ಕರ್ನಾಟಕದ ಜನ ಪಾಠ ಕಲಿಸಿದರೂ ಬುದ್ಧಿ ಬಂದಿಲ್ಲವಾ?: ಸಚಿವ ಎಚ್.ಕೆ.ಪಾಟೀಲ್
ಕರ್ನಾಟಕ ಜನ ಪಾಠ ಕಲಿಸಿದರೂ ಬುದ್ಧಿ ಬಂದಿಲ್ಲವಾ? ಯಾವ ಮಟ್ಟದಲ್ಲಿ ರಾಜಕಾರಣ ಮಾಡುತ್ತಿದ್ದೀರಿ? ಜನಪರ ಕಾರ್ಯಕ್ರಮಗಳ ಕುತ್ತಿಗೆ ಹಿಸುಕುವ ಕೆಲಸ ಮಾಡಿದರೇ ನೆಟ್ಟಗಾಗಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.
ಗದಗ (ಜೂ.20): ಕರ್ನಾಟಕ ಜನ ಪಾಠ ಕಲಿಸಿದರೂ ಬುದ್ಧಿ ಬಂದಿಲ್ಲವಾ? ಯಾವ ಮಟ್ಟದಲ್ಲಿ ರಾಜಕಾರಣ ಮಾಡುತ್ತಿದ್ದೀರಿ? ಜನಪರ ಕಾರ್ಯಕ್ರಮಗಳ ಕುತ್ತಿಗೆ ಹಿಸುಕುವ ಕೆಲಸ ಮಾಡಿದರೇ ನೆಟ್ಟಗಾಗಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು. ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 12ನೇ ತಾರೀಖು ಕೇಂದ್ರ ಸರ್ಕಾರದ ಅಂಗ ಸಂಸ್ಥೆ ಎಫ್‌ಸಿಐಗೆ ಪತ್ರ ಬರೆದು ಕೇಳಿದಾಗ ಅವರು ನಿಮಗೆ ಎಷ್ಟುಅವಶ್ಯ ಇದೆ ಅಷ್ಟು ಅಕ್ಕಿ ಕೊಡುತ್ತೇವೆ ಅಂತಾ ಹೇಳಿದ್ದರು. ಎಫ್‌ಸಿಐ ಡೆಪ್ಯೂಟಿ ಜನರಲ್ ಮ್ಯಾನೇಜರ್ ಮುಖ್ಯಮಂತ್ರಿಗಳ ಜೊತೆಗೂ ಮಾತನಾಡಿದ್ದರು.
ಇನ್ನೇನು ಪ್ರಕ್ರಿಯೆ ಆರಂಭಿಸಬೇಕು ಎನ್ನುವಷ್ಟರಲ್ಲಿ ರಾಜ್ಯಗಳಿಗೆ ಅಕ್ಕಿ ಕೊಡಲ್ಲ ಎನ್ನುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು. 13ನೇ ತಾರೀಖು ಎಫ್‌ಸಿಐ ಪತ್ರ ಬರೆದು ಈಶಾನ್ಯ ರಾಜ್ಯ ಹೊರತುಪಡಿಸಿ ಬೇರೆ ರಾಜ್ಯಗಳಿಗೆ ಅಕ್ಕಿ ಕೊಡಲ್ಲ ಅಂತಾ ತಿಳಿಸಿದೆ. ಎಫ್‌ಸಿಐ ಬಳಿ 15 ಲಕ್ಷ ಮೆಟ್ರಿಕ್ ಟನ್ ದಾಸ್ತಾನಿದೆ, ಖಾಸಗಿಯವರಿಗೆ ಮಾರಾಟ ಮಾಡಲು ಹೊರಟಿದ್ದಾರೆ. ನಮಗೆ ಬೇಕಾಗಿದ್ದು 2 ಲಕ್ಷ 8 ಸಾವಿರ ಟನ್ ಅಕ್ಕಿ ಮಾತ್ರ. ಆದ್ರೆ ರಾಜ್ಯಗಳಿಗೆ ಕೊಡಬೇಡಿ. ಖಾಸಗಿಯವರಿಗೆ ಮಾರಾಟ ಮಾಡಿ ಅಂತಿದ್ದಾರೆ ಎಂದರೆ ಇವರು ಎಷ್ಟುಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎನ್ನುವುದು ರಾಜ್ಯದ ಜನರಿಗೆ ಗೊತ್ತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಡವರ ಅನ್ನಕ್ಕೆ ಕೇಂದ್ರ ಸರ್ಕಾರದಿಂದ ಅಡ್ಡಗಾಲು: ಸಚಿವ ತಿಮ್ಮಾಪುರ
ಆರ್. ಅಶೋಕ ಅವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಆರ್. ಆಶೋಕ್ ಅವರನ್ನು ಕೇಳಿ ಗ್ಯಾರಂಟಿ ಕಾರ್ಡ್‌ಗೆ ಸೈನ್ ಮಾಡಬೇಕಿತ್ತಾ? ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ ಮಾರಾಟ ಮಾಡೋದಕ್ಕೆ ಇರೋದು, ಅದನ್ನು ಅರ್ಥ ಮಾಡಿಕೊಳ್ಳಿ, ನಮಗೆ ಕೊಡಬೇಡಿ, ಖಾಸಗಿಯವರಿಗೆ ಕೊಡಿ ಅಂದರೆ ಹೇಗೆ? ಎಂದು ಪ್ರಶ್ನಿಸಿದರು. ಸಂವಿಧಾನದ ಸದಾಶಯಗಳನ್ನು ಮೊಟಕುಗೊಳಿಸಲು ಪ್ರಯತ್ನ ಮಾಡಿದ್ದೀರಿ, ನಾವು ಫ್ರೀ ಕೇಳಿಲ್ಲ. ಹಣ ಕೊಟ್ಟು ಪಡೀತೀವಿ. ರಾಜ್ಯದ ಸಂಪತ್ತಿನಿಂದ ಹಣ ಖರ್ಚು ಮಾಡುತ್ತೇವೆ. ನಮಗೆ ಸಾಂವಿಧಾನಿಕ ಹಕ್ಕಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.
ಮೇಕೆದಾಟು ಯೋಜನೆಯಿಂದ ಹಲವು ಜಿಲ್ಲೆಗೆ ನೀರು: ಡಿ.ಕೆ.ಶಿವಕುಮಾರ್
ಫ್ರೀ ಕೊಟ್ಟು ಆ ಮೇಲೆ ಪೆಟ್ರೋಲ್ ಬೆಲೆ ಹೆಚ್ಚಳದ ಗ್ಯಾರಂಟಿ ಎನ್ನುತ್ತಿರುವ ಆಶೋಕ್ ಅವರೇ ನಾಲ್ಕು ನೂರು ರುಪಾಯಿ ಇದ್ದ ಸಿಲಿಂಡರ್ ಬೆಲೆ 12 ನೂರು ಮಾಡಿದ್ದು ನಿಮ್ಮ ಮೋದಿ ಸರ್ಕಾರ, ಜನರಿಗೆ ತಪ್ಪು ಮಾಹಿತಿ ಕೊಡೋದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಹಾದಾಯಿ ವಿಷಯವಾಗಿ ಗೋವಾದೊಂದಿಗೆ ಹೋರಾಟ ಎಂಬ ಮಹಾ ಸಿಎಂ ಏಕನಾಥ ಶಿಂಧೆ ಹೇಳಿಕೆಗೆ ಪ್ರತಿಕ್ರಿಸಿದ ಅವರು, ಮಹದಾಯಿ ವಿಚಾರದಲ್ಲಿ ಮಹಾರಾಷ್ಟ್ರ ಏನೂ ಸಂಪರ್ಕ ಬರಲ್ಲ, ನೆರೆ ರಾಜ್ಯ ಗೋವಾವನ್ನು ಪಕ್ಷದ ಆಧಾರದಲ್ಲಿ ಕರೆದುಕೊಂಡು ತಗಾದೆ, ತಂಟೆ ತೆಗೆದರೆ ಕೂಡಾ ಅಪರಾಧ ಎನ್ನುವುದು ನನ್ನ ಭಾವನೆ ಎಂದರು. ಜಿಪಂ ಮಾಜಿ ಅಧ್ಯಕ್ಷ ಸಿದ್ದಲಿಂಗೇಶ್ವರ ಪಾಟೀಲ, ಬಿ.ಬಿ. ಅಸೂಟಿ, ಅಶೋಕ ಮಂದಾಲಿ ಮುಂತಾದವರು ಹಾಜರಿದ್ದರು.