ಬೆಂಗಳೂರು, (ಜ.21): ಮುಖ್ಯಮಂತ್ರಿ ಬಿಎಸ್‌ಯಡಿಯೂರಪ್ಪ ಅವರು 7 ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದಾರೆ. ಇದರ ಜೊತೆಗೆ ಕೆಲ ಹಳೇ ಸಚಿವರುಗಳ ಖಾತೆಯಲ್ಲೂ ಬದಲಾವಣೆ ಮಾಡಲಾಗಿದ್ದು, ಅಸಮಾಧಾನ ಸ್ಫೋಟಗೊಂಡಿದೆ.

ಹೌದು...ಇದ್ದದ್ದನ್ನ ಕಸಿದುಕೊಂಡು, ಬದಲಿ ಖಾತೆ ಕೊಟ್ಟಿದ್ದಕ್ಕೆ ಕೆಲ ಸಚಿವರುಗಳು ಅಸಮಾಧಾನಗೊಂಡಿದ್ದಾರೆ. ಇದರಿಂದ ಕೆಲ ಸಚಿವರುಗಳು ಸಿಎಂ ಬಿಎಸ್ ಯಡಿಯೂರಪ್ಪನವರ ಮೇಲೆ ಮುನಿಸಿಕೊಂಡು ರಂಂಪಾಟವೇ ಮಾಡಿದರು.

ಅದರಲ್ಲೂ ಸಚಿವ ಮಾಧುಸ್ವಾಮಿ ಅಂತೂ ಮುನಿಸಿಕೊಂಡು ನಿಗೂಢ ಸ್ಥಳಕ್ಕೆ ಹೋಗಿದ್ರು. ಸಿಎಂ ಸಿದ್ಧಗಂಗಾ ಮಟಕ್ಕೆ ಹೋಗಿದ್ರು ಸಹ ಜಿಲ್ಲಾ ಉಸ್ತುವಾರಿ ಮಾಧುಸ್ವಾಮಿ ಗೈರಾಗುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದರು.

ಈ ಖಾತೆ ನಾನೇನು ಮಾಡಲಿ? ಬೇಡವೇ ಬೇಡ ಎಂದ ಸಚಿವ

ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಸಣ್ಣ ನೀರಾವರಿ ಇಲಾಖೆಯನ್ನು ಕಿತ್ತುಕೊಂಡು ಅವರಿಗೆ ಇದೀಗ ಕನ್ನಡ ಮತ್ತು ಸಂಸ್ಕೃತಿಯನ್ನು ನೀಡಲಾಗಿದೆ. ಇದರಿಂದ ರೊಚ್ಚಿಗೆದ್ದ ಮಾಧುಸ್ವಾಮಿ ಸ್ವಾಭಿಮಾನಕ್ಕೆ ಧಕ್ಕೆಯಾಯ್ತು ಎಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಹಂತಕ್ಕೆ ಹೋಗಿದ್ರು ಎನ್ನಲಾಗಿದೆ. ಆದ್ರೆ, ಇದೀಗ ಎಲ್ಲವೂ ಕೂಲ್ ಆಗಿದೆ.

ಕೂಲ್ ಆದ ಮಾಧುಸ್ವಾಮಿ
ಯೆಸ್...ಮೈತ್ರಿ ಸರ್ಕಾರ ಪತನಗೊಂಡ ಬಳಿಕ ವಿಧಾನಸೌಧದಲ್ಲಿ ವಿರೋಧ ಪಕ್ಷಗಳಿಗೆ ಪಾಯಿಂಟ್‌ ಟು ಪಾಯಿಂಟ್ ಅಬ್ಬರಿ ಬೊಬ್ಬಿರಿಯುತ್ತಿದ್ದ ಮಾಧುಸ್ವಾಮಿ ಅವರ ಖಾತೆ ಬದಲಾವಣೆ ಮಾಡಿದ್ದಕ್ಕೆ ಅವರು ತೀವ್ರ ಅಸಮಾಧಾನಗೊಂಡಿದ್ದರು. ಅಲ್ಲದೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಹಂತಕ್ಕೆ ಹೋಗಿ ಇದೀಗ ಶಾಂತರಾಗಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಧುಸ್ವಾಮಿ, ಸಣ್ಣ ನೀರಾವರಿ ಬಗ್ಗೆ ಆಸಕ್ತಿ ಇದೆ ಎಂದಿದ್ದೇನೆ. 2 ದಿನದ ಹಿಂದೆ ಸಿಎಂ ಕೇಳಿದಾಗ ಹೇಳಿದ್ದೇನೆ. ಈಗ ನಾನು ಸಿಎಂ ನಿರ್ಧಾರವನ್ನು ಪ್ರಶ್ನೆ ಮಾಡಲು ಹೋಗಲ್ಲ ಎಂದು ಸ್ಪಷ್ಟಪಡಿಸಿದರು.