ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತಮಗೂ ಯಾವುದೇ ವೈಯಕ್ತಿಕ ವ್ಯತ್ಯಾಸಗಳಿಲ್ಲ. ಟಿಪ್ಪು ಸುಲ್ತಾನ್‌ನನ್ನು ಮೆರೆಸುತ್ತಿರುವ ಕಾಂಗ್ರೆಸ್ ಪಕ್ಷವನ್ನು ಸೋಲಿಸಬೇಕು ಎಂಬ ಅರ್ಥದಲ್ಲಿ ಮಾತನಾಡಿದ್ದೇನೆ.
ಬೆಂಗಳೂರು (ಫೆ.17): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತಮಗೂ ಯಾವುದೇ ವೈಯಕ್ತಿಕ ವ್ಯತ್ಯಾಸಗಳಿಲ್ಲ. ಟಿಪ್ಪು ಸುಲ್ತಾನ್‌ನನ್ನು ಮೆರೆಸುತ್ತಿರುವ ಕಾಂಗ್ರೆಸ್ ಪಕ್ಷವನ್ನು ಸೋಲಿಸಬೇಕು ಎಂಬ ಅರ್ಥದಲ್ಲಿ ಮಾತನಾಡಿದ್ದೇನೆ. ಇದರಿಂದ ಸಿದ್ದರಾಮಯ್ಯಗೆ ನೋವಾಗಿದ್ದರೆ ವಿಷಾದಿಸುತ್ತೇನೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಅಧಿವೇಶನದ ಕಲಾಪ ಆರಂಭವಾಗುವ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ ಟಿಪ್ಪು ಸುಲ್ತಾನ್ ವಿಚಾರ ಪ್ರಸ್ತಾಪಿಸಿದ್ದೆ. ಟಿಪ್ಪು ಸುಲ್ತಾನ್‌ನನ್ನು ವಿಜೃಂಭಿಸುತ್ತಿರುವ ಕಾಂಗ್ರೆಸ್ ಪಕ್ಷವನ್ನು ಖಂಡಿಸಬೇಕು. ಈ ಬಗ್ಗೆ ಜನರಿಗೆ ತಿಳಿವಳಿಕೆ ಮೂಡಿಸಿ ಮುಂದಿನ ಚುನಾವಣೆಯಲ್ಲಿ ನಮ್ಮ ಪರವಾಗಿ ಜನಬೆಂಬಲ ಪಡೆದು ಕಾಂಗ್ರೆಸ್ ಪಕ್ಷವನ್ನು ಸೋಲಿಸಬೇಕು ಎಂದು ಸ್ಪಷ್ಟವಾಗಿ ತಿಳಿಸಿದ್ದೇನೆ ಎಂದರು.
ಹೊಡೆಯಲು ನೀವೇ ಕೋವಿ ಹಿಡಿದು ಬನ್ನಿ: ಅಶ್ವತ್ಥ್‌ಗೆ ಸಿದ್ದರಾಮಯ್ಯ ತಿರುಗೇಟು
ಯುದ್ಧದ ಕಾಲದಲ್ಲಿ ಯುದ್ಧ ಮಾಡಿ ಆಡಳಿತ ಮಾಡಬೇಕಿತ್ತು. ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯಲ್ಲಿ ಗೆದ್ದು ಆಡಳಿತ ಮಾಡಬೇಕು. ಈ ಹಿನ್ನೆಲೆಯಲ್ಲಿ ನಾನು ಆಡು ಭಾಷೆಯಲ್ಲಿ ಮಾತನಾಡಿದ್ದೇನೆಯೇ ಹೊರತು ವ್ಯಕ್ತಿಗತವಾಗಿ ಹೇಳಿಕೆ ನೀಡಿಲ್ಲ. ಸೈದ್ಧಾಂತಿಕ ಹಾಗೂ ರಾಜಕೀಯವಾಗಿ ಕಾಂಗ್ರೆಸ್ ಪಕ್ಷವನ್ನು ವಿರೋಧಿಸಿದ್ದೇನೆ. ಓಲೈಕೆ, ತುಷ್ಟೀಕರಣ ಮಾಡುವ ಪಕ್ಷಗಳನ್ನು ಸೋಲಿಸಬೇಕು. ಬಿಜೆಪಿ ಪಕ್ಷವನ್ನು ಗೆಲ್ಲಿಸಬೇಕು ಎಂದಿದ್ದಾನೆ. ಕಾಂಗ್ರೆಸ್‌ನವರು ನನ್ನ ಹೇಳಿಕೆಯನ್ನು ತಿರುಚುವ ಕೆಲಸ ಮಾಡುತ್ತಿದ್ದಾರೆ. ಇದನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದವರು ಒಬ್ಬ ಮುಖ್ಯಮಂತ್ರಿಯನ್ನು ನಾಯಿಮರಿ, ಮನೆಹಾಳ ಎಂದು, ಬಿಜೆಪಿ ರಾಜ್ಯಾಧ್ಯಕ್ಷರನ್ನು ಜೋಕರ್ ಎಂದು, ಪ್ರಧಾನಿ ಮೋದಿ ಅವರನ್ನು ನರಹಂತಕ ಎಂದು ಕರೆದಿದ್ದಾರೆ. ನಾನು ಕಾಂಗ್ರೆಸ್‌ನವರಂತೆ ಜಾತಿ, ಧರ್ಮ ಆಧರಿತವಾಗಿ ಸಮಾಜ ಒಡೆಯುವ ಕೆಲಸ ಮಾಡಿಲ್ಲ. ಯುದ್ಧದ ಮಾದರಿಯಲ್ಲಿ ಹೊಡೆದು ಬಡಿದಾಡಿ ಗೆಲ್ಲಲು ಸಾಧ್ಯವಿಲ್ಲ. ಚುನಾವಣೆಯಲ್ಲಿ ಮತದಾನದ ಮೂಲಕ ಗೆಲ್ಲಬೇಕು ಎಂಬುದಾಗಿ ನಾನು ಹೇಳಿದ್ದೇನೆ ಎಂದು ಸಚಿವರು ಸಮಜಾಯಿಷಿ ನೀಡಿದರು.
ಅಶ್ವತ್ಥನಾರಾಯಣರನ್ನು ಬಂಧಿಸಲು ಆಗ್ರಹ: ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಟಿಪ್ಪುವಿನಂತೆ ಕೊಲೆ ಮಾಡಬೇಕು ಎಂದು ಹೇಳಿಕೆ ನೀಡಿದ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ಅವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಹಾಲುಮತ ಮಹಾಸಭಾ ಜಿಲ್ಲಾಧ್ಯಕ್ಷ ಹನುಮಂತಪ್ಪ ಕೌದಿ ಆಗ್ರಹಿಸಿದರು. ಕೊಪ್ಪಳದ ಗ್ರಾಮೀಣ ಠಾಣೆಯಲ್ಲಿ ಗುರುವಾರ ಸಂಜೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಸಾರ್ವಜನಿಕ ಜೀವನದಲ್ಲಿ ಸರ್ಕಾರದ ಸಚಿವರಾಗಿ ಜನರಿಗೆ ಪ್ರಚೋದನೆ ನೀಡುವ ಇಂತಹ ಜನಪ್ರತಿನಿಧಿಗಳು ಸಾರ್ವಜನಿಕ ಜೀವನದಲ್ಲಿ ಇರಲು ಯೋಗ್ಯರಲ್ಲ ಎಂದು ಕಿಡಿಕಾರಿದರು.
ಸೊಪ್ಪಿನಬೆಟ್ಟಕಾನು ಸಮಸ್ಯೆಗೆ ತಿಂಗಳೊಳಗೆ ಪರಿಹಾರ: ಸಚಿವ ಅಶ್ವತ್ಥ ನಾರಾಯಣ
ಸಚಿವ ಅಶ್ವತ್ಥನಾರಾಯಣ ಕೂಡಲೇ ಸಿದ್ದರಾಮಯ್ಯನವರ ಕ್ಷಮೆ ಕೇಳಬೇಕು ಮತ್ತು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಕಾಂಗ್ರೆಸ್ ಮುಖಂಡ ಅಮರೇಶ್ ಉಪಲಾಪುರ ಮಾತನಾಡಿ, ಅಶ್ವತ್ಥನಾರಾಯಣ ಅವರು ಈ ರೀತಿಯಾಗಿ ಹೇಳಿಕೆ ನೀಡಿರುವುದು ಸಮಾಜಕ್ಕೆ ಮಾರಕ. ಇಂತಹ ಸಮಾಜ ವಿರೋಧಿ ಹೇಳಿಕೆ ನೀಡುವುದನ್ನು ಬಿಟ್ಟು ಅಭಿವೃದ್ದಿ ಮಾಡಲಿ ಎಂದರು. ಒಬ್ಬ ಜನನಾಯಕನನ್ನು ಕೊಲ್ಲಿ ಎಂದು ಹೇಳಿರುವ ಅಶ್ವತ್ಥ ಅವರು ಕೂಡಲೆ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದರು.
