ಸಿದ್ದು ಈಗ ಸಿಎಂ, ಮುಂದೆಯೂ ಅವರೇ ಇರ್ತಾರೆ: ಸಚಿವ ಮಹದೇವಪ್ಪ
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಬಳಿಕ ಇದೀಗ ‘ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿ ಮುಂದುವರೆಯುತ್ತಾರೆ’ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.
ಮೈಸೂರು (ಜೂ.18): ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಬಳಿಕ ಇದೀಗ ‘ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿ ಮುಂದುವರೆಯುತ್ತಾರೆ’ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ. ಜಿಲ್ಲಾ ಪತ್ರಕರ್ತರ ಸಂಘ ಶನಿವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಸಿದ್ದರಾಮಯ್ಯ ಮುಖ್ಯಮಂತ್ರಿ ಎನ್ನುವುದಷ್ಟೆಚರ್ಚೆಯಾಗಿದೆ. ಈಗ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ಅವರೇ ಮುಂದುವರಿಯುತ್ತಾರೆ. ದಲಿತರಿಗೆ ಮುಖ್ಯಮಂತ್ರಿ ಸ್ಥಾನ ಸಿಗಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿರುವುದರಲ್ಲಿ ತಪ್ಪಿಲ್ಲ. ಮತ ಹಾಕುವವರು ನಾವು, ಅಧಿಕಾರ ಅನುಭವಿಸುವವರು ಬೇರೆಯವರು ಎಂಬ ನೋವು ದಲಿತರಲ್ಲಿದೆ.
ಏಕೆಂದರೆ ಈ ಬಾರಿ ಹೆಚ್ಚು ದಲಿತರು ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. ತುಳಿತಕ್ಕೊಳಗಾದವರಿಗೆ ಅವಕಾಶ ಸಿಗಬೇಕು. ನನಗೂ ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ಇದೆ. ಏಕೆಂದರೆ ನಾನು ಬುದ್ಧನಲ್ಲ, ಆತನ ಅನುಯಾಯಿ ಅಷ್ಟೇ ಎಂದರು. ಜನರ ಮೂಲ ಹಕ್ಕುಗಳಿಗೆ ಧಕ್ಕೆ ಆಗದಂತೆ ಹಿಂದಿನ ಸರ್ಕಾರದ ಕಾರ್ಯಕ್ರಮಗಳನ್ನು ಮುಂದುವರೆಸಬೇಕೋ, ಬೇಡವೋ ಎಂಬುದನ್ನು ನಿರ್ಧರಿಸಲಾಗುವುದು. ಮತಾಂತರ ನಿಷೇಧ ಕಾಯ್ದೆ, ಗೋ ಹತ್ಯೆ ನಿಷೇಧ ಕಾಯ್ದೆ ಮುಂತಾದವು ಸಂವಿಧಾನದಲ್ಲೇ ಅಡಕವಾಗಿದೆ. ಯಾವ ವ್ಯಕ್ತಿ, ಯಾವುದೇ ಧರ್ಮವನ್ನಾದರೂ ಆಯ್ಕೆ ಮಾಡಿಕೊಳ್ಳಬಹುದು. ತನ್ನ ಧರ್ಮದ ಪ್ರಚಾರ ಮಾಡುವುದಕ್ಕೂ ಅಡ್ಡಿ ಇಲ್ಲ. ಆದರೆ ಬಲವಂತವಾಗಿ ಮತಾಂತರ ಮಾಡಲು ಅವಕಾಶ ಇಲ್ಲ. ಇದಕ್ಕೆ ಪ್ರತ್ಯೇಕ ಕಾಯ್ದೆ ಬೇಕಿಲ್ಲ ಎಂದರು.
ಬಿಜೆಪಿ ಮುಖಂಡರಿಂದಲೇ ಪಕ್ಷಕ್ಕೆ ಸೋಲು: ಸಂಸದ ಮುನಿಸ್ವಾಮಿ ಬೇಸರ
ಸೌಹಾರ್ದ ದೇಶ ಕಟ್ಟಬೇಕು: ನಾವು ಧರ್ಮದ ಆಧಾರದ ಮೇಲೆ ದೇಶ ಕಟ್ಟುವುದಿಲ್ಲ. ಸೌಹಾರ್ದಯುತವಾದ ದೇಶ ಕಟ್ಟುತ್ತೇವೆ. ಪಠ್ಯ ಪುಸ್ತಕಗಳ ಮೂಲಕ ಚರಿತ್ರೆ ಹೇಳುವಾಗ ಸರಿಯಾಗಿ ಹೇಳಬೇಕು. ಅದನ್ನು ತಿರುಚಬಾರದು. ಜಾತಿ ಧರ್ಮ ಮೀರಿದ ಅಂಬೇಡ್ಕರ್, ಕುವೆಂಪು, ನಾರಾಯಣಗುರು ಮೊದಲಾದವರ ಬಗ್ಗೆ ಅಪವ್ಯಾಖ್ಯಾನ ಮಾಡಬಾರದು ಎಂದು ಅವರು ಹೇಳಿದರು. ಭಾರತವನ್ನು ಪಾಕಿಸ್ತಾನ ಮಾಡಲು ಹೊರಟ್ಟಿದ್ದಾರೆ ಎಂಬ ಟೀಕೆ ಅರ್ಥಹೀನ. ಟಿಪ್ಪುವನ್ನು ಖಳನಾಯಕನಂತೆ ನೋಡುವ ಅಗತ್ಯವಿಲ್ಲ. ಈ ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಶೇ. 40 ಕಮಿಷನ್ ವಿಚಾರ ಸೇರಿ ಯಾವ್ಯಾವು ತನಿಖೆಗೆ ಯೋಗ್ಯ ಇವೆಯೋ ಅವೆಲ್ಲವನ್ನೂ ತನಿಖೆ ಮಾಡಿಸುತ್ತೇವೆ ಎಂದು ಅವರು ಪ್ರತಿಕ್ರಿಯಿಸಿದರು.
ಮರಳು ಮಾಫಿಯಾಗೆ ಪೇದೆ ಬಲಿ: ಕರ್ತವ್ಯ ನಿರ್ಲಕ್ಷ ಆರೋಪದಡಿ ಮೂವರು ಪೊಲೀಸರ ಅಮಾನತ್ತು
ಸಿದ್ದರಾಮಯ್ಯ ಹೊಂದಾಣಿಕೆಯ ರಾಜಕಾರಣಿ ಅಲ್ಲ: ಸಿದ್ದರಾಮಯ್ಯ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದರೆ ಅಷ್ಟುದೊಡ್ಡ ಅಂತರದಲ್ಲಿ ಗೆಲುವು ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ. ಅಷ್ಟುಕೀಳಮಟ್ಟದ ರಾಜಕಾರಣಿ ಅವರಲ್ಲ ಎಂದರು. ಗೋ ಹತ್ಯೆ ನಿಷೇಧ ಕಾಯ್ದೆಯು ಸಂವಿಧಾನದಲ್ಲಿಯೇ ಅಡಕವಾಗಿದೆ. ಆದ್ದರಿಂದ ವಯಸ್ಸಾದ ಹಸು ದುಡಿದು ಸುಸ್ತಾದ ಮೇಲೆ ತ್ಯಾಗ ಮಾಡಬೇಕು ಎಂಬುದು ಕರ್ನಾಟಕ ಗೋಹತ್ಯೆ ನಿರ್ಬಂಧ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ- 1964ರಲ್ಲಿ ಇದೆ. ದನ ಮೇಯಿಸದೆ, ಗಂಜಲ ತೊಳೆಯದೆ ಸ್ನಾನಮಾಡಿ ಬಂದು ಹಸು ತಬ್ಬಿಕೊಂಡು ಫೋಟೋ ತೆಗೆಸಿಕೊಂಡರೆ ಸಾಕಿದಂತೆ ಆಗುವುದಿಲ್ಲ. ದನ- ಕರುಗಳ ಜತೆ ಬಿದ್ದು ಒದ್ದಾಡಬೇಕು. ನಾನು, ಸಿದ್ದರಾಮಯ್ಯ ದನ- ಕರುಗಳ ಜೊತೆ ಬಿದ್ದು ಒದ್ದಾಡಿ ಬೆಳೆದವರು ಎಂಬುದಾಗಿ ಅವರು ಹೇಳಿದರು. ಸಂಘದ ಅಧ್ಯಕ್ಷ ಎಸ್.ಟಿ. ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ, ನಗರ ಉಪಾಧ್ಯಕ್ಷ ಅನುರಾಗ್ ಬಸವರಾಜ್, ಗ್ರಾಮಾಂತರ ಉಪಾಧ್ಯಕ್ಷ ಧರ್ಮಾಪುರ ನಾರಾಯಣ್ ಇದ್ದರು.