ಬಿಜೆಪಿಯವರು ವಚನ ಭ್ರಷ್ಟರು, ನಾವು ನುಡಿದಂತೆ ನಡೆದಿದ್ದೇವೆ: ಸಚಿವ ಈಶ್ವರ ಖಂಡ್ರೆ
ಶಿಗ್ಗಾವಿ ಕ್ಷೇತ್ರದಲ್ಲಿ ಈವರೆಗೂ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಬೊಮ್ಮಾಯಿ ಅವರು ಸಿಎಂ ಇದ್ದಾಗಲೂ ಇಲ್ಲಿ ಅಭಿವೃದ್ಧಿಗಳಾಗಿಲ್ಲ. ಬಿಜೆಪಿ ಕೊಟ್ಟ ಮಾತಿನಂತೆ ಎಂದೂ ನಡೆದುಕೊಂಡಿಲ್ಲ. ಬಿಜೆಪಿಯವರು ವಚನ ಭ್ರಷ್ಟರು. ನಾವು ನುಡಿದಂತೆ ನಡೆದಿದ್ದೇವೆ. ಜನತೆಗೆ ಕೊಟ್ಟ ಭರವಸೆಗಳನ್ನ ಈಡೇರಿಸಿದ್ದೇವೆ: ಸಚಿವ ಈಶ್ವರ ಖಂಡ್ರೆ
ಹುಬ್ಬಳ್ಳಿ(ನ.03): ಶಿಗ್ಗಾವಿ ಚುನಾವಣೆ ವಿಚಾರವಾಗಿ ಮೂರು ಉಸ್ತುವಾರಿಗಳ ಪ್ರಮುಖ ಮುಖಂಡರ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ್ ಸಚಿವರು ಸೇರಿದಂತೆ ಅನೇಕ ಮುಖಂಡರು ಭಾಗಿಯಾಗಿದ್ದರು. ಆರು ಜಿಲ್ಲಾ ಪಂಚಾಯಿತಿಗಳಿಗೆ ಹಾಗೂ ಮೂರು ಪುರಸಭೆಗಳಿಗೆ ಸಚಿವರನ್ನು ನೇಮಿಸಲಾಗಿದೆ. ಎಲ್ಲರಲ್ಲೂ ಹುಮ್ಮಸ್ಸು ಹಾಗೂ ಒಗ್ಗಟ್ಟಿದೆ. ಈ ಚುನಾವಣೆ ಅಭಿವೃದ್ಧಿ ಮತ್ತು ಅಭಿವೃದ್ಧಿ ಶೂನ್ಯದ ನಡುವೆ ನಡೆಯುತ್ತಿದೆ. ಬಿಜೆಪಿ ಸೋಲಿಸಬೇಕು ಕಾಂಗ್ರೆಸ್ ಗೆಲ್ಲಲೇಬೇಕು ಎಂಬ ಸಂಕಲ್ಪದಿಂದ ಚುನಾವಣೆಗೆ ಒಗ್ಗಟ್ಟಾಗಿದ್ದೇವೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಈಶ್ವರ ಖಂಡ್ರೆ ಅವರು, ಈ ಕ್ಷೇತ್ರದಲ್ಲಿ ಈವರೆಗೂ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಬೊಮ್ಮಾಯಿ ಅವರು ಸಿಎಂ ಇದ್ದಾಗಲೂ ಇಲ್ಲಿ ಅಭಿವೃದ್ಧಿಗಳಾಗಿಲ್ಲ. ಬಿಜೆಪಿ ಕೊಟ್ಟ ಮಾತಿನಂತೆ ಎಂದೂ ನಡೆದುಕೊಂಡಿಲ್ಲ. ಬಿಜೆಪಿಯವರು ವಚನ ಭ್ರಷ್ಟರು. ನಾವು ನುಡಿದಂತೆ ನಡೆದಿದ್ದೇವೆ. ಜನತೆಗೆ ಕೊಟ್ಟ ಭರವಸೆಗಳನ್ನ ಈಡೇರಿಸಿದ್ದೇವೆ ಎಂದು ಹೇಳಿದ್ದಾರೆ.
ಎಚ್‌ಎಂಟಿ ಜಾಗಕ್ಕೆ ಈಶ್ವರ್ ಖಂಡ್ರೆ ಅತಿಕ್ರಮ ಪ್ರವೇಶ: ಎಚ್.ಡಿ.ಕುಮಾರಸ್ವಾಮಿ
ಸಿಎಂ ಹಾಗೂ ಡಿಸಿಎಂ ನೇತೃತ್ವದಲ್ಲಿ ಅನೇಕ ಕಾರ್ಯಗಳನ್ನ ಮಾಡುತ್ತಿದ್ದೇವೆ. ಜನರು ನಮ್ಮ ಕೈ ಹಿಡಿದಿದ್ದಾರೆ ಇನ್ನೂ ಮೂರೂವರೆ ವರ್ಷಗಳ ಕಾಲ ನಾವು ಮುನ್ನಡೆಯುತ್ತೇವೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಹಣದ ಹೊಳೆ ಹರಿಸುತ್ತಿದೆ ಎಂಬ ಬಿಜೆಪಿ ನಾಯಕರ ಆರೋಪ ವಿಚಾರದ ಬಗ್ಗೆ ಮಾತನಾಡಿದ ಈಶ್ವರ ಖಂಡ್ರೆ, ಹಣದ ಹೊಳೆ ಹರಿಸುವವರು ಬಿಜೆಪಿಯವರು. ಭ್ರಷ್ಟಾಚಾರ ಮಾಡುವವರು ಬಿಜೆಪಿಯವರು. ಬಿಜೆಪಿಯವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇದೆಯಾ?. ಕೋವಿಡ್ ಸಂದರ್ಭದಲ್ಲಿ ಸಾಕಷ್ಟು ಹಗರಣ ಮಾಡಿದ್ದಾರೆ. ರಾಜ್ಯದಲ್ಲಿ ಸುಮಾರು 50 ಸಾವಿರ ಜನ ಸಾವನ್ನಪ್ಪಿದ್ದಾರೆ. ಆದ್ರೆ ಅವರು ತೋರಿಸಿದ್ದು ಮಾತ್ರ 4 ಸಾವಿರ ಜನ.. ಅತೀ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ಮಾಡಿದವರು ಬಿಜೆಪಿಯವರು. ಈ ಬಗ್ಗೆ ತನಿಖೆ ಮಾಡಲು ಈಗಾಗಲೇ ಸಮಿತಿ ರಚಿಸಲಾಗಿದೆ. ಸಮಿತಿ ಈಗಾಗಲೇ ತನಿಖೆ ಮಾಡುತ್ತಿದೆ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿದೆ. ವಾಲ್ಮೀಕಿ ಮತ್ತು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರಿಗೆ ಶಿಕ್ಷೆ ನೀಡಲಾಗಿದೆ. ಇನ್ನೂ ಸಹ ಈ ಬಗ್ಗೆ ತನಿಖೆ ನಡೆಯುತ್ತಿದೆ ಇದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.