ಕಾಂಗ್ರೆಸ್ ಭಾರತ್ ಜೋಡೋ ಮಾಡ್ಕೊಂಡು ಒಂದೆರಡು ರಾಜ್ಯವಾದ್ರೂ ಉಳಿಸಿಕೊಳ್ಳಲಿ: ಸಚಿವ ಡಾ. ಸುಧಾಕರ್
ಕಾಂಗ್ರೆಸ್ ಭಾರತ್ ಜೋಡೋ ನಡುವೆ ಕಾಂಗ್ರೆಸ್ ಚೋಡೋ ನಡೆಯುತ್ತಿರುವ ಹಿನ್ನೆಲೆ ಸಚಿವ ಡಾ. ಸುಧಾಕರ್ ಕುಮಟಾದಲ್ಲಿ ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸಿನವರದ್ದು ಭಾರತ್ ಚೋಡೋ ಆಗೋಗಿದೆ. 1947ರಲ್ಲೇ ಕಾಂಗ್ರೆಸಿನವರು ಭಾರತ್ ತೋಡೋ ಕಾರ್ಯಕ್ರಮ ಕೂಡಾ ಮಾಡಿದ್ದಾರೆ ಎಂದರು.
ಉತ್ತರ ಕ್ನನಡ (ಅ.11): ಕಾಂಗ್ರೆಸ್ ಭಾರತ್ ಜೋಡೋ ನಡುವೆ ಕಾಂಗ್ರೆಸ್ ಚೋಡೋ ನಡೆಯುತ್ತಿರುವ ಹಿನ್ನೆಲೆ ಆರೋಗ್ಯ ಸಚಿವ ಡಾ. ಸುಧಾಕರ್ ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿ ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸಿನವರದ್ದು ಭಾರತ್ ಚೋಡೋ ಆಗೋಗಿದೆ. 1947ರಲ್ಲೇ ಕಾಂಗ್ರೆಸಿನವರು ಭಾರತ್ ತೋಡೋ ಕಾರ್ಯಕ್ರಮ ಕೂಡಾ ಮಾಡಿದ್ದಾರೆ. ಕಾಂಗ್ರೆಸ್ಸಿನವರು ಈಗ ಜೋಡೋ ಕಾರ್ಯಕ್ರಮ ಮಾಡಿಕೊಳ್ಳಲಿ. ಸದ್ಯ ಅವರ ಕೈಯಲ್ಲಿ ಒಂದೆರಡು ರಾಜ್ಯಗಳು ಮಾತ್ರ ಉಳಿದುಕೊಂಡಿದೆ. ಕಾರ್ಯಕ್ರಮ ಮಾಡಿದ್ರೆ ಅದಾದ್ರೂ ಉಳಿದುಕೊಳ್ಳುತ್ತದೆ, ಇಲ್ಲಾಂದ್ರೂ ಅದೂ ಇರಲ್ಲ ಎಂದು ಸಚಿವರು ಕುಹಕವಾಡಿದ್ದಾರೆ. ಇದರೊಂದಿಗೆ ಬಿಜೆಪಿಯ ಜನಸಂಕಲ್ಪ ಯಾತ್ರೆ ಪ್ರಾರಂಭವಾಗಿರುವ ಬಗ್ಗೆ ಪ್ರತಿಕ್ರಯಿಸಿರುವ ಆರೋಗ್ಯ ಸಚಿವರು, ಜನಜೀವನದ ಸ್ಥಿತಿಗತಿ ಒಳ್ಳೆಯ ರೀತಿಗೆ ಬದಲಾಯಿಸಲು ಯಶಸ್ವಿ ಕಾರ್ಯಕ್ರಮ ನಡೆಸುತ್ತಿದ್ದೇವೆ. ಶಿಕ್ಷಣ, ಆರೋಗ್ಯ, ಸಾಮಾಜಿಕ, ನೀರಾವರಿ, ಬಲಹೀನ ವರ್ಗಗಳ ಸಬಲೀಕರಣ ಮುಂತಾದಕ್ಕೆ ಆದ್ಯತೆ ನೀಡಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಹೆಚ್ಚಿಗೆ ಮಾಡಲಾಗಿದೆ. ಕಾಂಗ್ರೆಸ್ ಅನೇಕ ವರ್ಷಗಳ ಕಾಲ ದಲಿತರನ್ನು ಉದ್ಧಾರ ಮಾಡ್ತೇವೆ ಅಂತಿದ್ರು. ಆದರೆ, ಪರಿಶಿಷ್ಟ ಜಾತಿ, ಪಂಗಡಕ್ಕೆ ಮೀಸಲಾತಿ ಹೆಚ್ಚಳ, ಕಾರ್ಯಕ್ರಮ ರೂಪಿಸಲು ಅವರು ಎಡವಿದ್ದಾರೆ. ರಚನಾತ್ಮಕ ಹಾಗೂ ತರ್ಕಬದ್ಧ ಕಾರ್ಯಕ್ರಮಗಳ ಮೂಲಕ ಬಲಹೀನರಿಗೆ ಬಿಜೆಪಿ ಸರಕಾರ ಶಕ್ತಿ ತುಂಬಿಸುತ್ತಿದೆ. ಮುಖ್ಯಮಂತ್ರಿ ಹಾಗೂ ನಿಕಟಪೂರ್ವ ಮುಖ್ಯಮಂತ್ರಿ ಸೇರಿ ತಂಡವಾಗಿ ರಾಯಚೂರಿನಲ್ಲಿ ಜನಸಂಕಲ್ಪ ಯಾತ್ರೆ ಪ್ರಾರಂಭಿಸಿದ್ದಾರೆ. ಇದು ಜಿಲ್ಲಾವಾರು ನಿರಂತರವಾಗಿ ನಡೆಯಲಿದ್ದು, 50 ಕ್ಷೇತ್ರಗಳಲ್ಲಿ ಪ್ರವಾಸ ಮಾಡಲಿದ್ದಾರೆ.
ದೇಶದ ಜನರು ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದ ಮೇಲೆ ನಂಬಿಕೆಯಿಟ್ಟಿದ್ದಾರೆ. ಇಂದು ಅತ್ಯಂತ ಎತ್ತರದಲ್ಲಿರುವ ಅಹಿಂದ ನಾಯಕರಂದ್ರೆ ನರೇಂದ್ರ ಮೋದಿಯವರು. ಆದರೆ, ಅವರೆಂದೂ ತಾನು ಹಿಂದುಳಿದ ನಾಯಕನೆಂದು ಹೇಳಿಕೊಳ್ಳದೇ ಪ್ರತಿಯೊಬ್ಬರಿಗೂ ನ್ಯಾಯ ಒದಗಿಸ್ತಿದ್ದಾರೆ. ಪ್ರಧಾನಿಯವರ ದಾರಿಯನ್ನೇ ರಾಜ್ಯದ ಮುಖ್ಯಮಂತ್ರಿ ಹಾಗೂ ಸಚಿವರು ಹಿಡಿದಿದ್ದಾರೆ. ರಾಜ್ಯದ ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಯಾವ ಪಕ್ಷ ಆಡಳಿತದಲ್ಲಿದ್ದಾಗ ಏನು ಮಾಡಿದ್ದಾರೆ ಎಂದು ಜನರು ನೆನಪು ಮಾಡಿಕೊಳ್ತಿದ್ದಾರೆ. ಸ್ಪಷ್ಟ ಬಹುಮತದೊಂದಿಗೆ ನಾವು ಮತ್ತೆ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯುತ್ತೇವೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಉ.ಕ. ಜಿಲ್ಲೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕನಸು ಶೀಘ್ರ: ಭೌಗೋಳಿಕವಾಗಿ ವಿಶೇಷತೆಯ ಕಾರಣ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಉತ್ತರಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆಯೇ ಇಲ್ಲ ಎನ್ನುವ ಕೂಗು ದಶಕಗಳಿಂದಲೂ ಕೇಳಿ ಬರುತ್ತಿತ್ತು. ಈ ಕಾರಣದಿಂದ ಜಿಲ್ಲೆಗೆ ಒಂದಾದರೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಿಕೊಡಿ ಎಂದು ಜನರು ವಿವಿಧ ರೀತಿಯಲ್ಲಿ ಹೋರಾಟ ಮಾಡಿ ಪ್ರತಿಭಟನೆಗಳನ್ನು ಕೂಡಾ ನಡೆಸಿದ್ದರು.
ಜನರ ಹೋರಾಟದ ಬಿಸಿ ಸರಕಾರದ ಮಟ್ಟಕ್ಕೆ ತಲುಪಿದ್ದರಿಂದ ಜಿಲ್ಲೆಯ ಜನಪ್ರತಿನಿಧಿಗಳ ವಿನಂತಿಯ ಮೇರೆಗೆ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಇಂದು ಉತ್ತರಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದು, ಆಸ್ಪತ್ರೆ ನಿರ್ಮಾಣಕ್ಕೆ ಪೂರಕ ಸ್ಥಳಗಳ ಪರಿಶೀಲನೆ ಕೂಡಾ ನಡೆಸಿದ್ದಾರೆ. ಬೆಳಗ್ಗೆ ಕಾರವಾರದ ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿದ ಸಚಿವ ಡಾ. ಸುಧಾಕರ್ 150 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 450 ಬೆಡ್‌ಗಳ ಮೆಡಿಕಲ್ ಕಾಲೇಜು ಆಸ್ಪತ್ರೆಯ ನೂತನ ಕಟ್ಟಡದ ಕಾಮಗಾರಿಯನ್ನು ವೀಕ್ಷಣೆ ಮಾಡಿದರು.
ಇದೇ ಆಸ್ಪತ್ರೆಯಲ್ಲಿ ಟ್ರಾಮಾ ಕೇರ್ ಸೆಂಟರ್, ಕ್ಯಾನ್ಸರ್ ಚಿಕಿತ್ಸೆ ಸೇರಿದಂತೆ ಉನ್ನತ ಸೌಲಭ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಪರಿಶೀಲನೆ ನಡೆಸಿದ ಸಚಿವರು, ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಈ ಸಂಬಂಧ ಮೆಡಿಕಲ್ ಕಾಲೇಜಿನ ಅಧಿಕಾರಿಗಳು ಹಾಗೂ ವೈದ್ಯರೊಂದಿಗೆ ಸಭೆ ನಡೆಸಿ ಅಗತ್ಯ ಸೂಚನೆಗಳನ್ನು ನೀಡಿದರು.
ಇದೇ ವೇಳೆ ಕಾರವಾರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಸಚಿವರು ಇಲ್ಲಿನ ಸಿಟಿ ಸ್ಕ್ಯಾನ್ ಹಾಗೂ ಡಯಾಲಿಸಿಸ್ ಸೆಂಟರ್‌ಗಳ ಸೌಲಭ್ಯಗಳ ಪರಿಶೀಲನೆ ನಡೆಸಿ ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಂತರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವ ಡಾ. ಕೆ ಸುಧಾಕರ್ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಕುರಿತು ಮಾಹಿತಿ ಪಡೆದರಲ್ಲದೇ, ಕಾರವಾರದ ಸಿವಿಲ್ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಎಲ್ಲಾ ಸೌಲಭ್ಯಗಳನ್ನು ಒದಗಿಸುವುದಲ್ಲದೇ, ಶೀಘ್ರದಲ್ಲಿ ಜಿಲ್ಲೆಯ ಕುಮುಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಲಿದೆ ಎಂದು ಭರವಸೆ ನೀಡಿದರು.