾಲಯಕ್ಕೆ ತೆರಳಿ ದರ್ಶನ ಪಡೆದು ದೇವಾಲಯದ ಎದುರು ಈಡುಗಾಯಿ ಒಡೆದರು. ಶ್ರೀ ಮಠದ ನರಸಿಂಹವನದಲ್ಲಿನ ಶ್ರೀ ಗುರುಭವನಕ್ಕೆ ತೆರಳಿ ಜಗದ್ಗುರುಗಳ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಶಾಸಕ ಟಿ.ಡಿ.ರಾಜೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ. ಅಂಶುಮಂತ್, ಸ್ಥಳಿಯ ಮುಖಂಡರಾದ ನಟರಾಜ್, ಶಕಿಲಾ, ಪೂರ್ಣಿಮಾ, ವೆಂಕಟೇಶ್ ಮತ್ತಿತರರು ಇದ್ದರು.