ಚುನಾವಣೆಯಲ್ಲಿ ಪ್ರತಿಪಕ್ಷಗಳಿಗೆ ಪಾಠ ಕಲಿಸಿ: ಸಚಿವ ಸುಧಾಕರ್
ವಿರೋಧ ಪಕ್ಷಗಳು ತಮ್ಮನ್ನು ಗುರಿಯಾಗಿಸಿಕೊಂಡು ಅಪಪ್ರಚಾರ ನಡೆಸುತ್ತಿದ್ದು, ಅವರಿಗೆ ಬುದ್ಧಿ ಕಲಿಸುವ ರೀತಿಯಲ್ಲಿ ಪ್ರತಿಯೊಬ್ಬ ಮುಖಂಡರೂ ಶ್ರಮಿಸಬೇಕೆಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ತಮ್ಮ ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದರು.
ಚಿಕ್ಕಬಳ್ಳಾಪುರ (ಫೆ.09): ವಿರೋಧ ಪಕ್ಷಗಳು ತಮ್ಮನ್ನು ಗುರಿಯಾಗಿಸಿಕೊಂಡು ಅಪಪ್ರಚಾರ ನಡೆಸುತ್ತಿದ್ದು, ಅವರಿಗೆ ಬುದ್ಧಿ ಕಲಿಸುವ ರೀತಿಯಲ್ಲಿ ಪ್ರತಿಯೊಬ್ಬ ಮುಖಂಡರೂ ಶ್ರಮಿಸಬೇಕೆಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ತಮ್ಮ ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದರು. ತಾಲೂಕಿನ ಮಂಡಿಕಲ್ ಹೋಬಳಿಯಲ್ಲಿ ಬುಧವಾರ ಆಯೋಜಿಸಿದ್ದ ಸ್ಥಳೀಯ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆ ವೇಳೆ ಬಿಜೆಪಿಯೇ ಇಲ್ಲವೆಂದು ಗೇಲಿ ಮಾಡಿದ ಸಂದರ್ಭದಲ್ಲಿ ಮಂಡಿಕಲ್ ಹೋಬಳಿಯಿಂದ ಬರೋಬ್ಬರಿ ಏಳೂವರೆ ಸಾವಿರ ಮತಗಳನ್ನು ಹೆಚ್ಚುವರಿಯಾಗಿ ನೀಡಿದ್ದೀರಿ ಎಂದರು.
ಚುನಾವಣೆ ಗಂಭೀರವಾಗಿ ಪರಿಗಣಿಸಿ: ಪ್ರಸ್ತುತ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಬೇಕು, ವಿಧಾನಸಭೆ ಚುನಾವಣೆ ಮುಗಿದ ಕೂಡಲೇ ಜಿಪಂ, ತಾಪಂ ಸೇರಿದಂತೆ ಸಾಲು ಸಾಲು ಚುನಾವಣೆಗಳು ಬರಲಿದ್ದು, ಸ್ಥಳೀಯ ಮುಖಂಡರು ಇದಕ್ಕೆ ಸಿದ್ಧರಾಗಬೇಕು. ಪ್ರಸ್ತುತ ಚುನಾವಣೆಯ ಸಂಪೂರ್ಣ ಜವಾಬ್ದಾರಿಯನ್ನು ಸ್ಥಳೀಯ ಮುಖಂಡರ ಹೆಗಲಿಗೆ ನೀಡಲಿದ್ದೇನೆ. ತಮ್ಮನ್ನು ಪ್ರಣಾಳಿಕೆ ಉಸ್ತುವಾರಿಯನ್ನಾಗಿ ಪಕ್ಷ ಜವಾಬ್ದಾರಿ ನೀಡಿದೆ. ಇನ್ನು ಮುಂದೆ ತಾವು ಕ್ಷೇತ್ರಕ್ಕೆ ಸೀಮಿತವಾಗದೆ ರಾಜ್ಯದ ಜವಾಬ್ದಾರಿಗಳು ಹೆಚ್ಚಲಿವೆ. ತಾವು ಚಿಕ್ಕಬಳ್ಳಾಪುರಕ್ಕೆ ಮಾತ್ರ ಸೀಮಿತರಾಗಿ ಎನ್ನುವುದಾದರೆ ಅದಕ್ಕೂ ತಾವು ಸಿದ್ಧವಿರುವುದಾಗಿ ಶಾಸಕರು ಘೋಷಿಸುತ್ತಿದ್ದಂತೆ ಮುಖಂಡರು ರಾಜ್ಯ ಮಟ್ಟದಲ್ಲಿ ಬೆಳೆಯುವಂತೆ ಮನವಿ ಮಾಡಿದರು.
ಸ್ಥಳೀಯ ಮುಖಂಡರಿಗೆ ಹೊಣೆ: ಪ್ರಸ್ತುತ ಚುನಾವಣೆಯಲ್ಲಿ ತಮಗೆ ಮೂರು ಜಿಲ್ಲೆಗಳ ಜವಾಬ್ದಾರಿಯನ್ನು ಪಕ್ಷ ನೀಡಿದೆ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಜವಾಬ್ದಾರಿಯನ್ನು ತಾವು ನೋಡಬೇಕಿದ್ದು, ಕ್ಷೇತ್ರದಲ್ಲಿ ಪ್ರಚಾರ ನಡೆಸಲು ಸಮಯದ ತೀವ್ರ ಅಭಾವ ಎದುರಾಗಲಿದೆ. ಆದ್ದರಿಂದ ಸಂಪೂರ್ಣ ಹೊಣೆ ಸ್ಥಳೀಯ ಮುಖಂಡರೇ ಹೊರಬೇಕಿದೆ ಎಂದರು. ಕ್ಷೇತ್ರ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ನಮ್ಮ ಸರ್ಕಾರಗಳ ಸಾಧನೆಗಳ ಬಗ್ಗೆ ಕರಪತ್ರಗಳನ್ನು ಪ್ರತಿ ಮನೆಗೆ ವಿತರಿಸುವ ಕೆಲಸವಾಗಬೇಕು, ಜವಾಬ್ದಾರಿ, ಪಕ್ಷದ ಬಗ್ಗೆ ನಿಷ್ಠೆ ಇರುವ ವ್ಯಕ್ತಿಗಳನ್ನು ಪೇಜ್ ಪ್ರಮುಖ್ ಆಗಿ ಆಯ್ಕೆ ಮಾಡಿ ಪ್ರತಿ ಮತದಾರನ ಮನವೊಲಿಸುವ ಕೆಲಸವಾಗಬೇಕು ಎಂದು ಸಚಿವರು ಸೂಚಿಸಿದರು.
ಮುದ್ದೇನಹಳ್ಳಿಯಲ್ಲಿ ಐಐಟಿ ಸ್ಥಾಪನೆಗೆ ಪ್ರಾಮಾಣಿಕ ಪ್ರಯತ್ನ: ಸಚಿವ ಸುಧಾಕರ್
ಉಚಿತ ನಿವೇಶನ, ಮನೆ, ರಸ್ತೆ, ಆರೋಗ್ಯ, ನೀರಾವರಿ ಯೋಜನೆಗಳ ಅನುಷ್ಠಾನ, ಸ್ತ್ರೀ ಶಕ್ತಿ ಸಂಘಗಳಿಗೆ ಸಹಕಾರ ಸೇರಿದಂತೆ ಎಲ್ಲ ರೀತಿಯ ಅಭಿವೃದ್ಧಿ ಮಾಡಲಾಗಿದ್ದು, ಸ್ಥಳೀಯ ಮುಖಂಡರು ನನಗಾಗಿ ಒಂದು ತಿಂಗಳು ದುಡಿದರೆ ಮುಂದಿನ ಐದು ವರ್ಷ ನಿಮ್ಮ ಸೇವೆ ಮಾಡುವೆ.
-ಡಾ.ಕೆ. ಸುಧಾಕರ್, ಆರೋಗ್ಯ ಸಚಿವರು.