ಮುಖ್ಯಮಂತ್ರಿ ಬದಲಾವಣೆ ವಿಚಾರ: ಸಚಿವ ಗುಂಡೂರಾವ್ ಹೇಳಿದ್ದಿಷ್ಟು
ಅಸಮಾಧಾನ ಸೃಷ್ಟಿಮಾಡುತ್ತಿರುವುದು ಮಾಧ್ಯಮಗಳು, ಸರ್ಕಾರ ರಚನೆಗೆ ಮೊದಲು ಕಾಂಗ್ರೆಸ್‌ನಲ್ಲಿ ಒಗ್ಗಟ್ಟು ಇಲ್ಲವೆಂದು ಬಿಂಬಿಸಿದಿರಿ. ಅದಕ್ಕೆ ತೆರೆಬಿದ್ದಿದ್ದು, ಈಗ ಅಸಮಾಧಾನವಿದೆ ಎಂಬುದಾಗಿ ಸೃಷ್ಟಿಸುತ್ತಿದ್ದೀರಿ. ಸಮಾಧಾನ, ಅಸಮಾಧಾನ ಸಹಜ. ಅದನ್ನು ಸಮರ್ಥವಾಗಿ ನಿಭಾಯಿಸುವ ಮುಖಂಡರು ಇದ್ದಾರೆ: ಸಚಿವ ದಿನೇಶ್ ಗುಂಡೂರಾವ್
ಕೋಲಾರ(ಜು.27): ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಈಗ ಏಕೆ ಚರ್ಚೆ ನಡೆಯುತ್ತಿದೆ ಎಂಬುದೇ ನನಗೆ ಅರ್ಥವಾಗುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಎಲ್ಲವೂ ಸುಗಮವಾಗಿ ನಡೆಯುತ್ತಿದೆ. ಬದಲಾವಣೆ ಬಗ್ಗೆ ಮಾತನಾಡುವ ಅವಶ್ಯಕತೆಯೇ ಇಲ್ಲ. ಮುಖ್ಯಮಂತ್ರಿ ಬದಲಾವಣೆ ಅಪ್ರಸ್ತುತ ವಿಚಾರ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅಸಮಾಧಾನ ಸೃಷ್ಟಿಮಾಡುತ್ತಿರುವುದು ಮಾಧ್ಯಮಗಳು, ಸರ್ಕಾರ ರಚನೆಗೆ ಮೊದಲು ಕಾಂಗ್ರೆಸ್‌ನಲ್ಲಿ ಒಗ್ಗಟ್ಟು ಇಲ್ಲವೆಂದು ಬಿಂಬಿಸಿದಿರಿ. ಅದಕ್ಕೆ ತೆರೆಬಿದ್ದಿದ್ದು, ಈಗ ಅಸಮಾಧಾನವಿದೆ ಎಂಬುದಾಗಿ ಸೃಷ್ಟಿಸುತ್ತಿದ್ದೀರಿ. ಸಮಾಧಾನ, ಅಸಮಾಧಾನ ಸಹಜ. ಅದನ್ನು ಸಮರ್ಥವಾಗಿ ನಿಭಾಯಿಸುವ ಮುಖಂಡರು ಇದ್ದಾರೆ ಎಂದರು.
ಕೋವಿಡ್ ಉಪಕರಣ ಖರೀದಿ ಕುರಿತು ತನಿಖೆ: ಸಚಿವ ದಿನೇಶ್ ಗುಂಡೂರಾವ್
ಹಲವಾರು ವಿಚಾರಗಳ ಬಗ್ಗೆ ಚರ್ಚಿಸಲು ಶಾಸಕಾಂಗ ಸಭೆ ಕರೆಯಲಾಗಿದೆ. ಹಿಂದೆ ಸಭೆ ಕರೆದಾಗ ಚರ್ಚೆ ಮಾಡಲು ಶಾಸಕರಿಗೆ ಸಮಯ ಸಿಕ್ಕಿರಲಿಲ್ಲ. ಹೀಗಾಗಿ, ಮತ್ತೊಮ್ಮೆ ಸಭೆ ನಡೆಸಲು ತೀರ್ಮಾನಿಸಲಾಗಿತ್ತು. ನಿನ್ನೆ ಮೊನ್ನೆಯ ಘಟನೆಗಳಿಂದಾಗಿ ಸಭೆ ಕರೆದಿದ್ದಲ್ಲ. ಅವೆಲ್ಲಾ ಆಧಾರರಹಿತ ಸುದ್ದಿಗಳು. ಶಾಸಕಾಂಗ ಸಭೆ ಸಂಬಂಧ ಏಕಿಷ್ಟುಚರ್ಚೆ ನಡೆಯುತ್ತಿದೆ ಎಂಬುದೇ ನನಗೆ ಅರ್ಥವಾಗುತ್ತಿಲ್ಲ, ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟವರು ನಾವು. ಇಂತಹ ಸಭೆ ನಡೆದಾಗ ಮುಕ್ತ ಚರ್ಚೆ ನಡೆಸಬಹುದು, ಈ ಸಭೆ ಹೊಸದೇನಲ್ಲ ಎಂದರು.
ಕೆ.ಜೆ.ಹಳ್ಳಿ ಹಾಗೂ ಡಿ.ಜೆ.ಹಳ್ಳಿ ಘಟನೆಗೆ ಸಂಬಂಧಿಸಿದಂತೆ ಅಮಾಯಕರಿಗೆ ತೊಂದರೆಯಾಗಿದ್ದರೆ ಪರಿಶೀಲಿಸಬೇಕಾಗುತ್ತದೆ, ಶಾಸಕರು ಪತ್ರ ಮುಖೇನ ಗೃಹ ಸಚಿವರಿಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಘಟನೆ ಸಂಬಂಧ ಕಾನೂನಿನಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಹೀಗಾಗಿ, ಗೃಹ ಇಲಾಖೆಯು ಪರಿಶೀಲನೆ ನಡೆಸಿ ಕಾನೂನು ಪ್ರಕಾರವೇ ಕ್ರಮ ವಹಿಸಲಿದೆ. ಕೆಲವರು ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸ ಮಾಡುತ್ತಾರೆ. ಆದರೆ, ಅವರಿಗೆ ಯಶಸ್ಸು ಸಿಗುವುದಿಲ್ಲ ಎಂದು ತಿಳಿಸಿದರು.
ಮೈಸೂರು ಪಾಕ್ ಸವಿದ ಸಚಿವರು
ಮೈಸೂರು ಪಾಕ್‌ಗೆ ಪ್ರಖ್ಯಾತಿಯಾಗಿರುವ ಕೋಲಾರದ ಎಂಜಿ ರಸ್ತೆಯ ವೆಂಕಟೇಶ್ವರ ಸ್ವೀಟ್ ಸ್ಟಾಲ್‌ಗೆ ಭೇಟಿ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮೈಸೂರ್ ಪಾಕ್ ಸಿಹಿ ಸವಿದರು. ಸಚಿವರೊಂದಿಗೆ ಜಿಲ್ಲಾಧ್ಯಕ್ಷ ಲಕ್ಷ್ಮಿನಾರಾಯಣ, ನಗರಸಭೆ ಸದಸ್ಯ ಪ್ರಸಾದ್‌ಬಾಬು, ಸ್ಟೀಟ್ ಸ್ಟಾಲ್‌ನ ಮಾಲೀಕ ಶ್ರೀಧರ್, ಮುಖಂಡರಾದ ಕೆ.ಆರ್.ತ್ಯಾಗರಾಜ್, ಮಂಜುನಾಥ್ ಇದ್ದರು.