ಬೆಂಗಳೂರು, [ಜ.28]: ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಒಂದಿಲ್ಲೊಂದು ತಿಕ್ಕಾಟಗಳು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ತಲೆನೋವು ಉಂಟುಮಾಡಿದೆ. 

ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಅತೃಪ್ತ ಶಾಸಕರ ಬಂಡಾಯ ಪರ್ವದ ಬಳಿಕ ಇದೀಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರು ಮೈತ್ರಿ ಸರ್ಕಾರದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ಕುಮಾರಸ್ವಾಮಿ ರಾಜೀನಾಮೆ ಹೇಳಿಕೆ ಹಿಂದೆ ಸಿದ್ದರಾಮಯ್ಯ ಶಿಷ್ಯಂದಿರು..?

ಎಸ್.ಟಿ. ಸೋಮಶೇಖರ್, ಎಂ.ಟಿ.ಬಿ ನಾಗರಾಜ್, ಪುಟ್ಟರಂಗ ಶೆಟ್ಟಿ ಸೇರಿದಂತೆ ಹಲವರು ತಮಗೆ ಸಿದ್ದರಾಮಯ್ಯ ಅವರೇ ಸಿಎಂ ಎಂದು ಹೇಳುವ ಮೂಲಕ ಪರೋಕ್ಷವಾಗಿ ಕುಮಾರಸ್ವಾಮಿ ಅವರಿಗೆ ತಿವಿದಿದ್ದರು.

ಆದ್ರೆ ಇದೀಗ ಅದು ರಾಜ್ಯರಾಜಕಾರಣದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದ್ದು, ಕಾಂಗ್ರೆಸ್ ನಾಯಕರ ಹೇಳಿಕೆಗೆ ಸಚಿವ ಪುಟ್ಟರಾಜು ಹಾಗೂ ಮಾಜಿ ಶಾಸಕ ಕೋನರೆಡ್ಡಿ ಸೇರಿದಂತೆ ಹಲವು ಜೆಡಿಎಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯಲು ಸಿದ್ಧ: ಎಚ್‌ಡಿಕೆ ಬಾಂಬ್

ಕಾಂಗ್ರೆಸ್ ನಡುವಳಿಕೆಗೆ ಆಕ್ರೋಶಗೊಂಡಿರುವ  ಜೆಡಿಎಸ್ ಸಚಿವ ಪುಟ್ಟರಾಜು, ‘ಸಮ್ಮಿಶ್ರ ಸರ್ಕಾರ ರಚಿಸಲು ದೇವೇಗೌಡರ ಮನೆ ಬಾಗಿಲಿಗೆ ಬಂದಿದ್ದು ಕಾಂಗ್ರೆಸ್ ಪಕ್ಷವೇ‘ ಎಂದು ಸಚಿವ ಸಿಎಸ್ ಪುಟ್ಟರಾಜು ಆಕ್ರೋಶ ವ್ಯಕ್ತಪಡಿಸಿದರು.

“ನಾವೇನು ಅಧಿಕಾರ ಬೇಕೆಂದು ಯಾರ ಮನೆ ಬಳಿಯೂ ಹೋಗಿಲ್ಲ. ನಿಮ್ಮವರೇ ಸಿಎಂ ಆಗಿ ಎಂದು ದೇವೇಗೌಡರ ಮನೆ ಬಳಿ ಬಂದಿದ್ದ ಕಾಂಗ್ರೆಸ್ಸಿಗರು ಬೇಷರತ್ ಬೆಂಬಲ ಕೊಡುತ್ತೇವೆ ಎಂದಿದ್ದರು. ಈಗ ಅವರು ಉಲ್ಟಾ ಮಾತನಾಡುತ್ತಿದ್ದಾರೆ,” ಎಂದು ಕಿಡಿಕಾರಿದರು.

2006ರಲ್ಲಿ ಬಿಜೆಪಿ  ಜೊತೆ ಇದ್ದ ಸಖ್ಯ ಎಷ್ಟೋ ವಾಸಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಬಿಜೆಪಿ ಜೊತೆ ಅಧಿಕಾರ ನಡೆಸಿದಾಗ ಇಡೀ ರಾಜ್ಯದ ಜನತೆಯೇ ಮೆಚ್ಚುವಂತಿತ್ತು. 20 ತಿಂಗಳ ಆ ಆಡಳಿತವನ್ನು ಜನರು ಇಷ್ಟಪಟ್ಟಿದ್ದರು. ಬಿಜೆಪಿಯ ಸಹಕಾರವೂ ಚೆನ್ನಾಗಿತ್ತು.

ಈಗ ಹೆಜ್ಜೆಹೆಜ್ಜೆಗೂ ತಕರಾರು ನಡೆಯುತ್ತಿದೆ. ರಾಜೀನಾಮೆ ಕೊಡಲು ಸಿದ್ದ ಎಂದು ಸಿಎಂ ಹೇಳಬೇಕಾದರೆ ಅವರಿಗೆ ಎಷ್ಟು ನೋವಿದೆ ಎಂಬುದನ್ನು ಜನರು ಗಮನಿಸಲಿ. ಕಾಂಗ್ರೆಸ್​ನವರು ಇದೇ ರೀತಿ ಮಾತು ಮುಂದುವರಿಸಿದರೆ ಮುಂದಿನ ಪರಿಣಾಮ ಬೇರೆಯೇ ಆಗುತ್ತದೆ” ಎಂದು ಸಚಿವ ಸಿಎಸ್ ಪುಟ್ಟರಾಜು ಎಚ್ಚರಿಕೆ ನೀಡಿದ್ದಾರೆ.