'ಧಮ್' ಪದ ಬಳಕೆ: ಸಿದ್ದರಾಮಯ್ಯಗೆ ತಿರುಗೇಟು ಕೊಟ್ಟ ಈಶ್ವರಪ್ಪ
ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಎಸ್ ಈಶ್ವರಪ್ಪ ನಡುವಣ ವಾಕ್ ಸಮರ ಶುರುವಾಗಿದ್ದು, 'ಧಮ್' ಪದ ಬಳಕೆ ವಿಚಾರದಲ್ಲಿ ಈಶ್ವರಪ್ಪ ಸಿದ್ದುಗೆ ತಿರುಗೇಟು ಕೊಟ್ಟಿದ್ದಾರೆ.
ಮೈಸೂರು, (ಜೂನ್ 19): ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಗೆ ಧಮ್ ಇಲ್ಲ ಅನ್ನುವ ಹೇಳಿಕೆ ವಿಚಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಚಿವ ಕೆ.ಎಸ್ ಈಶ್ವರಪ್ಪ ಮೈಸೂರಿನಲ್ಲಿ ತಿರುಗೇಟು ನೀಡಿದ್ದಾರೆ.
ಯಡಿಯೂರಪ್ಪಗೆ ಧಮ್ ಇಲ್ಲ. ಕೇಂದ್ರದಿಂದ ಬರಬೇಕಾದ ಹಣ ತೆಗೆದುಕೊಂಡು ಬರಲು ಅವರಿಗೆ ಆಗುತ್ತಿಲ್ಲ. ಅವರಿಗೆ ಧಮ್ ಇದ್ದಿದ್ದರೆ, ನಮಗೆ ಬರಬೇಕಾದ ಹಣ ಬರುತ್ತಿತ್ತು ಎಂದು ಸಿದ್ಧರಾಮಯ್ಯ ಗುಡುಗಿದ್ದರು.
ಚೀನಿ ವಸ್ತು ನಿರ್ಬಂಧಕ್ಕೆ ಮುಂದಾದ ಇಂಡಿಯಾ, ಬಾಲಿವುಡ್‌ನಲ್ಲಿ ಮ್ಯೂಸಿಕ್ ಮಾಫಿಯಾ;ಜೂ.19ರ ಟಾಪ್ 10 ಸುದ್ದಿ!
ಇದಕ್ಕೆ ಇಂದು (ಶುಕ್ರವಾರ) ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವ ಈಶ್ವರಪ್ಪ, ಸಿಎಂ ಯಡಿಯೂರಪ್ಪನವರಿಗೆ ಧಮ್ ಇರುವ ಕಾರಣಕ್ಕೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿರುವುದು. ಕುರುಬ ಸಮುದಾಯದ ಹಲವು ನಾಯಕರಿಗೆ ಸ್ಥಾನಮಾನ ನೀಡಿದ ದೊಡ್ಡ ಗುಣ ಅವರದು. ನಾನೂ ಸೇರಿದಂತೆ ಎಂಟಿಬಿ ನಾಗರಾಜ್, ಆರ್.ಶಂಕರ್ ಇತರರಿಗೆ ಅವಕಾಶ ಕಲ್ಪಿಸಿದ್ದಾರೆ. ಈ ಮೂಲಕ ಅವರ ಧಮ್ ಏನು ಅನ್ನುವುದನ್ನು ತೋರಿಸಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.
ಸಿದ್ದರಾಮಯ್ಯನಿಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲುವುದಕ್ಕೆ ಧಮ್ ಇಲ್ಲ, ಅಂತಹದ್ದರಲ್ಲಿ ಯಡಿಯೂರಪ್ಪಗೆ ಧಮ್ ಇದೆಯಾ ಎಂದು ಪ್ರಶ್ನೆ ಮಾಡ್ತೀರಾ? ಎಂದು ಸಿದ್ದು ವಿರುದ್ಧ ವಾಗ್ದಾಳಿ ನಡೆಸಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಯಡಿಯೂರಪ್ಪಗೆ ಧಮ್ ಇದ್ದಿದ್ದಕ್ಕೆ 26 ಸೀಟ್ ಗೆಲ್ಲಲು ಸಾಧ್ಯವಾಯಿತು. ಇವರಿಗೆ ಧಮ್ ಇಲ್ಲದೇ ಇರುವುದಕ್ಕೆ ಹೀನಾಯವಾಗಿ ಸೋತಿದ್ದು ಎಂದು ಟಾಂಗ್ ಕೊಟ್ಟರು.
ಇನ್ನು ಇದೇ ವೇಳೆ ಮಾಜಿ ಸಚಿವ ಎಚ್.ವಿಶ್ವನಾಥ್ ಗೆ ವಿಧಾನ ಪರಿಷತ್ ಟಿಕೆಟ್ ಕೈ ತಪ್ಪಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಇದು ಹೈಕಮಾಂಡ್ ನಿರ್ಧಾರವಾಗಿದ್ದು, ಮುಂದಿನ ದಿನಗಳಲ್ಲಿ ಅವರಿಗೂ ಸೂಕ್ತ ಸ್ಥಾನಮಾನ ಸಿಗುತ್ತದೆ ಎಂದು ಸ್ಪಷ್ಟಪಡಿಸಿದರು.