ಸಚಿವ ಮಾಧುಸ್ವಾಮಿ ಅವರು ಸುತ್ತೂರು ಮಠಕ್ಕೆ ಭೇಟಿ ನೀಡಿದ್ದು, ಸ್ವಾಮೀಜಿಗಳ ಜೊತೆ 1 ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದರು. ಬಳಿಕ ಮಾಧ್ಯಮಗಳಿಗೆ ಅಚ್ಚರಿಯ ಹೇಳಿಕೆ ನೀಡಿದರು.
ಮೈಸೂರು, (ಜ.22): ಖಾತೆ ಅದಲು-ಬದಲು ಹಿನ್ನೆಲೆ ಸುತ್ತೂರು ಮಠಕ್ಕೆ ದೌಡಾಯಿಸಿದ ಸಚಿವ ಜೆ.ಸಿ. ಮಾಧುಸ್ವಾಮಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಜತೆ ಸುದೀರ್ಘ ಚರ್ಚೆ ಮಾಡಿದರು.
ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಇಂದು (ಶುಕ್ರವಾರ) ಭೇಟಿ ನೀಡಿದ ಮಾಧುಸ್ವಾಮಿ, 1 ಗಂಟೆಗೂ ಹೆಚ್ಚು ಕಾಲ ಸ್ವಾಮೀಜಿ ಜತೆ ಮಾತುಕತೆ ನಡೆಸಿದರು. ಇದೇ ವೇಳೆ ಶಾಸಕ ಮುನಿರತ್ನ ಕೂಡ ಆಗಮಿಸಿ. ಪ್ರತ್ಯೇಕವಾಗಿ ಸ್ವಾಮೀಜಿ ಜತೆ ಮಾತನಾಡಿದರು.
ಸಣ್ಣ ನೀರಾವರಿ ಖಾತೆ ಕಿತ್ತುಕೊಂಡು ಕನ್ನಡ ಮತ್ತು ಸಂಸ್ಕೃತಿ, ವೈದ್ಯಕೀಯ ಶಿಕ್ಷಣ ಇಲಾಖೆ ಕೊಟ್ಟಿರುವುದಕ್ಕೆ ಅಸಮಾಧಾನಗೊಂಡಿದ್ದ ಮಾಧುಸ್ವಾಮಿಗೆ, ಇದೀಗ ವೈದ್ಯಕೀಯ ಶಿಕ್ಷಣ ಜೊತೆ ಹಜ್ ಮತ್ತು ವಕ್ಫ್ ಖಾತೆ ಕೊಡಲಾಗಿದೆ.
ಇನ್ನು ಈ ಬಗ್ಗೆ ಸುದ್ದಿಗಾರರೊಂದಿಗೆ ಮತನಾಡಿದ ಮಾಧುಸ್ವಾಮಿ, 'ನನಗೆ ಮತ್ತೆ ಖಾತೆ ಬದಲಾಯ್ತಾ? ಯಾವುದು ತೆಗೆದು, ಯಾವುದು ಕೊಟ್ರು? ನನಗೆ ಏನೂ ಗೊತ್ತಿಲ್ಲಪ್ಪ.. ಈಗ ನೀವು ಹೇಳಿದ ಮೇಲೆಯೇ ಖಾತೆ ಬದಲಾಗಿದ್ದು ಗೊತ್ತಾಗಿದ್ದು ಎಂದು ಅಚ್ಚರಿ ವ್ಯಕ್ತಪಡಿಸಿದರು.
ರಾಜೀನಾಮೆ ವರೆಗೂ ಹೋಗಿ ಕೂಲ್ ಆದ ಸಚಿವ ಮಾಧುಸ್ವಾಮಿ..!
ಬೆಳಗ್ಗೆಯಿಂದ ಪ್ರವಾಸದಲ್ಲಿದ್ದೇನೆ. ನನಗೆ ಮತ್ತೆ ಖಾತೆ ಬದಲಾದ ಬಗ್ಗೆ ಮಾಹಿತಿ ಇಲ್ಲ. ಖಾತೆ ಬದಲಾಗಿದ್ದು ನನ್ನ ಗಮನಕ್ಕೂ ಬಂದಿಲ್ಲ. ಸಣ್ಣ ನೀರಾವರಿ ಖಾತೆ ಬದಲಾಯಿಸಿದ್ದಕ್ಕೆ ನನಗೆ ಸ್ವಲ್ಪ ಬೇಸರವಾಗಿದ್ದು ನಿಜ. ಹಾಗೆಂದು ಯಾರು ಯಾವ ಖಾತೆಯನ್ನು ಸುದೀರ್ಘವಾಗಿ ನಿಭಾಯಿಸಲು ಸಾಧ್ಯವಿಲ್ಲ. ಇದೇನೂ ನನಗೆ ಡಿಮೋಷನ್ ಅಲ್ಲ. ವೈದ್ಯಕೀಯ ಖಾತೆಯೂ ಪ್ರಭಾವಿ ಖಾತೆ. ಇದನ್ನು ನಿಭಾಯಿಸಲು ಕೂಡ ನಾನು ಶಕ್ತ. ನನ್ನ ಕೈಯಲ್ಲಿ ನಿಭಾಯಿಸಲು ಸಾಧ್ಯವಿಲ್ಲ ಎಂದು ಯಾರು ಅಂದುಕೊಳ್ಳಬೇಡಿ ಎಂದು ಸ್ಪಷ್ಟಪಡಿಸಿದರು.
ಕೆಲ ಪ್ರಭಾವಿ ಖಾತೆಗಳು ಸಿಎಂ ಬಳಿಯೇ ಇದ್ದರೆ ಅವರಿಗೆ ಕಾರ್ಯದ ಒತ್ತಡ ಹೆಚ್ಚಾಗುತ್ತೆ. ಆದರೆ, ಸಿಎಂ ತಾವು ನಿಭಾಯಿಸುತ್ತೇನೆ ಎಂದು ಕೆಲವನ್ನು ಇಟ್ಟುಕೊಂಡಿದ್ದಾರೆ. ಇದು ಅವರ ಪರಮಾಧಿಕಾರ. ಹಿಂದೆಯೂ ಸಿಎಂಗಳು ಪ್ರಭಾವಿ ಖಾತೆಗಳ ತಮ್ಮ ಬಳಿ ಇಟ್ಟು ಕೊಂಡಿದ್ದರು ಎಂದು ಹೇಳಿದರು.
ನಾನು ಗ್ರಾಮೀಣ ಪ್ರದೇಶದ ಹಿನ್ನೆಲೆ ಉಳ್ಳವನು. ಆದ್ದರಿಂದ ರೈತರಿಗೆ ಅನುಕೂಲ ಮಾಡಿಕೊಡುವ ಖಾತೆ ಬೇಕು ಅಂತ ಕೇಳಿದ್ದೆ. ಒಂದು ಖಾತೆಯಲ್ಲಿ ಇರುತ್ತೇವೆ. ಏಕಾಏಕಿ ಖಾತೆ ಬದಲಾದಾಗ ಬೇಸರ ಆಗುವುದು ಸಹಜ. ಕಾನೂನು ಖಾತೆಗೆ ಹೋಲಿಸಿದರೆ ವೈದ್ಯಕೀಯ ಶಿಕ್ಷಣ ನಾಲ್ಕುಪಟ್ಟು ದೊಡ್ಡ ಖಾತೆ. ಅದರ ಬಗ್ಗೆ ನನಗೆ ಯಾವುದೇ ಬೇಸರ ಇಲ್ಲ ಎಂದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 22, 2021, 6:47 PM IST