Asianet Suvarna News Asianet Suvarna News

ಕಲ್ಯಾಣ ಕ್ರಾಂತಿ ಮಾಡದೆ ಜನರಿಗೆ ಕಾಂಗ್ರೆಸ್‌ ಮೋಸ: ಕಾರಜೋಳ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಭಿನಂದನೆ ಸಲ್ಲಿಸಲು ಕಲಬುರಗಿಯಲ್ಲಿ ನಡೆದ ಕಲ್ಯಾಣ ಕ್ರಾಂತಿ ಸಮಾವೇಶದ ಬಗ್ಗೆ ವ್ಯಂಗ್ಯವಾಡಿದ ಗೋವಿಂದ ಕಾರಜೋಳ 

Minister Govind Karjol Slams Congress grg
Author
First Published Dec 11, 2022, 11:00 PM IST

ವಿಜಯಪುರ(ಡಿ.11):  ಕಲಬುರಗಿಯಲ್ಲಿ ನಡೆದ ಕಾಂಗ್ರೆಸ್‌ನ ಕಲ್ಯಾಣ ಕ್ರಾಂತಿ ಸಮಾವೇಶಕ್ಕೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಕಿಡಿಕಾರಿದ್ದಾರೆ. ಕಾಂಗ್ರೆಸ್ಸಿಗರು ಕಲ್ಯಾಣ ಕ್ರಾಂತಿ ಮಾಡದೆ ಜನರಿಗೆ ಮೋಸ ಮಾಡಿದ್ದಾರೆ ಎಂದು ಹೇಳಿದ್ದಾರೆ. ಶನಿವಾರ ನಗರ ಹೊರ ವಲಯದ ಬುರಣಾಪುರ ಬಳಿ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರ ಜೊತೆಗೆ ಮಾತನಾಡಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಭಿನಂದನೆ ಸಲ್ಲಿಸಲು ಕಲಬುರಗಿಯಲ್ಲಿ ನಡೆದ ಕಲ್ಯಾಣ ಕ್ರಾಂತಿ ಸಮಾವೇಶದ ಬಗ್ಗೆ ವ್ಯಂಗ್ಯವಾಡಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಲ್ಲಿ 60 ವರ್ಷ ಕಾಂಗ್ರೆಸ್ಸಿನವರೇ ಆಡಳಿತ ಮಾಡಿದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ ಖರ್ಗೆ ಅವರು 45 ವರ್ಷ ಆಡಳಿತ ಮಾಡಿದ್ದಾರೆ. ಆಗ ಅವರಿಗೆ ಕ್ರಾಂತಿ ಮಾಡಲು ಯಾರೂ ಬೇಡ ಎಂದಿರಲಿಲ್ಲ. ಬಸವಣ್ಣನವರ ಕ್ರಾಂತಿ ಮುಂದುವರಿಸಿದ್ದರೆ ನಾವೂ ಸಂತೋಷ ಪಡುತ್ತಿದ್ದೆವು. ಆದರೆ ಕಾಂಗ್ರೆಸ್ಸಿನವರು ಕಲ್ಯಾಣ ಕ್ರಾಂತಿ ಮಾಡದೆ ಜನರಿಗೆ ಮೋಸ ಮಾಡಿದರು. ಹಿಂದುಳಿದವರ ಏಳ್ಗೆ, ಎಸ್ಸಿ, ಎಸ್ಟಿಜನರ ಕಲ್ಯಾಣ ಆಗಲಿಲ್ಲ ಎಂದರು.

ಕಲಬುರಗಿಯಲ್ಲಿ ಕಾಂಗ್ರೆಸ್‌ ಭಾರಿ ಶಕ್ತಿ ಪ್ರದರ್ಶನ: ಖರ್ಗೆ ಸ್ವಾಗತಕ್ಕೆ ‘ಕಲ್ಯಾಣ ಕ್ರಾಂತಿ’ ಸಮಾವೇಶ

ಅಭಿವೃದ್ಧಿ ಮಾಡದೆ ಉತ್ತರ ಕರ್ನಾಟಕ ನಿರ್ಲಕ್ಷ್ಯ ಮಾಡಿದರು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಕಲಬುರಗಿಗೂ ಮೊದಲೇ ವಿಜಯಪುರದಲ್ಲಿ ಖರ್ಗೆ ವಿಮಾನ ನಿಲ್ದಾಣ ಮಾಡಲಿಲ್ಲ. ಕಲಬುರಗಿಗಿಂತಲೂ ಹೆಚ್ಚು ಮಹತ್ವ ವಿಜಯಪುರ ಜಿಲ್ಲೆಗಿದೆ. ಇದು ಐತಿಹಾಸಿಕ ಜಿಲ್ಲೆ. ಗೋಳಗುಮ್ಮಟ ಹಾಗೂ ಇತರೆ ಸ್ಮಾರಕಗಳ ವೀಕ್ಷಣೆಗೆ 200 ದೇಶಗಳ ಪ್ರವಾಸಿಗರು ಬರುತ್ತಾರೆ. ಹಾಗಾಗಿ ಇಲ್ಲಿ ಮೊದಲು ವಿಮಾನ ನಿಲ್ದಾಣ ಆಗಬೇಕಿತ್ತು ಎಂದು ಸಚಿವ ಕಾರಜೋಳ ಹೇಳಿದರು.

ಕಾಂಗ್ರೆಸ್‌ ಅಳಿವಿನಂಚಿನಲ್ಲಿದೆ. ರಾಜ್ಯದ ಅಭಿವೃದ್ಧಿಯಾಗಬೇಕಾದರೆ ಪ್ರಧಾನಿ ಮೋದಿ ಅವರಿಂದ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.
 

Follow Us:
Download App:
  • android
  • ios