ನನ್ನನ್ನು ಸರ್ಕಾರದಿಂದ ಕೈಬಿಡುವಷ್ಟು ಧೈರ್ಯ ಯಾರಿಗಿದೆ ಸ್ವಾಮಿ: ಸಚಿವರ ಖಡಕ್ ಮಾತು
ಕಾರ್ಯವೈಖರಿ ಆಧಾರದ ಮೇಲೆ ಕೆಲವರನ್ನ ಸಚಿವ ಸ್ಥಾನದಿಂದ ಕೈಬಿಡಬೇಕೆಂಬ ಚರ್ಚೆಗಳು ಸಹ ನಡೆದಿವೆ. ಇದಕ್ಕೆ ಸಚಿವರೊಬ್ಬ ಖಡಕ್ ಆಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಬೆಂಗಳೂರು, (ಜ.11): ಕೊನೆಗೂ ರಾಜ್ಯ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ್ದು, ಇದೇ ಜ.13ರಂದು ಏಳ ಜನ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಈಗಾಗಲೇ ಸಿಎಂ ಸ್ಪಷ್ಟಪಡಿಸಿದ್ದಾರೆ.
ಆದ್ರೆ, ಆ ಏಳು ಜನರು ಯಾರು ಎನ್ನುವುದು ಮಾತ್ರ ಇನ್ನೂ ನಿಗೂಢವಾಗಿದೆ. ಕಾಂಗ್ರೆಸ್ ಬಿಟ್ಟು ವಲಸೆ ಬಂದ ಎಂಟಿಬಿ ನಾಗರಾಜ್, ಆರ್. ಶಂಕರ್ ಹಾಗೂ ಮುನಿರತ್ನ ಅವರಿಗೆ ಸಚಿವ ಸ್ಥಾನ ಫಿಕ್ಸ್ ಎನ್ನಲಾಗಿದೆ. ಇನ್ನುಳಿದ ನಾಲ್ವರು ಯಾರು ಎನ್ನುವುದು ಗೊತ್ತಿಲ್ಲ.
ಅಲ್ಲದೇ ಕಾರ್ಯವೈಖರಿ ಆಧಾರದ ಮೇಲೆ ಕೆಲವರನ್ನ ಸಚಿವ ಸ್ಥಾನದಿಂದ ಕೈಬಿಡಬೇಕೆಂಬ ಚರ್ಚೆಗಳು ಸಹ ನಡೆದಿವೆ. ಅದರಲ್ಲೂ ಅಬಕಾರಿ ಸಚಿವ ಎಚ್.ನಾಗೇಶ್ ಅವರ ಹೆಸರು ಸಹ ಕೇಳಿಬಂದಿದೆ.
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ, ನನ್ನ ಮಾತಿಗೆ ಬದ್ಧ ಎಂದ ಸಚಿವ
ಇನ್ನು ಈ ಬಗ್ಗೆ ಸಚಿವ ನಾಗೇಶ್ ಪ್ರತಿಕ್ರಿಯಿಸಿದ್ದು, ಈ ಸರ್ಕಾರ ರಚನೆಗೆ ನಾನೇ ಪ್ರಮುಖ ಕಾರಣ. ಸರ್ಕಾರ ಬರುವುದಕ್ಕೂ ನಾನೇ ಟರ್ನಿಂಗ್ ಪಾಯಿಂಟ್. ಹೀಗಾಗಿ ನನ್ನನ್ನು ಯಾವುದೇ ಕಾರಣಕ್ಕೂ ಕೈ ಬಿಡಲ್ಲ. ನನ್ನನ್ನು ಸರ್ಕಾರದಿಂದ ಕೈಬಿಡುವಷ್ಟು ಧೈರ್ಯ ಯಾರಿಗಿದೆ ಸ್ವಾಮಿ ಎಂದು ಖಡಕ್ ಆಗಿ ಹೇಳಿದರು.
ವಿಕಾಸಸೌಧದಲ್ಲಿ ಮಾತನಾಡಿದ ಅವರು, ಹೈಕಮಾಂಡ್ ಮಾಡಿರುವ ತೀರ್ಮಾನದ ಬಗ್ಗೆ ಮಾಹಿತಿ ಇಲ್ಲ. ಆದರೆ ಸಿಎಂ ಯಡಿಯೂರಪ್ಪ ಮಾತ್ರ ನನ್ನನ್ನು ಸಂಪುಟದಿಂದ ಕೈ ಬಿಡುವುದಿಲ್ಲ ಎಂದು ನಂಬಿಕೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾನು ಮೈತ್ರಿ ಸರ್ಕಾರದಲ್ಲಿ ಮಂತ್ರಿಯಾಗಿದ್ದವನು. ಆಮೇಲೆ ಅಲ್ಲಿ ರಾಜೀನಾಮೆ ನೀಡಿ ಬಂದಿದ್ದವನು. ಆಗ ನನ್ನನ್ನು ಎಷ್ಟೋ ಜನರು ಏನೇನೋ ಟೀಕೆ ಮಾಡಿದ್ದರು. ಹೀಗಿದ್ದರೂ ನಾನು ಅಲ್ಲಿ ರಾಜೀನಾಮೆ ಕೊಟ್ಡು ಬಂದಿದ್ದೇನೆ. ನನ್ನ ತರ ಯಾರು ಮಾಡುತ್ತಾರೆ ಹೇಳಿ ಎಂದರು.
ಸಿಎಂ ಯಡಿಯೂರಪ್ಪ ಈ ಹಿಂದೆ ನನಗೆ ಮಾತು ಕೊಟ್ಟಿದ್ದಾರೆ. ಅವರು ಕೊಟ್ಟ ಮಾತಿನಂತೆ ಉಳಿಸುಕೊಳ್ಳುವ ನಂಬಿಕೆಯಿದೆ. ಈ ಬಗ್ಗೆ ಸಿಎಂ ಭೇಟಿ ಮಾಡಿ ಚರ್ಚೆ ಮಾಡುತ್ತೇನೆ. ಹೈಕಮಾಂಡ್ ಏನು ಹೇಳಿದೆ ಎಂಬುದನ್ನು ತಿಳಿದುಕೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.