ಸುರೇಶ್ ಅಂಗಡಿ ನಿಧನದ ಹಿನ್ನೆಲೆಯಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಬೇಕಿದೆ. ಇನ್ನೂ ಇದಕ್ಕೆ ದಿನಾಂಕ ನಿಗದಿಯಾಗಿಲ್ಲ ಆಗಲೇ ಬಿಜೆಪಿಯಲ್ಲಿ ಟಿಕೆಟ್ ಚರ್ಚೆಗಳು ಆರಂಭವಾಗಿವೆ.
ಬೆಂಗಳೂರು, (ಜ.19): ಕೇಂದ್ರ ಸಚಿವ ಅಮಿತ್ ಶಾ ಅವರು ಬೆಳಗಾವಿಗೆ ಬಂದು ಹೋದ ಮೇಲೆ ಕ್ಷೇತ್ರದಲ್ಲಿ ಬೇರೆ ವಾತಾವರಣ ಸೃಷ್ಟಿಸುತ್ತಿದೆ.
ಹೌದು.. ಅಮಿತ್ ಶಾ ಅವರು ಮೊನ್ನೇ ಬೆಳಗಾವಿಯಲ್ಲಿ ಜನಸೇವಕ್ ಸಮಾವೇಶ ಮಾಡಿದ್ದಾರೆ. ಇದರ ಬೆಳಗಾವಿ ಬಿಜೆಪಿ ನಾಯಕರುಗಳು ಫುಲ್ ಆಕ್ವೀವ್ ಆಗಿದ್ದಾರೆ. ಅದರಲ್ಲೂ ಸುರೇಶ್ ಅಂಗಡಿ ಪುತ್ರಿ ಶ್ರದ್ಧಾ ಶೆಟ್ಟರ್ ಅವರಿಗೆ ಟಿಕೆಟ್ ನೀಡುವ ಎಲ್ಲಾ ಸಾಧ್ಯತೆಗಳಿವೆ. ಇದರ ಮಧ್ಯೆ ಸಚಿವ ಜಗದೀಶ್ ಶೆಟ್ಟರ್ ಹೆಸರು ಸಹ ಕೇಳಿಬರುತ್ತಿದ್ದು, ಇದೀಗ ಈ ಬಗ್ಗೆ ಅವರೇ ಪ್ರತಿಕಿಯೆ ಕೊಟ್ಟಿದ್ದಾರೆ.
ಬೆಳಗಾವಿ ಲೋಕಸಭಾ ಉಪಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ, ನನಗೆ ಆಸಕ್ತಿ ಇಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ಹಾಗಿದ್ದರೂ ಯಾರೋ ನನ್ನ ಹೆಸರನ್ನು ತೇಲಿ ಬಿಡುತ್ತಿದ್ದಾರೆ ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದ್ದಾರೆ.
ಬೆಳಗಾವಿಗೆ ಶಾ ಭೇಟಿ ಬೆನ್ನಲ್ಲೇ ಇವರಿಗೆ ಲೋಕಸಭಾ ಬೈ ಎಲೆಕ್ಷನ್ ಟಿಕೆಟ್ ಫಿಕ್ಸ್ ಆಯ್ತಾ?
ನಗರದಲ್ಲಿ ಇಂದು (ಮಂಗಳವಾರ) ನೂತನ “ಕೈಗಾರಿಕಾ ನೀತಿ 2020-25′ ಬಿಡುಗಡೆಗೊಳಿಸಿ ಜಾಗೃತಿ ಮೂಡಿಸುವ ಸಭೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಲೋಕಸಭೆ ಉಪಚುನಾವಣೆ ದಿನಾಂಕ ಇನ್ನೂ ಘೋಷಣೆಯಾಗದ ಕಾರಣ ಅಭ್ಯರ್ಥಿ ಬಗ್ಗೆ ಪಕ್ಷದಲ್ಲಿ ಯಾವುದೇ ಚರ್ಚೆಯಾಗಿಲ್ಲ. ಎರಡು ಬಾರಿ ನಡೆದ ಕೋರ್ ಕಮಿಟಿ ಸಭೆಯಲ್ಲೂ ಅಭ್ಯರ್ಥಿ ಆಯ್ಕೆ ಬಗ್ಗೆ ಮಾತುಕತೆ ನಡೆದಿಲ್ಲ ಎಂದು ಹೇಳಿದರು.
ಬೆಳಗಾವಿ ಲೋಕಸಭಾ ಉಪಚುನಾವಣೆ, ಬಸವಕಲ್ಯಾಣ, ಮಸ್ಕಿ ವಿಧಾನಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಉಸ್ತುವಾರಿಗಳ ನೇಮಕವಾಗಿದ್ದು, ತಳಮಟ್ಟದಲ್ಲಿ ಸಿದ್ಧತಾ ಕಾರ್ಯ ನಡೆಯುತ್ತಿದೆ. ಅಭ್ಯರ್ಥಿ ಆಯ್ಕೆ ಹೊರತುಪಡಿಸಿ ಉಳಿದ ಪ್ರಕ್ರಿಯೆ ನಡೆದಿದೆ. ಬೆಳಗಾವಿ ಲೋಕಸಭೆ ಉಪಚುನಾವಣೆಗೆ ಯಾರದ್ದೇ ಹೆಸರು ಪ್ರಸ್ತಾಪವಾದರೂ ದಿನಾಂಕ ಘೋಷಣೆಯಾಗುವವರೆಗೆ ಅಭ್ಯರ್ಥಿಯನ್ನು ಅಂತಿಮಗೊಳಿಸುವುದಿಲ್ಲ ಎಂದು ತಿಳಿಸಿದರು.
ತಮಗೆ ಅಥವಾ ತಮ್ಮ ಕುಟುಂಬದವರಿಗೆ ಸ್ಫರ್ಧಿಸುವ ಆಸೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಜಗದೀಶ ಶೆಟ್ಟರ್, ಇದು ಆಸೆ ಪ್ರಶ್ನೆ ಅಲ್ಲ. ಪಕ್ಷ, ಹೈಕಮಾಂಡ್ ಕೈಗೊಳ್ಳುವ ನಿರ್ಧಾರದ ಮೇಲೆ ಮುಂದಿನ ಆಲೋಚನೆ ಇರುತ್ತದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಳಿಯೂ ಈ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದರು.
ತಾವೇ ಅಭ್ಯರ್ಥಿಯಾಗುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ, ಬೆಳಗಾವಿ ಲೋಕಸಭೆ ಉಪಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ ಎಂದು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೇನೆ. ಇತ್ತೀಚೆಗೆ ಅಮಿತ್ ಶಾ ಅವರೊಂದಿಗೆ ಇಡೀ ದಿನ ಇದ್ದಾಗಲೂ ಒಂದು ಬಾರಿಯೂ ಚರ್ಚೆ ಮಾಡಿಲ್ಲ. ಯಾರೋ ನನ್ನ ಹೆಸರನ್ನು ತೇಲಿ ಬಿಡುತ್ತಿದ್ದಾರೆ. ಆ ಸುದ್ದಿ ನಂಬಬೇಡಿ. ಸ್ಪರ್ಧೆಗೆ ನನಗೆ ಆಸಕ್ತಿ ಇಲ್ಲ, ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 19, 2021, 7:24 PM IST