ಕೆ.ಎಚ್ ಮುನಿಯಪ್ಪನವರು ಹಿರಿಯ ನಾಯಕರು, ಬಿಜೆಪಿಗೆ ಬಂದ್ರೆ ಸ್ವಾಗತಿಸುತ್ತೇವೆ. ನಾನೇ ಮೊದಲು ಅವರನ್ನು ಸ್ವಾಗತ ಮಾಡುತ್ತೇನೆ: ಸುಧಾಕರ್‌ 

ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ

ಕೋಲಾರ(ಜು.21): ಸಿದ್ದರಾಮಯ್ಯ ಸ್ಟೈಲ್‌ನಲ್ಲೇ ಹೇಳುತ್ತೇನೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅವರಪ್ಪರಾಣೆಗೂ ರಾಜ್ಯದಲ್ಲಿ ಕಾಂಗ್ರೆಸ್ 90 ಸೀಟ್ ದಾಟಲ್ಲ‌ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ವ್ಯಂಗ್ಯವಾಡಿದ್ದಾರೆ.
ರಾಜ್ಯ ಸರ್ಕಾರಕ್ಕೆ 3 ವರ್ಷ, ಬೊಮ್ಮಾಯಿ ಸರ್ಕಾರಕ್ಕೆ 1 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಜುಲೈ 28 ರಂದು ದೊಡ್ಡಬಳ್ಳಾಪುರದಲ್ಲಿ ಸಾಧನಾ ಸಮಾವೇಶ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲೆಯ ಕೆಜಿಎಫ್‌ ವಿಧಾನಸಭಾ ಕ್ಷೇತ್ರದ ಬೇತಮಂಗಲ‌ದಲ್ಲಿ‌ ಖಾಸಗಿ ಕಲ್ಯಾಣ ಮಂಟಪದಲ್ಲಿ ಸಾಧನಾ ಸಮಾವೇಶದ ಪೂರ್ವಭಾವಿ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. 

ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಸಚಿವ ಡಾ. ಸುಧಾಕರ್, ರಾಜ್ಯದಲ್ಲಿ ಇಬ್ಬರು ನಾಯಕರು ಸಿಎಂ ಸೀಟ್ ಗಾಗಿ ಕಿತ್ತಾಡುತ್ತಿದ್ದಾರೆ. ಅವರಿಗೆ ಗೊತ್ತಿಲ್ಲ ಇನ್ನೊಬ್ಬರು ಡೆಲ್ಲಿಯಲ್ಲಿ ಹೋಗಿ ರೆಡಿಯಾಗಿದ್ದಾರೆ ಅಂತಾ. ಇವರಿಗೆಲ್ಲಾ ಅವರದ್ದೇ ಸ್ಟೈಲ್‌ನಲ್ಲಿ ಹೇಳ್ತೀನಿ ನೋಡಿ. ಈ ಬಾರಿ ಅವರಪ್ಪರಾಣೆಗೂ ಅವರದ್ದು 90 ಸೀಟ್ ಬರಲ್ಲ ಎಂದರು. ಕೋಲಾರದಲ್ಲೂ ಮಹಾ ಘಟ ಬಂಧನ್ ಮಾಡಿಕೊಂಡಿದ್ದಾರೆ. ಅವರ ಲೀಡರ್‌ಶಿಪ್ ನಿಂದ ಯಾರೂ ಸಹ ಕೋಲಾರದಲ್ಲಿ ಅಡ್ರೆಸ್ ಇರಲ್ಲ. ಇದು ಶ್ರೀನಿವಾಸಪುರದಿಂದ ಆರಂಭವಾಗಲಿದೆ ಎಂದು ಮಾಜಿ ಸ್ಪೀಕರ್‌ ರಮೇಶ್ ಕುಮಾರ್ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ. 

ಬದುಕಿದ್ದಾಗ ಉತ್ಸವ ಆಚರಣೆ ಎಷ್ಟು ಸರಿ?: ಸಿದ್ದರಾಮೋತ್ಸವದ ಬಗ್ಗೆ ಸಚಿವ ಪಾಟೀಲ ಟಾಂಗ್‌

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸುಧಾಕರ್, ಕೋಲಾರದಲ್ಲಿ ಸ್ಪರ್ಧಿಸುವಂತೆ ರಮೇಶ್ ಕುಮಾರ್ ಅಂಡ್ ಟೀಂ ಸಿದ್ದರಾಮಯ್ಯನವರನ್ನು ಆಹ್ವಾನಿಸಿದ್ದು ರಮೇಶ್ ಕುಮಾರ್ ಯಾವ ಯಾವ ಕಾಲಘಟ್ಟದಲ್ಲಿ ಬಣ್ಣ ಬದಲಾಯಿಸಿದ್ದಾರೆ ಅನ್ನೋದು ಸಿದ್ದರಾಮಯ್ಯನವರಿಗೆ ತಿಳಿದಿದೆ. ಸಿದ್ದರಾಮಯ್ಯರನ್ನು ಸೋಲಿಸಲು ಇವರೆಲ್ಲಾ ಸೇರಿಕೊಂಡು ಸುಪಾರಿ ಪಡೆದಿದ್ದಾರೆ ಎನ್ನೋ ಅನುಮಾನ ಇದೆ. ಅದು ಯಾರ ಬಳಿ ಎಂದು ಗೊತ್ತಿಲ್ಲ, ಸಿದ್ದರಾಮಯ್ಯ ಅವರು ಯಾರ ಮಾತೂ ಕೇಳಿ ಇಲ್ಲಿ ಸ್ಪರ್ಧೆ ಮಾಡೋದಿಲ್ಲ. ಯಾವ ಕ್ಷೇತ್ರ ಆಯ್ಕೆ ಮಾಡಿಕೊಳ್ಳಬೇಕು ಅಂತ ಅವರಿಗೆ ಗೊತ್ತಿದೆ. 50 ವರ್ಷಗಳಿಂದ ಅವರಿಗೆ ರಾಜಕೀಯ ಅನುಭವಿದೆ ಎಂದರು 

ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ಕಾಂಗ್ರೆಸ್ ನಲ್ಲಿ ಬೇಸರಗೊಂಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸುಧಾಕರ್, ಕೆ.ಎಚ್ ಮುನಿಯಪ್ಪನವರು ಹಿರಿಯ ನಾಯಕರು, ಬಿಜೆಪಿಗೆ ಬಂದ್ರೆ ಸ್ವಾಗತಿಸುತ್ತೇವೆ. ನಾನೇ ಮೊದಲು ಅವರನ್ನು ಸ್ವಾಗತ ಮಾಡುತ್ತೇನೆ. ಅವರು ಎಲ್ಲೇ ಇದ್ರು ಅದು ಆ ಪಕ್ಷಕ್ಕೆ ಶಕ್ತಿ ಸಿಗುತ್ತೆ. ಆ ಶಕ್ತಿಯನ್ನು ಬಳಕೆ ಮಾಡಿಕೊಳ್ಳುವುದಕ್ಕೆ ಕಾಂಗ್ರೆಸ್ ಪಕ್ಷದಿಂದ ಆಗುತ್ತಿಲ್ಲ. ಅವರನ್ನು ಅಪಮಾನಕ್ಕೆ ಗುರಿ ಮಾಡುತ್ತಿದ್ದಾರೆ. ನಂಬಿ ಅವರು ತೊಂದರೆಗೆ ಸಿಲುಕಿದ್ದಾರೆ ಎಂದರು.