ಮಾಜಿ ಮುಖ್ಯಮಂತ್ರಿ ಎಚ್‌.​ ಡಿ ಕುಮಾರಸ್ವಾಮಿ ಅವರಿಗೆ ಕೊರೋನಾ ಸೊಂಕು ತಗುಲಿದ್ದು, ಅವರಿಗೆ ಆಸ್ಪತ್ರೆಯಲ್ಲಿ  ಬೆಡ್​ ಬಿಸಿ ತಟ್ಟಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇನ್ನು ಈ ಬಗ್ಗೆ ಆರೋಗ್ಯ ಸಚಿವರು ಸ್ಪಷ್ಟನೆ ಕೊಟ್ಟಿದ್ದಾರೆ.

ಬೆಂಗಳೂರು, (ಏ.17): ಕೊರೋನಾ ಸೋಂಕಿಗೆ ಒಳಗಾಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಆಸ್ಪತ್ರೆಯಲ್ಲಿ ಬೆಡ್‌ಗೆ ಕೊರತೆಯಾಗಿಲ್ಲ. ಈ ಸಂಬಂಧ ಇಲ್ಲದ ಕಥೆ ಕಟ್ಟುವುದು ಬೇಡ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಕಿಡಿಕಾರಿದ್ದಾರೆ. 

ವಿಕಾಸ ಸೌಧದಲ್ಲಿ ಇಂದು (ಶನಿವಾರ) ಜಿಲ್ಲಾಮಟ್ಟದ ಅಧಿಕಾರಿಗಳ ಜತೆ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್, ಮಣಿಪಾಲ್ ಹಾಗೂ ಅಪೋಲೋ ಆಸ್ಪತ್ರೆಗಳಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ದಾಖಲಿಸಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ನಾನೇ ಖುದ್ದಾಗಿ ಅವರೊಂದಿಗೆ ಮಾತನಾಡಿರುವೆ, ನಿರಂತರ ಸಂಪರ್ಕದಲ್ಲಿರುವೆ ಎಂದು ಸ್ಪಷ್ಟಪಡಿಸಿದರು.

ಮಾಜಿ ಸಿಎಂ ಹೆಚ್‌. ಡಿ. ಕುಮಾರಸ್ವಾಮಿ, ಡಿಕೆಶಿಗೆ ಕೊರೋನಾ!

 ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಸ್ವತಃ ಅವರೇ ಟ್ವೀಟ್​ ಮಾಡಿ ತಮಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಶನಿವಾರ ಬೆಳಗ್ಗೆಯೇ ತಿಳಿಸಿದ್ದರು. ಆದರೆ ಕುಮಾರಸ್ವಾಮಿ ಅವರು ಸದ್ಯ ಬೆಂಗಳೂರಿನ ಜೆ.ಪಿ.ನಗರದ ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ. ಯಾಕೆಂದರೆ ತಕ್ಷಣಕ್ಕೆ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಬೆಡ್​​ ಇಲ್ಲವೆಂಬ ಸುದ್ದಿ ಹರಿದಾಡುತ್ತಿತ್ತು. ಇದಕ್ಕೆ ಇದೀಗ ಸ್ವತಃ ಆರೋಗ್ಯ ಸಚಿವರೇ ಸ್ಪಷ್ಟನೆ ಕೊಟ್ಟಿದ್ದಾರೆ.