ಬಿಜೆಪಿಯ ಭ್ರಷ್ಟರಿಂದ ನಮಗೆ ಪಾಠ: ಸಚಿವ ಶರಣಪ್ರಕಾಶ ಪಾಟೀಲ್‌ ಕಿಡಿ

ಇಂತಹ ಭ್ರಷ್ಟರು ನಮಗೆ ಪಾಠ ಮಾಡಲು ಬರ್ತಿದಾರೆ ಅಂದ್ರೆ ಅವರಿಗೆ ನಾಚಿಕೆ ಆಗಬೇಕು. ಹೇಸಿಗೆ ಕೆಲಸ ಮಾಡಿದವರು ನಮಗೆ ಪಾಠ ಮಾಡಲು ಬರುತ್ತಿರುವುದು ವಿಪರ್ಯಾಸ ಎಂದ ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ. ಶರಣಪ್ರಕಾಶ ಪಾಟೀಲ್‌ 

Minister Dr Sharanprakash Patil Slams BJP grg

ಕಲಬುರಗಿ(ಜ.02): ಬಿಜೆಪಿ ಮುಖಂಡರು ಸಾರ್ವಜನಿಕ ಹಿತಾಸಕ್ತಿ, ಅಭಿವೃದ್ಧಿ, ಜನರ ಸಮಸ್ಯೆ ಮಾತಾಡೋದಿಲ್ಲ, ಆ ಬಗ್ಗೆ ಅವರು ಚರ್ಚೆನೂ ಮಾಡಲ್ಲ, ಬರೀ ಸಮಾಜದಲ್ಲಿ ಒಡಕು ಮೂಡಿಸುವ ವೈಷಮ್ಯ ಹುಟ್ಟಿಸುವ ವಿಚಾರಗಳನ್ನು ಮಾತಾಡಿ ಜನರ ಮನಸ್ಸು ಕೆಡಿಸುತ್ತಾರೆ. ಬಿಜೆಪಿಯಷ್ಟು ದೊಡ್ಡ ಭ್ರಷ್ಟ ಸರ್ಕಾರ ಇನ್ನೊಂದಿರಲಿಲ್ಲ ಎಂದು ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ. ಶರಣಪ್ರಕಾಶ ಪಾಟೀಲ್‌ ಕಿಡಿ ಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಇಂತಹ ಭ್ರಷ್ಟರು ನಮಗೆ ಪಾಠ ಮಾಡಲು ಬರ್ತಿದಾರೆ ಅಂದ್ರೆ ಅವರಿಗೆ ನಾಚಿಕೆ ಆಗಬೇಕು. ಹೇಸಿಗೆ ಕೆಲಸ ಮಾಡಿದವರು ನಮಗೆ ಪಾಠ ಮಾಡಲು ಬರುತ್ತಿರುವುದು ವಿಪರ್ಯಾಸ ಎಂದರು.
ಪ್ರಿಯಾಂಕ್‌ ಖರ್ಗೆ ಏಕೆ ರಾಜೀನಾಮೆ ಕೊಡಬೇಕು? ಅವರಿಗೂ ಬೀದರ್‌ ಗುತ್ತಿಗೆದಾರ ಸಾವಿಗೂ ಇದಕ್ಕೂ ಏನು ಸಂಬಂಧ ಇದೆ? ಪ್ರಿಯಾಂಕ್‌ ಖರ್ಗೆ ಬಿಜೆಪಿಯವರಿಗೆ ಸದಾ ಕೌಂಟರ್ ಕೊಡ್ತಿರ್ತಾರೆ. ಅದಕ್ಕಾಗಿ ಯಾವುದಾವುದೋ ರೀತಿ ಅಟ್ಯಾಕ್ ಮಾಡುತ್ತಿದ್ದಾರೆ. ಅದಕ್ಕಾಗಿಯೇ ಅವರನ್ನು ಟಾರ್ಗೆಟ್ ಮಾಡಿದ್ದಾರೆಂದು ದೂರಿದರು.

ಬುಲ್ಡೋಜರ್ ಬಾಬಾ ಆಗಲು ಬಟ್ಟೆ ಬದಲಿಸಿ: ಪ್ರಿಯಾಂಕ್ ಖರ್ಗೆಗೆ ಆಂದೋಲಾ ಶ್ರೀ ತಿರುಗೇಟು

ಹಿಂದೆ ಕೇಂದ್ರದಲ್ಲೂ ಅವರದ್ದೇ ಸರ್ಕಾರ, ರಾಜ್ಯದಲ್ಲೂ ಅವರದ್ದೇ ಸರ್ಕಾರ ಇದ್ದಾಗ ಒಂದಾದ್ರೂ ಇವರು ಸಿಬಿಐಗೆ ಕೊಟ್ರಾ? ಅವರು ಅಧಿಕಾರದಲ್ಲಿ ಇದ್ದಾಗ ಸಿಬಿಐ ನೆನಪಾಗಲ್ಲ. ಈಗ ಅವರಿಗೆ ನೆನಪಾಗುತ್ತೆ. ಅವರ ಆರೋಪಗಳಲ್ಲಿ ಯಾವುದೇ ರೀತಿಯ ಹುರುಳಿಲ್ಲ. ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದರು.

ವಿರೋಧ ಪಕ್ಷವಾಗಿ ಬಿಜೆಪಿ ವೈಫಲ್ಯ ಕಂಡಿದೆ. ಅವರಿಗೆ ಯಾವ ವಿಚಾರ ತಗೊಂಡು ಹೋರಾಟ ಮಾಡಬೇಕು ಅನ್ನೋದು ಮಾಡಬೇಕು ಗೊತ್ತಾಗುತ್ತಿಲ್ಲ. ಅವರಿಗೆ ಜನರ ಹಿರಾಸಕ್ತಿಯೇ ಗೊತ್ತಿಲ್ಲ. ಹೇಗಾದ್ರೂ ಮಾಡಿ ಮತ್ತೆ ಅಧಿಕಾರಕ್ಕೆ ಬರಲು ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನ ನಡೆಸುತ್ತಿದ್ದಾರಷ್ಟೆ.

ಬಿಜೆಪಿಯವರದ್ದು ಅಭಿವೃದ್ಧಿಗೆ ಕೊಡುಗೆ ಇಲ್ಲ. ಅವರಲ್ಲಿ ಅಭಿವೃದ್ಧಿ ಪರ ಆಲೋಚನೆಗಳೇ ಇಲ್ಲ, ಹೇಗಾದ್ರೂ ಮಾಡಿ ಅಧಿಕಾರಕ್ಕೆ ಬರಬೇಕು, ರಾಜ್ಯ ಲೂಟಿ ಮಾಡಬೇಕು ಇದಿಷ್ಟೆ ಅವರ ಗುರಿಯಾಗಿದೆ ಎಂದು ಡಾ. ಪಾಟೀಲ್‌ ಟೀಕಿಸಿದರು.

ಬಿಜೆಪಿಯಿಂದ ಕೀಳುಮಟ್ಟದ ರಾಜಕೀಯ: ನಿಂಗಪ್ಪ

ಕಮಲಾಪುರ: ಗುತ್ತೇದಾರ್ ಸಚಿನ್ ಪಂಚಾಳ್ ಆತ್ಮಹತ್ಯೆ ಪ್ರಕರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಹೆಸರು ತರುವ ಮೂಲಕ ಬಿಜೆಪಿ ಕೀಳುಮಟ್ಟದ ರಾಜಕೀಯ ಮಾಡುತ್ತಿದೆ ಎಂದು ಕಲಬುರಗಿ ಗ್ರಾಮೀಣ ಮತ ಕ್ಷೇತ್ರದ ಕಾಂಗ್ರೆಸ್ ಮುಖಂಡ ನಿಂಗಪ್ಪ ಪ್ರಬುದ್ಧಕರ್ ಕಿಡಿ ಕಾರಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಪ್ರಿಯಾಂಕ್‌ ಖರ್ಗೆ ಮತ್ತು ಖರ್ಗೆ ಕುಟುಂಬಕ್ಕೆ ಮಸಿ ಬಳಿಯುವ ಹುನ್ನಾರ ಬಿಜೆಪಿ ಮಾಡುತ್ತಿದೆ. ಆತ್ಮಹತ್ಯೆ ಪ್ರಕರಣದಲ್ಲಿ ಅನಗತ್ಯವಾಗಿ ಪ್ರಿಯಾಂಕ್‌ ಹೆಸರು ಪ್ರಸ್ತಾಪ ಮಾಡುತ್ತಿರುವುದು ನಾಚಿಕೆಗೇಡಿತನ ಸಂಗತಿ. ಆತ್ಮಹತ್ಯೆ ಪ್ರಕರಣಕ್ಕೂ ಖರ್ಗೆ ಅವರಿಗೂ ಸಂಬಂಧವಿಲ್ಲ. ಎಂಥ ಸೂಕ್ಷ್ಮ ವಿಚಾರದಲ್ಲಿ ರಾಜಕೀಯ ಮಾಡದೆ ವಾಸ್ತವ ಅರಿತು ಮಾತನಾಡಬೇಕು ಎಂದು ಹೇಳಿದರು.

ಸಚಿನ್‌ ಆತ್ಮಹತ್ಯೆ ಕೇಸ್‌: ಸಚಿವ ಖರ್ಗೆ, ಆಂದೋಲಾ ಶ್ರೀ ಟ್ವೀಟ್‌ ಸಮರ!

ಗುತ್ತೇದಾರ್ ಸಚಿನ್ ಆತ್ಮಹತ್ಯೆ ಮಾಡಿಕೊಳ್ಳಬಾರದಿತ್ತು. ಏನೇ ಸಮಸ್ಯೆ ಇದ್ದರೂ ಕಾನೂನಿನ ಮೊರೆ ಹೋಗಬೇಕಿತ್ತು. ಡೆತ್‌ನೋಟ್‌ನಲ್ಲಿ ಪ್ರಸ್ತಾಪಿಸಿರುವ ರಾಜು ಕಪ್ಪನೂರು ಮಾತ್ರ ಪ್ರಿಯಾಂಕ್ ಆಪ್ತರಲ್ಲ, ಅಲ್ಪಸಂಖ್ಯಾತ ಕಾರ್ಯಕರ್ತರು ಸಚಿವರ ಆಪ್ತರಾಗಿರುತ್ತಾರೆ. ಇವರೆಲ್ಲರ ವೈಯಕ್ತಿಕ ಬದುಕು ಮತ್ತು ಕೆಲಸಗಳಿಗೆ ಪ್ರಿಯಾಂಕ್ ಹೊಣೆಗಾರರಾಗಲು ಸಾಧ್ಯವಿಲ್ಲ.

ಯಾವ ಕಾರಣಕ್ಕೂ ಪ್ರಿಯಾಂಕ್ ರಾಜೀನಾಮೆ ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇಷ್ಟಕ್ಕೂ ಸಚಿವ ಖರ್ಗೆ ರಾಜೀನಾಮೆ ಏಕೆ ಕೊಡಬೇಕು? ಪ್ರಕರಣವನ್ನು ಸಿಐಡಿ ತನಿಖೆಗೆ ಈಗಾಗಲೇ ವಹಿಸಿಕೊಡಲಾಗಿದೆ. ತನಿಖೆ ಹಂತದಲ್ಲಿರುವಾಗ ಇಲ್ಲದನ್ನು ಪ್ರಸ್ತಾಪಿಸಿ ಗೊಂದಲ ಮೂಡಿಸುವ ಪ್ರಯತ್ನ ನಿಲ್ಲಿಸಿ. ಬಿಜೆಪಿ ಬೇಡಿಕೆ ಅರ್ಥವಿಲ್ಲದ್ದು ಎಂದಿದ್ದಾರೆ.

Latest Videos
Follow Us:
Download App:
  • android
  • ios