ಬಿಜೆಪಿ ತೊರೆದು, ಕಾಂಗ್ರೆಸ್ ಸೇರ್ತಾರಾ?: ಸಚಿವ ನಾರಾಯಣಗೌಡ ಹೇಳಿದ್ದಿಷ್ಟು
ಸಿದ್ದರಾಮಯ್ಯನವರ ಕುರಿತು ನಾನು ಹೇಳಿರುವ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ. ಕಾರ್ಯಕ್ರಮದಲ್ಲಿ ಸಾಂದರ್ಭಿಕವಾಗಿ ಸಿದ್ದರಾಮಯ್ಯರ ಬಗ್ಗೆ ಉಲ್ಲೇಖಿಸಲಾಯಿತು. ಅಂದ ಮಾತ್ರಕ್ಕೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತೇನೆ ಎಂದಲ್ಲ. ನನಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಸಮಾನ ಎದುರಾಳಿಗಳು: ಕೆ.ಸಿ.ನಾರಾಯಣಗೌಡ

ಮಂಡ್ಯ(ಫೆ.02): ನಾನು ಬಿಜೆಪಿ ತೊರೆದು, ಕಾಂಗ್ರೆಸ್ ಸೇರುತ್ತೇನೆಂಬುದು ಕೇವಲ ವದಂತಿ. ನಾನು ಬಿಜೆಪಿ ಬಿಡುವ ಮಾತೇ ಇಲ್ಲ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಸ್ಪಷ್ಟಪಡಿಸಿದ್ದಾರೆ. ಕೆ.ಆರ್.ಪೇಟೆ ತಾಲೂಕು ಹೊನ್ನೇನಹಳ್ಳಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯನವರ ಕುರಿತು ನಾನು ಹೇಳಿರುವ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ. ಕಾರ್ಯಕ್ರಮದಲ್ಲಿ ಸಾಂದರ್ಭಿಕವಾಗಿ ಸಿದ್ದರಾಮಯ್ಯರ ಬಗ್ಗೆ ಉಲ್ಲೇಖಿಸಲಾಯಿತು. ಅಂದ ಮಾತ್ರಕ್ಕೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತೇನೆ ಎಂದಲ್ಲ. ನನಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಸಮಾನ ಎದುರಾಳಿಗಳು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೆ.ಆರ್.ಪೇಟೆಯಲ್ಲಿ ಕಮಲ ಅರಳಿಸುವ ಮೂಲಕ ಮಂಡ್ಯದಲ್ಲಿ ಬಿಜೆಪಿ ಖಾತೆ ತೆರೆದ ನನಗೆ ಪಕ್ಷ ಎಲ್ಲವನ್ನೂ ನೀಡಿದೆ. ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಎರಡು-ಮೂರು ಖಾತೆಗಳನ್ನು ನೀಡುವ ಜೊತೆಗೆ ಕೆ.ಆರ್.ಪೇಟೆ ಕ್ಷೇತ್ರದ ಅಭಿವೃದ್ಧಿಗೆ 2 ಸಾವಿರ ಕೋಟಿ ರು.ಗೂ ಹೆಚ್ಚಿನ ಅನುದಾನ ನೀಡಿದ್ದಾರೆ. ಹೀಗಿರುವಾಗ ನಾನೇಕೆ ಪಕ್ಷ ಬಿಡಲಿ? ಎಂದಿದ್ದಾರೆ.
ಕಾಂಗ್ರೆಸ್‌ನದು ಪ್ರಜಾ ಗೋವಿಂದ ಯಾತ್ರೆ: ಸಚಿವ ಅಶ್ವತ್ಥ ನಾರಾಯಣ್
ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ಮತ್ತಷ್ಟು ಪ್ರಬಲವಾಗಿ ಸಂಘಟಿಸುವ ಗುರಿ ಹೊಂದಲಾಗಿದ್ದು, ಈಗಾಗಲೇ ಅಮಿತ್ ಶಾ ನೇತೃತ್ವದಲ್ಲಿ ಸಭೆಗಳನ್ನು ನಡೆಸಲಾಗಿದೆ. ಅಮಿತ್ ಶಾ ಎಂಟ್ರಿಯಿಂದ ಕಾಂಗ್ರೆಸ್-ಜೆಡಿಎಸ್‌ಗೆ ನಡುಕ ಶುರುವಾಗಿದೆ. ಆದುದರಿಂದ ರಾಜಕೀಯ ಕಾರ್ಯಕ್ರಮವಲ್ಲದ, ಸಮಾಜದ ಕಾರ್ಯಕ್ರಮದ ಭಾಷಣದಲ್ಲಿ ಸಾಂದರ್ಭಿಕವಾಗಿ ಹೇಳಿದ ಮಾತನ್ನೇ ರಾಜಕೀಯ ವಿರೋಧಿಗಳು ತಪ್ಪಾಗಿ ಬಿಂಬಿಸುವ ಮೂಲಕ ನಮ್ಮ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸಲು ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.