'ರೇಣುಕಾಚಾರ್ಯ ಡಿಕೆಶಿಯನ್ನ ಬಿಜೆಪಿಗೆ ಸೆಳೆಯುವ ಪ್ರಯತ್ನ ಮಾಡಿರಬಹುದು'
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಮತ್ತು ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದು ಅಚ್ಚರಿ ಮೂಡಿಸಿದೆ. ಇನ್ನು ಈ ಬಗ್ಗೆ ಸಿಟಿ ರವಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಬೆಂಗಳೂರು, (ಫೆ.13): ಹೊನ್ನಾಳಿ ಬಿಜೆಪಿ ಶಾಸಕ ರೇಣುಕಾಚಾರ್ಯ, ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರನ್ನ ಭೇಟಿ ಮಾಡಿರುವುದು ರಾಜ್ಯ ರಾಜಕಾರಣದಲ್ಲಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಮಾ.5ರಂದು ಸ್ವಕ್ಷೇತ್ರ ಹೊನ್ನಾಳಿಯಲ್ಲಿ ನಡೆಯಲಿರುವ ಕೃಷಿ ಮೇಳಕ್ಕೆ ಆಹ್ವಾನ ನೀಡಲು ರೇಣುಕಾಚಾರ್ಯ ಅವರು ಡಿಕೆಶಿ ಭೇಟಿ ಮಾಡಿದ್ದಾರೆ. ಆದರೂ ಈ ವೇಳೆ ರಾಜಕೀಯ ಮಾತುಕತೆಗಳು ಸಹ ನಡೆದಿವೆ ಎನ್ನಲಾಗುತ್ತಿದೆ.
ಮಂತ್ರಿಗಿರಿ ತಪ್ಪಿದ ಬೆನ್ನಲ್ಲೇ ಡಿಕೆಶಿ ಮನೆಗೆ ಭೇಟಿ ಕೊಟ್ಟ ಬಿಜೆಪಿ ಶಾಸಕ!
ಇನ್ನು ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿಟಿ ರವಿ ಪ್ರತಿಕ್ರಿಯಿಸಿದ್ದು, ಯಾವ ವಿಷಯಕ್ಕೆ ಭೇಟಿ ಮಾಡಿದ್ದಾರೆ ಎನ್ನುವಂತ ಮಾಹಿತಿ ಇಲ್ಲ ಎಂದು ಹೇಳಿದರು.
ಬಳಿಕ ಡಿಕೆ ಶಿವಕುಮಾರ್ ಅವರನ್ನು ಬಿಜೆಪಿಗೆ ಸೆಳೆಯುವ ಪ್ರಯತ್ನ ಮಾಡಿರಬಹುದೆಂದು ಅಚ್ಚರಿ ಹೇಳಿಕೆ ನೀಡಿದರು.
ಬುಧವಾರ ಸದಾಶಿವನಗರದಲ್ಲಿನ ಶಿವಕುಮಾರ್ ನಿವಾಸಕ್ಕೆ ಮಾಜಿ ಶಾಸಕ ಬಿ.ಪಿ.ಹರೀಶ್ ಅವರೊಂದಿಗೆ ತೆರಳಿದ ರೇಣುಕಾಚಾರ್ಯ ಅವರು ಬರುವ ಮಾ.5ರಂದು ಸ್ವಕ್ಷೇತ್ರ ಹೊನ್ನಾಳಿಯಲ್ಲಿ ನಡೆಯಲಿರುವ ಕೃಷಿ ಮೇಳಕ್ಕೆ ಆಹ್ವಾನ ನೀಡಿದ್ದರು. ಈ ವೇಳೆ ಸಂಸದ ಡಿ.ಕೆ.ಸುರೇಶ್ ಹಾಗೂ ಕೃಷಿ ಮೇಳ ಸ್ವಾಗತ ಸಮಿತಿ ಸದಸ್ಯರೂ ಇದ್ದರು.
ಆದರೆ, ಹಲವು ದಿನಗಳ ಹಿಂದೆ ಶಿವಕುಮಾರ್ ವಿರುದ್ಧ ರಾಜಕೀಯವಾಗಿ ಹರಿಹಾಯ್ದಿದ್ದ ರೇಣುಕಾಚಾರ್ಯ ಅವರು ಸ್ವಕ್ಷೇತ್ರದ ಕೃಷಿ ಮೇಳಕ್ಕೆ ಆಹ್ವಾನಿಸುವ ಮೂಲಕ ಯಾರಿಗೆ ಯಾವ ಸಂದೇಶ ರವಾನಿಸುವ ಪ್ರಯತ್ನ ಮಾಡಿದ್ದಾರೆ ಎಂಬುದು ಮಾತ್ರ ಕುತೂಹಲಕ್ಕೆ ಕಾರಣವಾಗಿದೆ.
ಯಾಕಂದ್ರೆ ಸಚಿವ ಸ್ಥಾನ ಸಿಗದಿದ್ದರಿಂದ ರೇಣುಕಾಚಾರ್ಯ ಅವರು ಅಸಮಾಧಾನಗೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಡಿಕೆಶಿ ಭೇಟಿ ಮಾಡಿರುವುದು ರಾಜ್ಯ ರಾಜಜರಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ ಅಷ್ಟೇ.
ಫೆಬ್ರವರಿ 13ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ